ಆ್ಯಪ್ನಗರ

ಗೌರಿ ಹತ್ಯೆಕೇಸ್‌ : ಸುಧನ್ವ ಗೊಂದಾಲೇಕರ್‌ ಎಸ್‌ಐಟಿ ವಶಕ್ಕೆ

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆಗಾಗಿ ಮಹಾರಾಷ್ಟ್ರ ಸುಧನ್ವ ಗೊಂದಾಲೇಕರ್‌ನನ್ನು ಎಸ್‌ಐಟಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ.

Vijaya Karnataka 8 Sep 2018, 7:50 am
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆಗಾಗಿ ಮಹಾರಾಷ್ಟ್ರ ಸುಧನ್ವ ಗೊಂದಾಲೇಕರ್‌ನನ್ನು ಎಸ್‌ಐಟಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ.
Vijaya Karnataka Web Gauri Lankesh


ಸಿಬಿಐ ವಶದಲ್ಲಿದ್ದ ಈತನನ್ನು ಬಾಡಿ ವಾರಂಟ್‌ ಮೇಲೆ ವಶಕ್ಕೆ ಪಡೆದಿರುವ ಎಸ್‌ಐಟಿ, ಶುಕ್ರವಾರ ಸಂಜೆ ಒಂದನೇ ಎಸಿಎಂಎಂ ನ್ಯಾಯಾಲಯದ ಎದುರು ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಯನ್ನು 14 ದಿನಗಳ ಎಸ್‌ಐಟಿ ಕಸ್ಟಡಿಗೆ ಒಪ್ಪಿಸಿದೆ.

ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ಕಳೆದ ತಿಂಗಳು ಸುಧನ್ವನನ್ನು ಬಂಧಿಸಿದ್ದಲ್ಲದೆ ಈತನ ಮನೆ ಮತ್ತು ಸಂಬಂಧಿತ ಸ್ಥಳಗಳ ಮೇಲೆ ದಾಳಿ ನಡೆಸಿ 12 ನಾಡ ಪಿಸ್ತೂಲು, ಜೀವಂತ ಬಾಂಬ್‌ಗಳು ಮತ್ತು ಆರ್‌ಡಿಎಕ್ಸ್‌ ಸಹಿತ ಹಲವು ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರು. ಈತನ ಬಳಿ ಸಿಕ್ಕಿರುವ 12 ಗನ್‌ಗಳಲ್ಲಿ ಗೌರಿ ಲಂಕೇಶ್‌ ಹತ್ಯೆಗೆ ಬಳಸಿದ ಗನ್‌ ಕೂಡ ಇದೆ ಎಂದು ಸಿಬಿಐ ಅಧಿಕಾರಿಗಳು ಎಸ್‌ಐಟಿಗೆ ಮಾಹಿತಿ ನೀಡಿದ್ದರು.

ಗನ್‌ ತೆಗೆದುಕೊಂಡು ಹೋಗಿದ್ದ

ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಗಳು ವಿಚಾರಣೆ ವೇಳೆ ಸುಧನ್ವನ ಪಾತ್ರದ ಬಗ್ಗೆ ಹೇಳಿಕೆ ನೀಡಿದ್ದರು. ಹತ್ಯೆಗೂ ಮೊದಲು ಅಮೋಲ್‌ ಕಾಳೆಗೆ ಗನ್‌ ಕೊಟ್ಟಿದ್ದ ಈತ ಹತ್ಯೆ ಬಳಿಕ ಗನ್‌ ವಾಪಸ್‌ ಪಡೆದು ಪುಣೆಗೆ ಹೋಗಿದ್ದ ಎಂಬ ಮಾಹಿತಿ ಸಿಕ್ಕಿತ್ತು. ಇದಲ್ಲದೆ ಅಮೋಲ್‌ ಕಾಳೆ ಡೈರಿಯಲ್ಲಿಯೂ ಸುಧನ್ವನ ಹೆಸರೂ ಇತ್ತು.ಸಿಬಿಐ ಅಧಿಕಾರಿಗಳು ತನಿಖೆ ವೇಳೆ ಗೌರಿ ಹತ್ಯೆಯಲ್ಲಿ ಈತನ ಪಾತ್ರವಿರುವ ಸಂಗತಿಯನ್ನು ಹೊರಗೆಳೆದಿದ್ದರು ಎಂದು ಎಸ್‌ಐಟಿ ಅಧಿಕಾರಿಗಳು ಮಾಹಿತಿ ನೀಡಿದರು.

ಸಿಸಿಟಿವಿಯಲ್ಲಿ ಸೆರೆ

ಗೌರಿ ಹತ್ಯೆ ತನಿಖೆಗೆ ಇಳಿದ ಅಧಿಕಾರಿಗಳು ಒಂದು ಸಿಸಿಟಿವಿಯಲ್ಲಿ ಸುಧನ್ವನ ಚಹರೆಯನ್ನೂ ಪತ್ತೆ ಹಚ್ಚಿದ್ದಾರೆ. ಗೌರಿ ಹತ್ಯೆ ನಡೆದ ದಿನ ಅಮೋಲ್‌ ಕಾಳೆ ಜತೆಗೆ ಸುಧನ್ವ ಕೂಡ ಬೆಂಗಳೂರಿನಲ್ಲೇ ಇದ್ದ ಎನ್ನುವ ಮಾಹಿತಿ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂಗಡಿ ಗೊತ್ತಿದ್ದದ್ದು ಸುಧನ್ವನಿಗೆ ಮಾತ್ರ

ಎಸ್‌ಐಟಿ ಅಧಿಕಾರಿಗಳು ಬಂಧಿಸಿರುವ ಕುಣಿಗಲ್‌ ಸುರೇಶ್‌, ಗೌರಿ ಹತ್ಯೆ ಬಳಿಕ ಹತ್ಯೆಗೆ ಬಳಸಿದ ಗನ್‌ ತನ್ನ ಅಂಗಡಿಯಲ್ಲೇ ಇಟ್ಟುಕೊಂಡಿದ್ದ. ಈ ಅಂಗಡಿ ಎಲ್ಲಿದೆ ಎನ್ನುವುದು ಸುಧನ್ವನಿಗೆ ಮಾತ್ರ ಗೊತ್ತಿತ್ತು. ಹತ್ಯೆ ನಡೆದ 10 ದಿನಗಳ ನಂತರ ಬೆಂಗಳೂರಿಗೆ ಬಂದ ಈತ ಗನ್‌ ತೆಗೆದುಕೊಂಡು ಹೋಗಿದ್ದ ಈ ಬಗ್ಗೆ ವಿಚಾರಣೆ ತೀವ್ರಗೊಳಿಸಿದ್ದೇವೆ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ