ಆ್ಯಪ್ನಗರ

ಕೊಡಗಿನಲ್ಲಿ ಮುದ್ರಾ ಯೋಜನೆಗಿಲ್ಲ ಉತ್ತೇಜನ: ಫಲಾನುಭವಿಗಳಿಂದ ಮರು ಪಾವತಿಗೆ ನಿರಾಸಕ್ತಿ

ಸ್ವಾವಲಂಬಿ ಜೀವನ ನಡೆಸಲು ಉಪಯೋಗವಾಗುವ ಮುದ್ರಾ ಯೋಜನೆಯ ಯಶಸ್ಸಿಗೆ ಕೊಡಗಿನಲ್ಲಿ ಬ್ಯಾಂಕ್‌ಗಳಿಂದ ನಿರೀಕ್ಷಿತ ಸ್ಪಂದನೆ ಸಿಗುತ್ತಿಲ್ಲ. ಸಾಲಕ್ಕಾಗಿ ಬ್ಯಾಂಕ್‌ಗಳಿಗೆ ಅರ್ಜಿ ಹಾಕಿದರೆ ದಾಖಲೆಗಳಿಗಾಗಿ ಅಲೆದಾಡಿಸಲಾಗುತ್ತದೆ. ಅಧಿಕಾರಿಗಳು ಕೇಳಿದ ಎಲ್ಲಾ ದಾಖಲೆಗಳನ್ನು ನೀಡಿದರೂ ಕ್ಷುಲ್ಲಕ ಕಾರಣ ಕೊಟ್ಟು ನಿರಾಕರಿಸಲಾಗುತ್ತಿದೆ.

Vijaya Karnataka Web 21 May 2020, 9:14 am
ಸುನಿಲ್‌ ಪೊನ್ನೇಟಿ ಮಡಿಕೇರಿ
Vijaya Karnataka Web mudra yojana

ಮಡಿಕೇರಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ 'ಮುದ್ರಾ' ಯೋಜನೆಗೆ ಕೊಡಗಿನ ಬ್ಯಾಂಕ್‌ಗಳಿಂದ ನಿರೀಕ್ಷಿತ ಮಟ್ಟದಲ್ಲಿ ಉತ್ತೇಜನ ಸಿಗುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

ಯೋಜನೆಯಡಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದರೆ ಒಂದಿಲ್ಲೊಂದು ನೆಪ ಹೇಳಿ ನಿರಾಕರಿಸಲಾಗುತ್ತಿದೆ. ಆರಂಭದಲ್ಲಿ ಮುದ್ರಾ ಯೋಜನೆಯ ಲಾಭ ಪಡೆದುಕೊಂಡ ಬಹುತೇಕ ಫಲಾನುಭವಿಗಳು ಮರು ಪಾವತಿ ಬಗ್ಗೆ ನಿರಾಸಕ್ತಿ ತೋರಿಸುತ್ತಿರುವುದೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ.

ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆಗಳಿಗೆ ಬಲ ನೀಡುವ ಉದ್ದೇಶದಿಂದ 2015 ಏಪ್ರಿಲ್‌ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮುದ್ರಾ ಯೋಜನೆ ಪ್ರಕಟಿಸಿದರು. ಪಿಎಸ್‌ಯು ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಮತ್ತು ಸಹಕಾರಿ ಬ್ಯಾಂಕುಗಳು, ಖಾಸಗಿ ವಲಯದ ಬ್ಯಾಂಕ್‌, ವಿದೇಶಿ ಬ್ಯಾಂಕುಗಳು, ಕಿರು ಹಣಕಾಸು ಸಂಸ್ಥೆಗಳು, ನಾನಾ ಬ್ಯಾಂಕಿಂಗ್‌ ಹಣಕಾಸು ಕಂಪನಿಗಳ ಮೂಲಕ 50 ಸಾವಿರದಿಂದ ಹತ್ತು ಲಕ್ಷ ರೂ.ವರೆಗೂ ಸಾಲ ಪಡೆಯಲು ಈ ಯೋಜನೆ ಅನುಕೂಲ ಮಾಡಿಕೊಡುತ್ತದೆ.

ಈ ಹಿಂದೆ ಸಾಲ ತೆಗೆದುಕೊಂಡ ಬಹುತೇಕ ಫಲಾನುಭವಿಗಳು ಮರು ಪಾವತಿ ಬಗ್ಗೆ ನಿರಾಸಕ್ತಿ ತೋರಿಸುತ್ತಿದ್ದಾರೆ. ಇದು ಕೇಂದ್ರ ಸರಕಾರದ ಯೋಜನೆ ಆಗಿರುವುದರಿಂದ ಹಿಂದೊಮ್ಮೆ ಜನಾರ್ಧನ ಪೂಜಾರಿ ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಕೊಡಿಸಿದ್ದ ಸಾಲಗಳು ಮನ್ನಾ ಆದ ರೀತಿಯಲ್ಲಿ ಮುದ್ರಾ ಯೋಜನೆಯ ಸಾಲವೂ ಮನ್ನಾ ಆಗಬಹುದು ಎನ್ನುವ ನಿರೀಕ್ಷೆಯಲ್ಲಿ ಸಾಲ ಪಡೆದವರು ಇರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಹಾಗಾಗಿ ತಾವು ಕೊಟ್ಟ ಹಣ ಮರಳಿ ಬರುವ ಬಗ್ಗೆ ಬ್ಯಾಂಕ್‌ ಅಧಿಕಾರಿಗಳು ನಂಬಿಕೆ ಕಳೆದುಕೊಂಡಿದ್ದು, ಹೊಸದಾಗಿ ಸಾಲ ಕೊಡಲು ಹಿಂಜರಿಯುತ್ತಿದ್ದಾರೆ.

ಹಾಲಿ ಫಲಾನುಭವಿಗಳು ಮಾಡುತ್ತಿರುವ ತಪ್ಪು ಈಗ ಹೊಸದಾಗಿ ಸಾಲ ಪಡೆಯಲು ಪ್ರಯತ್ನಿಸುತ್ತಿರುವವರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುತ್ತೇವೆ ಎಂದು ಬ್ಯಾಂಕ್‌ ಅಧಿಕಾರಿಗಳನ್ನು ಪರಿ ಪರಿಯಾಗಿ ಮನವೊಲಿಸಲು ನೋಡಿದರೂ ಯೋಜನೆಯ ಹೊಸ ಸಾಲಗಳು ಮಂಜೂರಾಗುತ್ತಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕೆಡಿಪಿ ಸಭೆಗಳಲ್ಲಿ ಹಲವಾರು ಬಾರಿ ವಿಷಯ ಪ್ರಸ್ತಾಪವಾದರೂ ಪ್ರಯೋಜನವಾಗಿಲ್ಲ. ಕೊಟ್ಟ ಸಾಲ ಮರಳಿ ಬಾರದಿದ್ದರೆ ಕೆಲಸಕ್ಕೆ ಕುತ್ತು ಬರುವ ಸಾಧ್ಯತೆ ಇರುವುದರಿಂದ ಬ್ಯಾಂಕ್‌ ಅಧಿಕಾರಿಗಳೂ ಕಠಿಣ ನಿರ್ಧಾರಕ್ಕೆ ಅಂಟಿಕೊಂಡಿದ್ದಾರೆ.

ಕೊಡಗಿನಲ್ಲಿಮುದ್ರಾ ಯೋಜನೆಯ ಒಟ್ಟು ಫಲಾನುಭವಿಗಳು: 13,946
ಕೊಡಗಿನಲ್ಲಿ ವಿತರಣೆಯಾಗಿರುವ ಒಟ್ಟು ಸಾಲ - 170.63 ಕೋಟಿ ರೂ.


ಈಗಾಗಲೇ ಸ್ಟುಡಿಯೋ ನಡೆಸುತ್ತಿದ್ದೇನೆ. ಅದನ್ನು ಮತ್ತಷ್ಟು ವಿಸ್ತರಿಸಿ ವಿಡಿಯೊ ಎಡಿಟಿಂಗ್‌ ಸೂಟ್‌, ಪ್ರಿಂಟಿಂಗ್‌ ಪ್ರೆಸ್‌ ಆರಂಭಿಸಲು ನಿರ್ಧರಿಸಿದ್ದೆ. ಈ ಹಿನ್ನೆಲೆಯಲ್ಲಿಮುದ್ರಾ ಯೋಜನೆ ಅಡಿಯಲ್ಲಿಸಾಲಕ್ಕೆ ಅರ್ಜಿ ಹಾಕಿದರೆ ಪ್ರಯೋಜನವಾಗಿಲ್ಲ. ಈ ಮೊದಲು ಸಾಲ ಪಡೆದುಕೊಂಡವರು ಮರು ಪಾವತಿ ಮಾಡದಿರುವುದರಿಂದ ನಮ್ಮನ್ನೂ ಅಪನಂಬಿಕೆಯಿಂದ ನೋಡಲಾಗುತ್ತಿದೆ.
- ಹೆಸರು ಹೇಳಲು ಇಚ್ಛಿಸದ ಫೋಟೋಗ್ರಾಫರ್‌

ಮುದ್ರಾ ಯೋಜನೆಯ ಹಾಲಿ ಫಲಾನುಭವಿಗಳಲ್ಲಿಹೆಚ್ಚಿನವರು ಮರು ಪಾವತಿ ಬಗ್ಗೆ ಯೋಚಿಸುತ್ತಿಲ್ಲ. ಈ ಸಾಲ ಯಾವುದೇ ಕಾರಣಕ್ಕೂ ಮನ್ನಾ ಆಗುವುದಿಲ್ಲ. ಹಾಗಾಗಿ ಆದಷ್ಟು ಶೀಘ್ರ ಮರು ಪಾವತಿ ಮಾಡಲಿ. ಇದರಿಂದ ಹೊಸದಾಗಿ ಸಾಲ ಪಡೆಯುವವರಿಗೆ ಅನುಕೂಲ ಆಗುತ್ತದೆ.
-ಆರ್‌.ಕೆ. ಬಾಲಚಂದ್ರ, ವ್ಯವಸ್ಥಾಪಕರು, ಜಿಲ್ಲಾ ಲೀಡ್‌ ಬ್ಯಾಂಕ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ