ಆ್ಯಪ್ನಗರ

ತರಕಾರಿ ಬೀಜ ಜತೆಗೆ ಎರಡು ಟನ್‌ ಪ್ಲಾಸ್ಟಿಕ್‌ ಮಣ್ಣುಪಾಲು!

ಓಣಂಗೆ ಒಂದಿಷ್ಟು ತರಕಾರಿಗಳನ್ನು ಬೆಳೆಯಲು ಬೀಜ ವಿತರಣೆಯೊಂದಿಗೆ ರಾಜ್ಯದಾದ್ಯಂತ 60 ಟನ್‌ ಪ್ಲಾಸ್ಟಿಕ್‌ನ್ನು ಸಹ ನೀಡಲಾಗಿದೆ...

Vijaya Karnataka 14 Jun 2018, 5:00 am
ಕಾಸರಗೋಡು: ಓಣಂಗೆ ಒಂದಿಷ್ಟು ತರಕಾರಿಗಳನ್ನು ಬೆಳೆಯಲು ಬೀಜ ವಿತರಣೆಯೊಂದಿಗೆ ರಾಜ್ಯದಾದ್ಯಂತ 60 ಟನ್‌ ಪ್ಲಾಸ್ಟಿಕ್‌ನ್ನು ಸಹ ನೀಡಲಾಗಿದೆ. ವಿದ್ಯಾರ್ಥಿಗಳು, ಕೃಷಿಕರು ಬೀಜಗಳನ್ನು ಮಣ್ಣಿನಲ್ಲಿ ಹಾಕಿದಾಗ ಅದನ್ನು ತುಂಬಿಸಿದ್ದ ಪ್ಲಾಸ್ಟಿಕ್‌ ಕವರ್‌ಗಳನ್ನೂ ಮಣ್ಣಿಗೆ ಸೇರಿಸಬೇಕಾಯಿತು.
Vijaya Karnataka Web news/kasaragod/plastic
ತರಕಾರಿ ಬೀಜ ಜತೆಗೆ ಎರಡು ಟನ್‌ ಪ್ಲಾಸ್ಟಿಕ್‌ ಮಣ್ಣುಪಾಲು!


ಬೀಜ ವಿತರಣೆಗಾಗಿ ಐದು ವಿಧದ ಬೀಜಗಳಿಗೆ ಐದು ಕವರ್‌ಗಳು ಹಾಗೂ ಪ್ರಿಂಟ್‌ ಮಾಡಿದ ಹೊರ ಭಾಗದ ಕವರ್‌ ಸಹಿತ ಆರು ಪ್ಲಾಸ್ಟಿಕ್‌ ಕವರ್‌ಗಳನ್ನು ಉಪಯೋಗಿಸಲಾಗಿದೆ. ಕೃಷಿ ಅಭಿವೃದ್ಧಿ ಕೃಷಿ ಕಲ್ಯಾಣ ಇಲಾಖೆ ಶಾಲೆಗಳಿಗೆ, ಕೃಷಿಕರಿಗೆ ಹಾಗೂ ಸಂಘ-ಸಂಸ್ಥೆಗಳಿಗೆ ತರಕಾರಿ ಬೀಜ ನೀಡುತ್ತಿದೆ. ಇದಕ್ಕಾಗಿ ವೆಜಿಟೇಬಲ್‌ ಆ್ಯಂಡ್‌ ಫ್ರೂಟ್‌ ಪ್ರಮೋಶನ್‌ ಕೌನ್ಸಿಲ್‌ ಕೇರಳ (ವಿಎಫ್‌ಪಿಸಿಕೆ) ಬೀಜ ಉತ್ಪಾದನೆ, ಸಂಸ್ಕರಣೆ ಹಾಗೂ ವಿತರಣೆ ನಡೆಸುತ್ತಿದೆ.

ವಿತರಿಸಲಾದ ತರಕಾರಿ ಬೀಜದ ಒಂದು ಪ್ಯಾಕೆಟ್‌ನ ಭಾರ 15 ಗ್ರಾಂ ಆಗಿದೆ. ಇದರಲ್ಲಿ 9 ಗ್ರಾಂ ಬೀಜ, ಆರು ಗ್ರಾಂ ಪ್ಲಾಸ್ಟಿಕ್‌ ಕವರ್‌ ಇದೆ. ಕಾಸರಗೋಡು ಜಿಲ್ಲೆಯಲ್ಲಿ 1.80 ಲಕ್ಷ ವಿದ್ಯಾರ್ಥಿಗಳಿಗೆ ತರಕಾರಿ ಬೀಜ ವಿತರಿಸಲಾಗಿದೆ. ಹೀಗಾಗಿ ಬೀಜದ ಜತೆಗೆ 1080 ಕಿ.ಗ್ರಾಂ. ಪ್ಲಾಸ್ಟಿಕ್‌ ಕೂಡ ಮಣ್ಣ ಸೇರುವಂತಾಗಿದೆ.

ಜಿಲ್ಲೆಯ 41 ಕೃಷಿ ಭವನಗಳ ಮೂಲಕ ಕೃಷಿಕರಿಗೆ ನೀಡಲು ಪ್ರತಿಯೊಂದು ಕೃಷಿ ಭವನದಿಂದ 3500 ಪ್ಯಾಕೆಟ್‌ಗಳನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಈ ಯೋಜನೆ ಮೂಲಕ 1.43 ಲಕ್ಷ ಬೀಜ ಪ್ಯಾಕೆಟ್‌ನ್ನು ವಿತರಿಸಲಾಗಿದೆ. ಇದರ ಪ್ಲಾಸ್ಟಿಕ್‌ನ್ನು ಲೆಕ್ಕ ಮಾಡಿದರೆ 861 ಕಿ.ಗ್ರಾಂ. ಆಗಲಿದೆ. ಈ ಮೂಲಕ ವಿದ್ಯಾರ್ಥಿ ಗಳಿಗೆ ವಿತರಿಸಿದ ಹಾಗೂ ಕೃಷಿಕರಿಗೆ ವಿತರಿಸಿದ ತರಕಾರಿ ಬೀಜಗಳ ಪ್ಯಾಕೆಟ್‌ ಗಳನ್ನು ಲೆಕ್ಕ ಹಾಕಿದರೆ ಕಾಸರಗೋಡು ಜಿಲ್ಲೆಯಲ್ಲಿ ಎರಡು ಟನ್‌ ಪ್ಲಾಸ್ಟಿಕ್‌ ವಿತರಿಸಿದಂತಾಗಿದೆ.

ರಾಜ್ಯದಲ್ಲಿ ಒಟ್ಟು ಒಂದು ಕೋಟಿಯಷ್ಟು ಬೀಜ ಪ್ಯಾಕೆಟ್‌ಗಳನ್ನು ನೀಡಲಾಗಿದೆ. ಅಂದರೆ 60 ಟನ್‌ ಪ್ಲಾಸ್ಟಿಕ್‌ ವಿತರಣೆಗೊಂಡಿದೆ. ದೊಡ್ಡ ಲಾರಿಯೊಂದರಲ್ಲಿ ಹತ್ತು ಟನ್‌ ಪ್ಲಾಸ್ಟಿಕ್‌ ನಿಲ್ಲುವುದಾದರೆ ಆರು ಲೋಡ್‌ ಪ್ಲಾಸ್ಟಿಕ್‌ ಮಣ್ಣು ಸೇರಿದೆ. ರಾಜ್ಯದಾದ್ಯಂತ ಹಸಿರು ಸಂಹಿತೆ ಜಾರಿಗೊಳಿಸುತ್ತಿರುವಾಗ ತರಕಾರಿ ಬೀಜಗಳನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ ವಿತರಿಸಿರುವುದು ವಿಪರ್ಯಾಸವಾಗಿದೆ.

ಎಲ್ಲ ಬದಲಾಯಿಸಲಾಗದಿದ್ದರೂ ಪ್ಯಾಕೆಟ್‌ನ ಒಳಗಿನ ಸಣ್ಣ ಐದು ಬೀಜ ಕವರ್‌ಗಳನ್ನು ಕಾಗದಿಂದ ತಯಾರಿಸಬಹುದಾಗಿತ್ತು ಎಂದು ಪರಿಸರ ಕಾರ್ಯ ಕರ್ತರು ಹೇಳುತ್ತಿದ್ದಾರೆ. ಈ ರೀತಿ ಮಾಡುತ್ತಿದ್ದರೆ ಕಾಸರಗೋಡಿನಲ್ಲೇ 9.25 ಲಕ್ಷ ಬೀಜ ಪ್ಯಾಕೆಟ್‌ಗೆ ಬಳಸಿದ ಪ್ಲಾಸ್ಟಿಕ್‌ ಕವರ್‌ಗಳನ್ನು ಎಸೆಯಬೇಕಾಗಿರುತ್ತಿರಲಿಲ್ಲ. ಮುಂಚಿತವಾಗಿ ಮಕ್ಕಳ ಲೆಕ್ಕ ತೆಗೆದು ಬೇಕಾದಷ್ಟು ಬೀಜಗಳನ್ನು ತರಬಹುದಾಗಿತ್ತು. ಕಾಗದದ ಚೀಲದಲ್ಲಿ ತಂದು ವಿತರಿಸುತ್ತಿದ್ದರೆ ಟನ್‌ಗಟ್ಟಲೆ ಪ್ಲಾಸ್ಟಿಕ್‌ ಮಣ್ಣು ಸೇರುತ್ತಿರಲಿಲ್ಲ ಎಂದು ಪರಿಸರ ಕಾರ್ಯಕರ್ತರು ಹೇಳುತ್ತಿದ್ದಾರೆ. ಪ್ಲಾಸ್ಟಿಕ್‌ನ್ನು ರಿಸೈಕ್ಲಿಂಗ್‌ಗೆ ನೀಡಬೇಕು ಎಂಬ ಪ್ರಕಟಣೆ ಕೂಡ ಶಾಲೆಗಳಿಗೆ ಲಭಿಸಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ