ಆ್ಯಪ್ನಗರ

ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲು, ಅ.11ಕ್ಕೆ ಮಹತ್ವದ ಸಭೆ

ಅಕ್ಟೋಬರ್‌ 11ರಂದು ಚುನಾಯಿತ ಪ್ರತಿನಿಧಿಗಳು, ಸಹಕಾರಿಗಳ ಸಭೆ ನಡೆಯಲಿದ್ದು, ಪ್ರತಿ ಜಿಲ್ಲೆಯಿಂದ ಎಷ್ಟು ಜನರು ಬರುತ್ತಾರೆ ಎಂಬ ನಿಖರ ಮಾಹಿತಿಯನ್ನು ಅಕ್ಟೋಬರ್‌ 9ರೊಳಗೆ ಕೊಡಬೇಕು ಎಂದು ಕೆಎಸ್‌ ಈಶ್ವರಪ್ಪ ಹೇಳಿದ್ದಾರೆ.

Vijaya Karnataka 5 Oct 2020, 11:05 pm
ಬೆಂಗಳೂರು: ಕುರುಬ ಸಮಾಜದ ಮೀಸಲು ಹೋರಾಟವು ಇತರ ವರ್ಗಗಳಿಗೆ ನೋವು ತರುವ ಹಾಗೂ ಅವರ ಸೌಲಭ್ಯ ಕಿತ್ತುಕೊಳ್ಳುವುದಕ್ಕಲ್ಲ. ಈ ಸೂಕ್ಷ್ಮ ಅರಿತು ಹೋರಾಟ ಮಾಡಬೇಕು ಎಂದು ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಕಿವಿಮಾತು ಹೇಳಿದ್ದಾರೆ.
Vijaya Karnataka Web KS Eshwarappa


ಕುರುಬ ಸಮಾಜದ ಎಸ್‌ಟಿ ಹೋರಾಟ ಸಮಿತಿಯ ಮಹತ್ವದ ಸಭೆ ಈ ತಿಂಗಳ 11ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್‌ ಈಶ್ವರಪ್ಪ ಅಧಿವರ ನಿವಾಸದಲ್ಲಿ ಸಮುದಾಯದ ಸ್ವಾಮೀಜಿಗಳು ಹಾಗೂ ಮುಖಂಡರ ಸಮ್ಮುಖದಲ್ಲಿ ಸಿದ್ಧತಾ ಸಭೆ ನಡೆಸಲಾಯಿತು.

ಈ ವೇಳೆ ಸಮಿತಿಯ ಮಹಾಮಾರ್ಗದರ್ಶಕರೂ ಆಗಿರುವ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, "ಶ್ರೀಮಠವು ಈ ಹೋರಾಟದ ಎಲ್ಲ ಜವಾಬ್ದಾರಿ ನಿಭಾಯಿಸಲಿದೆ. ಶಾಖಾ ಮಠಗಳೂ ಕಾಳಜಿಪೂರ್ವಕವಾಗಿ ಕಾರ್ಯ ನಿರ್ವಹಿಸಲಿವೆ. ಪೀಠ ಸ್ಥಾಪನೆಯಾದಾಗಲೇ ಹೋರಾಟ ನಡೆಸಿದ್ದರೆ ಈ ಹೊತ್ತಿಗೆ ಸೌಲಭ್ಯ ಪಡೆಯಬಹುದಿತ್ತು. ಆದರೆ, ನಮ್ಮ ಹುಚ್ಚು ಹುಡುಗರು ಹೋರಾಟದ ಸಂದರ್ಭದಲ್ಲಿ ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ನಲ್ಲಿ ಸಮಾಜದ ಮಾನ, ಮರ್ಯಾದೆ ಹರಾಜು ಹಾಕುವ ಕೆಲಸ ಮಾಡಬಾರದು," ಎಂದರು.

ಎಸ್‌ಟಿ ಮೀಸಲಿಗೆ ಸಂಘಟಿತ ಹೋರಾಟ, ಕುರುಬ ಸಮಾಜದ ನಿರ್ಣಯಕ್ಕೆ ಸಿದ್ದರಾಮಯ್ಯ ಬೆಂಬಲ
ನಿಖರ ಮಾಹಿತಿ ನೀಡಿ

ಸಚಿವ ಕೆಎಸ್‌ ಈಶ್ವರಪ್ಪ ಮಾತನಾಡಿ, "ಅಕ್ಟೋಬರ್‌ 11ರಂದು ಚುನಾಯಿತ ಪ್ರತಿನಿಧಿಗಳು, ಸಹಕಾರಿಗಳ ಸಭೆ ನಡೆಯಲಿದೆ. ಪ್ರತಿ ಜಿಲ್ಲೆಯಿಂದ ಎಷ್ಟು ಜನರು ಬರುತ್ತಾರೆ ಎಂಬ ನಿಖರ ಮಾಹಿತಿಯನ್ನು ಅ.9ರೊಳಗೆ ಕೊಡಬೇಕು. ಸಭೆಯ ದಿನ ಸಮಾಜದ ಪ್ರಮುಖ ಮುಖಂಡರು ಬರಬೇಕು. ಈ ಸಂಬಂಧ ಮುಂಚಿತವಾಗಿ ಮಾಹಿತಿ ತಲುಪಿಸಬೇಕು,'' ಎಂದು ಸೂಚಿಸಿದರು.

ಮಾಜಿ ಸಚಿವ ಎಚ್‌ಎಂ ರೇವಣ್ಣ ಮಾತನಾಡಿ, "ನಮ್ಮ ಸಮಾಜಕ್ಕೆ ಈ ಹಿಂದೆಯೇ ಎಸ್‌ಟಿ ಮೀಸಲು ಸಿಗಬೇಕಿತ್ತು. ಈಗ ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರಕಾರ ಇರುವುದರಿಂದ ನಮಗೆ ಅನುಕೂಲವಾಗಲಿದೆ. ಆದರೆ, ವ್ಯವಸ್ಥಿತವಾಗಿ ಹೋರಾಟ ಮಾಡಬೇಕು,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ