ಆ್ಯಪ್ನಗರ

ಮಳೆಗೆ ಕುಶಾಲನಗರ ತತ್ತರ

ಕುಶಾಲನಗರ ಭಾಗದಲ್ಲಿ 4 ದಿನಗಳಿಂದ ಆರ್ಭಟಿಸಿದ ಮಳೆಗೆ ನದಿ ಪಾತ್ರದ ಜನತೆ ತತ್ತರಿಸಿ ಹೋಗಿದ್ದಾರೆ.

Vijaya Karnataka 16 Aug 2018, 5:00 am
ಕುಶಾಲನಗರ
Vijaya Karnataka Web heavy rain kushalanagara in distress
ಮಳೆಗೆ ಕುಶಾಲನಗರ ತತ್ತರ


ಕುಶಾಲನಗರ ಭಾಗದಲ್ಲಿ 4 ದಿನಗಳಿಂದ ಆರ್ಭಟಿಸಿದ ಮಳೆಗೆ ನದಿ ಪಾತ್ರದ ಜನತೆ ತತ್ತರಿಸಿ ಹೋಗಿದ್ದಾರೆ.

ಒಂದೆಡೆ ಕಾವೇರಿ ನದಿಯಲ್ಲಿ ನೀರಿನ ಹರಿವು ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದ್ದು, ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾರಣ ತಗ್ಗು ಪ್ರದೇಶಗಳ ಹೊಲ, ಗದ್ದೆ, ತೋಟ, ಬಡಾವಣೆ, ಮನೆಗಳಿಗೆ ನೀರು ನುಗ್ಗಿದೆ.

ಹಾರಂಗಿ ಜಲಾಶಯದಿಂದ ಮಂಗಳವಾರ ಸಂಜೆ ದಾಖಲೆ ಪ್ರಮಾಣದ 45 ಸಾವಿರ ಕ್ಯೂಸೆಕ್‌ ನೀರು ನದಿಗೆ ಹರಿಸಿದ ಪರಿಣಾಮ ಒತ್ತಡ ಏರ್ಪಟ್ಟು ಕಾವೇರಿ ನದಿ ನೀರಿನ ಹರಿವಿಗೆ ಅಡ್ಡಿಯುಂಟಾಗಿದೆ. ಸುಗಮವಾಗಿ ಮುಂದಕ್ಕೆ ಹರಿಯಲು ಸಾಧ್ಯವಾಗದೆ ಉಕ್ಕಿ ಹರಿದು ತಗ್ಗು ಪ್ರದೇಶಗಳಿಗೆ ನುಗ್ಗುತ್ತಿದೆ. ಇದರಿಂದ ನದಿ ತಟದಲ್ಲಿರುವ ಪಟ್ಟಣದ ಸಾಯಿ ಬಡಾವಣೆ, ಕುವೆಂಪು ಬಡಾವಣೆ, ಇಂದಿರಾ ಬಡಾವಣೆ ಬಹುತೇಕ ಜಲಾವೃತಗೊಂಡಿವೆ.

ಸಾಯಿ ಬಡಾವಣೆಯ 50ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದ್ದು , ಮಂಗಳವಾರ ಸಂಜೆಯಿಂದಲೇ ಸ್ಥಳಾಂತರ ಕಾರ್ಯ ಆರಂಭವಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವ ಬಗ್ಗೆ ಸ್ಥಳೀಯ ಆಡಳಿತ ಮತ್ತು ತಾಲೂಕು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಉಳಿದಂತೆ ಕುವೆಂಪು ಬಡಾವಣೆ, ಇಂದಿರಾ ಬಡಾವಣೆಯ 50ಕ್ಕೂ ಅಧಿಕ ಮನೆಗಳು ಭಾಗಶಃ ಮುಳಗಡೆಗೊಂಡಿವೆ. ಸಂತ್ರಸ್ತರನ್ನು ರಾರ‍ಯಫ್ಟರ್‌ಗಳ ಮೂಲಕ ಸ್ಥಳಾಂತರಿಸುವ ಕಾರ್ಯ ನಡೆಯಿತು. ಉಳಿದಂತೆ ಸಮೀಪದ ಗಂಧದಕೋಟೆ ಬಳಿ ಕೂಡ ನದಿ ಉಕ್ಕಿ ಹರಿದು ಮತ್ತೊಂದು ಭಾಗಕ್ಕೂ ವ್ಯಾಪಿಸಿರುವ ಕಾರಣ ಕೂರ್ಗ್‌ ಪಾಲ್ಮ್‌ ನರ್ಸರಿ, ಕೂರ್ಗ್‌ ಹಾಲಿಡೆ ಹೋಂಸ್ಟೆ ಮುಳುಗಡೆಗೊಂಡಿದ್ದು, ಮಹಮ್ಮದ್‌ ಶರೀಫ್‌, ವಿಶಾಲಾಕ್ಷಿ, ರಾಜೇಶ್‌, ಪೊನ್ನಪ್ಪ, ಪ್ರಕಾಶ್‌ ಸೇರಿದಂತೆ 15ಕ್ಕೂ ಅಧಿಕ ನಿವಾಸಿಗಳ ಮನೆಗಳು ಜಲಾವೃತಗೊಂಡಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ