ಆ್ಯಪ್ನಗರ

ಪೋಕ್ಸೋ ಚುರುಕಿಗೆ ಫರ್ಮಾನು: ರಾಜ್ಯದ ಪೊಲೀಸ್, ವಕೀಲರ ಬಗ್ಗೆ ಡಿಸಿಎಂ ಸಿಡಿಮಿಡಿ

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪೋಕ್ಸೋ ಕಾಯಿದೆಯಡಿ ದಾಖಲಾಗಿರುವ ಪ್ರಕರಣಗಳ ಇತ್ಯರ್ಥ ವಿಳಂಬವಾಗುತ್ತಿರುವ ಬಗ್ಗೆ ಡಿಸಿಎಂ ಡಾ.ಜಿ. ಪರಮೇಶ್ವರ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Vijaya Karnataka 28 Aug 2018, 7:27 am
ಬೆಂಗಳೂರು: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪೋಕ್ಸೋ ಕಾಯಿದೆಯಡಿ ದಾಖಲಾಗಿರುವ ಪ್ರಕರಣಗಳ ಇತ್ಯರ್ಥ ವಿಳಂಬವಾಗುತ್ತಿರುವ ಬಗ್ಗೆ ಡಿಸಿಎಂ ಡಾ. ಜಿ.ಪರಮೇಶ್ವರ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಕರಣಗಳ ವಿಲೇವಾರಿ ವಿಳಂಬವಾಗಲು ಸಾಕ್ಷ್ಯಾಧಾರ ಕಲೆಹಾಕುವಲ್ಲಿ ಪೊಲೀಸ್‌ ಅಧಿಕಾರಿಗಳ ವಿಫಲತೆ ಕಾರಣವೇ ಅಥವಾ ಅಭಿಯೋಜಕರಿಗೆ ಮಾಹಿತಿ ಕೊರತೆಯೇ ಎಂಬುದು ತಮಗೆ ಅರ್ಥವಾಗುತ್ತಿಲ್ಲ ಎಂದು ಅವರು ಸಿಡಿಮಿಡಿ ಪ್ರಕಟಿಸಿದ್ದಾರೆ.
Vijaya Karnataka Web parameshwar


ವಿಧಾನಸೌಧದಲ್ಲಿ ಸೋಮವಾರ ಪೋಕ್ಸೋ ಪ್ರಕರಣಗಳನ್ನು ನಿರ್ವಹಿಸುವ ಸರಕಾರಿ ವಕೀಲರ ಸಭೆ ನಡೆಸಿದ ಪರಮೇಶ್ವರ್‌, ''ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ನಿರ್ವಹಣೆಯಲ್ಲಿ ವಿಶೇಷವಾಗಿ ಜಿಲ್ಲಾ ಕೇಂದ್ರಗಳಲ್ಲಿ ಸರಕಾರಿ ವಕೀಲರು ಎಡವುತ್ತಿದ್ದಾರೆ. ಹೀಗಾಗಿ ಪ್ರಕರಣಗಳು ಇತ್ಯರ್ಥವಾಗದೇ ಉಳಿದು ಆರೋಪಿಗಳಿಗೆ ಭಯ ಕಡಿಮೆಯಾಗಿದ್ದು, ಪ್ರಕರಣಗಳು ಹೆಚ್ಚುತ್ತಿವೆ'' ಎಂದು ಹೇಳಿದರು.

''ಪೋಕ್ಸೋ ಅಡಿಯಲ್ಲಿ ದಾಖಲಾದ 1,471 ಪ್ರಕರಣಗಳಲ್ಲಿ ಹೆಚ್ಚಿನವು ಇತ್ಯರ್ಥವಾಗದೆ ಬಾಕಿ ಉಳಿದಿವೆ. ಇದು ಸರಿಯಲ್ಲ. ಪ್ರಕರಣಗಳ ಇತ್ಯರ್ಥಕ್ಕೆ ಬೇಕಾದ ತಾಂತ್ರಿಕ ಹಾಗೂ ಕಾನೂನು ಜ್ಞಾನ ನೀಡಲು ಜಿಲ್ಲೆಗಳಲ್ಲಿರುವ ಸರಕಾರಿ ಅಭಿಯೋಜಕರಿಗೆ ಹಿರಿಯ ವಕೀಲರು ಹಾಗೂ ನ್ಯಾಯಾಧೀಶರ ಮೂಲಕ ಸೂಕ್ತ ತರಬೇತಿ ಕೊಡಿಸುವುದು ಸೂಕ್ತ'' ಎಂದು ಅಭಿಪ್ರಾಯಪಟ್ಟರು.

''ಸಣ್ಣಪುಟ್ಟ ಕಾರಣಕ್ಕೆ ಪ್ರಕರಣ ಬಾಕಿ ಉಳಿಯಬಾರದು. ಪೊಲೀಸ್‌ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ ಎಂದಾದರೆ ಡಿಜಿಪಿ ಗಮನಕ್ಕೆ ತನ್ನಿ. ಸದ್ಯ ಬಾಕಿ ಇರುವ ಎಲ್ಲ ಪ್ರಕರಣಗಳನ್ನು 15 ದಿನಗಳೊಳಗೆ ಮರುಪರಿಶೀಲನೆ ನಡೆಸಿ ಇತ್ಯರ್ಥಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು'' ಎಂದು ತಾಕೀತು ಮಾಡಿದರು.

ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌, ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ರಾಜು ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ