ಆ್ಯಪ್ನಗರ

ಲಿಂಗಾಯತ: ಸರಕಾರಕ್ಕೆ ಸ್ವಾಮೀಜಿಗಳ ಎಚ್ಚರಿಕೆ

ಲಿಂಗಾಯತ ಸ್ವತಂತ್ರ ಧರ್ಮ ಕುರಿತ ರಾಜ್ಯ ಸಚಿವ ಸಂಪುಟ ನಿರ್ಧಾರಕ್ಕೆ ಸಂಬಂಧಿಸಿ ಪರ-ವಿರೋಧದದ ಪ್ರತಿಕ್ರಿಯೆ ಮುಂದುವರಿದಿದೆ.

Vijaya Karnataka Web 22 Mar 2018, 7:39 am

ಲಕ್ಷ್ಮೇಶ್ವರ(ಗದಗ): ಲಿಂಗಾಯತ ಸ್ವತಂತ್ರ ಧರ್ಮ ಕುರಿತ ರಾಜ್ಯ ಸಚಿವ ಸಂಪುಟ ನಿರ್ಧಾರಕ್ಕೆ ಸಂಬಂಧಿಸಿ ಪರ-ವಿರೋಧದದ ಪ್ರತಿಕ್ರಿಯೆ ಮುಂದುವರಿದಿದೆ. ''ರಾಜ್ಯ ಸರಕಾರ ಹಠಮಾರಿ ಧೋರಣೆ ಬಿಟ್ಟು ವೀರಶೈವ ಲಿಂಗಾಯತ ಒಂದೇ ಎಂಬ ನಿಲುವಿಗೆ ಬದ್ಧವಾಗಬೇಕು. ಇಲ್ಲದಿದ್ದರೆ ತಕ್ಕ ಪ್ರಾಯಶ್ಚಿತ ಎದುರಿಸಬೇಕಾಗುತ್ತದೆ,'' ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯರು ಎಚ್ಚರಿಕೆ ನೀಡಿದ್ದಾರೆ. ದಿಂಗಾಲೇಶ್ವರ ಸ್ವಾಮೀಜಿ ಕೂಡ ಸರಕಾರದ ವಿರುದ್ಧ ದನಿ ಎತ್ತಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ ''ಲಿಂಗಾಯತರನ್ನು ಅಲ್ಪಸಂಖ್ಯಾತರನ್ನಾಗಿಸಿ ಯಾವ ಸೌಲಭ್ಯಗಳೂ ಇಲ್ಲದಂತೆ ಅತಂತ್ರವಾಗಿಸುವ ಸಾಧ್ಯತೆಯಿದೆ. ಆಗ ಪ್ರತ್ಯೇಕ ಧರ್ಮಕ್ಕಾಗಿ ಆಗ್ರಹಿಸಿದ ಮಠಗಳ ಮುಂದೆ ಮತ್ತು ಹೋರಾಟಗಾರರ ಮನೆ ಮುಂದೆ ಧರಣಿ ನಡೆಸುವ ಕಾಲ ಬರುತ್ತದೆ,'' ಎಂದು ಹೇಳಿದರು. ''ಸನಾತನ ವೀರಶೈವ ಧರ್ಮ ಮತ್ತು ಪಂಚಪೀಠಗಳ ಮೇಲಿನ ಜನರ ವಿಶ್ವಾಸ, ನಂಬಿಕೆ ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಕೆಲ ಮಠಾಧೀಶರು ಆಧುನಿಕತೆ ಮತ್ತು ವೈಚಾರಿಕತೆ ನೆಪದಲ್ಲಿ ದ್ವಂದ್ವ ಹೇಳಿಕೆ ನೀಡುತ್ತಿದ್ದಾರೆ. ಅವರದೇ ಮಠದ ಜಾತ್ರೆಯಿದ್ದಾಗ ಅವರು ಪೂಜೆ, ಪುನಸ್ಕಾರ ಮಾಡುವುದಿಲ್ಲವೇ,'' ಎಂದು ಪ್ರಶ್ನಿಸಿದರು.

ಜಾತಿಜಾತಿ ನಡುವೆ ವಿಷ ಬೀಜ ಬಿತ್ತಿ ಒಡೆಯುವ ಕೆಲಸ ಮಾಡುತ್ತಿರುವ ಕಾಂಗ್ರೆಸ್‌ನ ಅಸಲಿ ಮುಖ ಕೊನೆಗೂ ಬಯಲಾಗಿದೆ. ಈ ಹಿಂದೆಯೇ ಕೇಂದ್ರದ ಯುಪಿಎ ಸರಕಾರ ತಿರಸ್ಕರಿಸಿದ್ದರೂ ಮತ್ತೆ ಅದೇ ಪ್ರಸ್ತಾವನೆ ಸಲ್ಲಿಸಲು ಮುಂದಾಗಿರುವುದರ ಹಿಂದೆ ಚುನಾವಣೆ ಗಿಮಿಕ್‌ ಅಡಗಿದೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಒಬ್ಬರು ಎಷ್ಟು ಕೀಳು ಮಟ್ಟಕ್ಕೆ ಇಳಿಯಬಹುದು ಎಂಬುದಕ್ಕೆ ಸಿದ್ದರಾಮಯ್ಯ ಸಾಕ್ಷಿ.

- ಯಡಿಯೂರಪ್ಪ, ಬಿಜೆಪಿ ನಾಯಕ

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಒತ್ತಾಯಿಸಿ ನಾನು ಬಸವಣ್ಣ ಪರ ಮಾತನಾಡುವುದು ತಪ್ಪೆ? ನನ್ನ ಒಂದು ಕಣ್ಣು ಕಿತ್ತರೆ, ಅವರ ಎರಡೂ ಕಣ್ಣು ಕೀಳಬಲ್ಲೆ.

-ಎಂ ಬಿ ಪಾಟೀಲ್‌, ಸಚಿವ

ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಕೊಡವರ ಬೇಡಿಕೆ

ಬೆಂಗಳೂರು: 'ಲಿಂಗಾಯತ, ವೀರಶೈವ ಲಿಂಗಾಯತ' ಪ್ರತ್ಯೇಕ ಧರ್ಮದ ಬೇಡಿಕೆಗೆ ರಾಜ್ಯ ಸರಕಾರ ಒಪ್ಪಿಗೆ ಸೂಚಿಸಿದ ಬಳಿಕ ಈಗ ಕೊಡವರು ಸಹ ತಮಗೂ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕೆಂದು ರಾಜ್ಯ ಸರಕಾರದ ಮುಂದೆ ಬೇಡಿಕೆ ಮುಂದಿಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ