ಆ್ಯಪ್ನಗರ

ಬೆಂಗಳೂರಿನಲ್ಲಿ ರೈತರ ಪರೇಡ್: ಟ್ರ್ಯಾಕ್ಟರ್ ಸಂಖ್ಯೆ ಕಡಿತಗೊಳಿಸಲು ರೈತ ಸಂಘಗಳಿಂದ ಚಿಂತನೆ

ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಜನವರಿ 26 ರಂದು ಬೆಂಗಳೂರು ನಗರದಲ್ಲಿ ಟ್ರ್ಯಾಕ್ಟರ್‌ ಪರೇಡ್ ನಡೆಸಲಿದ್ದಾರೆ. ಆರಂಭದಲ್ಲಿ 2000 ಟ್ರ್ಯಾಕ್ಟರ್‌ಗಳು ಪರೇಡ್‌ನಲ್ಲಿ ಭಾಗಿಯಾಗಲಿವೆ ಎಂದು ಹೇಳಲಾಗುತ್ತಿದ್ದರೂ ಇದೀಗ ಸಂಖ್ಯೆ ಕಡಿತಗೊಳಿಸಲಾಗಿದೆ.

Vijaya Karnataka Web 25 Jan 2021, 10:35 am
ಬೆಂಗಳೂರು: ಕೃಷಿ ಕಾಯ್ದೆ ವಿರೋಧಿಸಿ ಜನವರಿ 26 ರಂದು ಬೆಂಗಳೂರಿನಲ್ಲೂ ಟ್ರ್ಯಾಕ್ಟರ್‌ ಪರೇಡ್‌ ನಡೆಸಲು ರಾಜ್ಯ ರೈತ ಸಂಘಟನೆಗಳು ನಿರ್ಧಾರ ಮಾಡಿದರೂ ಟ್ರ್ಯಾಕ್ಟರ್‌ಗಳ ಸಂಖ್ಯೆ ಕಡಿತಗೊಳಿಸಲು ಚಿಂತನೆ ನಡೆಸಿವೆ. ಆರಂಭದಲ್ಲಿ ಸುಮಾರು 2000 ಟ್ರ್ಯಾಕ್ಟರ್‌ಗಳ ಜೊತೆಗೆ ಮೆರವಣಿಗೆ ಮಾಡಲು ರೈತ ಸಂಘಟನೆಗಳು ನಿರ್ಧಾರ ಮಾಡಿದ್ದವು. ಆದರೆ ಪೊಲೀಸರ ಮನವಿ ಮೇರೆ 300 ರಿಂದ 500 ರಷ್ಟು ಟ್ರ್ಯಾಕ್ಟರ್‌ಗಳು ಪರೇಡ್‌ನಲ್ಲಿ ಭಾಗಿಯಾಗಲಿವೆ.
Vijaya Karnataka Web kodihalli chandrashekar


ಬೆಂಗಳೂರಿನ ಐದು ದಿಕ್ಕುಗಳಿಂದ ಸುಮಾರು 2000 ಟ್ರ್ಯಾಕ್ಟರ್‌ಗಳ ಮೂಲಕ ಬೆಂಗಳೂರು ನಗರದಲ್ಲಿ ಪರೇಡ್ ನಡೆಸಲು ರೈತ ಸಂಘಟನೆಗಳು ನಿರ್ಧಾರ ಮಾಡಿದ್ದವು. ಈ ಕುರಿತಾಗಿ ರಾಜ್ಯ ರೈತ ಸಂಘಟನೆಗಳ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದರು.

ಕೃಷಿ ಕಾಯ್ದೆಗೆ ವಿರೋಧ: ರಾಜ್ಯದಲ್ಲೂ ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ಪರೇಡ್

ಆದರೆ 2000 ಕ್ಕೂ ಅಧಿಕ ಟ್ರ್ಯಾಕ್ಟರ್‌ಗಳ ಬೆಂಗಳೂರು ನಗರ ಪ್ರವೇಶ ಮಾಡಿದರೆ ಸಂಚಾರ ಸಮಸ್ಯೆ ಉಂಟಾಗಲಿದೆ ಎಂಬ ನಿಟ್ಟಿನಲ್ಲಿ ಪೊಲೀಸರು ಟ್ರ್ಯಾಕ್ಟರ್‌ಗಳ ಸಂಖ್ಯೆ ಕಡಿತಗೊಳಿಸುವಂತೆ ರೈತ ಸಂಘಟನೆಗಳ ಮುಖಂಡರ ಬಳಿ ಮನವಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಟ್ರ್ಯಾಕ್ಟರ್‌ಗಳ ಸಂಖ್ಯೆಯನ್ನು 300 ರಿಂದ 500 ಕ್ಕೆ ಕಡಿತಗೊಳಿಸಲು ನಿರ್ಧರಿಸಲಾಗಿದೆ. ಈ ಕುರಿತಾಗಿ ಸಭೆ ನಡೆಸಿ ಅಧಿಕೃತ ನಿರ್ಧಾರಕ್ಕೆ ಬರಲು ರೈತ ಸಂಘಟನೆಗಳು ಮುಂದಾಗಿವೆ.

ಇನ್ನು ಟ್ರ್ಯಾಕ್ಟರ್‌ ಪರೇಡ್ 5 ಪಾಯಿಂಟ್ ಗಳನ್ನು ಗುರುತಿಸಲಾಗಿದ್ದು ಮೈಸೂರು ಸೇರಿದಂತೆ ಇತರ ಜಿಲ್ಲೆಗಳಿಂದ ಬರುವ ರೈತರು ಸೋಮವಾರ ಸಂಜೆಯಿಂದಲೇ ಮೆರವಣಿಗೆ ಆರಂಭ ಮಾಡಲಿದ್ದಾರೆ. ಉಳಿದಂತೆ ಹತ್ತಿರದ ಜಿಲ್ಲೆಗಳ ರೈತರು ತಮ್ಮ ಜಿಲ್ಲೆಗಳಿಂದ ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಮೆರವಣಿಗೆ ಮೂಲಕ ಬೆಂಗಳೂರು ನಗರ ಪ್ರವೇಶ ಮಾಡಲಿದ್ದಾರೆ. ನಗರದಲ್ಲಿ ಟ್ರ್ಯಾಕ್ಟರ್‌ ಪರೇಡ್‌ ಮೂಲಕ ಸಾಗಿ ಫ್ರೀಡಂ ಪಾರ್ಕ್‌ನಲ್ಲಿ ರೈತ ಸಂಘಟನೆಗಳು ಜಮಾವಣೆಗೊಳ್ಳಲಿವೆ. 18 ಕಿಲೋ ಮೀಟರ್ ಮೆರವಣಿಗೆಯಲ್ಲಿ 30,000 ರೈತರು ಭಾಗಿಯಾಗಿದ್ದಾರೆ. ಈ ಮೂಲಕ ಕೇಂದ್ರದ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ