ಆ್ಯಪ್ನಗರ

ಅಡಕೆ ಸಂಶೋಧನೆಗೆ ರಾಜ್ಯ ಸರಕಾರ ನಿರ್ಧಾರ: ಎಂಎಸ್‌ ರಾಮಯ್ಯ ಅಪ್ಲೈಡ್‌ ಸೈನ್ಸ್‌ ವಿಭಾಗದಿಂದ ಸಂಶೋಧನೆ

ಅಡಕೆ ಸಂಶೋಧನೆಗೆ ರಾಜ್ಯ ಸರಕಾರ ತೀರ್ಮಾನಿಸಿದ್ದು, ಎಂಎಸ್‌ ರಾಮಯ್ಯ ಅಪ್ಲೈಡ್‌ ಸೈನ್ಸ್‌ ವಿಭಾಗ ಸಂಶೋಧನೆಯ ಹೊಣೆ ಹೊರಲಿದೆ. ಮುಂದಿನ 15 ತಿಂಗಳ ಅವಧಿಯಲ್ಲಿ ಎಂ.ಎಸ್‌.ರಾಮಯ್ಯ ಸಂಸ್ಥೆಯ ಅಪ್ಲೈಡ್‌ ಸೈನ್ಸ್‌ನ ತಜ್ಞರು ಈ ಕುರಿತಾಗಿ ವರದಿ ಸಲ್ಲಿಸಲಿದ್ದಾರೆ.

Vijaya Karnataka Web 25 Sep 2020, 6:31 am
ಬೆಂಗಳೂರು: ಅಡಕೆ ಕುರಿತ ಸಂಶೋಧನೆ ಹಾಗೂ ಕ್ಲಿನಿಕಲ್‌ ಟ್ರಯಲ್‌ ಕೈಗೊಳ್ಳುವ ಹೊಣೆಯನ್ನು ಪ್ರತಿಷ್ಠಿತ ಬೆಂಗಳೂರಿನ ಎಂ.ಎಸ್‌.ರಾಮಯ್ಯ ಸಂಸ್ಥೆಯ ಅಪ್ಲೈಡ್‌ ಸೈನ್ಸ್‌ ವಿಭಾಗಕ್ಕೆ ವಹಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ.
Vijaya Karnataka Web ಸಾಂದರ್ಭಿಕ ಚಿತ್ರ


ಅಡಕೆ ಟಾಸ್ಕ್‌ಫೋರ್ಸ್‌ ಅಧ್ಯಕ್ಷ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ವಿಕಾಸಸೌಧದಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಇದಕ್ಕೆ ಸರಕಾರದ ಸಮ್ಮತಿಯೂ ಸಿಕ್ಕಿದೆ.

ಟಾಸ್ಕ್‌ಫೋರ್ಸ್‌ ರಚನೆ ಬಳಿಕ ನಡೆದ ಮೂರನೇ ಸಭೆ ಇದಾಗಿದ್ದು, ಎಂ.ಎಸ್‌.ರಾಮಯ್ಯ ಸಂಸ್ಥೆಯ ತಜ್ಞರೂ ಭಾಗಿಯಾಗಿದ್ದರು. ಅಡಕೆ ಸಂಬಂಧಿಸಿ ಸಂಶೋಧನಾ ಚಟುವಟಿಕೆಗೆ ಏನೆಲ್ಲ ಮಾಡಬಹುದು ಎಂಬ ಬಗ್ಗೆ ತಜ್ಞರು ಮಾಹಿತಿ ನೀಡಿದರು.
ಉತ್ತರ ಭಾರತಕ್ಕೆ ಕಿಸಾನ್‌ ರೈಲ್‌ನಲ್ಲಿ ಅಡಕೆ ಸಾಗಾಟ: ಅಡಕೆ ಮಾರುಕಟ್ಟೆ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬೆಳವಣಿಗೆ!
ಮುಂದಿನ 15 ತಿಂಗಳ ಅವಧಿಯಲ್ಲಿ ಎಂ.ಎಸ್‌.ರಾಮಯ್ಯ ಸಂಸ್ಥೆಯ ಅಪ್ಲೈಡ್‌ ಸೈನ್ಸ್‌ನ ತಜ್ಞರು ವರದಿ ಸಲ್ಲಿಸಲಿದ್ದಾರೆ. ಈ ಸಂಬಂಧ ಅವರು ರಾಜ್ಯದಲ್ಲಿ ಅಡಕೆ ಬೆಳೆಯುವ ಎಲ್ಲ ಪ್ರದೇಶದಿಂದ ಮಾದರಿ ಸಂಗ್ರಹಿಸಲಿದ್ದಾರೆ.

ರಿಸರ್ಚ್ ಸೆಂಟರ್‌ಗೆ ಮನವಿ
ತೀರ್ಥಹಳ್ಳಿಯಲ್ಲಿ ಅಡಕೆ ಸಂಶೋಧನಾ ಕೇಂದ್ರ ಪ್ರಾರಂಭಿಸುವುದಾಗಿ ಕಳೆದ ಚುನಾವಣೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭರವಸೆ ನೀಡಿದ್ದರು. ಈ ಉದ್ದೇಶಕ್ಕೆ 10 ಕೋಟಿ ರೂ. ಒದಗಿಸುವುದಾಗಿ ಈ ಹಿಂದೆ ಕೇಂದ್ರ ಕೃಷಿ ಸಚಿವರಾಗಿದ್ದ ರಾಧಾ ಮೋಹನ್‌ ಸಿಂಗ್‌ ಹೇಳಿದ್ದರು. ಈ ಎರಡೂ ವಿಚಾರವಾಗಿ ಅಮಿತ್‌ ಶಾ ಅವರನ್ನು ಭೇಟಿಯಾಗಿ ಪ್ರಸ್ತಾವನೆ ಸಲ್ಲಿಸಬೇಕು ಎಂಬ ನಿರ್ಣಯಕ್ಕೆ ಬರಲಾಯಿತು. ಹಾಗೆಯೇ ಆಮದು ಅಡಕೆಯ ದರವನ್ನು ಕೆಜಿಗೆ 250 ರೂ. ದಿಂದ 350 ರೂ.ಗೆ ಹೆಚ್ಚಿಸಲು ಕೇಂದ್ರ ವಾಣಿಜ್ಯ ಸಚಿವರಿಗೆ ಮನವಿ ಸಲ್ಲಿಸಬೇಕು. ಸ್ವೀಟ್‌ ಸುಪಾರಿ ಮತ್ತು ಸೆಂಟೆಡ್‌ ಸುಪಾರಿಗಳ ಮೇಲಿನ ಜಿಎಸ್‌ಟಿ ತೆರಿಗೆ ಪ್ರಮಾಣವನ್ನು ಶೇ.18ರಿಂದ ಶೇ.13ಕ್ಕೆ ಇಳಿಸಲು ಜಿಎಸ್‌ಟಿ ಕೌನ್ಸಿಲ್‌ನ ರಾಜ್ಯದ ಪ್ರತಿನಿಧಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ನೀಡಬೇಕು. ಅಡಕೆ ಸಂಬಂಧದ ಸಂಶೋಧನೆ ಮುಕ್ತಾಯವಾಗುವವರೆಗೆ ಸುಪ್ರೀಂಕೋರ್ಟ್‌ ವಿಚಾರಣೆಗೆ ತಡೆ ಕೋರಲು ನಿರ್ಧಾರ ಕೈಗೊಳ್ಳಲಾಯಿತು.
ನಿರಂತರ ಮಳೆಯಿಂದ ಅಡಿಕೆ ಬೆಳೆಗಾರರಿಗೆ ಸಂಕಷ್ಟ: ಬೆಲೆ ಏರಿಕೆ ಖುಷಿ ನಡುವೆ ಕೊಳೆರೋಗ ಭೀತಿ

ತೋಟಗಾರಿಕೆ ಇಲಾಖೆ ನಿರ್ದೇಶಕ ವೆಂಕಟೇಶ್‌, ಟಾಸ್ಕ್‌ಫೋರ್ಸ್‌ ಸದಸ್ಯರಾದ ಶಿವಕುಮಾರ್‌, ಸುಬ್ರಹ್ಮಣ್ಯ, ಹರಿಪ್ರಕಾಶ ಕೋಣೆಮನೆ ಮತ್ತಿತರರು ಸಭೆಯಲ್ಲಿದ್ದರು.

ಅಡಕೆ ಕುರಿತ ಸಂಶೋಧನೆಗೆ ಎಂ.ಎಸ್‌.ರಾಮಯ್ಯ ಸಂಸ್ಥೆಯವರು ಪ್ರಸ್ತಾವನೆ ಸಲ್ಲಿಸಿದ್ದಾರೆ. 15 ತಿಂಗಳಲ್ಲಿವರದಿ ಬರಲಿದೆ. ಇದಕ್ಕೆ ಬೇಕಾದ ಅನುದಾನ ಬಿಡುಗಡೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಆರಗ ಜ್ಞಾನೇಂದ್ರ, ಅಡಕೆ ಟಾಸ್ಕ್‌ಫೋರ್ಸ್‌ ಅಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ