ಆ್ಯಪ್ನಗರ

ಇಂದು ವಿಶ್ವ ಆಹಾರ ದಿನ: ಅನ್ನದಾನ ಮಹಾದಾನ, ಆಹಾರ ಚೆಲ್ಲುವ ಮುನ್ನ ಯೋಚಿಸಿ!

ಒಂದೆಡೆ ಆಹಾರೋದ್ಯಮ ಬೆಳೆಯುತ್ತಿದ್ದರೆ ಇನ್ನೊಂದೆಡೆ ಹಸಿವಿನಿಂದ ಜನತೆ ಸಾಯುವುದೂ ಹೆಚ್ಚಾಗುತ್ತಿದೆ. ಸಮೀಕ್ಷೆಯೊಂದರ ಪ್ರಕಾರ ದೇಶದಲ್ಲಿ ಉತ್ಪತ್ತಿಯಾಗುವ ಆಹಾರದಲ್ಲಿ ಶೇ.40ರಷ್ಟು ಪೋಲಾಗುತ್ತಿದ್ದರೆ, ದೇಶದ ಜನಸಂಖ್ಯೆಯ ಶೇ.14.8ರಷ್ಟು ಜನತೆ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅ.16ನ್ನು ವಿಶ್ವ ಆಹಾರ ದಿನವನ್ನಾಗಿ ಆಚರಿಸಲಾಗುತ್ತಿದೆ. ಹಸಿದವರಿಗೆ ಅನ್ನ ನೀಡುವ ಮಾದರಿ ಕಾರ‍್ಯ ನಿರ್ವಹಿಸುತ್ತಿರುವ ವಿಶೇಷ ಅನ್ನದಾತರ ಚಿತ್ರಣ ಇಲ್ಲಿದೆ.

Vijaya Karnataka Web 16 Oct 2020, 6:49 am
ಆರ್‌. ಶ್ರೀಧರ್‌ ರಾಮನಗರ/ವೀರೇಶ್‌, ಬೆಂಗಳೂರು
Vijaya Karnataka Web world food day 2020 dont waste food
ಇಂದು ವಿಶ್ವ ಆಹಾರ ದಿನ: ಅನ್ನದಾನ ಮಹಾದಾನ, ಆಹಾರ ಚೆಲ್ಲುವ ಮುನ್ನ ಯೋಚಿಸಿ!

ಬೆಂಗಳೂರು: ಮೈಸೂರಿನ ರಾಜೇಂದ್ರ ಕಳೆದೊಂದು ದಶಕದಿಂದ ಮದುವೆ ಮತ್ತು ಶುಭ ಸಮಾರಂಭಗಳಲ್ಲಿ ಬಳಕೆಯಾಗದೇ ಉಳಿಯುವ ಆಹಾರ ಸಂಗ್ರಹಿಸಿ ಹಸಿದವರಿಗೆ ತಲುಪಿಸುತ್ತಿದ್ದಾರೆ. 'ಅಕ್ಷರ ಆಹಾರ ಜೋಳಿಗೆ' ಎಂಬ ಚಳವಳಿ ಮೂಲಕ ಆಹಾರ ಕ್ರಾಂತಿಯಲ್ಲಿ ತೊಡಗಿದ್ದಾರೆ.

ನಿರ್ಗತಿಕರಿಗೆ ಆಧಾರ ಆಹಾರ ಜೋಳಿಗೆ
ಮೂಲತಃ ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನ ಎಚ್‌.ಕೆ. ರಾಜೇಂದ್ರ ಪ್ರಸ್ತುತ ಮೈಸೂರಿನ ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ಸಂಗ್ರಹಾಲಯದ ನೌಕರರು. ಸುಮಾರು 10 ವರ್ಷಗಳ ಹಿಂದೆ ಬಸ್‌ ನಿಲ್ದಾಣ, ರೈಲ್ವೇ ನಿಲ್ದಾಣ, ಕೊಳಚೆ ಪ್ರದೇಶಗಳು, ಗುಡಿಸಲು ನಿವಾಸಿಗಳು, ನಿರಾಶ್ರಿತರು ಎಲ್ಲೆಲ್ಲಿ ಹಸಿದವರಿದ್ದಾರೆ ಅಂತಹವರಿಗೆ ಪತ್ನಿ ಶ್ವೇತಾ ಸಹಕಾರದೊಂದಿಗೆ ಸ್ವಂತ ಖರ್ಚಿನಲ್ಲಿ ಆಹಾರ ನೀಡಲಾರಂಭಿಸಿದರು. ಬಳಿಕ ಕಲ್ಯಾಣ ಮಂಟಪ ಅಥವಾ ಪರಿಚಿತರ ಮನೆಯಲ್ಲಿ ಸಮಾರಂಭದಲ್ಲಿ ಉಳಿದ ಆಹಾರವನ್ನು ಸಂಗ್ರಹಿಸಿದರು, 8 ವರ್ಷಗಳ ಹಿಂದೆ ಅಕ್ಷಯ ಆಹಾರ ಜೋಳಿಗೆ ಎಂಬ ಪ್ರತಿಷ್ಠಾನದ ಮೂಲಕ ಸಮುದಾಯದ ಸಹಭಾಗಿತ್ವವನ್ನೂ ಪಡೆಯಲಾರಂಭಿಸಿದರು.

ಇದೀಗ ನೂರಾರು ಜನ ಸ್ವಯಂ ಸೇವಕರು ಇವರೊಂದಿಗಿದ್ದಾರೆ. ನಾಲ್ಕಕ್ಕೂ ಹೆಚ್ಚು ಆಹಾರ ಸಂಗ್ರಹಣಾ ಪೆಟ್ಟಿಗೆಗಳನ್ನು (ಕಿಯೋಸ್ಕ್‌) ಮೈಸೂರಿನ ಅಲ್ಲಲ್ಲಿಇಡಲಾಗಿದೆ. ಇದಕ್ಕೆ ಅಲ್ಲಿನ ಮಹಾನಗರ ಪಾಲಿಕೆ ಕೂಡ ಸಾಥ್‌ ನೀಡಿದೆ. ಇಲ್ಲಿಗೆ ಬಂದು ಹಸಿವಿದ್ದವರು ಬಂದು ಊಟ ಮಾಡುತ್ತಾರೆ. ಕೆಲವರು ಕಟ್ಟಿಸಿಕೊಂಡು ಹೋಗುತ್ತಾರೆ. ಇವರ ಪ್ರಯತ್ನದ ಫಲವಾಗಿ ನಿತ್ಯವೂ 3000ಕ್ಕೂ ಹೆಚ್ಚಿನ ಬಡವರ ಹಸಿವು ನೀಗುತ್ತಿದೆ.
ಇಂದು ವಿಶ್ವ ಆಹಾರ ದಿನ: ಸುಸ್ಥಿರ ಆಹಾರ ಪದ್ದತಿ ಇಂದಿನ ಅಗತ್ಯ:

ರಾಜೇಂದ್ರರವರ ಪ್ರಯತ್ನಕ್ಕೆ ಹಲವು ದಾನಿಗಳು, ಸಂಸ್ಥೆಗಳೂ ಕೈ ಜೋಡಿಸಿವೆ. ಕಲ್ಯಾಣ ಮಂಟಪಗಳು ಸಹಕರಿಸುತ್ತಿವೆ. ರಾಜ್ಯಾದ್ಯಂತ ವ್ಯಾಪ್ತಿ ವಿಸ್ತರಿಸುವ ಚಿಂತನೆಯೂ ನಡೆಯುತ್ತಿದ್ದು, ತಾಲೂಕು ಮಟ್ಟಗಳಲ್ಲಿ ಕಿಯೋಸ್ಕ್‌ ತೆರೆಯುವವರಿಗೆ ಸಹಕಾರ ಕೊಡುತ್ತಿದ್ದಾರೆ. ಇಷ್ಟೇ ಅಲ್ಲ, ಶಾಲೆ, ಕಾಲೇಜು ವಿದ್ಯಾರ್ಥಿಗಳಲ್ಲಿ ಅನ್ನದ ಮಹತ್ವ ಸಾರುತ್ತಿದ್ದಾರೆ. ತುಮಕೂರು ಹಾಗೂ ಮೈಸೂರು ಜಿಲ್ಲೆಯಲ್ಲಿ ಕೆಲ ಶಾಲೆಗಳನ್ನು ದತ್ತು ಪಡೆದು ಅವುಗಳ ಮೂಲ ಸೌಕರ್ಯಕ್ಕೆ ಒತ್ತು ನೀಡಿದ್ದಾರೆ. ವ್ಯರ್ಥವಾಗುವ ಆಹಾರವನ್ನು ತಲುಪಿಸಲು ಬಯಸುವವರು ರಾಜೇಂದ್ರ ಅವರನ್ನು ಸಂಪರ್ಕಿಸಬಹುದು(9148987375).
ಡೇ ಸ್ಪೆಷಲ್‌: ವಿಶ್ವ ಆಹಾರ ದಿನ
ಒಂಬತ್ತು ಜನರ ತಂಡ ನನ್ನೊಂದಿಗೆ ದುಡಿಯುತ್ತಿದೆ. ಸ್ವಯಂ ಸೇವಾ ಸಂಘಟನೆಗಳು ಕೆಲಸ ಮಾಡುತ್ತಿವೆ. ದಾನಿಗಳು ನೀಡಿದ ಐದು ವಾಹನಗಳಿವೆ. ಅನ್ನವನ್ನು ಕಸದ ಬುಟ್ಟಿಗೆ ಹಾಕಬೇಡಿ. ಅಕ್ಕಪಕ್ಕದಲ್ಲಿ ಹಸಿದವರಿದ್ದರೆ ಅವರಿಗೆ ನೀಡಿ ಎನ್ನುವುದೇ ನನ್ನ ಮನವಿ.
ಎಚ್‌.ಕೆ. ರಾಜೇಂದ್ರ, ಸಂಸ್ಥಾಪಕ, ಅಕ್ಷರ ಆಹಾರ ಜೋಳಿಗೆ

ಕೊಡಗಿನಲ್ಲಿ 18ವರ್ಷಗಳಿಂದ ಆಹಾರ ಸಂರಕ್ಷಣೆ
ಸುನಿಲ್‌ ಪೊನ್ನೇಟಿ, ಮಡಿಕೇರಿ
ಆಹಾರ ಪೋಲಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕೊಡಗಿನ ಎನ್‌.ಕೆ. ಮೋಹನ್‌ಕುಮಾರ್‌ 18 ವರ್ಷಗಳಿಂದ ತಮ್ಮದೇ ಆದ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ದೂರದ ಬಳ್ಳಾರಿ ತನಕವೂ ಇವರ ಕೆಲಸ ಹಲವರಿಗೆ ಸ್ಫೂರ್ತಿಯಾಗಿದೆ.

ಕೊಡಗಿನ ಕುಶಾಲನಗರದ ಉದ್ಯಮಿ ಎನ್‌.ಕೆ. ಮೋಹನ್‌ ಕುಮಾರ್‌ 2002ರಿಂದಲೇ 'ತಿನ್ನುವ ಹಕ್ಕಿದೆ..ಬಿಸಾಡುವ ಹಕ್ಕು ನಮಗಿಲ್ಲ' ಎನ್ನುವ ಘೋಷ ವಾಕ್ಯದೊಂದಿಗೆ ಆಹಾರ ಸಂರಕ್ಷಣಾ ಅಭಿಯಾನ ನಡೆಸಿಕೊಂಡು ಬರುತ್ತಿದ್ದಾರೆ. ಮದುವೆ ಮತ್ತಿತರ ಸಮಾರಂಭಗಳಿಗೆ ಹೋದಾಗ ತಟ್ಟೆ ತುಂಬಾ ಬಡಿಸಿಕೊಂಡು ಅದನ್ನು ತಿನ್ನದೆ ಪೋಲು ಮಾಡುತ್ತಿದ್ದವರನ್ನು ನೋಡುತ್ತಿದ್ದಂತೆ. ಹೀಗೆ ಆಹಾರ ಅಪವ್ಯಯ ತಡೆಗಟ್ಟುವುದಕ್ಕಾಗಿ ಸ್ನೇಹಿತರು, ಆಸಕ್ತರು, ಆಹಾರ ಉಳಿತಾಯದ ಕಾಳಜಿ ಇರುವವರು, ರೈತ ಪರ ನಿಲುವಿನವರ ಜತೆ ಸೇರಿ ಅಭಿಯಾನ ಆರಂಭಿಸಿ ಇದನ್ನು ರಾಜ್ಯವ್ಯಾಪಿ ತೆಗೆದುಕೊಂಡು ಹೋಗಿದ್ದಾರೆ.
ಇಂದು ವಿಶ್ವ ಆಹಾರ ದಿನ: ಕೃಷಿ ಸಹಕಾರ-ವಿಶ್ವಕ್ಕೆ ಆಹಾರ ಉಣಿಸುವ ಕೀಲಿ ಕೈ

ರಾಜ್ಯದಲ್ಲಿನಡೆಯುವ ಸಮ್ಮೇಳನಗಳು, ಅನ್ನದಾನ ನಡೆಯುವ ದೇಗುಲಗಳಿಗೆ ಆಹಾರ ಸಂರಕ್ಷಣೆಯ ಬರಹಗಳುಳ್ಳ ಜುಬ್ಬಾ ಧರಿಸಿಕೊಂಡು ಗಮನ ಸೆಳೆಯುತ್ತಾರೆ. ಈ ತನಕ ಸುಮಾರು 50 ಸಾವಿರ ಮಕ್ಕಳಿಗೆ ನೇರವಾಗಿ ಜಾಗೃತಿ ಮೂಡಿಸಿದ್ದಾರೆ. ಮೋಹನ್‌ ಕುಮಾರ್‌ ಕಾರ್ಯದಿಂದ ಸ್ಫೂರ್ತಿ ಪಡೆದ ಬೆಂಗಳೂರಿನ ಚಾಮರಾಜಪೇಟೆಯ ಯುವರಾಜ್‌, ಸಮಾರಂಭಗಳಲ್ಲಿ ಉಳಿಯುವ ಆಹಾರ ಸಂಗ್ರಹಿಸಿ ಅನಾಥಾಶ್ರಮ, ವೃದ್ಧಾಶ್ರಮ, ಮೆಜೆಸ್ಟಿಕ್‌ನಲ್ಲಿರುವ ನಿರ್ಗತಿಕರಿಗೆ ಹಂಚುವ ಕೆಲಸ ಮಾಡುತ್ತಿದ್ದಾರೆ.

ಸಮಾರಂಭಗಳಲ್ಲಿ ಹೆಚ್ಚಿನವರು ತಿನ್ನುವುದಕ್ಕಿಂತ ಜಾಸ್ತಿ ಬಡಿಸಿಕೊಂಡು ಹಾಳು ಮಾಡುವುದಕ್ಕಿಂತಲೂ ಮೊದಲು ಅದನ್ನು ಬೆಳೆಯಲು ರೈತ ಪಟ್ಟ ಶ್ರಮ ಮತ್ತು ಜಗತ್ತಿನಲ್ಲಿ ಅದೆಷ್ಟು ಮಂದಿ ಒಂದು ಹೊತ್ತಿನ ಊಟಕ್ಕೆ ಕಷ್ಟಪಡುತ್ತಿದ್ದಾರೆ ಎನ್ನುವುದನ್ನು ಕಣ್ಣು ಮುಂದೆ ತಂದು ಕೊಂಡರೆ ಸಾಕು, ಯಾರೂ ಆಹಾರ ವ್ಯರ್ಥ ಮಾಡಲಿಕ್ಕಿಲ್ಲ.
ಎನ್‌.ಕೆ. ಮೋಹನ್‌ಕುಮಾರ್‌, ಆಹಾರ ಸಂರಕ್ಷಣಾ ಅಭಿಯಾನದ ರಾಜ್ಯ ಸಂಚಾಲಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ