ಆ್ಯಪ್ನಗರ

ಇಡಯಿಲಕ್ಕಾಡು ಬನ ಜೀವ ವೈವಿಧ್ಯ ಪರಂಪರೆ ಕೇಂದ್ರ

ಇಡಯಿಲಕ್ಕಾಡು ಬನ ಜೀವವೈವಿಧ್ಯ ಪರಂಪರೆಯ ಕೇಂದ್ರವಾಗಲಿದೆ. ವಿಜ್ಞಾನಿಗಳು ಮೊದಲಾದ ತಜ್ಞರ ಒಂದು ವರ್ಷದ ಸುದೀರ್ಘ ಅಧ್ಯಯನದ ಮೂಲಕ ಬನದಲ್ಲಿ353ರಷ್ಟು ಜೀವವೈವಿಧ್ಯಗಳನ್ನು ಪತ್ತೆಹಚ್ಚಲಾಗಿದೆ. ಇವುಗಳಲ್ಲಿನಾನಾ ರೀತಿಯ ಸಸ್ಯಗಳು 179ರಷ್ಟಿವೆ.

Vijaya Karnataka 25 Oct 2019, 5:00 am
ಕಾಸರಗೋಡು: ಇಡಯಿಲಕ್ಕಾಡು ಬನ ಜೀವವೈವಿಧ್ಯ ಪರಂಪರೆಯ ಕೇಂದ್ರವಾಗಲಿದೆ. ವಿಜ್ಞಾನಿಗಳು ಮೊದಲಾದ ತಜ್ಞರ ಒಂದು ವರ್ಷದ ಸುದೀರ್ಘ ಅಧ್ಯಯನದ ಮೂಲಕ ಬನದಲ್ಲಿ353ರಷ್ಟು ಜೀವವೈವಿಧ್ಯಗಳನ್ನು ಪತ್ತೆಹಚ್ಚಲಾಗಿದೆ. ಇವುಗಳಲ್ಲಿನಾನಾ ರೀತಿಯ ಸಸ್ಯಗಳು 179ರಷ್ಟಿವೆ.
Vijaya Karnataka Web idayilkkadu bana
ಇಡಯಿಲಕ್ಕಾಡು ಬನ ಜೀವ ವೈವಿಧ್ಯ ಪರಂಪರೆ ಕೇಂದ್ರ

ಭಾರತದ ಅತ್ಯಂತ ದೊಡ್ಡ ಚಿಟ್ಟೆಯಾದ ಗರುಡಚಿಟ್ಟೆಯ ಸಹಿತ 53 ಚಿಟ್ಟೆಗಳು, 89 ನಾನಾ ಪಕ್ಷಿಗಳು, 17 ವಿಧದ ಅಣಬೆಗಳು, ಹೆಚ್ಚಿನ ಸವಿಶೇಷತೆಗಳಿರುವ ಕರಾವಳಿ ಪ್ರದೇಶಗಳಲ್ಲಿಮಾತ್ರವೇ ಅತ್ಯಂತ ಅಪೂರ್ವವಾಗಿ ಕಾಣಸಿಗುವ ಉಭಯಜೀವಿಯಾದ ಸಿಸಿಲಿಯ ಕೂಡಾ ಸರ್ವೆ ಹಾಗೂ ಅಧ್ಯಯನದ ಮೂಲಕ ಪತ್ತೆಹಚ್ಚಲಾಗಿದೆ.
ರಾಜ್ಯ ಜೀವವೈವಿಧ್ಯ ಮಂಡಳಿಯು ಕರಾವಳಿ ಗ್ರಾಮ ಪಂಚಾಯಿತಿಯಾದ ವಲಿಯಪರಂಬ ಇಡಯಿಲಕ್ಕಾಡು ತುರ್ತಿಯ 12 ಎಕರೆಯಷ್ಟು ವಿಸ್ತೀರ್ಣದಲ್ಲಿರುವ ಬನದ ಸಂರಕ್ಷಣಾ ಚಟುವಟಿಕೆಯ ಪೂರ್ವಭಾವಿಯಾಗಿ ಸಮಗ್ರ ಅಧ್ಯಯನ ನಡೆಸಿತ್ತು. ಇಡಯಿಲಕ್ಕಾಡು ನವೋದಯ ಗ್ರಂಥಾಲಯಕ್ಕೆ ಅಧ್ಯಯನದ ಹೊಣೆಗಾರಿಕೆ ನೀಡಲಾಗಿತ್ತು. ಇದರ ಮುಂದಿನ ಕ್ರಮಗಳು ಪೂರ್ತಿಯಾಗುವುದರೊಂದಿಗೆ ರಾಷ್ಟ್ರದ ಹದಿನೈದನೇ ಜೀವವೈವಿಧ್ಯ ಪರಂಪರೆ ಕೇಂದ್ರ ಎಂಬ ಪದವಿಯು ಕೇರಳದ ಈ ಪುಟ್ಟಗ್ರಾಮದ ಬನಕ್ಕೆ ಲಭಿಸಲಿದೆ.
ಪಶ್ಚಿಮ ಘಟ್ಟದ ಸ್ಥಳೀಯ ಸಸ್ಯಗಳಾದ ಹೊಲಗೇರು, ಹೈಗ, ಹೆಬ್ಬಲಸು, ಜಂಗಲಿ ಬಾದಾಮ್‌ ಮೊದಲಾದ ಸಸ್ಯ ಸಂಪತ್ತು ಈ ಬನದ ವಿಶೇಷತೆಯಾಗಿದೆ. ಚರ್ಮ ರೋಗಗಳು, ಕಿಡ್ನಿ ಸಂಬಂಧಿತ ಅಸೌಖ್ಯಗಳು ಇವುಗಳಿಗಿರುವ ಔಷಧಿಯಾಗಿ ಉಪಯೋಗಿಸುವ ನೇರ್ವಿಲಿಯ ಅರಂಗೋನ ಸಸ್ಯದ ಎರಡು ತಳಿಗಳು ಒಟ್ಟಿಗೆ ಕಾಣಸಿಗುವ ಕೇರಳದ ಏಕೈಕ ಪವಿತ್ರವಾದ ಅರಣ್ಯ ಇದಾಗಿದೆ. ಬನದ ದಟ್ಟಾರಣ್ಯದಲ್ಲಿಉಭಯಜೀವಿಯಾದ ಸಿಸಿಲಿಯದ ಯೂರಿಯೋಡಿ ಫ್ಲಸ್‌ ಆಕ್ಸಿಯೂರೆಸ್‌ನ್ನು ವಿಜ್ಞಾನಿಗಳ ತಂಡ ಪತ್ತೆಹಚ್ಚಿದೆ.
ಮಾಹಿ ಹಾಗೂ ಗೋವಾದ ಮಧ್ಯೆ ನಲ್ವತ್ತಕ್ಕಿಂತ ಕಡಿಮೆ ಜೋಡಿಗಳು ಮಾತ್ರವೇ ಇರುವ ಬಿಳಿಹೊಟ್ಟೆಯ ಮೀನು ಗಿಡುಗ ಇರುವುದು ಕೂಡಾ ಈ ಬನದ ವಿಶೇಷತೆಯಾಗಿದೆ. ಕಾಲಕ್ಕನುಗುಣವಾಗಿ ಅರಳುವ ಅಣಬೆಗಳು ಹೆಚ್ಚು ಕುತೂಹಲ ಮೂಡಿಸುತ್ತವೆ. ಮನುಷ್ಯರೊಡನೆ ಹೆಚ್ಚು ಅನ್ಯೋನ್ಯತೆಯಲ್ಲಿರುವ ವಾನರರ ಸೈನ್ಯ, ಅವುಗಳಿಗೆ ನಿತ್ಯ ಭೋಜನ ನೀಡುವ ಚಾಲಿಲ್‌ ಮಾಣಿಕ್ಕ ಎಂಬ ಮಹಿಳೆ ಇಡಯಿಲಕ್ಕಾಡು ಖ್ಯಾತಿಗೆ ಕಾರಣರಾಗಿದ್ದಾರೆ.
ನಂಬಿಕೆಯ ಹಾಗೂ ಬಲವಾದ ಪರಿಸರ ಚಿಂತನೆಯ ಬೆಂಬಲದೊಂದಿಗೆ ದಶಕಗಳಿಂದ ನಾಗರಿಕರೇ ಬನದ ಸಂರಕ್ಷಣೆಯನ್ನು ವಹಿಸಿಕೊಂಡಿರುವ ಗ್ರಾಮ ಇದಾಗಿದೆ. ಯೋಜನೆಯ ಅಂಗವಾಗಿ ತಯಾರಿಸಿದ ವರದಿ ಸಾರ್ವಜನಿಕ ಚರ್ಚಾ ಸಭೆ ತೃಕ್ಕರಿಪುರ ಶಾಸಕ ಎಂ.ರಾಜಗೋಪಾಲನ್‌ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪಿ.ವಿ.ಶಾರದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಜೀವವೈವಿಧ್ಯ ಮಂಡಳಿ ಸದಸ್ಯ ಕಾರ್ಯದರ್ಶಿ ಡಾ.ವಿ.ಬಾಲಕೃಷ್ಣನ್‌, ಮಂಡಳಿ ಸದಸ್ಯರಾದ ಕೆ.ವಿ.ಗೋವಿಂದನ್‌, ಡಾ.ಕೆ.ಟಿ. ಚಂದ್ರಮೋಹನ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಪರಿಸರ ಕಾರ್ಯಕರ್ತರಾದ ಪಿ.ವೇಣುಗೋಪಾಲನ್‌, ಆನಂದ್‌ ಪೇಕ್ಕಡಂ ವರದಿ ಮಂಡಿಸಿದರು.
ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷೆ ಸುಮ ಕಣ್ಣನ್‌, ಸದಸ್ಯರಾದ ವಿ.ಕೆ.ಕರುಣಾಕರನ್‌, ಹಕೀಂ ಮಾಸ್ಟರ್‌ ಮಾಡಕ್ಕಲ್‌, ಜೀವವೈವಿಧ್ಯ ಮಂಡಳಿ ಪ್ರಿನ್ಸಿಪಲ್‌ ಸೈಂಟಿಫಿಕ್‌ ಆಫೀಸರ್‌ ಲಿಂಡ ಜೋನ್‌, ಎಂ.ಬಿ.ಬರ್ನಾಡ್‌ ಮಾತನಾಡಿದರು. ಚಿತ್ರ: 24ಕೆಎಸ್‌ಎಲ್‌ಪಕ್ಷಿ-ಬಿಳಿಹೊಟ್ಟೆಯ ಮೀನು ಗಿಡುಗ 24ಕೆಎಸ್‌ಎಲ್‌ನೇರ್ವಿಲಿಯ-ನೇರ್ವಿಲಿಯ ಅರಂಗೋನ 24ಕೆಎಸ್‌ಎಲ್‌ಜಂಗಲಿಬಾದಮ್‌ 24ಕೆಎಸ್‌ಎಲ್‌ಹೆಬ್ಬಲಸು 24ಕೆಎಸ್‌ಎಲ್‌ಚಿಟ್ಟೆ-ಗರುಡಚಿಟ್ಟೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ