ಆ್ಯಪ್ನಗರ

10 ದಿನದಲ್ಲಿ ರೈತರ ಖಾತೆಗೆ ಕಬ್ಬಿನ ಬಾಕಿ ಹಣ: ಸಿಟಿ ರವಿ ಭರವಸೆ

"ಕಬ್ಬಿನ ಇಳುವರಿಯನ್ನು ವೈಜ್ಞಾನಿಕವಾಗಿ ಅರಿಯಲು ಪ್ರಾಯೋಗಿಕವಾಗಿ ಬ್ರೆಜಿಲ್‌ ತಂತ್ರಜ್ಞಾನ ಅಳವಡಿಸಲು ನಿರ್ಧರಿಸಲಾಗಿದೆ. 1 ಕೋಟಿ ರೂ. ವೆಚ್ಚದ ಆಟೊಮೇಟಿವ್‌ ಶುಗರ್‌ ರಿಕವರಿ ಮೆಷಿನ್‌ ಬಳಸಿ ಆಯ್ದ ಕಾರ್ಖಾನೆಗಳಲ್ಲಿ ಇಳುವರಿ ಪ್ರಮಾಣ ಅಳತೆ ಮಾಡಲಾಗುವುದು," - ಸಿಟಿ ರವಿ.

Vijaya Karnataka 17 Oct 2019, 8:37 pm
ಬೆಂಗಳೂರು: ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ನೀಡಬೇಕಿದ್ದ ಬಾಕಿ ಹಣವನ್ನು ಹತ್ತು ದಿನದೊಳಗಾಗಿ ಎಫ್‌ಆರ್‌ಪಿ ದರದಲ್ಲಿ ಪಾವತಿಸಲಾಗುವುದು. ಆದರೆ ಕಾರ್ಖಾನೆ ಮಾಲೀಕರ ಜತೆಗೆ ರೈತರು ಮೌಖಿಕವಾಗಿ ನಿಗದಿ ಮಾಡಿಕೊಂಡ ದರದ ವಿಚಾರದಲ್ಲಿ ಸರಕಾರ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ ಎಂದು ಸಕ್ಕರೆ ಸಚಿವ ಸಿಟಿ ರವಿ ಹೇಳಿದ್ದಾರೆ.
Vijaya Karnataka Web CT Ravi


ಕಬ್ಬು ದರ ನಿಯಂತ್ರಣ ಮಂಡಳಿ ಹಾಗೂ ರೈತ ಪ್ರತಿನಿಧಿಗಳ ಜತೆಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "2018-19ನೇ ಸಾಲಿಗೆ ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ಪಾವತಿಸಬೇಕಿದ್ದ 11,948 ಕೋಟಿ ರೂ.ಗಳಲ್ಲಿ 84 ಕೋಟಿ ರೂ. ಬಾಕಿ ಉಳಿದಿದೆ,'' ಎಂದರು.

ಬಾಕಿ ಇರುವುದು ಶೇ.5 ಮಾತ್ರ

''ಉತ್ತರ ಪ್ರದೇಶದಲ್ಲಿ ಶೇ. 15, ಮಹಾರಾಷ್ಟ್ರದಲ್ಲಿ ಶೇ. 5, ತಮಿಳುನಾಡಿನಲ್ಲಿ ಶೇ. 25ರಷ್ಟು ಹಣವನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ವಿಜಯಪುರದ ಧ್ಯಾನಯೋಗಿ ಶುಗರ್ಸ್‌ ಮಾತ್ರ 19.15 ಕೋಟಿ ರೂ. ಬಾಕಿ ಉಳಿಸಿಕೊಂಡಿರುವುದು ಬಿಟ್ಟರೆ ಒಟ್ಟಾರೆ ಬಾಕಿ ಉಳಿಸಿಕೊಂಡಿರುವುದು ಶೇ. 5 ಮಾತ್ರ. ಈ ಹಿಂದೆ ರೈತರ ಸಾವಿರಾರು ಕೋಟಿ ರೂ. ಬಾಕಿ ಹಣ ಇದೆ ಎಂಬ ಆರೋಪವಿತ್ತು. ಆದರೆ ಅದು ಸರಕಾರ ನಿಗದಿ ಮಾಡಿದ ಎಫ್‌ಆರ್‌ಪಿ (2,750 ರೂ. ಪ್ರತಿ ಟನ್‌ಗೆ ) ದರಕ್ಕೆ ಬದಲಾಗಿ ಕಾರ್ಖಾನೆ ಮಾಲೀಕರ ಜತೆಗೆ ರೈತರು ಮೌಖಿಕವಾಗಿ ಮಾಡಿಕೊಂಡ ಒಪ್ಪಂದವಾಗಿತ್ತು. ಇದಕ್ಕೆ ಸರಕಾರ ಹೊಣೆಯಲ್ಲ. ಕಾನೂನುಬದ್ಧವಾಗಿ ಇಂಥ ಒಪ್ಪಂದವಾಗಿರಲಿಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿಇಂಥ ಒಪ್ಪಂದಕ್ಕೆ ಕಾನೂನು ಮಾನ್ಯತೆ ಇರುವ ರೀತಿ ರೈತ ಸಂಘಗಳು ವ್ಯವಸ್ಥೆ ಕಲ್ಪಿಸಬೇಕು," ಎಂದು ಹೇಳಿದರು.

''ಸಕ್ಕರೆ ಉತ್ಪಾದನೆಯಲ್ಲಿ ಭಾರತ ಜಾಗತಿಕವಾಗಿ ಮೊದಲನೇ ಸ್ಥಾನದಲ್ಲಿದೆ. ದೇಶಿಯ ಉತ್ಪಾದನೆಯಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕ ಮೊದಲ ಸ್ಥಾನದಲ್ಲಿವೆ. ರಾಜ್ಯದ 5 ಲಕ್ಷ ಹೆಕ್ಟೇರ್‌ ಪೈಕಿ ಈ ವರ್ಷ 1.5 ಲಕ್ಷ ಹೆಕ್ಟೇರ್‌ ಪ್ರದೇಶ ನೆರೆ ಹಾವಳಿಯಿಂದ ತೊಂದರೆಗೊಳಗಾಗಿದೆ,'' ಎಂದು ಹೇಳಿದರು.

ಇಳುವರಿ ಅಳೆಯಲು ಬ್ರೆಝಿಲ್‌ ತಾಂತ್ರಿಕತೆ

"ಕಬ್ಬಿನ ಇಳುವರಿಯನ್ನು ವೈಜ್ಞಾನಿಕವಾಗಿ ಅರಿಯಲು ಪ್ರಾಯೋಗಿಕವಾಗಿ ಬ್ರೆಜಿಲ್‌ ತಂತ್ರಜ್ಞಾನ ಅಳವಡಿಸಲು ನಿರ್ಧರಿಸಲಾಗಿದೆ. 1 ಕೋಟಿ ರೂ. ವೆಚ್ಚದ ಆಟೊಮೇಟಿವ್‌ ಶುಗರ್‌ ರಿಕವರಿ ಮೆಷಿನ್‌ ಬಳಸಿ ಆಯ್ದ ಕಾರ್ಖಾನೆಗಳಲ್ಲಿ ಇಳುವರಿ ಪ್ರಮಾಣ ಅಳತೆ ಮಾಡಲಾಗುವುದು. ಅದೇ ರೀತಿ ಸಕ್ಕರೆ ಸ್ಥಿರ ದರ ನಿಧಿ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ. ಜತೆಗೆ ಕಬ್ಬಿನ ತೂಕ ಹಾಗೂ ಇಳುವರಿ ಬಗ್ಗೆ ರೈತರು, ಕಾರ್ಖಾನೆ ಮಾಲೀಕರು ಹಾಗೂ ತಜ್ಞರನ್ನು ಒಳಗೊಂಡ ಸಮಿತಿ ರಚಿಸಲಾಗುವುದು,'' ಎಂದು ಹೇಳಿದರು.

ಆಯುಕ್ತಾಲಯ ಸದ್ಯಕ್ಕೆ ಸ್ಥಳಾಂತರವಿಲ್ಲ


ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯವನ್ನು ಬೆಂಗಳೂರಿಂದ ಬೆಳಗಾವಿಗೆ ವರ್ಗಾಯಿಸಲು ಸಂಪುಟದಲ್ಲಿ ನಿರ್ಣಯಿಸಲಾಗಿದೆಯಾದರೂ ಸದ್ಯಕ್ಕೆ ಸ್ಥಳಾಂತರ ಮಾಡದಿರಲು ನಿರ್ಧರಿಸಲಾಗಿದೆ. ಈ ಬಗ್ಗೆ ರೈತ ಮುಖಂಡರಲ್ಲೂ ಭಿನ್ನಾಭಿಪ್ರಾಯವಿದೆ. ಜತೆಗೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಪ್ರಾದೇಶಿಕ ಕಚೇರಿ ತೆರೆಯಬೇಕಾಗುತ್ತದೆ. ಈ ಎಲ್ಲಸಮಸ್ಯೆ ಬಗೆಹರಿದ ಬಳಿಕ ಸ್ಥಳಾಂತರಿಸಲಾಗುವುದು ಎಂದು ಸಕ್ಕರೆ ಸಚಿವ ಸಿ.ಟಿ.ರವಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ