ಆ್ಯಪ್ನಗರ

ಕರಿಂಬಿಲ ಗುಡ್ಡ ಕುಸಿತ: ಬದಿಯಡ್ಕ ಪೆರ್ಲ ಸಂಚಾರ ಸಂಪೂರ್ಣ ಸ್ಥಗಿತ

ಕರಿಂಬಿಲದಲ್ಲಿ ಕಳೆದ ಕೆಲವು ದಿನಗಳಿಂದ ಕುಸಿತಗೊಳ್ಳುತ್ತಿರುವ ಗುಡ್ಡವು ಶುಕ್ರವಾರ ರಾತ್ರಿ ಮತ್ತಷ್ಟು ಕುಸಿದು ಬಿದ್ದಿದ್ದು, ಬದಿಯಡ್ಕ ಪೆರ್ಲ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.

Vijaya Karnataka 11 Aug 2019, 5:00 am
ಬದಿಯಡ್ಕ: ಕರಿಂಬಿಲದಲ್ಲಿ ಕಳೆದ ಕೆಲವು ದಿನಗಳಿಂದ ಕುಸಿತಗೊಳ್ಳುತ್ತಿರುವ ಗುಡ್ಡವು ಶುಕ್ರವಾರ ರಾತ್ರಿ ಮತ್ತಷ್ಟು ಕುಸಿದು ಬಿದ್ದಿದ್ದು, ಬದಿಯಡ್ಕ ಪೆರ್ಲ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.
Vijaya Karnataka Web karimbila gudda kusita
ಕರಿಂಬಿಲ ಗುಡ್ಡ ಕುಸಿತ: ಬದಿಯಡ್ಕ ಪೆರ್ಲ ಸಂಚಾರ ಸಂಪೂರ್ಣ ಸ್ಥಗಿತ


ಲೋಕೋಪಯೋಗಿ ಇಲಾಖೆ ಅದೇಶದಂತೆ ಬದಿಯಡ್ಕ ಪೊಲೀಸರು ರಸ್ತೆಗೆ ತಡೆಯೊಡ್ಡಿದ್ದಾರೆ. ಇದರಿಂದಾಗಿ ಕೇರಳ ಕರ್ನಾಟಕ ಅಂತಾರಾಜ್ಯ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಬೇರೆ ದಾರಿ ಬಳಸಬೇಕಾಯಿತು. ಕೆಎಸ್‌ಆರ್‌ಟಿಸಿ ಬಸ್‌ಗಳು ಬದಿಯಡ್ಕ, ಕನ್ನೆಪ್ಪಾಡಿ, ಏಳ್ಕಾನ, ಉಕ್ಕಿನಡ್ಕ ದಾರಿಯಾಗಿ ಪೆರ್ಲಕ್ಕೆ ಸಂಚರಿಸುತ್ತಿವೆ. ಇದೇ ವೇಳೆ ಕೆಡೆಂಜಿ ತಿರುವಿನಿಂದ ಬರ್ಲ ರಸ್ತೆಯಾಗಿ ಕಾಡಮನೆಗೆ ಸಾಗುವ ರಸ್ತೆಗೆ ಮರ ಮುರಿದು ಬಿದ್ದು ರಸ್ತೆತಡೆ ಉಂಟಾಯಿತು. ನಂತರ ಅದನ್ನು ತೆರವುಗೊಳಿಸಲಾಯಿತು.

ಕಳೆದ ಮಾರ್ಚ್‌ ತಿಂಗಳಲ್ಲಿ ಇಲ್ಲಿನ ಅಂತಾರಾಜ್ಯ ರಸ್ತೆಯ ದುರಸ್ತಿ ಕಾಮಗಾರಿ ಆರಂಭವಾಗಿತ್ತು. ಈ ವೇಳೆ ರಸ್ತೆ ಅಗಲಗೊಳಿಸುವ ನೆಪದಲ್ಲಿ ಗುತ್ತಿಗೆದಾರರು ರಸ್ತೆ ಮೇಲಿನ ಗುಡ್ಡೆಯನ್ನು ಅಗೆದಿದ್ದರು. ಮೇಲಿನ ಮರಗಳನ್ನು ತೆರವುಗೊಳಿಸದೆ ಇರುವುದರಿಂದ ಮರಗಳು ರಸ್ತೆಗೆ ವಾಲಿಕೊಂಡಿವೆ.

ಜುಲೈ 23ರಂದು ಗುಡ್ಡದ ಮೇಲ್ಭಾಗದಲ್ಲಿ ಭೂಮಿಯು ಬಿರುಕುಬಿಟ್ಟಿತ್ತು. ಅಪಾಯದ ಸೂಚನೆಯನ್ನಿರತ ನಾಗರಿಕರು, ಸಮೀಪವಾಸಿಗಳು ಅಧಿಕಾರಿಗಳಿಗೆ ವಿಷಯ ತಲುಪಿಸಿದ್ದರು. ಉನ್ನತಾಧಿಕಾರಿಗಳು ಆಗಮಿಸಿ ರಸ್ತೆಯಲ್ಲಿ ಸಂಚಾರವೇ ಅಪಾಯ ಎಂದು ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದರು. 10 ದಿನಗಳ ಕಾಲ ವಾಹನ ಸಂಚಾರ ಮೊಟಕುಗೊಂಡಿತು. ನಂತರ ಊರವರ, ಜನಪ್ರತಿನಿಧಿಗಳು ಒತ್ತಾಯದ ಮೇರೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿರ್ಬಂಧಿತ ವಾಹನ ಸಂಚಾರಕ್ಕೆ ಅನುವುಮಾಡಿಕೊಡಲಾಗಿತ್ತು. ಗುಡ್ಡವು ಸ್ವಲ್ಪ ಸ್ವಲ್ಪ ಜಾರುತ್ತಾ ಬಂದಿದ್ದು, ಶುಕ್ರವಾರ ರಾತ್ರಿಯಿಂದ ಸಂಚರಿಸಲು ಸಾಧ್ಯವಿಲ್ಲದ ರೀತಿಯಲ್ಲಿ ಕುಸಿತವನ್ನು ಕಂಡಿದೆ. ಈ ಹಿನ್ನೆಲೆಯಲ್ಲಿ ಬದಿಯಡ್ಕ ಪೊಲೀಸರ ನೇತೃತ್ವದಲ್ಲಿ ರಸ್ತೆಗೆ ತಡೆಯೊಡ್ಡಲಾಗಿದೆ. ಶಾಲಾ ಕಾಲೇಜುಗಳಿಗೆ ಸೋಮವಾರದ ತನಕ ರಜೆಯಿದೆ. ಇದೇ ವೇಳೆ ವ್ಯಾಪಕ ಮಳೆಯು ಮತ್ತೂ ಮುಂದುವರಿಯುತ್ತಿದ್ದು ನಾಗರಿಕರು ಚಿಂತಿತರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ