ಆ್ಯಪ್ನಗರ

ಕಾಸರಗೋಡಿನಾದ್ಯಂತ ಬಿದಿರು ಕೃಷಿ

ಬಿದಿರುಗಳನ್ನು ನೆಟ್ಟು ಪರಿಸರ ಸಮಸ್ಯೆಗಳನ್ನು ನಿವಾರಿಸುವ ಬಹು ದೊಡ್ಡ ಯೋಜನೆಯೊಂದಿಗೆ ಕಾಸರಗೋಡು ಜಿಲ್ಲಾಡಳಿತ ಈಗಾಗಲೇ ರಂಗಕ್ಕಿಳಿದಿದೆ.

Vijaya Karnataka 16 Jan 2019, 5:00 am
ಕಾಸರಗೋಡು: ಬಿದಿರುಗಳನ್ನು ನೆಟ್ಟು ಪರಿಸರ ಸಮಸ್ಯೆಗಳನ್ನು ನಿವಾರಿಸುವ ಬಹು ದೊಡ್ಡ ಯೋಜನೆಯೊಂದಿಗೆ ಕಾಸರಗೋಡು ಜಿಲ್ಲಾಡಳಿತ ಈಗಾಗಲೇ ರಂಗಕ್ಕಿಳಿದಿದೆ. ಕಾಸರಗೋಡು, ಮಂಜೇಶ್ವರ ಬ್ಲಾಕ್‌ ಪಂಚಾಯಿತಿಗಳ ನೀರಿನ ತೀವ್ರ ಕೊರತೆಯನ್ನು ನಿವಾರಿಸಲು, ಬಿದಿರಿನ ಉತ್ಪನ್ನಗಳ ಮೂಲಕ ಪಂಚಾಯಿತಿಗಳಿಗೆ ಆದಾಯ ಸೃಷ್ಟಿಸಲು ಯೋಜನೆ ಮೂಲಕ ಉದ್ದೇಶಿಸಲಾಗಿದೆ.
Vijaya Karnataka Web bamboo plantaion in kasaragodu district
ಕಾಸರಗೋಡಿನಾದ್ಯಂತ ಬಿದಿರು ಕೃಷಿ


ಜೂನ್‌ 5 ಪರಿಸರ ದಿನದಂದು ಉದ್ಘಾಟನೆ ನಡೆಯಲಿರುವ ಕಾರ್ಯಕ್ರಮಕ್ಕೆ ಪ್ರತಿ ಪಂಚಾಯಿತಿಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಕೃಷಿ ಇಲಾಖೆ, ಪಂಚಾಯಿತಿ, ಗ್ರಾಮಿಣಾಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ ಮೊದಲಾದುವುಗಳ ಸಹಕಾರದೊಂದಿಗೆ ಬಿದಿರು ಸಸಿಗಳನ್ನು ನೆಟ್ಟು ಬೆಳೆಸುವ ಕಾರ್ಯಚಟುವಟಿಕೆ ನಡೆಯುತ್ತಿದೆ.

ಹಲವು ಸಮಸ್ಯೆಗಳಿಗೆ ಒಂದೇ ಪರಿಹಾರ ಎಂಬ ನೆಲೆಯಲ್ಲಿ ಲಕ್ಷಾಂತರ ಬಿದಿರನ್ನು ನೆಡಲು ಉದ್ದೇಶಿಸಲಾಗಿದೆ. ಒಂದು ಬಿದಿರಿನಿಂದ ಸರಾಸರಿ 22 ಕಿ.ಗ್ರಾಂ. ಎಲೆ ಒಂದು ವರ್ಷದಲ್ಲಿ ಉದುರುತ್ತದೆ ಎಂದು ಅಂದಾಜಿಸಲಾಗಿದೆ. 3 ಲಕ್ಷ ಬಿದಿರು ಸಸಿಗಳನ್ನು ಕಾಸರಗೋಡು ಹಾಗೂ ಮಂಜೇಶ್ವರ ಬ್ಲಾಕ್‌ ಪಂಚಾಯಿತಿಗಳಲ್ಲಿ ನೆಡಲಾಗುವುದು. ಈ ರೀತಿ ವರ್ಷದಲ್ಲಿ 22 ಲಕ್ಷ ಕಿ.ಗ್ರಾಂ.ನÜಷ್ಟು ಸಾವಯವ ಗೊಬ್ಬರ ಭೂಮಿಗೆ ಲಭಿಸಲಿದೆ. ಈ ಮೂಲಕ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲಾಗುವುದು. ರಾಜ್ಯದಲ್ಲೇ ಅತ್ಯಧಿಕ ಕೊಳವೆ ಬಾವಿಗಳು ಮಂಜೇಶ್ವರ ಹಾಗೂ ಕಾಸರಗೋಡು ಪ್ರದೇಶದಲ್ಲಿವೆ. ಕೊಳವೆ ಬಾವಿ ನಿರ್ಮಿಸಿ ನೀರು ಲಭಿಸದೆ ಉಪಯೋಗ ಶೂನ್ಯವಾದ ಬಾವಿಗಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಬಿದಿರಿನ ಬೇರುಗಳಿಗೆ ಗಟ್ಟಿ ಮಣ್ಣನ್ನು ಸೀಳಿಕೊಂಡು ಹೋಗುವ ಸಾಮರ್ಥ್ಯ‌ವಿದೆ. ಇದರಿಂದಾಗಿ ಭೂಮಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಇಂಗಲು ಸಹಾಯಕವಾಗಲಿದೆ. ವರ್ಷಗಳಿಂದ ಮುಂದುವರಿಯುವ ಪ್ರಕ್ರಿಯೆ ಇದಾಗಿದೆ.

ಕಾಸರಗೋಡು ಹಾಗೂ ಮಂಜೇಶ್ವರದಲ್ಲಿ ಕ್ಯಾನ್ಸರ್‌ನಂತಹ ರೋಗಗಳು ಅಧಿಕ ಪ್ರಮಾಣದಲ್ಲಿದೆ. ಮಣ್ಣಿನ ಸಮಸ್ಯೆಗಳು ರೋಗಗಳು ಹೆಚ್ಚಲು ಕಾರಣ ಎಂಬ ಆರೋಪÜವಿದೆ. ಬಿದಿರಿಗೆ ಅಪಾಯಕಾರಿಯಾದ ಲವಣಗಳನ್ನು ನಿವಾರಿಸಿ ಮಣ್ಣನ್ನು ಶುದ್ಧೀಕರಿಸುವ ಸಾಮರ್ಥ್ಯ‌ವಿದೆ.

ಒಂದು ವಾರ್ಡ್‌ನಲ್ಲಿ 1500 ಸಸಿಗಳನ್ನು ನೆಡಲಾಗುವುದು. ಇದಕ್ಕೆ ಪಂಚಾಯಿತಿ ಗಳಲ್ಲಿ ನರ್ಸರಿಗಳನ್ನು ಸ್ಥಾಪಿಸಲಾಗುವುದು. 60 ಸಾವಿರ ಗಿಡಗಳನ್ನು ಅರಣ್ಯ ಇಲಾಖೆ ಯಿಂದ ಖರೀದಿಸಲಾಗುವುದು.

ಉದ್ಯೋಗ ಖಾತರಿ ಯೋಜನೆ ಮೂಲಕ ಬಿದಿರು ಕೃಷಿ: ಜಿಲ್ಲಾಧಿಕಾರಿ ಡಾ. ಡಿ. ಸಜಿತ್‌ಬಾಬು ನೇತೃತ್ವದಲ್ಲಿ ಜಿಲ್ಲೆಯಲ್ಲಿ ಯೋಜನೆ ಜಾರಿ ಗೊಳಿಸಲಾಗುವುದು. ಈ ವಾರ್ಡ್‌ಗಳ 13 ಪಂಚಾಯಿತಿಗಳಲ್ಲಿ ಬಿದಿರನ್ನು ನೆಟ್ಟು ಬೆಳೆಸುವ ಸ್ಥಳಗಳ ಸ್ಕೆಚ್‌ ತಯಾರಿಸಲಾಗಿದೆ. ಎರಡು ಬ್ಲಾಕ್‌ ಪಂಚಾಯಿತಿಗಳಲ್ಲಿ ಪಾರೆ ಪ್ರದೇಶಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಈ ಯೋಜನೆ ಪ್ರಯೋಜನಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಎಲ್ಲ ಹವಾಗುಣ ಹಾಗೂ ಮಣ್ಣನಲ್ಲಿ ಬೆಳೆಯುವುದು ಬಿದಿರಿನ ಗುಣವಾಗಿದೆ. ಉದ್ಯೋಗ ಖಾತರಿ ಯೋಜನೆಯಡಿ ಈ ಯೋಜನೆಯನ್ನು ಜಾರಿಗೊಳಿಸುವುದರಿಂದ ಕಾರ್ಮಿಕರಿಗೆ ನೌಕರಿಯೂ ಲಭಿಸಲಿದೆ. ಬಿದಿರು ಮೌಲ್ಯವರ್ಧಿತ ವಸ್ತುವಾಗಿರುವುದರಿಂದ ಕಟ್ಟಡ, ಸೇತುವೆ ಮೊದಲಾದ ನಿರ್ಮಾಣ ಚಟುವಟಿಕೆಗಳಿಗೆ, ಕಟ್ಟಡದ ಗೋಡೆಗಳಿಗೆ, ನೆಲಕ್ಕೆ ಟೈಲ್ಸ್‌ನ ಬದಲು ಬಿದಿರು ಉತ್ಪನ್ನಗಳನ್ನು ಉಪಯೋಗಿಸಬಹುದಾಗಿದೆ. ಬಿದಿರಿನಿಂದ ಕರಕುಶಲ ವಸ್ತುಗಳನ್ನು ತಯಾರಿಸಲು ತರಬೇತಿ ನೀಡಲಾಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ