ಆ್ಯಪ್ನಗರ

ಕೃಷ್ಣಾ, ಮಹದಾಯಿ ಅಂತಿಮ ತೀರ್ಪಿನ ಗೆಜೆಟ್‌ ಅಧಿಸೂಚನೆಗೆ ಯಡಿಯೂರಪ್ಪ ಮನವಿ

ಸುಮಾರು ಅರ್ಧ ಗಂಟೆ ಕಾಲ ಕೇಂದ್ರ ಸಚಿವರೊಂದಿಗೆ ಸಮಾಲೋಚಿಸಿದ ಯಡಿಯೂರಪ್ಪ ಇಲ್ಲಿನ ನೀರಾವರಿ ಯೋಜನೆಗಳ ಸ್ಥಿತಿಗತಿಯ ಮಾಹಿತಿ ಒದಗಿಸಿದರು. ಜತೆಗೆ 5 ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸಚಿವರ ಮುಂದಿಟ್ಟರು.

Vijaya Karnataka 16 Dec 2019, 7:37 pm
ಬೆಂಗಳೂರು : ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರನ್ನು ಭೇಟಿಯಾಗಿರುವ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಕೃಷ್ಣಾ ಹಾಗೂ ಮಹದಾಯಿ ನ್ಯಾಯಾಧಿಕರಣಗಳ ಅಂತಿಮ ತೀರ್ಪಿನ ಗೆಜೆಟ್‌ ಅಧಿಸೂಚನೆ ಹೊರಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
Vijaya Karnataka Web Yediyurappa


ಖಾಸಗಿ ಕಾರ್ಯಕ್ರಮ ನಿಮಿತ್ತ ಶೇಖಾವತ್‌ ಸೋಮವಾರ ಬೆಂಗಳೂರಿಗೆ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಕುಮಾರ ಕೃಪಾ ಅತಿಥಿ ಗೃಹದಲ್ಲಿ ತಂಗಿದ್ದ ಶೇಖಾವತ್‌ ಅವರನ್ನು ಸಿಎಂ ಬಿಎಸ್‌ವೈ ಭೇಟಿಯಾಗಿ ರಾಜ್ಯದ ನೀರಾವರಿ ಯೋಜನೆಗಳಿಗೆ ಅಗತ್ಯ ನೆರವು ಕಲ್ಪಿಸುವಂತೆ ಒತ್ತಾಯಿಸಿದರು.

ಸುಮಾರು ಅರ್ಧ ಗಂಟೆ ಕಾಲ ಕೇಂದ್ರ ಸಚಿವರೊಂದಿಗೆ ಸಮಾಲೋಚಿಸಿದ ಅವರು ಇಲ್ಲಿನ ನೀರಾವರಿ ಯೋಜನೆಗಳ ಸ್ಥಿತಿಗತಿಯ ಮಾಹಿತಿ ಒದಗಿಸಿದರು. ಜತೆಗೆ 5 ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸಚಿವರ ಮುಂದಿಟ್ಟರು.

ಕೃಷ್ಣಾ ಹಾಗೂ ಮಹದಾಯಿ ನದಿ ನೀರು ಹಂಚಿಕೆಗೆ ನ್ಯಾಯಾಧಿಕರಣಗಳ ಅಂತಿಮ ತೀರ್ಪು ಬಂದಿದೆ. ಆದರೆ, ಗೆಜೆಟ್‌ ಅಧಿಸೂಚನೆ ಬಾಕಿಯಿದೆ. ಈ ಅಧಿಸೂಚನೆ ಪ್ರಕಟಿಸದಿದ್ದರೆ ರಾಜ್ಯದ ಪಾಲಿನ ನೀರು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಗತ್ಯ ಕಾಮಗಾರಿ ಕೈಗೊಳ್ಳುವುದೂ ಕಷ್ಟವಾಗುತ್ತದೆ. ಈ ವಿಚಾರವನ್ನು ಸಿಎಂ ಅವರು ಕೇಂದ್ರ ಸಚಿವರ ಗಮನಕ್ಕೆ ತಂದರು. ಇದಕ್ಕೆ ಕೇಂದ್ರ ಸಚಿವರೂ ಸಕಾರಾತ್ಮಕವಾಗಿಯೇ ಸ್ಪಂದಿಸಿದರು. ಜತೆಗೆ ರಾಜ್ಯದ ಯೋಜನೆಗಳ ಸಂಬಂಧ ಇನ್ನಷ್ಟು ಮಾಹಿತಿಯೊಂದಿಗೆ ದಿಲ್ಲಿಗೆ ಬಂದು ಚರ್ಚೆಸುವಂತೆಯೂ ಆಹ್ವಾನ ನೀಡಿದರು.

ಕೃಷ್ಣಾ, ಕಾವೇರಿ, ಗೋದಾವರಿ ಹಾಗೂ ಪೆನ್ನಾರ್‌ ನದಿಗಳ ಜಲಾನಯನ ಪ್ರದೇಶದ ನದಿಗಳ ಜೋಡಣೆ ಮಾಡಬೇಕು. ಇದರಿಂದ ನೀರಿನ ಲಭ್ಯತೆಯನ್ನು ಹೆಚ್ಚಿಸಲು ಸಾಧ್ಯವೆಂದು ಸಿಎಂ ಮನವಿ ಮಾಡಿಕೊಂಡರು. ಪ್ರಧಾನಿ ನರೇಂದ್ರ ಮೋದಿಯವರಿಗೂ ನದಿ ಜೋಡಣೆ ಆದ್ಯತೆಯ ವಿಚಾರವಾಗಿದೆ. ಈ ಪ್ರಕ್ರಿಯೆ ತ್ವರಿತಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸಚಿವರು ಭರವಸೆ ಕೊಟ್ಟರು.

439 ಕೋಟಿ ರೂ. ಬಿಡುಗಡೆ

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ (ಪಿಎಂಕೆಎಸ್‌ವೈ) ಕೈಗೆತ್ತಿಕೊಂಡಿರುವ ತುಂಗಾ ಮೇಲ್ದಂಡೆ, ಭೀಮಾ, ಕಾರಂಜ, ರಾಮೇಶ್ವರ ಏತ ನೀರಾವರಿ ಯೋಜನೆಗಳು ಹಾಗೂ ನಾರಾಯಣಪುರ ಎಡದಂಡೆ ಕಾಲುವೆ ಯೋಜನೆಗೆ ಕೇಂದ್ರದಿಂದ 439 ಕೋಟಿ ರೂ. ಅನ್ನು ತಕ್ಷಣ ಬಿಡುಗಡೆ ಮಾಡುವುದಾಗಿ ಸಿಎಂ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು ತಿಳಿಸಿದರು.

ಬೆಂಗಳೂರು ನಗರಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಸಲು ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಬೇಕಿದೆ. ಈ ವಿಚಾರದಲ್ಲಿ ಯಾವುದೇ ಕಾನೂನು ಸಮಸ್ಯೆಯಾಗದು ಎಂದು ಸಿಎಂ ಮನದಟ್ಟು ಮಾಡಿಕೊಟ್ಟರು. ಈ ಪ್ರಸ್ತಾವಕ್ಕೂ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು. ಈ ಮಾತುಕತೆ ವೇಳೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಜತೆಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ