ಆ್ಯಪ್ನಗರ

ಜಿಂದಾಲ್‌ಗೆ ಭೂಮಿ ನೀಡಿದ ಸರಕಾರದ ವಿರುದ್ಧ ಬಿಜೆಪಿಯಿಂದ ಪ್ರಖರ ಹೋರಾಟ: ಅಶೋಕ್‌

ರಾಜ್ಯ ಸರಕಾರ ಜಿಂದಾಲ್‌ ಸಂಸ್ಥೆಗೆ 3,666 ಎಕರೆ ಭೂಮಿ ಶುದ್ಧ ಕ್ರಯಪತ್ರ ಮಾಡಿಕೊಡುವ ನಿರ್ಧಾರ ವಾಪಾಸ್‌ ಪಡೆಯದಿದ್ದರೆ ಸಿಎಂ ಎಚ್‌ಡಿ...

Vijaya Karnataka 11 Jun 2019, 5:00 am
ಬೆಂಗಳೂರು: ರಾಜ್ಯ ಸರಕಾರ ಜಿಂದಾಲ್‌ ಸಂಸ್ಥೆಗೆ 3,666 ಎಕರೆ ಭೂಮಿ ಶುದ್ಧ ಕ್ರಯಪತ್ರ ಮಾಡಿಕೊಡುವ ನಿರ್ಧಾರ ವಾಪಾಸ್‌ ಪಡೆಯದಿದ್ದರೆ ಸಿಎಂ ಎಚ್‌.ಡಿ.ಕುಮಾರಸ್ವಾಮಿ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಮಾಜಿ ಡಿಸಿಎಂ ಆರ್‌.ಅಶೋಕ್‌ ಎಚ್ಚರಿಕೆ ನೀಡಿದ್ದಾರೆ.
Vijaya Karnataka Web ashok


ಜೂ.14 ರಿಂದ 16ರವರೆಗೆ ಬಿಜೆಪಿ ನಡೆಸಲಿರುವ ಅಹೋರಾತ್ರಿ ಪ್ರತಿಭಟನೆಯ ಸಿದ್ಧತಾ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ''ಜಿಂದಾಲ್‌ಗೆ ಭೂಮಿ ನೀಡುವ ನಿರ್ಧಾರ ಸಿಎಂ ಕುಮಾರಸ್ವಾಮಿಯವರ ರಾಜಕೀಯ ಜಿಂದಗಿಯ (ಜೀವನ) ಕೆಟ್ಟ ನಿರ್ಧಾರವಾಗಲಿದ್ದು, ಇದರ ಫಲ ಅನುಭವಿಸಬೇಕಾಗುತ್ತದೆ,'' ಎಂದು ಎಚ್ಚರಿಕೆ ನೀಡಿದರು.

''ಈಗಾಗಲೇ ಜಿಂದಾಲ್‌ ವಶದಲ್ಲಿ 11,400 ಎಕರೆಯಿದೆ. ಆದರೆ, ಅದರ ಬಳಕೆ ಮಾಡಿಕೊಂಡಿಲ್ಲ. ಕನ್ನಡಿಗರಿಗೆ ಎಷ್ಟು ಉದ್ಯೋಗ ನೀಡಿರುವ ಬಗ್ಗೆಯೂ ಸ್ಪಷ್ಟತೆ ಇಲ್ಲ. ಮಹಾರಾಷ್ಟ್ರದ ಜನತೆ ವಿರೋಧಿಸಿದ್ದ ಡಾಂಬರು ಸಂಸ್ಕರಣೆ ಘಟಕವನ್ನು ಬಳ್ಳಾರಿಯಲ್ಲಿ ನಡೆಸುತ್ತಿದ್ದಾರೆ. ಇದರಿಂದ ಪರಿಸರದ ಮೇಲೆ ದುಷ್ಪರಿಣಾಮವಾಗುತ್ತಿದೆ. ಸರಕಾರ ಭೂಮಿಯನ್ನು ಲೀಸ್‌ ಆಧಾರದ ಮೇಲೆ ಕೊಟ್ಟಿದ್ದರೆ ನಮ್ಮ ವಿರೋಧವಿರಲಿಲ್ಲ. ಶುದ್ಧ ಕ್ರಯಪತ್ರ ಮಾಡಿಕೊಡಲು ಮುಂದಾಗಿರುವುದು ತಪ್ಪು,'' ಎಂದು ಹೇಳಿದರು.

''ಈ ಸರಕಾರ ಐಸಿಯುನಲ್ಲಿದೆ. ಚಿಕಿತ್ಸೆಗೆ ಹೆಚ್ಚಿನ ಹಣ ಬೇಕಾಗಿದೆ. ಅದಕ್ಕಾಗಿ ಜಿಂದಾಲ್‌ಗೆ 3,666 ಎಕರೆ ಜಾಗ ಮಾರಾಟ ಮಾಡುವ ಡೀಲ್‌ ನಡೆದಿದೆ. ಕಾಂಗ್ರೆಸ್‌ ನಾಯಕ ಎಚ್‌.ಕೆ.ಪಾಟೀಲ್‌, ಜೆಡಿಎಸ್‌ನ ಎಚ್‌.ವಿಶ್ವನಾಥ್‌ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದರೂ ಸರಕಾರ ತನ್ನ ನಿಲುವು ಬದಲಿಸುತ್ತಿಲ್ಲ. ಬಳ್ಳಾರಿಗೆ ಪಾದಯಾತ್ರೆ ನಡೆಸಿದ್ದ ಕಾಂಗ್ರೆಸ್‌ನ ಸೂಪರ್‌ ಮ್ಯಾನ್‌ ಸಿದ್ದರಾಮಯ್ಯ ಈ ಬಗ್ಗೆ ಮಾತನಾಡದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಅಕ್ರಮದ ವಿರುದ್ಧ ನೀವು ಈ ಬಾರಿ ಪಾದಯಾತ್ರೆ ನಡೆಸಿದರೆ ಬಿಜೆಪಿಯೂ ಬೆಂಬಲ ನೀಡುತ್ತದೆ,'' ಎಂದು ವ್ಯಂಗ್ಯವಾಡಿದರು.

''ಸರಕಾರದ ಈ ನಿರ್ಧಾರದ ವಿರುದ್ಧ ಜೂನ್‌ 14ರಿಂದ ಮೂರು ದಿನಗಳ ಕಾಲ ಬೆಂಗಳೂರಿನ ಮೌರ್ಯ ವೃತ್ತದ ಬಳಿ ಬಿಜೆಪಿ ಅಹೋರಾತ್ರಿ ಧರಣಿ ನಡೆಸಲಿದೆ. ಇದಕ್ಕೆ ಸ್ಪಂದಿಸದೇ ಇದ್ದರೆ ಜೂನ್‌ 16ರಂದು ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು,'' ಎಂದು ಎಚ್ಚರಿಕೆ ನೀಡಿದರು.

ನಿರ್ಧಾರದ ಹಿಂದೆ ಕಿಕ್‌ ಬ್ಯಾಕ್‌: ಬಿಎಸ್‌ವೈ

ಕೋಟ್ಯಂತರ ರೂ.ಕಿಕ್‌ಬ್ಯಾಕ್‌ ಪಡೆದು ಜಿಂದಾಲ್‌ಗೆ ಭೂಮಿ ಮಾರಾಟ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ''ಯಾವುದೇ ಕಾರಣಕ್ಕೂ ಜಿಂದಾಲ್‌ಗೆ ಭೂಮಿ ಮಾರಾಟ ಮಾಡುವುದಕ್ಕೆ ಬಿಜೆಪಿ ಬಿಡುವುದಿಲ್ಲ. ಸರಕಾರದ ನಿರ್ಧಾರವನ್ನು ಪ್ರಶ್ನಿಸುತ್ತಿರುವ ಕಾಂಗ್ರೆಸ್‌ ಮುಖಂಡ ಎಚ್‌.ಕೆ.ಪಾಟೀಲರನ್ನು ನಾನು ಅಭಿನಂದಿಸುತ್ತೇನೆ,'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ