ಆ್ಯಪ್ನಗರ

ದುಬಾರೆಯಲ್ಲಿ ಇಂದಿನಿಂದ ಮತ್ತೆ ರ‍್ಯಾಫ್ಟಿಂಗ್‌

ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ದುಬಾರೆಯಲ್ಲಿ 5 ತಿಂಗಳಿಂದ ಸ್ಥಗಿತಗೊಂಡಿದ್ದ ರಿವರ್‌ ರ‍್ಯಾಫ್ಟಿಂಗ್‌ ಭಾನುವಾರದಿಂದ ಪುನರ್‌ ಆರಂಭಗೊಳ್ಳಲಿದೆ ಎಂದು ರಿವರ್‌ ರ‍್ಯಾಫ್ಟಿಂಗ್‌ ಅಸೋಸಿಯೇಷನ್‌ ಪ್ರಮುಖರು ತಿಳಿಸಿದ್ದಾರೆ.

Vijaya Karnataka 5 Aug 2018, 7:31 am
ಕುಶಾಲನಗರ( ಕೊಡಗು ): ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ದುಬಾರೆಯಲ್ಲಿ 5 ತಿಂಗಳಿಂದ ಸ್ಥಗಿತಗೊಂಡಿದ್ದ ರಿವರ್‌ ರ‍್ಯಾಫ್ಟಿಂಗ್‌ ಭಾನುವಾರದಿಂದ ಪುನರ್‌ ಆರಂಭಗೊಳ್ಳಲಿದೆ ಎಂದು ರಿವರ್‌ ರ‍್ಯಾಫ್ಟಿಂಗ್‌ ಅಸೋಸಿಯೇಷನ್‌ ಪ್ರಮುಖರು ತಿಳಿಸಿದ್ದಾರೆ.
Vijaya Karnataka Web rafting


ದುಬಾರೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದ ಅಸೋಸಿಯೇಷನ್‌ ಮಾಜಿ ಅಧ್ಯಕ್ಷ ಕೆ.ಎಸ್‌.ರತೀಶ್‌, ''ದುಬಾರೆಯಲ್ಲಿ ನಡೆದ ಅಹಿತಕರ ಘಟನೆಯಿಂದ ಜಿಲ್ಲೆಯಲ್ಲಿ ರಾಫ್ಟಿಂಗ್‌ ಕ್ರೀಡೆಗೆ ಜಿಲ್ಲಾಡಳಿತ ತಡೆ ನೀಡಿತ್ತು. ಈ ಉದ್ಯಮವನ್ನು ನಂಬಿ ಜೀವನ ಕಟ್ಟಿಕೊಂಡಿದ್ದ ನೌಕರರ ಕುಟುಂಬ ಬೀದಿ ಪಾಲಾಗಿತ್ತು. ಹಲವರು ಕಾಫಿ ತೋಟಗಳಲ್ಲಿ ದಿನಗೂಲಿ ನೌಕರರಾಗಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದಾರೆ.

ಈ ಸ್ಥಿತಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌ ಅವರ ಗಮನ ತರಲಾಯಿತು. ಸ್ಥಳೀಯರ ದಯನೀಯ ಸ್ಥಿತಿ ಕಂಡು ಉದ್ಯಮ ಪುನರಾರಂಭಿಸಲು ಸಚಿವರು ಗ್ರೀನ್‌ ಸಿಗ್ನಲ್‌ ನೀಡಿ ಜಿಲ್ಲಾಡಳಿತಕ್ಕೆ ಮೌಖಿಕ ಆದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ನಿರ್ದೇಶನದಂತೆ ರಿವರ್‌ ರಾಫ್ಟಿಂಗ್‌ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿಯನ್ವಯ ಕಾನೂನು ಚೌಕಟ್ಟಿನಲ್ಲಿ ಮುನ್ನಡೆಸಿಕೊಂಡು ಹೋಗಲಾಗುವುದು. ಉದ್ಯಮಕ್ಕೆ ಪೂರಕವಾಗಿ ಅವಶ್ಯಕತೆಯಿರುವ ಅಗತ್ಯ ದಾಖಲೆಗಳನ್ನು ರಾಫ್ಟ್‌ ಮಾಲೀಕರು ಹೊಂದಿದ್ದು , ಹೆಚ್ಚುವರಿ ದಾಖಲೆಗಳನ್ನು 1 ತಿಂಗಳೊಳಗೆ ಸಂಗ್ರಹಿಸಲಾಗುವುದು,'' ಎಂದು ತಿಳಿಸಿದರು.

ಪ್ರಮುಖರಾದ ಸಿ.ಎಲ್‌.ವಿಶ್ವ ಮಾತನಾಡಿ, ''ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಜಿಲ್ಲೆಯಲ್ಲಿ ಎರಡು ಕೇಂದ್ರಗಳಲ್ಲಿ ರಾಫ್ಟಿಂಗ್‌ ಪುನರಾರಂಭಿಸಲು ಅನುಮತಿ ದೊರೆತಿದೆ. ದುಬಾರೆಯಿಂದ 7 ಕಿ.ಮೀ. ನದಿಯಲ್ಲಿ ರಾಫ್ಟಿಂಗ್‌ ಆರಂಭಿಸಲಾಗುತ್ತಿದ್ದು, ಭಾನುವಾರ ನಂಜುಂಡೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅಧಿಕೃತವಾಗಿ ರಾಫ್ಟಿಂಗ್‌ ಕ್ರೀಡೆ ಆರಂಭಿಸಲಾಗುವುದು,'' ಎಂದು ತಿಳಿಸಿದರು.

ಸಭೆಯಲ್ಲಿ ಅಸೋಸಿಯೇಷನ್‌ ಅಧ್ಯಕ್ಷ ಕೃಷ್ಣಪ್ಪ, ಪ್ರಮುಖರಾದ ಉತ್ತಪ್ಪ, ಚೇತನ್‌, ಆರ್‌.ಕೆ.ಚಂದ್ರ, ವಸಂತ್‌, ಕೆ.ಜಿ.ನವೀನ್‌, ದಾಮೋದರ್‌ ಇದ್ದರು.

ದುಬಾರೆ ರಾಫ್ಟಿಂಗ್‌ ವಿಷಯಕ್ಕೆ ಸಂಬಂಧಿಸಿದ ವಿವಾದ ಗಮನಕ್ಕೆ ಬಂದಿದ್ದು, ಈ ಕುರಿತು ಜಿಲ್ಲಾಧಿಕಾರಿಯೊಂದಿಗೆ ಚರ್ಚೆ ನಡೆಸಿದ್ದೇನೆ. ಮುಂದಿನ ತೀರ್ಮಾನದವರೆಗೆ ಈ ಹಿಂದಿನ ಸ್ಥಿತಿಯನ್ನು ಮುಂದುವರಿಸುವಂತೆ ಸೂಚಿಸಿದ್ದೇನೆ.

- ಸಾ.ರಾ. ಮಹೇಶ್‌, ಜಿಲ್ಲಾ ಉಸ್ತುವಾರಿ ಸಚಿವ (ಶುಕ್ರವಾರ ಮಡಿಕೇರಿಯಲ್ಲಿ ಹೇಳಿದ್ದು)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ