ಲಾಭಾಂಶ ಉತ್ತಮ ಕಾರ್ಯಕ್ಕೆ ವಿನಿಯೋಗಿಸಿ
ಬಂದ ಲಾಭಾಂಶವನ್ನು ಉತ್ತಮ ಕಾರ್ಯಗಳಿಗೆ ವಿನಿಯೋಗಿಸಿ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೋಮವಾರಪೇಟೆ ವಲಯದ ಮೇಲ್ವಿಚಾರಕ ರಮೇಶ್ ಸಲಹೆ ನೀಡಿದರು.
ಶನಿವಾರಸಂತೆ: ಬಂದ ಲಾಭಾಂಶವನ್ನು ಉತ್ತಮ ಕಾರ್ಯಗಳಿಗೆ ವಿನಿಯೋಗಿಸಿ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೋಮವಾರಪೇಟೆ ವಲಯದ ಮೇಲ್ವಿಚಾರಕ ರಮೇಶ್ ಸಲಹೆ ನೀಡಿದರು.
ಗೋಣಿಮರೂರು ಬಸವೇಶ್ವರ ದೇವಾಲಯದ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೆಬ್ಬಾಲೆ ವಲಯ ಮತ್ತು ಗೋಣಿಮರೂರು ಕಾರ್ಯಕ್ಷೇತ್ರದ ಶಬರಿ ಪ್ರಗತಿ ಬಂಧು ಸ್ವಸಹಾಯ ಸಂಘಗಳಿಗೆ ಬಂದಿರುವ ಲಾಭಾಂಶ ಹಣ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೋಮವಾರಪೇಟೆ ವಲಯದಲ್ಲಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಸ್ವಸಹಾಯ ಸಂಘಗಳಿಗೆ ಒಟ್ಟು 3 ಕೋಟಿ ರೂ. ಲಾಭಾಂಶ ವಿತರಿಸಿದೆ ಎಂದರು.
ಹೆಬ್ಬಾಲೆ ವಲಯ ಮತ್ತು ಗೋಣಿಮರೂರು ಕಾರ್ಯಕ್ಷೇತ್ರ ಶಬರಿ ಪ್ರಗತಿ ಬಂಧು ಸ್ವಸಹಾಯ ಸಂಘಕ್ಕೆ 30 ಸಾವಿರ ರೂ. ಲಾಭಾಂಶ ಬಂದಿದೆ ಎಂದರು.
ಸ್ವಸಹಾಯ ಸಂಘಗಳ ಸದಸ್ಯರು ತಮ್ಮ ಸಂಘಕ್ಕೆ ಬಂದಿರುವ ಲಾಭಾಂಶದ ಹಣವನ್ನು ಉತ್ತಮ ಕೆಲಸಗಳಿಗೆ ಸದ್ಬಳಕೆ ಮಾಡಿಕೊಳ್ಳಬೇಕು ಹಾಗೂ ಆರ್ಥಿಕವಾಗಿ ಮತ್ತಷ್ಟು ಸಬಲರಾಗುವುದರ ಮೂಲಕ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಹೆಬ್ಬಾಲೆ ವಲಯದ ಮೇಲ್ವಿಚಾರಕ ವಿನೋದ್ ಮಾತನಾಡಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳು ಉತ್ತಮವಾಗಿ ವ್ಯವಹಾರ ನಡೆಸುತ್ತಿವೆ. ಸಂಘಗಳ ಸದಸ್ಯರು ಶ್ರದ್ಧೆ, ಶಿಸ್ತು, ಹಾಗೂ ಹೆಚ್ಚಿನ ಶ್ರಮವಹಿಸಿ ವಹಿವಾಟು ನಡೆಸಿದರೆ ಸಂಘಕ್ಕೆ ಉತ್ತಮ ಲಾಭಾಂಶ ಸಿಗುತ್ತದೆ. ಈ ಮೂಲಕ ಲಾಭಾಂಶವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸೇವಾ ಪ್ರತಿನಿಧಿ ಉಷಾ, ನಗದು ಸಂಗ್ರಾಹಕ ರಿಹನಾ, ಒಕ್ಕೂಟದ ಅಧ್ಯಕ್ಷ ಸುರೇಂದ್ರ ಗಣಗೂರು ಹಾಜರಿದ್ದರು.