ಆ್ಯಪ್ನಗರ

ಯುವ ವೈದ್ಯರಿಗೆ ಗ್ರಾಮೀಣ ಸೇವೆ ಕಡ್ಡಾಯ: ಕುಮಾರಸ್ವಾಮಿ

ವೈದ್ಯರ ರಕ್ಷಣೆ ಸರಕಾರದ ಜವಾಬ್ದಾರಿಯಾಗಿದ್ದು, ವೈದ್ಯರ ಮೇಲಿನ ಹಲ್ಲೆ ತಪ್ಪಿಸಲು ಈಗಾಗಲೇ ಇರುವ ...

Vijaya Karnataka 26 Jul 2018, 5:00 am
ಬೆಂಗಳೂರು: ವೈದ್ಯರ ರಕ್ಷಣೆ ಸರಕಾರದ ಜವಾಬ್ದಾರಿಯಾಗಿದ್ದು, ವೈದ್ಯರ ಮೇಲಿನ ಹಲ್ಲೆ ತಪ್ಪಿಸಲು ಈಗಾಗಲೇ ಇರುವ ಕಾಯಿದೆಯನ್ನೇ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.
Vijaya Karnataka Web 2507-2-2-KSG_07


ಜಯದೇವ ಹೃದಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನೂತನವಾಗಿ ಆರಂಭಿಸಿರುವ ಕಾರ್ಡಿಯಾಕ್‌ ಎಂಆರ್‌ಐ ಸ್ಕ್ಯಾನಿಂಗ್‌ ಘಟಕವನ್ನು ಬುಧವಾರ ಉದ್ಘಾಟಿಸಿ,''ಸಾವು ಯಾರ ಕೈಯಲ್ಲೂ ಇಲ್ಲ. ಆದರೆ ರೋಗಿ ಮೃತಪಟ್ಟರೆ ಅದಕ್ಕೆ ವೈದ್ಯರೇ ಕಾರಣ ಎಂದು ಅವರ ಮೇಲೆ ನಡೆಯುವ ಹಲ್ಲೆಯನ್ನು ತಡೆಯಲೆಂದೇ 2007ರಲ್ಲಿ ಕಾನೂನು ಜಾರಿಗೊಳಿಸಲಾಗಿತ್ತು. ಆದರೆ ಅದು ಸಮರ್ಪಕವಾಗಿ ಅನುಷ್ಠಾನವಾಗಿಲ್ಲ,'' ಎಂದು ಹೇಳಿದರು.

ವೈದ್ಯರಿಗೆ ಗ್ರಾಮೀಣ ಸೇವೆ ಕಡ್ಡಾಯ

''ಸರಕಾರಿ ಕೋಟಾದಡಿ ವೈದ್ಯ ಸೀಟು ಪಡೆದವರು ಒಂದು ವರ್ಷ ಕಡ್ಡಾಯವಾಗಿ ಗ್ರಾಮೀಣದಲ್ಲಿ ಸೇವೆ ಸಲ್ಲಿಸಬೇಕು. ಈ ಸಂಬಂಧ ಅಗತ್ಯ ಕಾಯಿದೆ ರೂಪಿಸಲಾಗುವುದು,''ಎಂದರು.

ಜಿಲ್ಲಾ ಆರೋಗ್ಯಾಧಿಕಾರಿಗಳ ಸಭೆ

ಗ್ರಾಮೀಣ ಪ್ರದೇಶದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಜಿಲ್ಲಾ ಆರೋಗ್ಯ ಅಧಿಕಾರಿಗಳ (ಡಿಎಚ್‌ಒ) ಸಭೆ ಕರೆಯಲಾಗಿದೆ,''ಎಂದು ಹೇಳಿದರು.

ಕೌಶಲ್ಯ ಅಭಿವೃದ್ಧಿ ಕೋರ್ಸ್‌

ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್‌,''ರಾಜ್ಯದಲ್ಲಿ ಪದವಿ ಪಡೆದ ವೈದ್ಯರನ್ನು ಇಲ್ಲಿಯೇ ಉಳಿಸಿಕೊಂಡು ಬೆಂಗಳೂರನ್ನು ವೈದ್ಯಕೀಯ ಟೂರಿಸಂ ಮಾಡಲು ಸೂಕ್ತ ನಿಯಮವನ್ನು ಜಾರಿಗೆ ತರಲು ಸಿದ್ಧತೆ ನಡೆದಿದೆ,''ಎಂದರು.

'' ವಿದೇಶಗಳಂತೆ ಆಸ್ಪತ್ರೆಗಳಲ್ಲಿ ವೈದ್ಯ ಸಹಾಯಕ ಸಿಬ್ಬಂದಿಗೆ ಹೆಚ್ಚು ಮಹತ್ವ ನೀಡಲು ಎಸ್ಸೆಸ್ಸೆಲ್ಸಿ ಮುಗಿಸಿದ ಅಭ್ಯರ್ಥಿಗಳಿಗೆ ಕೌಶಲ ಅಭಿವೃದ್ಧಿ ಕೋರ್ಸ್‌ ಆರಂಭಿಸಲು ಚಿಂತನೆ ನಡೆಸಲಾಗಿದೆ,''ಎಂದು ಹೇಳಿದರು.

ಶಾಸಕಿ ಸೌಮ್ಯ ರೆಡ್ಡಿ, ಸರಕಾರದ ಪ್ರಧಾನ ಕಾರ್ಯದರ್ಶಿ ವಿ. ಮಂಜುಳ, ಮ್ಯಾಕ್ಸ್‌ಕೇರ್‌ ಸಿಇಒ ಹರಿಕೃಷ್ಣ, ಬಿಬಿಎಂಪಿ ಸದಸ್ಯರಾದ ಮೊಹಮ್ಮದ್‌ ರಿಜ್ವಾನ್‌ ನವಾಬ್‌, ಆರ್‌. ಗೋವಿಂದ ನಾಯ್ಡು, ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ ಮತ್ತಿತರರು ಉಪಸ್ಥಿತರಿದ್ದರು.

ಏನಿದು ಕಾರ್ಡಿಯಾಕ್‌ ಎಂಆರ್‌ಐ ಘಟಕ

''ಖಾಸಗಿ ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ)ದಲ್ಲಿ ಎಂಆರ್‌ಐ ಸ್ಕ್ಯಾ‌ನಿಂಗ್‌ ಸೆಂಟರ್‌ ಆರಂಭಿಸಿದ್ದು, ಇದಕ್ಕೆ ಹೈದರಾಬಾದ್‌ನ ಮ್ಯಾಕ್ಸಿಕ್ಯೂರ್‌ ಕಂಪನಿ ಹೂಡಿಕೆ ಮಾಡಿದೆ. ರೋಗಿಗಳಿಗೆ ಸೇವೆ ಮತ್ತು ನಿರ್ವಹಣೆಯನ್ನೂ ಕಂಪನಿಯೇ ವಹಿಸಲಿದೆ. ಕೇಂದ್ರದಲ್ಲಿ ಕೇವಲ ಹೃದಯಕ್ಕೆ ಅಷ್ಟೇ ಅಲ್ಲ, ಮಿದುಳು ಸೇರಿದಂತೆ ಎಲ್ಲ ಬಗೆಯ ಸಮಸ್ಯೆಗಳಿಗೂ ಸ್ಕ್ಯಾ‌ನಿಂಗ್‌ ಮಾಡಿಸಿಕೊಳ್ಳಬಹುದಾಗಿದೆ. ಕೇವಲ 2 ರಿಂದ 2,500 ರೂ.ಗಳಿಗೆ ಸೌಲಭ್ಯ ದೊರೆಯಲಿದ್ದು, ಬಡವರಿಗೆ ಉಚಿತವಾಗಿ ಮಾಡಲಾಗುವುದು.ಬೇರೆ ಆಸ್ಪತ್ರೆಯ ರೋಗಿಗಳೂ ಸಹ ಈ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ,'' ಎಂದು ಡಾ. ಸಿ.ಎನ್‌. ಮಂಜುನಾಥ್‌ ಮಾಹಿತಿ ನೀಡಿದರು.

''ಹೆಚ್ಚುತ್ತಿರುವ ಹೃದಯ ಸಮಸ್ಯೆಗಳಿಗೆ ವಾಯುಮಾಲಿನ್ಯ ಕಾರಣ ಎನ್ನಲಾಗಿದ್ದು, 500 ಮಂದಿ ಸಂಚಾರಿ ಪೊಲೀಸರ ಆರೋಗ್ಯ ತಪಾಸಣೆ ನಡೆದಿದೆ. ಆಟೊ ಚಾಲಕರನ್ನೂ ತಪಾಸಣೆ ನಡೆಸಿದ ನಂತರ ವರದಿ ಸಿದ್ಧಪಡಿಸಿ ಸರಕಾರಕ್ಕೆ ನೀಡಲಾಗುವುದು''

- ಡಾ. ಸಿ.ಎನ್‌. ಮಂಜುನಾಥ್‌, ನಿರ್ದೇಶಕ, ಜಯದೇವ ಆಸ್ಪತ್ರೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ