ಆ್ಯಪ್ನಗರ

ಸಿದ್ದರಾಮಯ್ಯ ಸುಳ್ಳು ರಾಮಯ್ಯ, ಯಡಿಯೂರಪ್ಪರಿಂದ ಹಣ ಪಡೆದ ಬಗ್ಗೆ ಜನಕ್ಕೆ ಸತ್ಯ ಹೇಳಿ: ಎಚ್‌ಡಿಕೆ

ರಮೇಶ್ ಜಾರಕಿಹೊಳಿ ಅವರು 16 ಮಂದಿಯನ್ನು ಸಿದ್ಧ ಮಾಡಿದ್ದೇವೆ ಎಂದು ಹೇಳಿದ್ದಾರೆ. ಆದರೆ, ಜೆಡಿಎಸ್ʼಗೆ ನಾವು ಕೈಹಾಕಲ್ಲ ಎಂದಿದ್ದಾರೆ. ನಮ್ಮ ಮೇಲೆ ಅಷ್ಟಾದರೂ ಅವರು ಕನಿಕರ, ಗೌರವ ಇಟ್ಟಿದ್ದಾರೆ. ನಮ್ಮ ಪಕ್ಷ, ಕಾರ್ಯಕರ್ತರ ಪರವಾಗಿ ಧನ್ಯವಾದ ಹೇಳುತ್ತೇನೆ

Vijaya Karnataka Web 26 Jan 2022, 7:44 pm
ಬೆಂಗಳೂರು: ಬಿಜೆಪಿಯ ಅನೇಕ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿರುವ ಸಿದ್ದರಾಮಯ್ಯ ಸ್ವತಃ ಅವರು ಯಾವ ಪಕ್ಷದ ಬಾಲಗೋಚಿ ಎನ್ನುವುದು ಕಣ್ಣಿಗೆ ಕಟ್ಟಿದಂತೆ ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದರು. ಜೆಡಿಎಸ್ ರಾಜ್ಯದ ಕಚೇರಿ ಜೆಪಿ ಭವನದಲ್ಲಿ 73ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ತೀವ್ರ ವಾಗ್ದಾಳಿ ನಡೆಸಿದರಲ್ಲದೆ ಸಿದ್ದರಾಮಯ್ಯ ʼಸುಳ್ಳು ರಾಮಯ್ಯʼ ಎಂದು ತರಾಟೆಗೆ ತೆಗೆದುಕೊಂಡರು. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಕೆಲ ಶಾಸಕರು ಕಾಂಗ್ರೆಸ್ಸಿಗೆ ಅರ್ಜಿ ಹಾಕಿಕೊಂಡಿದ್ದಾರೆಂದು ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೊಂಡಿದ್ದಾರೆ. ನಮ್ಮ ಪಕ್ಷಕ್ಕೂ ಕೆಲವರು ಅರ್ಜಿ ಹಾಕಿಕೊಂಡಿದ್ದಾರೆ. ಬಿಜೆಪಿ, ಕಾಂಗ್ರೆಸ್’ನಿಂದಲೂ ನಮ್ಮಲ್ಲಿ ಅರ್ಜಿ ಹಾಕಿಕೊಂಡಿದ್ದಾರೆ. ನಮ್ಮ ಬಳಿಗೆ ಬರುವವರು ಸಣ್ಣಪುಟ್ಟ ಮುಖಂಡರು. ಅನೇಕ ಹೊಸಬರು ಜೆಡಿಎಸ್ ಪಕ್ಷಕ್ಕೆ ಬರಲು ರೆಡಿ ಇದ್ದಾರೆ ಎಂದು ಅವರು ಹೇಳಿದರು. ಬಿಜೆಪಿ ಅಧಿಕಾರದಲ್ಲಿದೆ. ಶಾಸಕರು ಕ್ಷೇತ್ರದ ಕೆಲಸಗಳನ್ನು ಮಾಡಿಸಿಕೊಳ್ಳಲು ಮುಖ್ಯಮಂತ್ರಿ, ಮಂತ್ರಿಗಳನ್ನು ಭೇಟಿಯಾಗುತ್ತಾರೆ. ಇನ್ನು ಕೆಲವರು ಸಿದ್ದರಾಮಯ್ಯ ಅವರಿದ್ದಾಗ ಅನುದಾನ ಪಡೆದು ಗೆದ್ದು ಬಂದಿದ್ದಾರೆ. ಅಂಥವರ ಜತೆ ಸಿದ್ದರಾಮಯ್ಯ ಸಂಪರ್ಕದಲ್ಲಿರಬಹುದು. ಹಾಗಾಗಿ ಎಲ್ಲ ಶಾಸಕರನ್ನು ಅನುಮಾನದಿಂದ ನೋಡಲು ಸಾಧ್ಯವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
Vijaya Karnataka Web siddaramaiah took money from bs yeddyurappa says hd kumaraswamy
ಸಿದ್ದರಾಮಯ್ಯ ಸುಳ್ಳು ರಾಮಯ್ಯ, ಯಡಿಯೂರಪ್ಪರಿಂದ ಹಣ ಪಡೆದ ಬಗ್ಗೆ ಜನಕ್ಕೆ ಸತ್ಯ ಹೇಳಿ: ಎಚ್‌ಡಿಕೆ


​ಪಕ್ಷಕ್ಕೆ ನನ್ನ ದುಡಿಮೆಯೂ ಇದೆ

ನಾನು ಜೆಡಿಎಸ್ ಅಧ್ಯಕ್ಷನಾಗಿದ್ದಾಗ ಕುಮಾರಸ್ವಾಮಿ ಎಲ್ಲಿದ್ದರು? ಎಂದು ಸಿದ್ದರಾಮಯ್ಯ ಕೇಳಿದ್ದಾರೆ. ಆಗ ಪಕ್ಷ ಕಂಡ ಯಶಸ್ಸಿಗೆ ನಮ್ಮಂಥವರ ದುಡಿಮೆಯೂ ಇದೆ. ಕಾಂಗ್ರೆಸ್ʼನಲ್ಲಿದ್ದ ಮಲ್ಲಿಕಾರ್ಜುನ ಖರ್ಗೆ ಅವರಂಥ ನಿಷ್ಠಾವಂತರನ್ನೆಲ್ಲ ಮೂಲೆಗುಂಪು ಮಾಡಿದ್ದಾರೆ ಅವರು. ನಮ್ಮಲ್ಲಿ ಇದ್ದಾಗಲೂ ಅವರು ಹೀಗೆಯೇ ನಿಷ್ಠರನ್ನು ಪಕ್ಕಕ್ಕೆ ಸರಿಸಿದ್ದರು ಎಂದು ಮಾಜಿ ಮುಖ್ಯಮಂತ್ರಿ ದೂರಿದರು. ಆಗ ಅನೇಕ ಶಾಸಕರು ಗೆದ್ದಿದ್ದರಲ್ಲಿ ನನ್ನ ಪಾತ್ರವೂ ಇದೆ. ಆಗ ಅಷ್ಟು ದೊಡ್ಡ ಪ್ರಮಾಣದಲ್ಲಿ ಜೆಡಿಎಸ್ ಪಕ್ಷಕ್ಕೆ ಯಶಸ್ಸು ಸಿಗಬೇಕಾದರೆ ಅದಕ್ಕೆ ಕಾರಣ ದೇವೇಗೌಡರು ಹಾಗೂ ಕಾರ್ಯಕರ್ತರು. ಸಿದ್ದರಾಮಯ್ಯ ಕೊಡುಗೆ ಏನೂ ಇರಲಿಲ್ಲ. ಮಳವಳ್ಳಿ ಕ್ಷೇತ್ರದಲ್ಲಿ ಅನ್ನದಾನಿ ಅವರಿಗೆ ಎಂಎಲ್ʼಎ ಆಗಲು ನಾನೆಷ್ಟು ಶ್ರಮಿಸಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ, ಕೆಲವರು ಅನ್ನದಾನಿಗೆ ಟಿಕೆಟ್ ಕೊಡಬೇಡಿ ಎಂದಿದ್ದರು. ವಿರೋಧ ಲೆಕ್ಕಿಸದೇ ಅವರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡಿದ್ದೆವು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನಮ್ಮ ಪಕ್ಷಕ್ಕೆ ಸಿದ್ದರಾಮಯ್ಯ ಕೊಡುಗೆ ಯಾವತ್ತೂ ಏನೂ ಇರಲಿಲ್ಲ. ಇಲ್ಲಿ ಮಜಭೂತಾಗಿ ಅಧಿಕಾರ ಅನುಭವಿಸಿ ಹೋದರು. ಸಿದ್ದರಾಮಯ್ಯ ಇದ್ದಾಗಲೂ ನಮ್ಮ ಪಕ್ಷದ ಮತ ಗಳಿಕೆ ಪ್ರಮಾಣ ಶೇ.19. ಅವರು ಪಕ್ಷ ಬಿಟ್ಟ ಮೇಲೆಯೂ ಶೇ.19 ಮತ ಪಾಲು ಇದೆ. ಅವರಿದ್ದಾಗ 58 ಸೀಟು ಗೆದ್ದಿದೆವು. ಅವರು ಪಕ್ಷ ತೊರೆದ ಮೇಲೆ ಒಮ್ಮೆ 20 ಸೀಟು, ಇನ್ನೊಮ್ಮೆ 40 ಸೀಟು ಗೆದ್ದಿದ್ದೇವೆ. ಇದಕ್ಕೆ ಕಾರಣ ನಮ್ಮ ಕಾರ್ಯಕರ್ತರು ಎಂದು ಕುಮಾರಸ್ವಾಮಿ ಅವರು ತಿರುಗೇಟು ನೀಡಿದರು.

​ಉಪ ಚುನಾವಣೆ ವೇಳೆ ಯಡಿಯೂರಪ್ಪರಿಂದ ಹಣ ಪಡೆದಿದ್ದ ಸಿದ್ದರಾಮಯ್ಯ

ಜೆಡಿಎಸ್ ಪಕ್ಷ ಬಿಜೆಪಿಯ ಬಾಲಂಗೋಚಿ ಎನ್ನುವ ಸಿದ್ದರಾಮಯ್ಯ ಅವರಿಗೆ ಬಹಿರಂಗವಾಗಿ ಅನೇಕ ಬಾರಿ ಪ್ರಶ್ನೆ ಕೇಳಿದ್ದೇನೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಪ್ರಥಮ ಆಪರೇಷನ್ ಕಮಲ ನಡೆದ ಸಂದರ್ಭದಲ್ಲಿ ಎಂಟು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ವೇಳೆ ಇದೇ ಸಿದ್ದರಾಮಯ್ಯ ತಾವಿದ್ದ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಗಳನ್ನು ಸೋಲಿಸಲಿಕ್ಕೆ, ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲಿಕ್ಕೆ ಯಡಿಯೂರಪ್ಪ ಅವರಿಂದ ಎಷ್ಟು ಹಣ ತೆಗೆದುಕೊಂಡರು? ಆ ಹಣವನ್ನು ಯಾರಿಂದ ತರಿಸಿಕೊಂಡರು? ಹಣ ತಂದುಕೊಟ್ಟವರು ಯಾರು? ಎಂದು ಕೇಳಿದ್ದೆ. ಇವತ್ತಿಗೂ ಅವರಿಂದ ಉತ್ತರವಿಲ್ಲ. ಹಾಗಾದರೆ ಸಿದ್ದರಾಮಯ್ಯ ಯಾವ ಪಕ್ಷದ ಬಾಲಂಗೋಚಿ? ಯಾರ ಬಾಲಂಗೋಚಿ? ಎಂದು ಕುಮಾರಸ್ವಾಮಿ ಕೇಳಿದರು. ಆಶ್ರಯ ಕೊಟ್ಟ ಪಕ್ಷಕ್ಕೆ ದ್ರೋಹ ಮಾಡಿದ ವ್ಯಕ್ತಿ, ಪ್ರತಿಪಕ್ಷ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ತೆಗೆಯುವ ಹುನ್ನಾರ ನಡೆಸಿದ ವ್ಯಕ್ತಿ ಸಿದ್ದರಾಮಯ್ಯ ಎನ್ನುವುದು ನನಗೆ ಗೊತ್ತಿದೆ. ಹಣ ತಂದ ವ್ಯಕ್ತಿಯೇ ಸ್ವತಃ ನನ್ನ ಬಳಿಯೇ “ಯಡಿಯೂರಪ್ಪ ಅವರಿಂದ ಎಷ್ಟು ಹಣ ತೆಗೆದುಕೊಂಡು ಬಂದೆ” ಎಂದು ಹೇಳಿದ್ದಾರೆ. ಆಗ ಕಾಂಗ್ರೆಸ್ ಪಕ್ಷದ ನಾಯಕರನ್ನು ಮುಗಿಸಲು ಏನೆಲ್ಲಾ ಮಾಡಿದಿರಿ? ಎಷ್ಟೆಲ್ಲ ಹಣ ಬಂತು. ನನ್ನ ಪ್ರಶ್ನೆಗೆ ಇವತ್ತಿಗೂ ಉತ್ತರ ಕೊಟ್ಟಿಲ್ಲ. ಅದಕ್ಕೆ ನಾನು ʼಸುಳ್ಳು ರಾಮಯ್ಯʼ ಅನ್ನೋದು. ಅವರೇನು ಸತ್ಯಹರಿಶ್ಚಂದ್ರರಲ್ಲ, ಅದು ನನಗೆ ಗೊತ್ತಿದೆ ಎಂದು ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.

​ಅರ್ಕಾವತಿ ದೊಡ್ಡ ಕರ್ಮಕಾಂಡ

ಈ ಸರಕಾರದಲ್ಲಿ ನಡೆಯುವಷ್ಟು ಕಮಿಷನ್ ವ್ಯವಹಾರ ಬೇರೆ ಯಾವ ಸರಕಾರದಲ್ಲೂ ನಡೆದಿಲ್ಲ ಎಂದು ಹೇಳುವ ಸಿದ್ದರಾಮಯ್ಯ ಜನರ ಮುಂದೆ ಸತ್ಯ ಹರಿಶ್ಚಂದ್ರನ ಪೋಸು ನೀಡುತ್ತಾರೆ. ಆದರೆ, ಸಿದ್ದರಾಮಯ್ಯ ಸರಕಾರದ ಕಾಲದಲ್ಲಿ ನಡೆದ ಅರ್ಕಾವತಿ ಹಗರಣ ಈಗ ಬಿಜೆಪಿ ಸರಕಾರದಲ್ಲಿ ನಡೆದಿರುವ ಎಲ್ಲ ಅಕ್ರಮಗಳಿಗೂ ಸರಿದೂಗುವುದಿಲ್ಲ. ಇಂಥ ವ್ಯಕ್ತಿಯನ್ನು ನೋಡಿದರೆ ನಮಗೆ ಭಯವಂತೆ, ನಾವು ಬಹಳ ಜನರನ್ನು ನೋಡಿದ್ದೇವೆ. ನಾವು ಭಯ ಬೀಳುವುದು ರಾಜ್ಯದ ಜನರಿಗೆ ಮಾತ್ರ. ಸಿದ್ದರಾಮಯ್ಯ ಅವರನ್ನು ನೋಡಿ ಹೆದರುವುದಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ಒಪ್ಪಿ ಬರುವುದಾದರೆ ಅರ್ಜಿ ಹಾಕಿಕೊಳ್ಳಿ ಎಂದು ಹೇಳುವ ಸಿದ್ದರಾಮಯ್ಯಗೇ ಸಿದ್ದಾಂತ ಇಲ್ಲ. ರಾಜೀವ್ ಗಾಂಧಿ ಅವರನ್ನು ತೆಗೆದವರು ಎಂದು ಹೇಳಿ ಐಕೆ ಗುಜ್ರಾಲ್ ಸರಕಾರ ತೆಗೆದವರು ಕೊನೆಗೆ ಅದೇ ಡಿಎಂಕೆ ಜತೆ ಹತ್ತು ವರ್ಷ ಅಧಿಕಾರ ಹಂಚಿಕೊಂಡರು. ಹೀಗಾಗಿ ಯಾವ ಸಿದ್ಧಾಂತ ಇದೆ ನಿಮಗೆ? ಯಾರಿಗೂ ಯಾವ ಸಿದ್ದಾಂತಗಳೂ ಇಲ್ಲ. ಯಾವ ಪಕ್ಷದಲ್ಲೂ ಅಂತಹ ಸಿದ್ದಾಂತಗಳಿಲ್ಲ. ಅಧಿಕಾರವೊಂದೇ ಅವರ ಸಿದ್ದಾಂತ ಎಂದು ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದರು.

​ರಮೇಶ್ ಜಾರಕಿಹೊಳಿಗೆ ಧನ್ಯವಾದ

ರಮೇಶ್ ಜಾರಕಿಹೊಳಿ ಅವರು 16 ಮಂದಿಯನ್ನು ಸಿದ್ಧ ಮಾಡಿದ್ದೇವೆ ಎಂದು ಹೇಳಿದ್ದಾರೆ. ಆದರೆ, ಜೆಡಿಎಸ್‌ಗೆ ನಾವು ಕೈಹಾಕಲ್ಲ ಎಂದಿದ್ದಾರೆ. ನಮ್ಮ ಮೇಲೆ ಅಷ್ಟಾದರೂ ಕನಿಕರ, ಗೌರವ ಇಟ್ಟಿದ್ದಾರೆ. ರಮೇಶ್‌ ಜಾರಕಿಹೊಳಿ ಅವರಿಗೆ ವಿಶೇಷವಾಗಿ ನಮ್ಮ ಪಕ್ಷ, ಕಾರ್ಯಕರ್ತರ ಪರವಾಗಿ ಧನ್ಯವಾದ ಹೇಳುತ್ತೇನೆ ಎಂದರು ಕುಮಾರಸ್ವಾಮಿ ಅವರು. ರಮೇಶ್ ಜಾರಕಿಹೊಳಿ ನಮ್ಮ ಸಂಪರ್ಕದಲ್ಲಿ ಇಲ್ಲ. ನಮ್ಮದು ಸಣ್ಣ ಪಕ್ಷ. ಚುನಾವಣೆಗೆ ಇನ್ನೂ ಒಂದು ವರ್ಷವಿದೆ. ಯಾವಾಗ ಯಾರು ಬರ್ತಾರೋ ಗೊತ್ತಿಲ್ಲ. ಆ ಸಮಯ ಬಂದಾಗ ಅದರ ಬಗ್ಗೆ ಮಾತನಾಡೋಣ ಎಂದು ಎಚ್‌ಡಿಕೆ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ