ಆ್ಯಪ್ನಗರ

ಕಾಫಿ ನಷ್ಟದ ಅಂದಾಜು ಸಲ್ಲಿಸದ ಮಂಡಳಿ: ಆಕ್ಷೇಪ

ಮಹಾಮಳೆ ಹಾಗೂ ಭೂಕುಸಿತಕ್ಕೆ ಕೊಡಗು ಹಾಗೂ ಚಿಕ್ಕಮಗಳೂರಿನಲ್ಲಿ ಕಾಫಿ ಬೆಳೆ ಪ್ರಾಥಮಿಕ ನಷ್ಟದ ಮಾಹಿತಿಯನ್ನು ಕಾಫಿ ಮಂಡಳಿ ಅಧಿಕಾರಿಗಳು ಇಲ್ಲಿಯತನಕ ಸಲ್ಲಿಸದೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ ತೀವ್ರವಾಗಿ ಆಕ್ಷೇಪಿಸಿದೆ.

Vijaya Karnataka 11 Sep 2018, 5:00 am
ಮಡಿಕೇರಿ: ಮಹಾಮಳೆ ಹಾಗೂ ಭೂಕುಸಿತಕ್ಕೆ ಕೊಡಗು ಹಾಗೂ ಚಿಕ್ಕಮಗಳೂರಿನಲ್ಲಿ ಕಾಫಿ ಬೆಳೆ ಪ್ರಾಥಮಿಕ ನಷ್ಟದ ಮಾಹಿತಿಯನ್ನು ಕಾಫಿ ಮಂಡಳಿ ಅಧಿಕಾರಿಗಳು ಇಲ್ಲಿಯತನಕ ಸಲ್ಲಿಸದೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ ತೀವ್ರವಾಗಿ ಆಕ್ಷೇಪಿಸಿದೆ.
Vijaya Karnataka Web coffee lost estimate not submitted alleged
ಕಾಫಿ ನಷ್ಟದ ಅಂದಾಜು ಸಲ್ಲಿಸದ ಮಂಡಳಿ: ಆಕ್ಷೇಪ


''ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಕೇಂದ್ರಕ್ಕೆ ವರದಿಯನ್ನು ಸಲ್ಲಿಸಿದೆ. ಈ ವರದಿಯಲ್ಲಿ ಕರ್ನಾಟಕದ ಹಾಸನ, ಚಿಕ್ಕಮಗಳೂರಿನಲ್ಲಿ ಸಂಭವಿಸಿದ ಮಹಾಮಳೆ ಹಾನಿಯ ಸಮಗ್ರ ವಿವರ ನೀಡಲಾಗಿದೆ. ಮನೆ, ಜೀವ, ಜಾನುವಾರು ಪ್ರಾಣ ಹಾನಿ, ರಸ್ತೆ ದುರಸ್ತಿ, ಕಟ್ಟಡ ಹಾನಿ, ತೋಟಗಾರಿಕಾ ಬೆಳೆಗಳ ಹಾನಿ, ಕೃಷಿ ಫಸಲು ನಷ್ಟ ಸೇರಿದಂತೆ ಎಲ್ಲ ರೀತಿಯ ನಷ್ಟದ ಸಮಗ್ರ ಮಾಹಿತಿಯನ್ನು ಆಯಾಯ ಇಲಾಖೆಗಳಿಂದ ಪಡೆದು ರಾಜ್ಯ ಸರಕಾರ ಕೇಂದ್ರಕ್ಕೆ ಸಲ್ಲಿಸಿದೆ. ಆದರೆ, ಕಾಫಿ ಬೆಳೆಗೆ ಆಗಿರುವ ನಷ್ಟದ ಮಾಹಿತಿಯೇ ಇದರಲ್ಲಿ ಇಲ್ಲ,'' ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಿ.ಎಸ್‌.ಜಯರಾಮ್‌, ಸಂಚಾಲಕ ಕೆ.ಕೆ.ವಿಶ್ವನಾಥ್‌ ನೀಡಿರುವ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

''ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಕಾಫಿ ತೋಟಗಳಿಗೆ ಉಂಟಾಗಿರುವ ನಷ್ಟ ಮತ್ತು ಕಾಫಿ ಬೆಳೆಗೆ ಆಗಿರುವ ಹಾನಿಯನ್ನು ಕಾಫಿ ಮಂಡಳಿ ರಾಜ್ಯ ಸರಕಾರಕ್ಕೆ ಸಲ್ಲಿಸಬೇಕಿತ್ತು. ಆದರೆ, ದುರಂತ ಸಂಭವಿಸಿ ಒಂದು ತಿಂಗಳಾಗುತ್ತ ಬಂದರೂ ಕಾಫಿ ಮಂಡಳಿ ಅಧಿಕಾರಿಗಳ ನಿದ್ರೆ ಬಿಟ್ಟಿಲ್ಲ. ಹೀಗಾಗಿ ತೋಟಗಾರಿಕೆ ಹಾಗೂ ಕೃಷಿ ಇಲಾಖೆಗಳಿಂದ ಬೆಳೆ ನಷ್ಟದ ಮಾಹಿತಿಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಸಲ್ಲಿಸಿದರೂ ಕಾಫಿ ಬೆಳೆ ನಷ್ಟದ ಮಾಹಿತಿಯನ್ನೇ ನೀಡಲಿಲ್ಲ. ಇದರಿಂದಾಗಿ ಮುಂದಿನ ದಿನಗಳಲ್ಲಿ ಕಾಫಿ ಬೆಳೆಗಾರರ ಸಮಸ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ,'' ಎಂದು ಅಸಮಾಧಾನ ವ್ಯಕ್ತಪಡಿಸಿದರು.

''ಈ ಕುರಿತು ಕರ್ನಾಟಕ ಬೆಳೆಗಾರರ ಒಕ್ಕೂಟ ಈಗಾಗಲೇ ರಾಜ್ಯದ ಕಾಫಿ ಬೆಳೆಗಾರ ಜಿಲ್ಲೆಗಳ ಜನಪ್ರತಿನಿಧಿಗಳ ಗಮನ ಸೆಳೆದಿದ್ದು, ಅವರಿಂದ ಈ ನಿಟ್ಟಿನಲ್ಲಿ ಸೂಕ್ತ ಸ್ಪಂದನೆ ಲಭಿಸಿದೆ. ಕಾಫಿ ಮಂಡಳಿ ಅಧಿಕಾರಿಗಳು ಇನ್ನಾದರೂ ನಿರ್ಲಕ್ಷ ್ಯ ತೋರದೇ ಕಾಫಿಗೆ ಉಂಟಾಗಿರುವ ನಷ್ಟದ ಅಂದಾಜಿನ ಪ್ರಾಥಮಿಕ ಸಮೀಕ್ಷಾ ವರದಿಯನ್ನು ಕೂಡಲೇ ಸರಕಾರಕ್ಕೆ ಸಲ್ಲಿಸಲಿ,'' ಎಂದು ಅವರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ