ಆ್ಯಪ್ನಗರ

ದೇವೇಗೌಡರ ಹೇಳಿಕೆಗೆ ಯಡಿಯೂರಪ್ಪ ತಿರುಗೇಟು

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ ಸಂಬಂಧ ಆ ಭಾಗದ ಕೆಲವು ...

Vijaya Karnataka 4 Aug 2018, 5:00 am
ಬೆಂಗಳೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ ಸಂಬಂಧ ಆ ಭಾಗದ ಕೆಲವು ಸಂಘಟನೆಗಳು ನೀಡಿದ್ದ ಬಂದ್‌ ಕರೆಗೆ ನಿರೀಕ್ಷಿತ ಬೆಂಬಲ ದೊರೆಯದೆ ಅಖಂಡ ಕರ್ನಾಟಕದ ಪರವಾಗಿ ಜನಾಭಿಪ್ರಾಯ ವ್ಯಕ್ತವಾಗಿದ್ದರೂ ಜೆಡಿಎಸ್‌ ನಾಯಕ ಎಚ್‌.ಡಿ.ದೇವೇಗೌಡ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನಡುವಿನ ವಾಕ್ಸಮರ ಮುಂದುವರಿದಿದೆ.
Vijaya Karnataka Web 45


''ನಾನು ಮತ್ತು ನನ್ನ ಮಗ ಕುಮಾರಸ್ವಾಮಿ ಬದುಕಿರುವವರೆಗೆ ಯಾವುದೇ ಕಾರಣಕ್ಕೂ ರಾಜ್ಯ ಇಬ್ಬಾಗವಾಗಲು ಬಿಡುವುದಿಲ್ಲ. ಉತ್ತರ ಕರ್ನಾಟಕದ ಜನರು ಬಿಜೆಪಿಯ ಪ್ರಚೋದನೆಗೆ ಒಳಗಾಗಬಾರದು, ಸರಕಾರ ರಚಿಸುವಲ್ಲಿ ವಿಫಲರಾಗಿರುವ ಯಡಿಯೂರಪ್ಪ ಅವರು ಹತಾಶೆಯಿಂದ ಜನರನ್ನು ಪ್ರಚೋದಿಸುತ್ತಿದಾರೆ'' ಎಂದು ದೇವೇಗೌಡರು ದಿಲ್ಲಿಯಲ್ಲಿ ಮಾಡಿದ್ದ ಆರೋಪಕ್ಕೆ ಶುಕ್ರವಾರ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.ರುವ ಯಡಿಯೂರಪ್ಪ ದೇವೇಗೌಡರಿಗೆ ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ.

ದೇವೇಗೌಡರಿಗೆ ಮೂರು ಪ್ರಶ್ನೆ ಕೇಳಿರುವ ಬಿಎಸ್‌ವೈ,''ಹತಾಶ ಭಾವನೆ ನಮ್ಮಲ್ಲಿಲ್ಲ, ಅವಕಾಶವಾದಿ ರಾಜಕಾರಣ ಬಿಜೆಪಿ ಮಾಡಿಲ್ಲ. ಲಿಂಗಾಯತ ಮುಖ್ಯಮಂತ್ರಿಗಳು ಉತ್ತರ ಕರ್ನಾಟಕ ಭಾಗಕ್ಕೆ ಏನು ಕೊಡುಗೆ ನೀಡಿದ್ದಾರೆಂದು ಹುಬ್ಬಳ್ಳಿಯಲ್ಲಿ ಕೇಳಿದವರು ಯಾರು? ಉತ್ತರ ಕರ್ನಾಟಕದಿಂದ ರಾಜ್ಯಕ್ಕೆ ಬರುವ ಆದಾಯ ಏನು ಎಂದು ಕೇಳಿದವರು ಕುಮಾರಸ್ವಾಮಿ ತಾನೇ? ಜಾತಿ ಮತ್ತು ಹಣದ ಆಮಿಷಕ್ಕೆ ಬಲಿಯಾಗಿ ಮತಹಾಕಿದಿರಿ ಎಂದು ಚನ್ನಪಟ್ಟಣದಲ್ಲಿ ಹೇಳಿದವರು ಯಾರು? ಎಂಬುದಕ್ಕೆ ಉತ್ತರಿಸಬೇಕೆಂದು ತಾಕೀತು ಮಾಡಿದ್ದಾರೆ.

''ದೇವೇಗೌಡರು ಹಾಗೂ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರ ಬೇಜವಾಬ್ದಾರಿ ಹೇಳಿಕೆಯಿಂದ ಉತ್ತರ ಕರ್ನಾಟಕ ಇಂದು ಹೊತ್ತಿ ಉರಿಯುತ್ತಿದೆ. ಮಗ ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ಹೇಳುವುದನ್ನು ಬಿಟ್ಟು ಈ ರೀತಿ ಆರೋಪ ಮಾಡುವುದು ಸರಿಯಲ್ಲ , ಪ್ರತಿಪಕ್ಷದ ನಾಯಕನಾಗಿ ಸಮರ್ಪಕವಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ,'' ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಸಂಪುಟದ ತೀರ್ಮಾನಕ್ಕೆ ಆಕ್ಷೇಪ

ರಾಜ್ಯದ ಮುಜರಾಯಿ ದೇವಾಲಯಗಳ ಕಾಣಿಕೆ ಹುಂಡಿ ಹಣದಲ್ಲಿ ಟ್ರಸ್ಟಿಗಳ ಮೇಲುಸ್ತುವಾರಿಯಲ್ಲಿ ನಡೆಯುತ್ತಿರುವ ಶಾಲೆಗಳಲ್ಲೂ ಮೆರಿಟ್‌ ಹಾಗೂ ರೋಸ್ಟರ್‌ ಕಡ್ಡಾಯಗೊಳಿಸುವ ರಾಜ್ಯ ಸಚಿವ ಸಂಪುಟ ತೀರ್ಮಾನಕ್ಕೆ ಬಿಜೆಪಿ ಆಕ್ಷೇಪಿಸಿದೆ.

''ಹಿಂದೂ ಶಿಕ್ಷಣ ಸಂಸ್ಥೆಗಳಲ್ಲಿ ಪರ್ಸಂಟೇಜ್‌ ಸಿಗುವುದಿಲ್ಲವೆಂದು ಸರಕಾರ ಈ ರೀತಿ ಮಾಡುತ್ತಿದೆ. ಬೇರೆ ಧರ್ಮದ ಸಂಸ್ಥೆಗಳು ಶ್ರೀಮಂತವಾಗಿವೆ. ಈ ಬಗ್ಗೆ ಸರಕಾರ ಏಕೆ ಚಕಾರವೆತ್ತುವುದಿಲ್ಲ. ರಾಜ್ಯ ಸರಕಾರದ ಧೋರಣೆ ನೋಡಿದರೆ ನಾಚಿಕೆ ಆಗುತ್ತದೆ,'' ಎಂದು ಮಾಜಿ ಡಿಸಿಎಂ ಆರ್‌.ಅಶೋಕ್‌ ಹೇಳಿದ್ದಾರೆ.

''ಧಾರ್ಮಿಕ ವಿಚಾರಗಳ ಬಗ್ಗೆ ಸರಕಾರ ಮಧ್ಯಪ್ರವೇಶ ಮಾಡದೇ ಇರುವುದು ಲೇಸು, ಸಿದ್ದರಾಮಯ್ಯ ಸರಕಾರದಿಂದ ಆರಂಭವಾಗಿ ಕುಮಾರಸ್ವಾಮಿ ಸರಕಾರ ಬಂದ ಮೇಲೂ ಇದು ನಿಂತಿಲ್ಲ. ಧಾರ್ಮಿಕ ಶಿಕ್ಷಣ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವುದನ್ನು ನೋಡಿದರೆ ಮತ್ತೆ ಹಿಂದೂಗಳ ಮೇಲೆ ಸರಕಾರ ಕಣ್ಣಿಟ್ಟಿದೆ ಎಂಬುದು ಗೊತ್ತಾಗುತ್ತದೆ,'' ಎಂದು ಕಿಡಿ ಕಾರಿದರು.

ದೇವೇಗೌಡರ ಉತ್ತರ ಕರ್ನಾಟಕ ಪ್ರವಾಸ

ಹೊಸದಿಲ್ಲಿ: ಈ ತಿಂಗಳು 18ನೇ ತಾರೀಖಿನಿಂದ ಮೂರು ದಿನಗಳ ಕಾಲ ಉತ್ತರ ಕರ್ನಾಟಕ ಪ್ರವಾಸ ಮಾಡುವುದಾಗಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹೇಳಿದ್ದು, ಪ್ರವಾಸದ ವೇಳೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮಾಡಿರುವ ಕೆಲಸಗಳನ್ನು ವಿವರಿಸುವುದಾಗಿ ತಿಳಿಸಿದ್ದಾರೆ.

ಶುಕ್ರವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅನೌಪಚಾರಿಕವಾಗಿ ಮಾತನಾಡಿದ ಅವರು, ''ಅನೇಕ ಜನ ಮಹನೀಯರು ಅಖಂಡ ಕರ್ನಾಟಕಕ್ಕಾಗಿ ಹೋರಾಡಿದ್ದಾರೆ, ಅವರಾರ‍ಯರೂ ಈಗ ಬದುಕಿಲ್ಲ. ಆದರೆ, ಅನೇಕರು ಅಸಂಬದ್ಧ ವ್ಯಾಖ್ಯಾನ ಮಾಡಿ ರಾಜ್ಯವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ, ಇಂಥವರನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ ,''ಎಂದರು.

''ಕೃಷ್ಣಾ ಮೇಲ್ದಂಡೆ ಯೋಜನೆಗೆ ಹೋರಾಟ ಮಾಡಿದ್ದು ನಾನು, ಇಂದು 40 ಲಕ್ಷ ಎಕರೆ ಪ್ರದೇಶ ನೀರಾವರಿಗೊಳಪಟ್ಟಿದ್ದರೆ ಅದರಲ್ಲಿ ನನ್ನ ಹೋರಾಟವಿದೆ, ಕುಮಾರಸ್ವಾಮಿ ಸಿಎಂ ಇದ್ದಾಗ ಸುವರ್ಣ ವಿಧಾನಸೌಧಕ್ಕೆ ಅಡಿಗಲ್ಲು ಹಾಕಲಾಗಿದೆ, ನಮ್ಮ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಲಿ,'' ಎಂದೂ ಗೌಡರು ಹೇಳಿದರು.

''ಅಪ್ಪ ಮಕ್ಕಳನ್ನು ಮುಗಿಸುವುದೇ ನನ್ನ ಧ್ಯೇಯ ಎಂದು ಯಡಿಯೂರಪ್ಪ ವಿಧಾನಸಭೆಯಲ್ಲಿಯೇ ಹೇಳಿದ್ದರು, ಅದೇ ಕಾರಣಕ್ಕಾಗಿ ಈಗ ಇಂಥ ಆರೋಪಗಳನ್ನು ನಮ್ಮ ವಿರುದ್ಧ ಮಾಡುತ್ತಿದ್ದಾರೆ,'' ಎಂದು ಅವರು ಬಿಎಸ್‌ವೈ ವಿರುದ್ಧ ವಾಗ್ದಾಳಿ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ