ಆ್ಯಪ್ನಗರ

ಮುಷ್ಕರ ಬಿಕ್ಕಟ್ಟು ಬಗೆಹರಿಸಲು ಎಸ್ಸೆಂಕೆ ಸೂಚನೆ

ಸಾರಿಗೆ ಸಂಸ್ಥೆ ನೌಕರರ ಮುಷ್ಕರದಿಂದ ಜನರಿಗೆ ತೊಂದರೆಯಾಗುತ್ತದೆ. ಇದನ್ನು ಇತ್ಯರ್ಥ ಪಡಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸರಕಾರಕ್ಕೆ ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಸಲಹೆ ನೀಡಿದ್ದಾರೆ.

ವಿಕ ಸುದ್ದಿಲೋಕ 27 Jul 2016, 4:00 am
ಬೆಂಗಳೂರು : ಸಾರಿಗೆ ಸಂಸ್ಥೆ ನೌಕರರ ಮುಷ್ಕರದಿಂದ ಜನರಿಗೆ ತೊಂದರೆಯಾಗುತ್ತದೆ. ಇದನ್ನು ಇತ್ಯರ್ಥ ಪಡಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸರಕಾರಕ್ಕೆ ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಸಲಹೆ ನೀಡಿದ್ದಾರೆ.
Vijaya Karnataka Web sm krishna suggest to resolve the crisis of strike
ಮುಷ್ಕರ ಬಿಕ್ಕಟ್ಟು ಬಗೆಹರಿಸಲು ಎಸ್ಸೆಂಕೆ ಸೂಚನೆ


ಸಾಹಿತಿಗಳು ಹಾಗೂ ಲೇಖಕರು, ಪರಿಸರವಾದಿಗಳೊಂದಿಗೆ ಜಯನಗರದ ಹೋಟೆಲ್‌ನಲ್ಲಿ ಮಂಗಳವಾರ ಬೆಳಗ್ಗೆ ಉಪಹಾರ ಸೇವಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘‘ನೌಕರರ ಸಂಬಳ ಹೆಚ್ಚಿಸುವುದರಿಂದ ಸರಕಾರಕ್ಕೆ ಹೊರೆಯಾಗಬಹುದು. ಆದರೆ, ಇಂತಹ ಪ್ರಕರಣ ನಿಭಾಯಿಸಲು ಸಂಬಂಧಿಸಿದವರೊಂದಿಗೆ ಕುಳಿತು ಮಾತನಾಡಬೇಕು. ಇಲ್ಲದಿದ್ದರೆ ಸಮಸ್ಯೆ ಬಿಗಡಾಯಿಸುತ್ತದೆ. ಇದರಿಂದ ಜನರು ಪರಿತಪಿಸುವಂತಾಗುತ್ತದೆ,’’ ಎಂದು ಮಾರ್ಮಿಕವಾಗಿ ನುಡಿದರು.

‘‘ಈಗಿನ ರಾಜಕಾರಣಿಗಳು ಸದಾ ರಾಜಕಾರಣ ಮಾಡುತ್ತಾರೆ. ಅವರಿಗೆ ಮಲಗಿದರೂ ಅದೇ ಚಿಂತೆ. ಎದ್ದರೂ ಅದೇ ಚಿಂತೆ. ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯದ ಬಗ್ಗೆ ಕಾಳಜಿಯಿಲ್ಲ. ಇದರ ಏಳಿಗೆಗೂ ಗಮನ ಹರಿಸುವುದಿಲ್ಲವೆಂದು ಅಭಿಪ್ರಾಯ ಪಟ್ಟ ಅವರು, ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬೆಳವಣಿಗೆ ಆಘಾತಕಾರಿ. ಇದಕ್ಕೆ ಕಾರಣವೇನು ಎನ್ನುವುದನ್ನು ಎಲ್ಲರೂ ಯೋಚಿಸಬೇಕು. ಆದರೆ, ಗಣಪತಿ ಪ್ರಕರಣ ರಾಜಕೀಯಗೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ,’’ ಎಂದರು.

ಬೆಂಗಳೂರಿನ ಆಪ್ತ ಸ್ನೇಹಿತರೊಂದಿಗೆ ಮಾತುಕತೆ ನಡೆಸುವ ಅಪೇಕ್ಷೆಯಿತ್ತು. ದೊರೆಸ್ವಾಮಿ ಅವರನ್ನು ಅವರದೇ ಕ್ಷೇತ್ರದಲ್ಲಿ ಕಾಣಲು ಇಷ್ಟವಿತ್ತು. ಇತರ ಸ್ನೇಹಿತರೂ ಜತೆಗೂಡಿದರು ಎಂದು ಈ ಉಪಹಾರ ಕೂಟದ ಬಗ್ಗೆ ತಿಳಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಸಾಹಿತಿಗಳಾದ ಡಾ. ಚಂದ್ರಶೇಖರ ಕಂಬಾರ, ಡಾ.ಕೆ. ಮರುಳಸಿದ್ದಯ್ಯ, ಗಾಯಕ ವೈ.ಕೆ. ಮುದ್ದುಕೃಷ್ಣ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಪರಿಸರವಾದಿ ಸುರೇಶ್ ಹೆಬ್ಳೀಕರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಈ ಕೂಟದಲ್ಲಿ ಭಾಗಿಯಾಗಿದ್ದರು.

ಕೃಷ್ಣರಿಂದ ನಿರೀಕ್ಷೆಯಿದೆ

‘‘ಕೃಷ್ಣ ಅವರಿಂದ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಭೂಕಬಳಿಕೆ ಬಗ್ಗೆ ಅವರಿಗೆ ಮಾಹಿತಿ ನೀಡಲಾಗಿದೆ. ಈ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರಕಾರಕ್ಕೆ ಸಲಹೆ ನೀಡುವಂತೆ ಕೇಳಿಕೊಳ್ಳಲಾಗಿದೆ. ಕಾಂಗ್ರೆಸ್ ನಾಯಕರನ್ನು ತಿದ್ದು ತೀಡಲು ಕೃಷ್ಣರಂತಹ ಹಿರಿಯರ ಅಗತ್ಯವಿದೆ,’’ ಎಂದು ಇದೇ ವೇಳೆ ದೊರೆಸ್ವಾಮಿ ತಿಳಿಸಿರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ