ಆ್ಯಪ್ನಗರ

ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಕೆ ಷರತ್ತು ಸಡಿಲ

ಬೇಸಿಗೆಯಿಂದಾಗಿ ಬರಗಾಲದ ತೀವ್ರತೆ ಮತ್ತಷ್ಟು ಹೆಚ್ಚಿರುವ ಹಿನ್ನೆಲೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಪೂರೈಕೆಗೆ ವಿಶೇಷ ಆದ್ಯತೆ ನೀಡಲು ...

Vijaya Karnataka 2 Mar 2019, 5:00 am
ಬೆಂಗಳೂರು: ಬೇಸಿಗೆಯಿಂದಾಗಿ ಬರಗಾಲದ ತೀವ್ರತೆ ಮತ್ತಷ್ಟು ಹೆಚ್ಚಿರುವ ಹಿನ್ನೆಲೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಪೂರೈಕೆಗೆ ವಿಶೇಷ ಆದ್ಯತೆ ನೀಡಲು ರಾಜ್ಯ ಸರಕಾರ ನಿರ್ಧರಿಸಿದ್ದು, ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಸಂಬಂಧದ ಮಾರ್ಗಸೂಚಿ ಪರಿಷ್ಕರಿಸಿದೆ.
Vijaya Karnataka Web RVDeshpande


''ಪ್ರಸ್ತುತ 19 ಜಿಲ್ಲೆಗಳ ಒಟ್ಟು 377 ಗ್ರಾಮಗಳಿಗೆ 706 ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದ್ದು, 431 ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು 401 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ'' ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

''ಮಾರ್ಗಸೂಚಿಯಂತೆ 90 ದಿನಗಳಗಿಂತ ಹೆಚ್ಚು ಕಾಲ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆಗೆ ಅವಕಾಶವಿಲ್ಲ. ಆದರೆ, ಜೂನ್‌ ತಿಂಗಳ ವರೆಗೆ ಮಳೆಯಾಗುವ ಸಾಧ್ಯತೆ ಇಲ್ಲದ ಕಾರಣ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಸಂಬಂಧದ ಷರತ್ತುಗಳನ್ನು ಕೈಬಿಟ್ಟು ಪರಿಷ್ಕೃತ ಆದೇಶ ಹೊರಡಿಸಲಾಗಿದೆ. ಅಗತ್ಯವಿರುವ ಎಲ್ಲ ಕಡೆಗಳಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆಗೆ ಸೂಚನೆ ನೀಡಲಾಗಿದೆ'' ಎಂದು ಹೇಳಿದರು.

''ಕುಡಿಯುವ ನೀರು ಪೂರೈಕೆಗಾಗಿಯೇ ಬರಪೀಡಿತ ತಾಲೂಕುಗಳಿಗೆ ತಲಾ ಒಂದು ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಹಳೆ ಬೋರ್‌ವೆಲ್‌ಗಳ ದುರಸ್ಥಿ ಹಾಗೂ ಹೊಸ ಕೊಳವೆಬಾವಿ ಕೊರೆಸಲೂ ಕ್ರಮ ಕೈಗೊಳ್ಳಲಾಗಿದೆ. ಕುಡಿಯುವ ನೀರು ಮತ್ತಿತರ ತುರ್ತು ಪರಿಹಾರ ಕಾರ್ಯಗಳಿಗಾಗಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಖಾತೆಗಳಲ್ಲಿ ಒಟ್ಟು 647 ಕೋಟಿ ರೂ. ಹಣ ಲಭ್ಯವಿದೆ. ನಗರ ಸ್ಥಳೀಯ ಸಂಸ್ಥೆಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ನಿಭಾಯಿಸಲು ನಗರಾಭಿವೃದ್ಧಿ ಇಲಾಖೆ ಮೂಲಕ 50 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಜನರು ಉದ್ಯೋಗಕ್ಕಾಗಿ ಗುಳೇ ಹೋಗುವುದನ್ನು ತಪ್ಪಿಸಲು ಕೇಂದ್ರದಿಂದ ಮರುಪಾವತಿ ನಿರೀಕ್ಷಿಸಿ ರಾಜ್ಯ ಸರಕಾರವೇ ನರೇಗಾ ಯೋಜನೆಯಡಿ ಕೂಲಿ ಪಾವತಿಗಾಗಿ 500 ಕೋಟಿ ರೂ. ಬಿಡುಗಡೆ ಮಾಡಿದೆ'' ಅವರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ