ಆ್ಯಪ್ನಗರ

ಕೊಡಗಿನ ಕಾಫಿ ತೋಟದಲ್ಲಿ ಕಾಡಾನೆ ಅಸ್ವಸ್ಥ: ಜೀವನ್ಮರಣ ಸ್ಥಿತಿಯಲ್ಲಿ ಹೆಣ್ಣಾನೆ ಒದ್ದಾಟ

ಅಸ್ವಸ್ಥಗೊಂಡು ಕುಸಿದು ಬಿದ್ದ ಹೆಣ್ಣಾನೆ, ಆ ಜಾಗದಿಂದ ಸುಮಾರು 100 ಮೀಟರ್‌ ತೆವಳಿಕೊಂಡು ಸಾಗಿದ್ದು, ಈವರೆಗೆ ಮೇಲೇಳಲು ಸಾಧ್ಯವಾಗಿಲ್ಲ. ಒಮ್ಮೆ ಮೇಲೆದ್ದು ನಿಂತರೂ ತ್ರಾಣವಿಲ್ಲದೆ ಮತ್ತೆ ಕುಸಿದು ಬೀಳುತ್ತಿದೆ

Vijaya Karnataka Web 19 Dec 2019, 8:26 pm
ಕೊಡಗು: ಕಾಡಿನಿಂದ ಆಹಾರ ಅರಸಿ ಕಾಫಿ ತೋಟಕ್ಕೆ ಬಂದಿದ್ದ ಕಾಡಾನೆಯೊಂದು ನಿತ್ರಾಣಗೊಂಡು ಮೂರು ದಿನಗಳಿಂದ ಕಾಫಿ ತೋಟದಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತ್ತಿದೆ. ಕೊಡಗು ಜಿಲ್ಲೆಯ ವಾಲ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ಯಾಗತ್ತೂರು ರವಿ ಪೊನ್ನಪ್ಪ ಎಂಬುವರಿಗೆ ಸೇರಿದ ಕಾಫಿ ತೋಟದಲ್ಲಿ ಆನೆ ಅಸ್ವಸ್ಥಗೊಂಡಿದೆ. ಸಾವು ಬದುಕಿನ ನಡುವೆ ಕಾಡಾನೆ ಹೋರಾಟ ನಡೆಸುತ್ತಿದ್ದು, ಅರಣ್ಯ ಇಲಾಖೆಯಿಂದ ಚಿಕಿತ್ಸೆ ನೀಡುವ ಕಾರ್ಯ ಮುಂದುವರಿದಿದೆ.
Vijaya Karnataka Web ಕೊಡಗಿನ ಕಾಫಿ ತೋಟದಲ್ಲಿ ಕಾಡಾನೆ ಅಸ್ವಸ್ಥ: ಜೀವನ್ಮರಣ ಸ್ಥಿತಿಯಲ್ಲಿ ಹೆಣ್ಣಾನೆ ಒದ್ದಾಟ


ಅಸ್ವಸ್ಥಗೊಂಡು ಕುಸಿದು ಬಿದ್ದ ಹೆಣ್ಣಾನೆ, ಆ ಜಾಗದಿಂದ ಸುಮಾರು 100 ಮೀಟರ್‌ ತೆವಳಿಕೊಂಡು ಸಾಗಿದ್ದು, ಈವರೆಗೆ ಮೇಲೇಳಲು ಸಾಧ್ಯವಾಗಿಲ್ಲ. ಒಮ್ಮೆ ಮೇಲೆದ್ದು ನಿಂತರೂ ತ್ರಾಣವಿಲ್ಲದೆ ಮತ್ತೆ ಕುಸಿದು ಬೀಳುತ್ತಿದೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನು ಮೇಲೆತ್ತಲು ದುಬಾರೆಯಿಂದ ನಾಲ್ಕು ಸಾಕಾನೆಗಳನ್ನು ತರಿಸಿದ್ದಾರೆ. ಅವುಗಳೂ ನಿತ್ರಾಣಗೊಂಡ ಆನೆಯನ್ನು ಮೇಲೇಳಿಸಲು ಸಾಧ್ಯವಾಗದೆ ಅಸಹಾಯಕ ಸ್ಥಿತಿ ಅನುಭವಿಸುತ್ತಿವೆ. ಬಿದ್ದಿರುವ ಆನೆಯನ್ನು ಎತ್ತಲು ಹಲವು ಬಾರಿ ಸಾಕಾನೆಗಳು ಪ್ರಯತ್ನಿಸಿದರೂ ಈ ಆನೆಗಳ ಪ್ರಯತ್ನ ಸಫಲಗೊಂಡಿಲ್ಲ.

ಆರ್‌ಎಫ್‌ಒ ಅನನ್ಯಕುಮಾರ್‌, ವೈದ್ಯಾಧಿಕಾರಿ ಮುಜೀಬ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಕ್ಷ ಣ ಚಿಕಿತ್ಸೆ ಮುಂದುವರಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಬಾಳೆಹಣ್ಣು, ನೀರು, ಭತ್ತದ ಹುಲ್ಲು ಸೇರಿದಂತೆ ಆಹಾರ ಪದಾರ್ಥಗಳನ್ನು ನೀಡಿದರೂ ಚೇತರಿಸಿಕೊಳ್ಳದ ಕಾಡಾನೆಗೆ ಗ್ಲುಕೋಸ್‌ ನೀಡಿ ಚಿಕಿತ್ಸೆ ಮುಂದುವರಿಸಿದ್ದಾರೆ. ಚಿಕಿತ್ಸೆ ನಂತರ ಆನೆ ಒಂದು ಬಾರಿ ಚೇತರಿಸಿಕೊಂಡಂತೆ ಕಂಡರೂ ಮತ್ತೆ ಕುಸಿದು ಬೀಳುತ್ತಿದೆ.

ವಿಡಿಯೋ: ಆಪರೇಷನ್ ಪುಂಡಾನೆ ಸಕ್ಸಸ್! 24 ವರ್ಷದ ಆನೆ ಸೆರೆಗೆ 50 ಜನರ ಹರಸಾಹಸ!

ಸಾರ್ವಜನಿಕರ ಅಸಮಾಧಾನ: ಕಾಡಾನೆಗಳು ಸಮೀಪದ ದುಬಾರೆ ಅರಣ್ಯ ಪ್ರದೇಶದಿಂದ ಕಾವೇರಿ ನದಿ ದಾಟಿ ಕಾಫಿ ತೋಟಕ್ಕೆ ಬರುತ್ತಿವೆ. ಈ ಭಾಗದಲ್ಲಿ ಸುಮಾರು 10ರಿಂದ 25 ಕಾಡಾನೆಗಳ ಹಿಂಡು ಇದೆ. ಈ ಆನೆಗಳ ಕಾಟಕ್ಕೆ ನಲುಗಿರುವ ಇಲ್ಲಿನ ರೈತರು ಗದ್ದೆಯಲ್ಲಿ ಬೆಳೆ ಬೆಳೆಯುವುದನ್ನೇ ಬಿಟ್ಟಿದ್ದಾರೆ. ಕಾಡಾನೆಗಳ ದಾಳಿಯ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಸೋಲಾರ್‌ ಬೇಲಿ, ರೈಲ್ವೆ ಕಂಬಿ ಅಳವಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಭಾಗದ ಜನರು ಮಾತ್ರ ಆನೆ ಕಾಟದಿಂದ ತೊಂದರೆಗೊಳಗಾಗುತ್ತಿದ್ದು, ಸಮಸ್ಯೆಗೆ ಮುಕ್ತಿ ದೊರಕಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವಿಡಿಯೋ: ಕೊಡಗಿನಲ್ಲಿ ಜನವಸತಿ ಪ್ರದೇಶಕ್ಕೆ ನುಗ್ಗಿದ ಕಾಡಾನೆ ಹಿಂಡು: ಗ್ರಾಮಸ್ಥರಿಗೆ ಗಾಬರಿ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ