ಆ್ಯಪ್ನಗರ

ಮಾವಿನಲ್ಲಿ ಸವರುವಿಕೆ ಹಾಗೂ ಸವರುವಿಕೆಯ ಪ್ರಯೋಜನಗಳು

ಮಾವು ಬೆಳೆಯಲ್ಲಿ ರೆಂಬೆಗಳನ್ನು ಸವರುವಿಕೆಯಿಂದಾಗುವ ಪ್ರಯೋಜನಗಳ ಕುರಿತಾಗಿ ಇಲಾಖೆ ಮಾಹಿತಿ ಒದಗಿಸಿದೆ.

Vijaya Karnataka 23 Jul 2019, 4:43 pm
ಕೋಲಾರ: ಮಾವು ಬೆಳೆಯಲ್ಲಿ ರೆಂಬೆಗಳನ್ನು ಸವರುವಿಕೆಯಿಂದಾಗುವ ಪ್ರಯೋಜನಗಳ ಕುರಿತಾಗಿ ಇಲಾಖೆ ಮಾಹಿತಿ ಒದಗಿಸಿದೆ.
Vijaya Karnataka Web benefits of relaxation and relaxation in the mother
ಮಾವಿನಲ್ಲಿ ಸವರುವಿಕೆ ಹಾಗೂ ಸವರುವಿಕೆಯ ಪ್ರಯೋಜನಗಳು


ಉದ್ದೇಶಗಳು: ಒಣಗಿದ,ರೋಗ ಮತ್ತು ಕೀಟ ಬಾಧೆಗೆ ಒಳಗಾದ ಹಾಗೂ ಅನುಪಯುಕ್ತ ಕೊಂಬೆಗಳನ್ನು ಕತ್ತರಿಸಿ ತೆಗೆಯುವುದು. ಒತ್ತಾಗಿ ಬೆಳೆದ ಹೊಸ ಚಿಗುರುಗಳನ್ನು ವಿರಳಗೊಳಿಸಿ (ಸಾಧ್ಯವಾದರೆ ಮಧ್ಯದಲ್ಲಿ) ಸೂರ್ಯನ ಕಿರಣ ಮರದ ಎಲ್ಲೆಡೆ ಬೆಳಕು ಬೀಳುವಂತೆ ಮಾಡುವುದು. ಮರದ ಎತ್ತರ ಮಿತಿಗೊಳಿಸಿ, ಎಲ್ಲ ಬೇಸಾಯ ಕ್ರಮ ಕೈಗೊಳ್ಳಲು ಸುಲಭವಾಗುವಂತೆ ಮಾಡುವುದು.

ಹರಡುವ ರೆಂಬೆಗಳಿಂದ ಬರುವ ಆದಾಯ ನೇರವಾಗಿ ಬರುವ ರೆÜಂಬೆಗಳಿಗೆ ಹೋಲಿಸಿದರೆ ಉತ್ಪಾದಕತೆ ಹೆಚ್ಚಾಗಿರುತ್ತದೆ ಹಾಗೂ ಕೆಳಗೆ ಬರುವ ರೆಂಬೆಗಳನ್ನು (ಬುಡದಿಂದ 4 ಅಡಿ ತನಕ) ಕತ್ತರಿಸಿ ಉಳುಮೆ, ಗೊಬ್ಬರ ಹಾಕಲು, ಕಳೆ ತೆಗೆಯಲು ಸಹಕಾರಿಯಾಗುವಂತೆ ನೋಡಿಕೊಳ್ಳುವುದು.

ರೆಂಬೆ ಸವರುವಿಕೆ: ಫಸಲು ಬಿಡುತ್ತಿರುವ ಮಾವಿನ ಮರಗಳಲ್ಲಿ ಹಣ್ಣು ಕಟಾವು ಮಾಡಿದ ನಂತರ ಪ್ರತಿ ವರ್ಷವು ಸ್ವಲ್ಪ ಮಟ್ಟಿಗೆ ಸವರುವಿಕೆಯನ್ನು (ಶೇ. 25-30% ಕತ್ತರಿಸುವುದು) ಕೈಗೊಳ್ಳಬೇಕಾಗುತ್ತದೆ. ಮರದ ಎತ್ತರ ಹಾಗೂ ಆಕಾರ ಕಾಪಾಡಬೇಕಾಗುತ್ತದೆ.

ಸವರುವಿಕೆ ಮರದ ಆಕಾರ ಹಾಗೂ ಎತ್ತರವನ್ನು ಅವಲಂಬಿಸಿ ಮಧ್ಯದ ಹಾಗೂ ಒತ್ತಾದ ರೆಂಬೆಗಳನ್ನು ತೆಗೆಯುವುದರಿಂದ ಸಾಧಿಸಲಾಗುತ್ತದೆ. ಗಾಳಿ ಹಾಗೂ ಸೂರ್ಯನ ಕಿರಣ ಬೀಳುವುದರಿಂದ ಉತ್ಪಾದಕತೆ ಹೆಚ್ಚಿಸಲು ಸಹಕಾರಿಯಾಗುತ್ತದೆ.

ಫಸಲು ನೀಡುತ್ತಿರುವ ಮರಗಳಲ್ಲಿ ಸವರುವಿಕೆ ವಿಧಾನ: ಹಣ್ಣುಗಳನ್ನು ಕೊಯ್ಲು ಮಾಡಿದ ನಂತರ ಅಂದರೆ, ಜೂನ್‌ ನಿಂದ ಜುಲೈ ಮಾಹೆಯ ಅಂತ್ಯದೊಳಗೆ ಸವರುವಿಕೆ ಮಾಡಬೇಕಾಗಿರುತ್ತದೆ. ಈ ಸವರುವಿಕೆಯನ್ನು ಕೆಳಕಂಡಂತೆ ಕೈಗೊಳ್ಳುವುದು.

ಮಧ್ಯದ ಕೊಂಬೆ ತೆಗೆಯುವುದು: ಅವಶ್ಯವಿದ್ದಲ್ಲಿ ಮರದ ಮಧ್ಯಭಾಗದ ರೆಂಬೆಯನ್ನು ತೆಗೆದು ಉಳಿದ ಎಲ್ಲ ಭಾಗಗಳಿಗೆ ಸೂರ್ಯ ಕಿರಣಗಳು, ಬೆಳಕು ಬೀಳುವಂತೆ ಮಾಡುವುದು. ಆಹಾರ ಉತ್ಪಾದನೆ ಹೆಚ್ಚಾಗಿ ಉತ್ಪಾದಕತೆ ಹೆಚ್ಚುತ್ತದೆ.

ನಂತರ ಭೂಮಿಯಿಂದ 3-4 ಅಡಿ ಕೆಳಗಿರುವ ಕೊಂಬೆಗಳನ್ನು ಕತ್ತರಿಸಿ ತೆಗೆಯುವುದರಿಂದ ಉಳುಮೆ ಮಾಡಲು, ಕಳೆ ನಿಯಂತ್ರಿಸಲು ಹಾಗೂ ಗೊಬ್ಬರ, ಔಷಧ ಹಾಗೂ ಇತರೆ ಬೇಸಾಯ ಕ್ರಮಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತದೆ.

ತುದಿ ಸವರುವಿಕೆ: ಹೊಸ ಚಿಗುರುಗಳನ್ನು 15 ಸೆಂ.ಮೀ ಹಿಂಭಾಗ ಅಥವಾ ಬಲಿತ ಭಾಗದವರೆಗೂ ಕತ್ತರಿಸುವುದರಿಂದ ಹೂ ಕಚ್ಚಲು ಹಾಗೂ ಮರದ ಎತ್ತರ ನಿಯಂತ್ರಿಸಲು ಸಹಕಾರಿಯಾಗಲಿದೆ. ದೊಡ್ಡ ಗಾತ್ರದ ರೆಂಬೆಯನ್ನು ಕತ್ತರಿಸುವಾಗ (ಒಣಗಿರುವ ಅಥವಾ ಒತ್ತಾಗಿರುವ) ರೆಂಬೆಯು ಬುಡದ ಪ್ರದೇಶ ಕನಿಷ್ಠ ಒಂದು ಅಂಗುಲ ಬಿಟ್ಟು ಕತ್ತರಿಸಬೇಕು.

ಹೀಗೆ ಮಾಡುವುದರಿಂದ ಕಾಲರ್‌ನಲ್ಲಿ ಉತ್ಪಾದಿಸುವ ರಾಸಾಯನಿಕದಿಂದ ಕ್ರಿಮಿ/ಕೀಟ/ರೋಗಗಳು ಮರ ಪ್ರವೇಶಿಸುವುದನ್ನು ತಡೆಯುತ್ತದೆ ಹಾಗೂ ಗಾಯದ ಭಾಗವನ್ನು ಮುಚ್ಚುತ್ತದೆ.

ಸವರುವಿಕೆ ಮಾಡಿದ ನಂತರ ಮರಗಳ ನಿರ್ವಹಣೆ : ಕೊಂಬೆ ಕತ್ತರಿಸಿದ ಭಾಗಕ್ಕೆ ಬೈಟ್ಯಾಕ್ಸ್‌ (ಒಂದು ಲೀಟರ್‌ ನೀರಿಗೆ 8-10 ಗ್ರಾಂ) ಶಿಲೀಂದ್ರ ನಾಶಕದಿಂದ ಅಂಟು ಮಾಡಿ ಬಳಿಯುವುದರಿಂದ ರೋಗ/ಕೀಟವನ್ನು ತಡೆಯಬಹುದು. ನಂತರ ಇಡೀ ಮರಕ್ಕೆ ಕ್ಲೋರೋಪೈರಿಫಾಸ್‌ 5 ಗ್ರಾಂ/ಲೀ ಅಥವಾ ಬ್ಯಾವಿಸ್ಟೀನ್‌ 1 ಗ್ರಾಂ/ಲೀ ಅಥವಾ ಕರಾಟೆ (ಲ್ಯಾಮಾಡಾಸೈಲೋಥ್ರಿನ್‌) 0.5 ಗ್ರಾಂ/ಲೀ ಅನ್ನು ಪ್ರತಿ ಲೀಟರ್‌ ನೀರಿಗೆ ಬೆರೆಸಿ ಮರಗಳಿಗೆ ಸಿಂಪಡಿಸುವುದು.

ಮರದ ಬುಡಗಳಿಗೆ ನೆಲದಿಂದ 2-3 ಅಡಿವರೆಗೂ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಹೀಲರ್‌ ಕಮ್‌ ಸೀಲರ್‌ (ಅರ್ಕಾರಕ್ಷ ಕ) ಔಷಧ ಲೇಪಿಸುವುದು. ಇದರಿಂದ ಕಾಂಡಕೊರಕ ಹುಳುವನ್ನು ನಿಯಂತ್ರಿಸಬಹುದು. ಪ್ರತಿ 10-15 ದಿನಗಳ ಅಂತರದಲ್ಲಿ ಲಭ್ಯವಿದ್ದಲ್ಲಿ ಪ್ರತಿ ಮರಕ್ಕೆ 50-60 ಲೀಟರ್‌ ನೀರನ್ನು ನೀಡಬೇಕಾಗುತ್ತದೆ. ಪ್ರತಿ ಮರಕ್ಕೆ ಶಿಫಾರಸ್ಸಿನಂತೆ ಮರಗಳ ವಯಸ್ಸಿಗೆ ಅನುಗುಣವಾಗಿ ಗೊಬ್ಬರಗಳನ್ನು ನೀಡುವುದು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ