ಆ್ಯಪ್ನಗರ

ವಿಮಾ ಯೋಜನೆಗೆ ಕಾಫಿ ಬೆಳೆ ಸೇರಿಸಿ: ಒತ್ತಾಯ

ಸೋಮವಾರಪೇಟೆ: ಫಸಲ್ ಭೀಮಾ ಮತ್ತು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಕಾಫಿ ಹಾಗೂ ಇತರ ಬೆಳೆಗಳನ್ನು ಆಳವಡಿಸದಿರುವುದು ಖಂಡನೀಯ ಎಂದು ತಾಲೂಕು ಕಾಫಿ ಬೆಳೆಗಾರರ ಸಂಘ ಹೇಳಿದೆ.

ವಿಕ ಸುದ್ದಿಲೋಕ 9 Jul 2016, 4:03 am
ಸೋಮವಾರಪೇಟೆ: ಫಸಲ್ ಭೀಮಾ ಮತ್ತು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಕಾಫಿ ಹಾಗೂ ಇತರ ಬೆಳೆಗಳನ್ನು ಆಳವಡಿಸದಿರುವುದು ಖಂಡನೀಯ ಎಂದು ತಾಲೂಕು ಕಾಫಿ ಬೆಳೆಗಾರರ ಸಂಘ ಹೇಳಿದೆ.
Vijaya Karnataka Web add the coffee crop insurance scheme tweak
ವಿಮಾ ಯೋಜನೆಗೆ ಕಾಫಿ ಬೆಳೆ ಸೇರಿಸಿ: ಒತ್ತಾಯ

ಪಶ್ಚಿಮಘಟ್ಟದ ಮಲೆನಾಡು ಪ್ರದೇಶ ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ಶೇ.90ರಷ್ಟು ಮಂದಿ ಕಾಫಿ ಬೆಳೆಗಾರರಿದ್ದಾರೆ. ಆದರೂ ಕೂಡ ಯೋಜನೆಯಲ್ಲಿ ಕಾಫಿ, ಏಲಕ್ಕಿ, ಶುಂಠಿ, ಬಾಳೆ ಸೇರಿದಂತೆ ಇತರ ಜಿಲ್ಲೆಯ ಪ್ರಮುಖ ಬೆಳೆಗಳನ್ನು ಸೇರಿಸದೆ ಕೊಡಗಿನ ಜನರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅನ್ಯಾಯ ಮಾಡುತ್ತಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸಂಘದ ಸಲಹೆಗಾರ ಎಸ್.ಜಿ.ಮೇದಪ್ಪ ಆರೋಪಿಸಿದರು.
ಕಳೆದ ಹಲವಾರು ವರ್ಷಗಳಿಂದ ಅಕಾಲಿಕ ಮಳೆಯಿಂದ ಕಾಫಿ ಫಸಲು ನಷ್ಟವಾಗಿ ಬೆಳೆಗಾರರು ಸಾಲಗಾರರಾಗಿದ್ದಾರೆ. ಉತ್ಪಾದನಾ ವೆಚ್ಚವೂ ಜಾಸ್ತಿಯಾಗುತ್ತಿದೆ. ಸಾಕಷ್ಟು ಮಂದಿ ರೈತರು ಕಾಫಿ ತೋಟಗಳನ್ನು ಪಾಳುಬಿಟ್ಟಿದ್ದಾರೆ. ಈ ಬಗ್ಗೆ ಮಾಹಿತಿಯಿದ್ದರೂ ಕೇಂದ್ರ ಸರಕಾರದ ಫಸಲ್ ಭೀಮಾ ಯೋಜನೆ, ರಾಜ್ಯ ಸರಕಾರದ ಹವಮಾನ ಆಧಾರಿತ ವಿಮಾ ಯೋಜನೆಯಲ್ಲಿ ಕಾಫಿಯನ್ನು ಸೇರಿಸದಿರುವುದು ಸರಿಯಾದ ಕ್ರಮವಲ್ಲ. ಜಿಲ್ಲಾಕಾರಿಗಳು ಕೂಡಲೆ ಮಧ್ಯ ಪ್ರವೇಶಿಸಿ, ಕಾಫಿ ಮತ್ತಿತರ ಬೆಳೆಗಳನ್ನು ವಿಮಾ ಯೋಜನೆಯಡಿಯಲ್ಲಿ ಸೇರಿಸಲು ಸರಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿದರು.
ಮುಂದಿನ ಹತ್ತು ದಿನಗಳ ಒಳಗೆ ಯೋಜನೆಯಡಿ ಕಾಫಿ ಮತ್ತಿತರ ಬೆಳೆಗಳನ್ನು ಸೇರಿಸಬೇಕು. ತಪ್ಪಿದಲ್ಲಿ ಕಾಫಿ ಬೆಳೆಗಾರರ ಸಂಘದ ವತಿಯಿಂದ ಜಿಲ್ಲಾಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ವಿಮಾ ಯೋಜನೆಯಡಿ ಕೊಡಗು ಹಾಗೂ ಮಲೆನಾಡು ಜಿಲ್ಲೆಗಳ ಜೀವನಾಧಾರ ಬೆಳೆಗಳನ್ನು ಸೇರಿಸುವ ಬಗ್ಗೆ ಸಂಸದ ಪ್ರತಾಪ್ ಸಿಂಹ, ಜಿಲ್ಲೆಯ ಶಾಸಕರಿಬ್ಬರೂ ಹೋರಾಟ ಮಾಡಬೇಕು. ಆದರೆ ಇವರ ಮೌನದಿಂದ ಜಿಲ್ಲೆಯ ಕಾಫಿ ಬೆಳೆಗಾರರು ಸಮಸ್ಯೆಗೆ ಸಿಲುಕುವಂತಾಗಿದೆ ಎಂದು ಕಾಫಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಬಿ.ಎಂ.ಲವ ದೂರಿದರು.
ಸುದ್ದಿಗೋಷ್ಠಿಯಲ್ಲಿ ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಎಸ್.ಪಿ. ಪೊನ್ನಪ್ಪ, ಕಾಫಿ ಬೆಳೆಗಾರರ ಸಂಘದ ಕಾರ್ಯದರ್ಶಿ ತಾಕೇರಿ ಪ್ರಕಾಶ್, ಬೆಳೆಗಾರ ಬಿ.ಎಸ್.ಅನಂತರಾಮ್, ಮಾಜಿ ಕಾರ್ಯದರ್ಶಿ ಸೋಮಶೇಖರ್ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ