ಆ್ಯಪ್ನಗರ

ವಿವಿಪ್ಯಾಟ್‌: ಮತ ತಾಳೆ ಪಟ್ಟಿ ಆಯೋಗ ಬಿಡುಗಡೆ

ಇವಿಎಂನಲ್ಲಿ ದಾಖಲಾದ ಮತಕ್ಕೂ ಎಣಿಕೆ ದಿನ ಲೆಕ್ಕಕ್ಕೆ ಸಿಕ್ಕ ಮತಕ್ಕೂ ವ್ಯತ್ಯಾಸವಿದೆ ಎಂದು ಸೃಷ್ಟಿಯಾಗಿರುವ ವಿವಾದಕ್ಕೆ ತೆರೆ ಎಳೆಯುವುದಕ್ಕೆ ...

Vijaya Karnataka 2 Jun 2019, 5:00 am
ಬೆಂಗಳೂರು: ಇವಿಎಂನಲ್ಲಿ ದಾಖಲಾದ ಮತಕ್ಕೂ ಎಣಿಕೆ ದಿನ ಲೆಕ್ಕಕ್ಕೆ ಸಿಕ್ಕ ಮತಕ್ಕೂ ವ್ಯತ್ಯಾಸವಿದೆ ಎಂದು ಸೃಷ್ಟಿಯಾಗಿರುವ ವಿವಾದಕ್ಕೆ ತೆರೆ ಎಳೆಯುವುದಕ್ಕೆ ಚುನಾವಣಾ ಆಯೋಗ ಹರ ಸಾಹಸ ನಡೆಸಲಾರಂಭಿಸಿದ್ದು, ಇದೀಗ ಇವಿಎಂನಲ್ಲಿ ದಾಖಲಾದ ಅಧಿಕೃತ ಮತಗಳ ಪಟ್ಟಿಯನ್ನೇ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿದೆ.
Vijaya Karnataka Web 2504-2-2-42


ಈ ಪಟ್ಟಿಯ ಪ್ರಕಾರ ರಾಜ್ಯದಲ್ಲಿ ಚಲಾವಣೆಯಾದ ಮತ, ಇವಿಎಂನಲ್ಲಿ ದಾಖಲಾದ ಮತದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಆಯೋಗ ಪ್ರತಿಪಾದಿಸಿದೆ. ಆದರೆ ಮೇ 21ರಂದು ಆಯೋಗ ಪ್ರಕಟಪಡಿಸಿದ ಪಟ್ಟಿಗೂ, ಫಲಿತಾಂಶದ ದಿನ ಅಭ್ಯರ್ಥಿಗಳು ಪಡೆದ ಮತಕ್ಕೂ ವ್ಯತ್ಯಾಸವಿದ್ದು ಸ್ಪಷ್ಟನೆ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಈ ಬಗ್ಗೆ ಟ್ವೀಟ್‌ ಮಾಡಿ ಆಯೋಗ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದರು. ಮಂಡ್ಯದಲ್ಲಿ ಚಲಾವಣೆಯಾದ ಮತಕ್ಕೂ, ಫಲಿತಾಂಶದ ದಿನ ಲಭಿಸಿದ ಮತಕ್ಕೂ ಸುಮಾರು 3000 ಅಂತರವಿದೆ ಎಂಬ ಆರೋಪ ಎದುರಾಗಿತ್ತು. ಅದೇ ರೀತಿ ರಾಯಚೂರಿನಲ್ಲಿ 5000 ಮತಗಳ ವ್ಯತ್ಯಾಸ ಕಂಡು ಬಂದಿತ್ತು.

ಒಟ್ಟಾರೆಯಾಗಿ ರಾಜ್ಯದಲ್ಲಿ 22 ಸಾವಿರ ಮತಗಳ ವ್ಯತ್ಯಾಸವಿದೆ ಎಂಬ ಮಾಹಿತಿ ಬಹಿರಂಗವಾಗಿತ್ತು. ಉಳಿದ ರಾಜ್ಯಗಳಿಗೆ ಹೋಲಿಸಿದರೆ ಈ ಪ್ರಮಾಣ ಕಡಿಮೆ. ಆದರೆ ಕಳೆದ ಮೂರು ದಿನಗಳಿಂದ ರಾಷ್ಟ್ರವ್ಯಾಪಿ ನಡೆಯುತ್ತಿರುವ ಚರ್ಚೆ ಕರ್ನಾಟಕಕ್ಕೂ ವಿಸ್ತರಣೆಗೊಂಡಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಚುನಾವಣಾ ಆಯೋಗ ಎಲ್ಲ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಗೊಂದಲ ನಿವಾರಣೆ ಮಾಡುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ತನ್ನ ಅಧಿಕೃತ ವಾಟ್ಸಾಫ್‌ ಗ್ರೂಪ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ