ಆ್ಯಪ್ನಗರ

ನಿರಂತರ ಜ್ಯೋತಿ ಬದಲು ನಿರಂತರ ಕರೆಂಟ್‌ ಕಟ್‌

ಅಸಮರ್ಪಕ ವಿದ್ಯುತ್‌ ಪೂರೈಕೆ ವಿರೋಧಿಸಿ ಬೂದಿಕೋಟೆ ಗ್ರಾಮಸ್ಥರು ಬೆಸ್ಕಾಂ ಅಧಿಕಾರಿಗಳ ಘೋಷಣೆ ಕೂಗಿ ಸಮರ್ಪಕ ವಿದ್ಯುತ್‌ಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

Vijaya Karnataka 10 Mar 2019, 5:00 am
ಬೂದಿಕೋಟೆ: ಅಸಮರ್ಪಕ ವಿದ್ಯುತ್‌ ಪೂರೈಕೆ ವಿರೋಧಿಸಿ ಬೂದಿಕೋಟೆ ಗ್ರಾಮಸ್ಥರು ಬೆಸ್ಕಾಂ ಅಧಿಕಾರಿಗಳ ಘೋಷಣೆ ಕೂಗಿ ಸಮರ್ಪಕ ವಿದ್ಯುತ್‌ಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
Vijaya Karnataka Web electricity problem protest
ನಿರಂತರ ಜ್ಯೋತಿ ಬದಲು ನಿರಂತರ ಕರೆಂಟ್‌ ಕಟ್‌


ಬೂದಿಕೋಟೆ ಹೋಬಳಿಯಲ್ಲಿ ಬೆಸ್ಕಾಂನವರು ಹತ್ತು ಹದಿನೈದು ದಿನಗಳಿಂದ ವಿದ್ಯುತ್‌ ನೀಡದೇ ಇರುವುದರಿಂದ ನೂರಾರು ಎಕರೆ ಜಮೀನು ಬೆಳೆದ ಟೊಮೇಟೊ, ಎಲೆಕೋಸು, ಬೀನ್ಸ್‌ ಮುಂತಾದ ತರಕಾರಿಗಳು ನೀರಿಲ್ಲದೇ ಸಂಪೂರ್ಣವಾಗಿ ಒಣಗಿ ಹೋಗಿವೆ. ಇಲಾಖೆಯ ನಿಯಮಾನುಸಾರ ಪ್ರತಿದಿನ ಆರು ಗಂಟೆ 3 ಫೇಸ್‌ ವಿದ್ಯುತ್‌ ರೈತರ ಪಂಪ್‌ಸೆಟ್‌ಗೆ ನೀಡಬೇಕು. ಆದರೆ ಇಲಾಖೆಯ ನಿರ್ಲಕ್ಷ ್ಯದಿಂದ ರೈತರ ಅಳಲು ಹೇಳತೀರದಾಗಿದೆ. ಈಗ್ಗೆ ಸುಮಾರು 2 ವಾರಗಳಿಂದ ಬೂದಿಕೋಟೆ ಗ್ರಾಮದ ಸುತ್ತುಮುತ್ತ ಕನಿಷ್ಠ 1 ಗಂಟೆ 3 ಫೇಸ್‌ ವಿದ್ಯುತ್‌ ನೀಡುತ್ತಿಲ್ಲ. ಕನಿಷ್ಠ ಅಂದರೂ 20 ಸಲವಾದರೂ ಕರೆಂಟ್‌ ಕಡಿತವಾಗುತ್ತದೆ. ಈಗ ವಿದ್ಯಾರ್ಥಿಗಳ ಪರೀಕ್ಷೆಗಳು ನಡೆಯುತ್ತಿದೆ. ಮನೆ ದೀಪಗಳನ್ನೂ ರಾತ್ರಿ ಹೊತ್ತು ಕಡಿತ ಮಾಡುತ್ತಾರೆ. ಕೈಗೆ ಬಂದ ತುತ್ತುಬಾಯಿಗೆ ಬಂದಿಲ್ಲ ಎಂಬಂತೆ ವ್ಯವಸಾಯ ಹಾಳಾಗುತ್ತಿದೆ. ಅಲ್ಪ ಸ್ವಲ್ಪ ನೀರಿದ್ದರೂ ಇದನ್ನು ಬಳಸಲು ಆಗುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗಾಗಿ ವಿದ್ಯುತ್‌ ಪ್ಲಾಂಟ್‌ ಆರಂಭ: ಈ ಭಾಗದಲ್ಲಿ ಸೋಲಾರ್‌ ಪ್ಲಾಂಟ್‌ನಿಂದ 3 ಮೆಗಾವ್ಯಾಟ್‌ ಕರೆಂಟ್‌ ಉತ್ಪಾದನೆಯಾಗುತ್ತಿದ್ದು ಇದೂ ಇಲ್ಲವಾಗಿದೆ. ನಿರಂತರ ಜ್ಯೋತಿ ನೀಡುವುದರ ಬದಲು ನಿರಂತರ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಬೂದಿಕೋಟೆ ಹೋಬಳಿಯ 5 ಗ್ರಾಮ ಪಂಚಾಯಿತಿಗಳಲ್ಲಿ ಇದೇ ಸಮಸ್ಯೆಯಾಗಿದ್ದರಿಂದ ಈ ಹಿಂದೆ ಕೇಂದ್ರ ಮತ್ತು ರಾಜ್ಯ ಸರಕಾರದ ಸಹಯೋಗದೊಂದಿಗೆ 70 ಕೋಟಿ ರೂ ವೆಚ್ಚದಲ್ಲಿ ಯಳೆಸಂದ್ರ ಗ್ರಾಪಂ ವ್ಯಾಪ್ತಿಯ ಕದರಿಪುರ ಸಮೀಪ 15 ಎಕರೆ ಸ್ಥಳದಲ್ಲಿ 3 ಮೆಗಾವ್ಯಾಟ್‌ ಸಾಮರ್ಥ್ಯ‌ದ ಕರೆಂಟ್‌ ಉತ್ಪಾದನಾ ಕೇಂದ್ರ ಸ್ಥಾಪಿಸಲಾಗಿದೆ. ಈಗ ಆ ಮೂರು ಮೆಗಾವ್ಯಾಟ್‌ ವಿದ್ಯುತ್‌ ಎಲ್ಲಿ ಹೋಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಆ ಸಮಯದಲ್ಲಿ ನಿರಂತರವಾಗಿ 24 ತಾಸು ಕರೆಂಟ್‌ ನೀಡಬಹುದು ಎಂದು ತಿಳಿಸಿದ್ದರೂ ಈಗ ಯಾವುದೂ ಇಲ್ಲದಂತಾಗಿದೆ. ಬೂದಿಕೋಟೆ ಗ್ರಾಮಕ್ಕೆ ಮಾತ್ರ 24 ಗಂಟೆ ನೀಡಿದ್ದರೂ 24 ಬಾರಿ ಕರೆಂಟ್‌ ಕಟ್‌ ಆಗುತ್ತದೆ.

ಸೋಲಾರ್‌ ಪ್ಲಾಂಟ್‌ ಸೋಲಾರ್‌ ಪ್ಲಾಂಟ್‌ ಅಧಿಕಾರಿಗಳ ಪ್ರಕಾರ, ಮೂರು ಮೆಗಾವ್ಯಾಟ್‌ ವಿದ್ಯುತ್‌ ಬೂದಿಕೋಟೆ ಗ್ರಾಮದ ಎಂಯುಎಸ್‌ಎಸ್‌ ಕೇಂದ್ರಕ್ಕೆ ರವಾನೆಯಾಗುತ್ತಿದೆ. ಅಲ್ಲಿಂದ ಎಲ್ಲಿಗೆ ಹೋಗುತ್ತದೆ ಎಂಬುದರ ಮಾಹಿತಿ ನಮಗಿಲ್ಲ ಎನ್ನುತ್ತಾರೆ. ಬೆಸ್ಕಾಂ ಅಧಿಕಾರಿಗಳನ್ನು ಕೇಳಿದಾಗ ಸೋಲಾರ್‌ ವಿದ್ಯುತ್‌ ನೇರವಾಗಿ ನೀಡಲು ಬರುವುದಿಲ್ಲ. ನಮ್ಮ ವಿದ್ಯುತ್‌ ಮತ್ತು ಸೋಲಾರ್‌ ವಿದ್ಯುತ್‌ ಜಂಟಿಯಾಗಿ ನೀಡಬೇಕಾಗುತ್ತದೆ ಎನ್ನುತ್ತಾರೆ.

ಗ್ರಾಮಗಳ 80 ಭಾಗ ಕೃಷಿ ಪಂಪ್‌ ಸೆಟ್‌ಗಳು ಮತ್ತು ಕೊಳವೆಬಾವಿಗಳಲ್ಲಿ ನೀರು ಬತ್ತಿ ಹೋಗಿದ್ದರಿಂದ ಅವರಿಗಂತೂ ವಿದ್ಯೂತ್‌ ಬೇಕಾಗಿಲ್ಲ. ಆದರೂ ವಿದ್ಯುತ್‌ ಸಾಲುತ್ತಿಲ್ಲ. ಕೇವಲ ಮನೆ ದೀಪಗಳಿಗೆ ಕರೆಂಟ್‌ ನೀಡಲು ಆಗುತ್ತಿಲ್ಲ. ಉಳಿತಾಯವಾದ ಕರೆಂಟ್‌ ಎಲ್ಲಿ ಹೋಗುತ್ತಿದೆ ಎಂಬುದರ ಬಗ್ಗೆ ಕಾರಣ ತಿಳಿಯಬೇಕಾಗಿದೆ ಎಂದರು.

ಅಧಿಕಾರಿಗಳು ಸಮರ್ಪಕವಾಗಿ ವಿದ್ಯುತ್‌ ನೀಡಲು ಮತ್ತು ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ 3 ಗಂಟೆ 3 ಫೇಸ್‌ ನೀಡಲು ರೈತರು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ತಾಪಂ ಸದಸ್ಯ ವಿ.ಮಾರ್ಕಂಡೇಗೌಡ, ಎಪಿಎಂಸಿ ನಿರ್ದೇಶಕ ನಾರಾಯಣಸ್ವಾಮಿ, ಮಾಜಿ ವಿಎಸ್‌ಎಸ್‌ಎನ್‌ ಬ್ಯಾಂಕ್‌ ಅಧ್ಯಕ್ಷ ಆರ್‌.ವಿಜಯ್‌ ಕುಮಾರ್‌, ಗ್ರಾಪಂ ಸದಸ್ಯ ಚಂದ್ರಶೇಖರ್‌, ಚನ್ನಪ್ಪ, ಮುಖಂಡರಾದ ಮುತ್ತು ಉಕ್ಕುಂದ ನಾರಾಯಣಸ್ವಾಮಿ, ಕೋಡಗುರ್ಕಿ ಚಂದ್ರಶೇಖರ್‌, ರಮೇಶ್‌, ರಂಗಪ್ಪ ನಾಯಕ, ಬಾಬು, ನಾರಾಯಣಸ್ವಾಮಿ, ಸುರೇಶ್‌, ಗ್ರಾಮಸ್ಥರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ