ಆ್ಯಪ್ನಗರ

ನಿಗದಿತ ವೇತನ ನೀಡದೆ ಶೋಷಣೆ: ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿ ಸಂಘ ಆರೋಪ

ಕೊಡಗು ಜಿಲ್ಲೆಯ ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿಗೆ ಸರಕಾರ ನಿಗದಿಪಡಿಸಿದ ವೇತನ ನೀಡದೆ ಗುತ್ತಿಗೆದಾರರು ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್‌.ಭರತ್‌, ಗುತ್ತಿಗೆದಾರರ ವಿರುದ್ಧ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Vijaya Karnataka 31 Dec 2018, 5:00 am
ಮಡಿಕೇರಿ: ಕೊಡಗು ಜಿಲ್ಲೆಯ ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿಗೆ ಸರಕಾರ ನಿಗದಿಪಡಿಸಿದ ವೇತನ ನೀಡದೆ ಗುತ್ತಿಗೆದಾರರು ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್‌.ಭರತ್‌, ಗುತ್ತಿಗೆದಾರರ ವಿರುದ್ಧ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Vijaya Karnataka Web exploitation by not giving fixed salary
ನಿಗದಿತ ವೇತನ ನೀಡದೆ ಶೋಷಣೆ: ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿ ಸಂಘ ಆರೋಪ


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಕಾರ್ಮಿಕ ಇಲಾಖೆ, ಕೊಡಗು ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿ ಹಾಗೂ ಇತರ ನೌಕರರಿಗೆ ಮಾಸಿಕ ವೇತನ ನಿಗದಿಪಡಿಸಿ 2017ರ ಏ.1ರಂದು ಆದೇಶ ಹೊರಡಿಸಿತು. ಅದರಂತೆ ಸ್ವಚ್ಛತಾ ಸಿಬ್ಬಂದಿಗೆ ಪಿಎಫ್‌ ಮತ್ತು ಇಎಸ್‌ಐ ಮೊತ್ತ ಕಡಿತಗೊಳಿಸಿ ವೇತನ ನೀಡಬೇಕಾಗಿದೆ. ಆದರೆ, ಸರಕಾರ ನಿಗದಿಪಡಿಸಿದ ವೇತನ ನೀಡದೆ ಗುತ್ತಿಗೆದಾರರು ಸ್ವಚ್ಛತಾ ಸಿಬ್ಬಂದಿಗೆ ವಂಚಿಸುತ್ತಿದ್ದಾರೆ,'' ಎಂದು ಆರೋಪಿಸಿದರು.

''ಹೆಚ್ಚಳವಾದ ವೇತನವನ್ನು ಪಡೆಯಲಾಗದೆ ಕಾರ್ಮಿಕರು ಕಂಗಾಲಾಗಿದ್ದು, ಗುತ್ತಿಗೆದಾರರು ಕಾರ್ಮಿಕರ ವೇತವನ್ನು ಕಡಿತ ಮಾಡುವ ಮೂಲಕ ದುಪ್ಪಟ್ಟು ಲಾಭ ಮಾಡಿಕೊಳ್ಳುತ್ತಿದ್ದಾರೆ. ನೌಕರರ ವೇತನದಲ್ಲಿ ಇಎಸ್‌ಐ ಕಡಿತಗೊಳಿಸಲಾಗುತ್ತಿದ್ದರೂ, ಕಾರ್ಮಿಕರು ಅನಾರೋಗ್ಯಕ್ಕೆ ಒಳಗಾದಾಗ ಇಎಸ್‌ಐ ಸೌಲಭ್ಯ ಪಡೆಯಲು ಜಿಲ್ಲೆಯ ಯಾವ ಆಸ್ಪತ್ರೆಗೆ ತೆರಳಬೇಕು ಎಂಬುದನ್ನು ನಮೂದಿಸಿಲ್ಲ. ಅಲ್ಲದೇ, ಕೊಡಗು ಜಿಲ್ಲೆಯಲ್ಲಿ ಸಾವಿರಾರು ಮಂದಿ ಕಾರ್ಮಿಕರಿದ್ದರೂ, ಇಲ್ಲಿ ಇಎಸ್‌ಐ ಆಸ್ಪತ್ರೆ ಇಲ್ಲದಿರುವುದು ದೌರ್ಭಾಗ್ಯ,'' ಎಂದು ವಿಷಾದಿಸಿದರು.

''ಪ್ರತಿ ನೌಕರರಿಂದ ಮಾಸಿಕ 1000 ರಿಂದ 2 ಸಾವಿರ ರೂ.ಗಳನ್ನು ಗುತ್ತಿಗೆದಾರರು ಕಡಿತ ಮಾಡುವುದರೊಂದಿಗೆ ಕಾರ್ಮಿಕರಿಗೆ ಸಮವಸ್ತ್ರ ನೀಡುವ ಹೆಸರಿನಲ್ಲಿ ದುಪ್ಪಟ್ಟು ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಮುಂದಿನ ಒಂದು ತಿಂಗಳ ಒಳಗಾಗಿ ನೌಕರರ ಈ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಜಿಲ್ಲೆಯ ಎಲ್ಲ ಆಸ್ಪತ್ರೆಗಳ ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿ ಸತ್ಯಾಗ್ರಹ ನಡೆಸಲಾಗುವುದು,'' ಎಂದು ಎಚ್ಚರಿಕೆ ನೀಡಿದರು.

''ಇಂದು ನೈಜವಾಗಿ ಸ್ವಚ್ಛತೆ ಮಾಡುವ ಸಿಬ್ಬಂದಿ ದುಡಿಮೆಗೆ ಬೆಲೆ ಇಲ್ಲದಂತಾಗಿದೆ ಎಂದು ಅವರು, ಸರಕಾರ ಇಂದು ಕಾರ್ಮಿಕರನ್ನು ಜೀತದಾಳುಗಳ ರೀತಿಯಲ್ಲಿ ದುಡಿಸಿಕೊಳ್ಳುತ್ತಿದೆ. ಇದರೊಂದಿಗೆ ಸರಕಾರ ದುಡಿಸಿಕೊಳ್ಳುವ ಕೆಲಸಕ್ಕೆ ಸರಿಯಾದ ವೇತನ ನೀಡಲು ಮೀನಮೇಷ ಎಣಿಸುತ್ತಿದೆ,'' ಎಂದು ಆರೋಪಿಸಿದರು.

ಸದಸ್ಯೆ ಬಿ.ಎಸ್‌.ಮಂಜುಳಾ ಮಾತನಾಡಿ, ''ಕೇಂದ್ರ ಸರಕಾರದ ದೇಶದ ಆರ್ಥಿಕ ಸಾರ್ವಭೌಮತೆಗೆ ಧಕ್ಕೆ ತರುವಂತಹ ನೀತಿಗಳನ್ನು ವಿರೋಧಿಸಿ ಜ. 8, 9ರಂದು ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಸಾರ್ವತ್ರಿಕ ಮುಷ್ಕರಕ್ಕೆ ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿ ಸಂಘ ಸಂಪೂರ್ಣ ಬೆಂಬಲ ನೀಡಲಿದ್ದು, ಅಂದಿನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸ್ವಚ್ಛತಾ ಕಾರ್ಮಿಕರು ಪಾಲ್ಗೊಳ್ಳಲಿದ್ದಾರೆ,'' ಎಂದರು.

ಉಪಾಧ್ಯಕ್ಷೆ ಶಾರದಾ, ಕಾರ್ಯದರ್ಶಿ ಎಚ್‌.ಜಾನಕಿ ಹಾಜರಿದ್ದರು.

ಬೇಡಿಕೆಗಳು

ಸರಕಾರಿ ಆಸ್ಪತ್ರೆಯಲ್ಲಿ ದುಡಿಯುತ್ತಿರುವ ಎಲ್ಲಾ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕು

ಕಾರ್ಮಿಕರ ಪಿ.ಎಫ್‌. ಹಣವನ್ನು ಗುತ್ತಿಗೆದಾರರು ಸಮಯಕ್ಕೆ ಸರಿಯಾಗಿ ಕಟ್ಟಲು ನಿರ್ಬಂಧ ಹೇರಬೇಕು.

ಕಾರ್ಮಿಕರಿಗೆ ವರ್ಷಕ್ಕೆ ಎರಡು ಜತೆ ಸಮವಸ್ತ್ರ ಉಚಿತವಾಗಿ ನೀಡಬೇಕು

ಕಾರ್ಮಿಕರಿಗೆ ಎಲ್ಲಾ ಸರಕಾರಿ ರಜೆ ನೀಡಬೇಕು

ಸರಕಾರ ನಿಗದಿ ಪಡಿಸಿರುವ ನಿಗದಿತ ವೇತನ ನೀಡಬೇಕು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ