ಆ್ಯಪ್ನಗರ

ಸಿಜೆಐ ಹೆಸರಿನಲ್ಲಿ ಕರ್ನಾಟಕದ ಸಿಜೆಗೆ ಅನಾಮಧೇಯನಿಂದ ಕರೆ: ತನಿಖೆಗೆ ಸುಪ್ರೀಂಕೋರ್ಟ್‌ ಆದೇಶ

ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್‌ ರಿಜಿಸ್ಟ್ರಿ ದಿಲ್ಲಿಯ ತಿಲಕ್‌ ಮಾರ್ಗ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಎಫ್‌ಐಆರ್‌ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆಂದು ವೆಬ್‌ಸೈಟ್‌ ಸೇರಿದಂತೆ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.

Vijaya Karnataka 19 Feb 2019, 8:15 am
ಬೆಂಗಳೂರು: ಸಿಜೆಐ ಹೆಸರಿನಲ್ಲಿ ಕರ್ನಾಟಕದ ಹಂಗಾಮಿ ಸಿಜೆಗೆ ಅನಾಮಧೇಯನೊಬ್ಬ ಕರೆ ಮಾಡಿ ಜಜ್‌ಗಳ ನೇಮಕದಲ್ಲಿ ಎರಡು ಹೆಸರು ಸೇರಿಸುವಂತೆ ಹೇಳಿದ್ದಾರೆನ್ನುವ ಪ್ರಕರಣ ನ್ಯಾಯಾಂಗ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
Vijaya Karnataka Web highcourt


ಈ ಮಧ್ಯೆ,ಈ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್‌ ರಿಜಿಸ್ಟ್ರಿ ದಿಲ್ಲಿಯ ತಿಲಕ್‌ ಮಾರ್ಗ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಎಫ್‌ಐಆರ್‌ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆಂದು ವೆಬ್‌ಸೈಟ್‌ ಸೇರಿದಂತೆ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.

ಅನಾಮಧೇಯ ವ್ಯಕ್ತಿಯಿಂದ ಇದೇ ಬಗೆಯ ಕರೆ ತೆಲಂಗಾಣ ಹೈಕೋರ್ಟ್‌ನ ಸಿಜೆ ಟಿ.ಬಿ. ರಾಧಾಕೃಷ್ಣನ್‌ ಅವರಿಗೂ ಹೋಗಿತ್ತು ಎನ್ನಲಾಗಿದೆ. ಈ ಘಟನೆ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌,ತಮ್ಮ ಕಚೇರಿಯಿಂದ ಅಥವಾ ತಮ್ಮ ಹೆಸರಿನಿಂದ ಯಾವುದೇ ರೀತಿಯ ಕರೆ ಬಂದರೂ ಅವುಗಳಿಗೆ ಮಣೆ ಹಾಕಬಾರದೆಂದು ಕರ್ನಾಟಕದ ಹಂಗಾಮಿ ಸಿಜೆ ಸೇರಿದಂತೆ ಎಲ್ಲ ಹೈಕೋರ್ಟ್‌ನ ಸಿಜೆಗಳಿಗೆ ತಾಕೀತು ಮಾಡಿದ್ದಾರೆಂದು ಹೇಳಲಾಗಿದೆ.

ಸಿಜೆಐ ರಂಜನ್‌ ಗೊಗೊಯ್‌ ಅವರ ಆಪ್ತ ಕಾರ‍್ಯದರ್ಶಿ ಎಚ್‌.ಕೆ.ಜುನೇಜಾ ಹೆಸರಿನಿಂದ ಪರಿಚಯಿಸಿಕೊಂಡ ಅನಾಮಧೇಯ ವ್ಯಕ್ತಿ ಕಳೆದ ವಾರ ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ಸಿಜೆ ಎಲ್‌.ನಾರಾಯಣಸ್ವಾಮಿ ಅವರಿಗೆ ಕರೆ ಮಾಡಿ, ಹೈಕೋರ್ಟ್‌ನ ನ್ಯಾಯಮೂರ್ತಿ ನೇಮಕಕ್ಕೆ ಶಿಫಾರಸು ಮಾಡುವಾಗ ಇಬ್ಬರು ವಕೀಲರ ಹೆಸರನ್ನು ಸೇರಿಸಿಕೊಳ್ಳಿ ಎಂದು ಸಿಜೆಐ ಹೇಳಿದ್ದಾರೆಂದು ತಿಳಿಸಿದ್ದಾನೆ.

ಎರಡು ದಿನಗಳ ನಂತರ ಮತ್ತೆ ನ್ಯಾ.ನಾರಾಯಣಸ್ವಾಮಿ ಅವರಿಗೆ ಕರೆ ಮಾಡಿದ ಆ ವ್ಯಕ್ತಿ, ಹೈಕೋರ್ಟ್‌ನ ಜಜ್‌ಗಳ ನೇಮಕ ಕುರಿತ ಶಿಫಾರಸಿನ ಬಗ್ಗೆ ಸಿಜೆಐ ನಿಮ್ಮ ಜೊತೆ ಮಾತನಾಡಬೇಕು ಎಂದು ಹೇಳಿದ್ದಾನೆ. ಆನಂತರ ವ್ಯಕ್ತಿಯೊಬ್ಬ ಸಿಜೆಐ ಧ್ವನಿಯಲ್ಲಿ ಮಾತನಾಡಿದ್ದಾನೆನ್ನಲಾಗಿದೆ.

ಹಸ್ತಕ್ಷೇಪ ಸಲ್ಲ
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ವಕೀಲರ ಸಂಘ,'' ಈ ಬೆಳವಣಿಗೆ ಆಶ್ಚರ್ಯ ತಂದಿದೆ. ಇದರಿಂದ ಹೈಕೋರ್ಟ್‌ನ ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ನಡೆಯುತ್ತದೆ ಎಂಬ ಅನುಮಾನ ಮೂಡುವಂತಿದೆ. ಯಾವ ವ್ಯಕ್ತಿ ಕರೆಮಾಡಿದ್ದರು ಮತ್ತು ಯಾವ ವಕೀಲರ ಹೆಸರು ಶಿಫಾರಸು ಮಾಡಿದ್ದರು ಎಂಬ ಮಾಹಿತಿ ಬಹಿರಂಗಪಡಿಸಬೇಕು,'' ಎಂದು ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್‌ ಹಂಗಾಮಿ ನ್ಯಾಯಮೂರ್ತಿ ಅವರನ್ನು ಕೋರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ