ಆ್ಯಪ್ನಗರ

ಅಶಕ್ತರಿಗೆ ಸೌಲಭ್ಯ ಕಲ್ಪಿಸದಿದ್ದಲ್ಲಿ ಅಮಾನತು: ಎಚ್ಚರಿಕೆ

ಅಶಕ್ತರಿಗೆ ಸರಕಾರದ ಸೌಲಭ್ಯ ಕಲ್ಪಿಸದಿದ್ದಲ್ಲಿ ಅಮಾನತು ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

Vijaya Karnataka 4 Aug 2018, 5:00 am
ಮಡಿಕೇರಿ: ಅಶಕ್ತರಿಗೆ ಸರಕಾರದ ಸೌಲಭ್ಯ ಕಲ್ಪಿಸದಿದ್ದಲ್ಲಿ ಅಮಾನತು ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
Vijaya Karnataka Web MDK-mdk3jay9


ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ನಂತರ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಅವರು ಅಧಿಕಾರಿಗಳ ಸಭೆ ನಡೆಸಿ, ಕೆಲವು ಅಧಿಕಾರಿಗಳ ಕಾರ್ಯವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಸರಕಾರ ದುರ್ಬಲರಿಗೆ, ಅಶಕ್ತರಿಗಾಗಿ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ. ಆದರೆ, ಅಧಿಕಾರಿಗಳು ನಿರ್ಲಕ್ಷ ್ಯ ತೋರುತ್ತಿದ್ದಾರೆ. ಅದರಲ್ಲಿಯೂ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ, ಸಂಧ್ಯಾ ಸುರಕ್ಷಾ ವೇತನಗಳಿಗೆ ಸಾಕಷ್ಟು ಮಂದಿ ಅರ್ಜಿ ಹಾಕಿದ್ದರೂ ಅಧಿಕಾರಿಗಳು ತಿರಸ್ಕರಿಸುತ್ತಿದ್ದಾರೆ. ಈ ಕುರಿತು ತಾನು ಸದ್ಯದಲ್ಲಿಯೇ ತಾಲೂಕುವಾರು ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸುತ್ತೇನೆ. ಇನ್ನು ಒಂದು ತಿಂಗಳ ಒಳಗಾಗಿ ಉಪವಿಭಾಗಾಧಿಕಾರಿ ಇದರ ಜವಾಬ್ದಾರಿ ಹೊತ್ತು ಅಧಿಕಾರಿಗಳಿಂದ ಕೆಲಸ ಮಾಡಿಸಬೇಕು. ಒಂದು ತಿಂಗಳ ನಂತರ ಅರ್ಹರು ತನ್ನ ಬಳಿ ಈ ಸೌಲಭ್ಯ ನೀಡಲಿಲ್ಲ ಎಂದು ದೂರು ನೀಡಿದಲ್ಲಿ ಸಂಬಂಧಿಸಿದ ಗ್ರಾಮಲೆಕ್ಕಿಗ ಹಾಗೂ ಕಂದಾಯ ನಿರೀಕ್ಷ ಕರನ್ನು ಅಮಾನತು ಮಾಡುವುದಾಗಿ ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಅಧಿಕಾರಿಗಳು ಗಂಭೀರವಾಗಿ ಕೆಲಸ ನಿರ್ವಹಿಸಬೇಕು. ಜಿಲ್ಲಾಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಉಳಿದವರು ಬೆಂಬಲ ನೀಡಬೇಕು. ತನ್ನ ಗಮನಕ್ಕೆ ಬಾರದೆ ಯಾರನ್ನೂ ಜಿಲ್ಲೆಯಿಂದ ರಿಲೀವೂ ಮಾಡಬಾರದು. ಜಿಲ್ಲೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇರುವುದು ತನ್ನ ಗಮನಕ್ಕೆ ಬಂದಿದೆ. ಇವುಗಳ ನೇಮಕ ಆಗುವ ತನಕ ಯಾರನ್ನೂ ಬೇರೆಡೆ ತೆರಳಲು ಬಿಡಬಾರದು ಎಂದು ಹೇಳಿದರು.

ಮನೆ ನಿರ್ಮಾಣಕ್ಕೆ ಅನುಮತಿ: ಜಿಲ್ಲೆಯಲ್ಲಿ ಮನೆಗಳ ಆಧುನೀಕರಣಕ್ಕೆ ಹಾಗೂ ಹಳೆಯ ಮನೆಗಳನ್ನು ಕೆಡವಿ ಹೊಸ ಮನೆಗಳನ್ನು ನಿರ್ಮಿಸಲು ಅನುಮತಿ ನೀಡುತ್ತಿಲ್ಲ ಎಂದು ಶಾಸಕ ಕೆ.ಜಿ.ಬೋಪಯ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ ಮುಡಾ ಅಧಿಕಾರಿಯಿಂದ ಸಚಿವರು ಸ್ಪಷ್ಟನೆ ಕೋರಿದರು. ಪರವಾನಗಿ ನೀಡುವ ಸಂದರ್ಭ ಭೂ ಪರಿವರ್ತನೆ ಆಗಬೇಕಿದೆ. ಅಲ್ಲದೆ ಜಮಾಬಂದಿ ಅಗತ್ಯ ಇದೆ ಎಂದು ಅಧಿಕಾರಿ ಹೇಳಿದಾಗ ಶಾಸಕರು ಹಾಗೂ ಸಚಿವರು ಅಧಿಕಾರಿಯ ಕ್ರಮವನ್ನು ಆಕ್ಷೇಪಿಸಿದರು. ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಕೂಡ ಸ್ಪಷ್ಟನೆ ನೀಡಲು ಮುಂದಾದರು. ಈ ಸಂದರ್ಭ ಮಾತನಾಡಿದ ಸಚಿವರು, ಇದು ಕೇವಲ ಕೊಡಗಿನಲ್ಲಿ ಮಾತ್ರ ಅಲ್ಲ. ರಾಜ್ಯದೆಲ್ಲೆಡೆ ಈ ಸಮಸ್ಯೆ ಇದೆ. ಈ ಕುರಿತು ಶೀಘ್ರದಲ್ಲಿ ಸಂಬಂಧಿಸಿದ ಇಲಾಖೆಯಿಂದ ಆದೇಶ ಹೊರಡಿಸುವ ವ್ಯವಸ್ಥೆ ಮಾಡುತ್ತೇನೆ. 1976ರ ಹಿಂದೆ ನಿರ್ಮಾಣವಾದ ಮನೆಗಳನ್ನು ನವೀಕರಣಕ್ಕೆ ಹಾಗೂ ಹೊಸದಾಗಿ ನಿರ್ಮಿಸಲು ಅನುಮತಿ ಕೇಳಿದಲ್ಲಿ ಯಾವುದೇ ರೀತಿ ತೊಂದರೆ ನೀಡದೆ ಅನುಮತಿ ಕೊಡಿ ಎಂದು ಸೂಚನೆ ನೀಡಿದರು. ಅವರು ಕಂದಾಯ ಕಟ್ಟುತ್ತಿದ್ದಾರೆ, ಖಾತೆ ಇದೆ. ಆದರೂ, ನಿಮಗೆ ಅನುಮತಿ ನೀಡಲು ಏನು ತೊಂದರೆ ಎಂದು ಸಚಿವರು ಆಕ್ಷೇಪಿಸಿದರು. ಶಾಸಕ ಕೆ.ಜಿ.ಬೋಪಯ್ಯ ಹಿತ್ಲು ಮನೆ ದಳ ಎಂದರೆ ಏನು ಎನ್ನುವುದು ತಿಳಿದಿದೆಯೇ? ಹಿತ್ಲು ಮನೆ ದಳ ಎಂದು ದಾಖಲೆಯಲ್ಲಿ ಇದ್ದಲ್ಲಿ ಅದು ಭೂಪರಿವರ್ತನೆ ಆಗಿದೆ ಎಂದು ಅರ್ಥ. ಮೊದಲು ಕಾನೂನನ್ನು ಸರಿಯಾಗಿ ಓದಿ ಎಂದು ಹೇಳಿದರು. ಈ ಸಂದರ್ಭ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳ ವರ್ತನೆಯನ್ನು ಶಾಸಕರು ಖಂಡಿಸಿದರೆ, ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಸಮರ್ಥನೆ ಮಾಡಿಕೊಳ್ಳಲು ಯತ್ನಿಸಿದರು.

ಶಕ್ತಿ ಇರುವವರು ನಿಮ್ಮ ಅನುಮತಿ ಕೇಳದೆ ಮನೆ ನಿರ್ಮಿಸಿಕೊಂಡಿರುತ್ತಾರೆ. ಹೋಂಸ್ಟೇಗೆ ಅನುಮತಿ ಪಡೆಯದೆ ನಾಲ್ಕೈದು ಹೋಂಸ್ಟೇಗಳನ್ನು ಕಟ್ಟಿಕೊಂಡಿರುತ್ತಾರೆ. ಆದರೆ, ಸಾಲ ಹಾಗೂ ಇನ್ನಿತರ ಕಾರಣಗಳಿಂದ ಪ್ರಾಮಾಣಿಕವಾಗಿ ಅನುಮತಿ ಕೇಳಿದರೆ ಅವರಿಗೆ ನೀವು ತೊಂದರೆ ಕೊಡುತ್ತೀರಿ ಎಂದು ಮುಡಾ ಅಧಿಕಾರಿಯನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಚರ್ಚೆ ನಡೆಸಿದ ಸಚಿವರು ಸಮಸ್ಯೆಯನ್ನು ಗಮನಕ್ಕೆ ತಂದರು. ಅಲ್ಲದೆ, ಕೂಡಲೇ ಅಧಿಕಾರಿಗಳಿಗೆ ಸೂಕ್ತ ಆದೇಶ ನೀಡುವಂತೆ ಸೂಚನೆ ನೀಡಿದರು.

ಪರಿಹಾರ ನೀಡದ್ದಕ್ಕೆ ಆಕ್ಷೇಪ:
ಅತಿವೃಷ್ಟಿ ಪರಿಹಾರ ನಿಧಿಯಲ್ಲಿ ಹಣ ಇದ್ದರೂ ಇನ್ನೂ ಪರಿಹಾರ ನೀಡುತ್ತಿಲ್ಲ ಎಂದು ಶಾಸಕ ಕೆ.ಜಿ.ಬೋಪಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ರಸ್ತೆ ಶೋಚನೀಯ ಸ್ಥಿತಿಯಲ್ಲಿದೆ. ಮಳೆಯಿಂದಾಗಿ ಬೆಳೆ ಹಾನಿಗೀಡಾಗಿದೆ. ಆದರೂ ಇನ್ನೂ ಪರಿಹಾರ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಟಾಸ್ಕ್‌ಪೋರ್ಸ್‌ನಲ್ಲಿ ಶಾಸಕರು ಅಧ್ಯಕ್ಷ ರಾಗಿದ್ದರೂ ಜಿಲ್ಲಾಧಿಕಾರಿ ನಮ್ಮ ಗಮನಕ್ಕೆ ತಾರದೆ ತಾವೇ ಕಾಮಗಾರಿಗಳಿಗೆ ಮಂಜೂರು ನೀಡುತ್ತಿದ್ದಾರೆ. ಈ ರೀತಿ ಅವರು ಸಮರ್ಥನೆ ಮಾಡಿಕೊಳ್ಳುವುದಾದಲ್ಲಿ, ತಪ್ಪು ಮಾಹಿತಿ ನೀಡುತ್ತಿದ್ದಲ್ಲಿ ನಾನು ಸಭೆಯಿಂದ ಎದ್ದು ಹೋಗುತ್ತೇನೆ. ಸಮಯ ಹಾಳು ಮಾಡಲು ನಾನು ಇಷ್ಟ ಪಡುತ್ತಿಲ್ಲ ಎಂದು ಹೇಳಿದರು.

ಈ ಸಂದರ್ಭ ಮಧ್ಯ ಪ್ರವೇಶಿಸಿದ ಸಚಿವ ಸಾ.ರಾ.ಮಹೇಶ್‌, ಶಾಸಕರ ಗಮನಕ್ಕೆ ತಾರದೆ ಯೋಜನೆಗಳನ್ನು ತೆಗೆದುಕೊಳ್ಳುವಂತಿಲ್ಲ. ಅವರ ನೇತೃತ್ವದಲ್ಲಿ ಸಭೆ ನಡೆಸಿ ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಿ ಎಂದು ತಹಸೀಲ್ದಾರರಿಗೆ ಸೂಚನೆ ನೀಡಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರ್‌ಟಿಸಿ ಸಿಗುತ್ತಿಲ್ಲ. ಇದರಿಂದಾಗಿ ತಾಲೂಕು ಕಚೇರಿಗಳಲ್ಲಿ ಸರದಿ ಸಾಲು ಕಂಡು ಬರುತ್ತಿದೆ. ಜನರಿಗೆ ತೊಂದರೆಯಾಗುತ್ತಿದೆ ಎಂದು ಶಾಸಕರು ಗಮನಕ್ಕೆ ತಂದರು. ಈ ಕುರಿತು ಕೂಡಲೇ ಗಮನಹರಿಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರ್‌ಟಿಸಿ ಸಿಗುವಂತೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್‌ ಕುಮಾರ್‌ ಮಿಶ್ರ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್‌, ಎಂಎಲ್‌ಸಿ ಸುನೀಲ್‌ ಸುಬ್ರಹ್ಮಣಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್‌, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್‌, ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸುಮನ್‌ ಡಿ ಪಣ್ಣೇಕರ್‌ ಮುಂತಾದವರು ಉಪಸ್ಥಿತರಿದ್ದರು.

ಯುಜಿಡಿ ಕುರಿತು ಉನ್ನತ ಸಭೆ

ಮಡಿಕೇರಿ ಹಾಗೂ ಕುಶಾಲನಗರಗಳಲ್ಲಿ ಯುಜಿಡಿಯಿಂದಾಗಿ ನಡೆದಾಡಲು ಕೂಡ ಸಾಧ್ಯವಾಗುತ್ತಿಲ್ಲ ಎಂದು ಶಾಸಕರು ಗಮನ ಸೆಳೆದಾಗ ಈ ಕುರಿತು ಬೆಂಗಳೂರಿನಲ್ಲಿ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌ ಹೇಳಿದರು.

ಕಳೆದ ಎರಡು ವರ್ಷಗಳಿಂದ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ನಗರ ಹಾಗೂ ಪಟ್ಟಣದ ಎಲ್ಲಾ ರಸ್ತೆಗಳನ್ನು ಹಾಳು ಮಾಡಲಾಗಿದೆ. ಆದರೆ, ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಪರಿಣಾಮ ವಾಹನ ಸಂಚಾರವಿರಲಿ, ಹಲವು ಕಡೆಗಳಲ್ಲಿ ನಡೆದುಕೊಂಡು ಹೋಗಲು ಕೂಡ ಸಾಧ್ಯವಿಲ್ಲದ ಸ್ಥಿತಿಯಲ್ಲಿದೆ ಎಂದು ಶಾಕರು ಹೇಳಿದರು.

ಒಂದು ಭಾಗದಲ್ಲಿ ರಸ್ತೆಗಳನ್ನು ಒಡೆದು ಅಲ್ಲಿನ ಕಾಮಗಾರಿಯನ್ನು ಪೂರ್ಣಗೊಳಿಸದೆ ಬೇರೆ ಕಡೆಗಳಲ್ಲಿ ಅರ್ಧಂಬರ್ಧ ಕಾಮಗಾರಿ ಏಕೆ ಮಾಡುತ್ತಿದ್ದೀರಿ ಎಂದು ಸಚಿವರು ಅಧಿಕಾರಿಯನ್ನು ಪ್ರಶ್ನಿಸಿದರು. ಹಲವು ಕಡೆಗಳಲ್ಲಿ ರಸ್ತೆ ಒಡೆಯಲು ಜನರು ಅವಕಾಶ ನೀಡುತ್ತಿಲ್ಲ. ಅದಕ್ಕಾಗಿ ವಿಳಂಬವಾಗುತ್ತಿದೆ ಎಂದು ಅಧಿಕಾರಿ ಹೇಳಿದರು. ಎರಡು ವರ್ಷದಿಂದ ರಸ್ತೆ ಒಡೆದು ಕಾಮಗಾರಿ ಮುಗಿಸದಿದ್ದಲ್ಲಿ ಇನ್ನು ಯಾರೂ ರಸ್ತೆ ಒಡೆಯಲು ಬಿಡುತ್ತಾರೆ ಎಂದು ಶಾಸಕ ಕೆ.ಜಿ.ಬೋಪಯ್ಯ ಪ್ರಶ್ನಿಸಿದರು.

ಯುಜಿಡಿ ಕಾಮಗಾರಿಯ ಸಮಸ್ಯೆ ಬಗ್ಗೆ ತಾವು ಬೆಂಗಳೂರಿನಲ್ಲಿ ಶೀಘ್ರದಲ್ಲಿಯೇ ಸಭೆ ಕರೆಯುತ್ತೇನೆ. ಇಲಾಖೆಯ ಹಿರಿಯ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಸಂಬಂಧಿಸಿದವರೊಂದಿಗೆ ಚರ್ಚೆ ನಡೆಸಿ ಸಮಸ್ಯೆಯನ್ನು ಇತ್ಯರ್ಥ ಮಾಡಲಾಗುವುದು ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ