ಆ್ಯಪ್ನಗರ

ಕರ್ನಾಟಕದಲ್ಲೇ ಉಳಿಯುವುದೇ ಮಲ್ಲೇಶ್ವರ ದೇಗುಲ? ಮಾಶ...

ದೇವಾಲಯ ಭೂ ಪ್ರದೇಶಕ್ಕಾಗಿ ಕರ್ನಾಟಕ, ಸೀಮಾಂಧ್ರ, ತಮಿಳುನಾಡು ನಡುವೆ ವಿವಾದ, ಮಾ.16ಕ್ಕೆ ಸರ್ವೆ

ವಿಕ ಸುದ್ದಿಲೋಕ 9 Mar 2017, 9:00 am

ಬಂಗಾರಪೇಟೆ: ದೇವಾಲಯವೊಂದರ ಭೂ ಪ್ರದೇಶದ ವಿಚಾರವಾಗಿ ಕರ್ನಾಟಕ, ಸೀಮಾಂಧ್ರ ಹಾಗೂ ತಮಿಳುನಾಡುಗಳ ನಡುವೆ ವಿವಾದ ಏರ್ಪಟ್ಟಿದ್ದು, ದೇವರು ಯಾವ ರಾಜ್ಯಕ್ಕೆ ಒಲಿಯುತ್ತಾನೆಂಬ ಕುತೂಹಲ ಮನೆ ಮಾಡಿದೆ.

ಹೌದು, ತಾಲೂಕಿನ ಗಡಿಭಾಗದ ಮಲ್ಲಪ್ಪನಬೆಟ್ಟ ಪ್ರದೇಶದ ಮಲ್ಲೇಶ್ವರ ದೇವಾಲಯವು ಬಂಗಾರಪೇಟೆ ತಾಲೂಕಿನ ಭೂಪ್ರದೇಶಕ್ಕೆ ಹೊಂದಿಕೊಂಡಿದೆ. ಆದರೆ ಇದೇ ವಿಷಯವಾಗಿ ಸೀಮಾಂಧ್ರ ಹಾಗೂ ತಮಿಳುನಾಡುಗಳೂ ತಕರಾರು ಎತ್ತಿವೆ. ಮೂರು ರಾಜ್ಯಗಳ ಗಡಿಗೆ ಹೊಂದಿಕೊಂಡಿರುವುದರಿಂದ ಇದು ತಮಗೆ ಸೇರಿದ್ದೆಂದು ಸೀಮಾಂಧ್ರ, ತಮಿಳುನಾಡುಗಳು ವಾದಿಸುತ್ತಿವೆ.

ಈ ಕಾರಣಕ್ಕಾಗಿಯೇ ಈ ಕುರಿತು ಸರ್ವೆ ನಡೆಸಲು ತಾಲೂಕು ಆಡಳಿತ ಮುಂದಾಗಿದ್ದು ಮಾ.16ರಂದು ದಿನಾಂಕ ನಿಗದಿ ಮಾಡಲಾಗಿದೆ.

ತಮಿಳುನಾಡು, ಸೀಮಾಂಧ್ರಪ್ರದೇಶ ಹೊರತು ಪಡಿಸಿ ಕರ್ನಾಟಕ ಮಾತ್ರ ಸರ್ವೆಗೆ ಮುಂದಾಗಿರುವುದರಿಂದ ಮಲ್ಲೇಶ್ವರ ದೇವಾಲಯ ಯಾವ ಭೂ ಪ್ರದೇಶಕ್ಕೆ ಸೇರುತ್ತದೆ ಎನ್ನುವುದು ಬಹುತೇಕ ಖಚಿತವಾಗಲಿದೆ. ಇದರಿಂದ ಕೆಲ ವರ್ಷಗಳಿಂದ ಉದ್ಭವಿಸಿರುವ ಭೂ ವಿವಾದ ತಣ್ಣಗಾಗುತ್ತದೋ ಅಥವಾ ಭುಗಿಲೇಳುತ್ತದೋ ಎನ್ನುವುದು ಲಕ್ಷಾಂತರ ಭಕ್ತರ ಆತಂಕವಾಗಿದೆ.

ದೇವಾಲಯ ರಾಜ್ಯದ ಆಸ್ತಿ?: ತಾಲೂಕು ಕೇಂದ್ರ ಬಂಗಾರಪೇಟೆ ಪಟ್ಟಣದಿಂದ 45 ಕಿ.ಮೀ ಕ್ಕೂ ಹೆಚ್ಚು ದೂರದಲ್ಲಿರುವ ಮಲ್ಲಪ್ಪನಬೆಟ್ಟ ಪ್ರದೇಶ ಮೂರು ರಾಜ್ಯಗಳಾದ ತಮಿಳುನಾಡು, ಸೀಮಾಂಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯದ ಗಡಿಗೆ ಸೇರಿದೆ. ಮೂರು ರಾಜ್ಯಗಳ ಗಡಿಗೆ ಅಂಟಿಕೊಂಡಿರುವ ಮಲ್ಲೇಶ್ವರ ದೇವಾಲಯ ಸಾವಿರಾರು ಗ್ರಾಮಗಳ ಮನೆಯ ದೇವರಾಗಿದೆ. ತಾಲೂಕಿನ ಗಡಿಭಾಗದ ದೋಣಿಮಡುಗು, ಬಲಮಂದೆ, ತೊಪ್ಪನಹಳ್ಳಿ, ಕಾಮಸಮುದ್ರ ಗ್ರಾಪಂ ವ್ಯಾಪ್ತಿಯ ನೂರಾರು ಹಳ್ಳಿಗಳ ಜನರ ಆರಾಧ್ಯದೈವವಾಗಿದೆ.

ಮಹಾಶಿವರಾತ್ರಿ ಸೇರಿದಂತೆ ನಾನಾ ಪೂಜೆ ಪುನಸ್ಕಾರಗಳ ಸಂದರ್ಭದಲ್ಲಿ ವಾರ್ಷಿಕ ಲಕ್ಷಾಂತರ ಭಕ್ತರು ಬಂದು ಹರಕೆ ಪೂರೈಸುತ್ತಾರೆ. ದೇವಾಲಯ ಕರ್ನಾಟಕದ ಗಡಿ ಜಮೀನಿನಲ್ಲಿದೆ ಎನ್ನುವುದು ನಮ್ಮ ರಾಜ್ಯದ ಭಕ್ತರ ಕೂಗು. ಬೆಟ್ಟ ಪ್ರದೇಶದ ವ್ಯಾಪ್ತಿ 1.5 ಚದರ ಕಿ.ಮೀ ಇದೆ ಎಂದು ಕಂದಾಯ ದಾಖಲೆಗಳು ಹೇಳುತ್ತದೆ. ದೇವಾಲಯಕ್ಕೆ 200 ವರ್ಷಗಳ ಇತಿಹಾಸವಿದೆ ಎನ್ನುವ ಕಾರಣಕ್ಕೆ ಕರ್ನಾಟಕ ಸರಕಾರ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿಸಿದೆ. ರಾಜ್ಯದ ಮುಜರಾಯಿ ಇಲಾಖೆಯಿಂದ ಇಲ್ಲಿನ ಅರ್ಚಕರಿಗೆ ಸಂಬಳವೂ ಸಂದಾಯವಾಗುತ್ತದೆ. ಆದರೆ ಬೆಟ್ಟಕ್ಕೆ ತೆರಳುವುದಕ್ಕಾಗಲಿ ಅಥವಾ ದೇವಾಲಯಕ್ಕೆ ತೆರಳುವುದಕ್ಕಾಗಲಿ, ರಾಜ್ಯ ಸರಕಾರವಾಗಲಿ, ತಾಲೂಕು ಆಡಳಿತ, ಜಿಲ್ಲಾಡಳಿತ ಯಾವುದೇ ಅನುಕೂಲ ಮಾಡಿದ ನಿದರ್ಶನವಿಲ್ಲ.

ಸೀಮಾಂಧ್ರ ಸರಕಾರ ಅಭಿವೃದ್ಧಿ?: ದೇವಾಲಯ ಅಭಿವೃದ್ಧಿಗೆ ಹಾಗೂ ರಸ್ತೆ ಅಭಿವೃದ್ಧಿಗೆ ಸೀಮಾಂಧ್ರ ಪ್ರದೇಶ ಇದುವರೆಗೂ 10 ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡಿದೆ. ಬೆಟ್ಟಕ್ಕೆ ರಸ್ತೆ ಸೇರಿದಂತೆ ಸಾರಿಗೆ ಸಂಸ್ಥೆ ಬಸ್‌ ಅಲ್ಲಿನ ಸರಕಾರ ಕಲ್ಪಿಸಿದೆ. ಸೀಮಾಂಧ್ರ ಪ್ರದೇಶದ ವ್ಯಾಪ್ತಿಗೆ ದೇವಾಲಯ ಬರುತ್ತದೆ ಎನ್ನುವ ಕಾರಣಕ್ಕೆ ತಮ್ಮ ಸ್ವಕ್ಷೇತ್ರ ಕುಪ್ಪಂ ವಿಧಾನಸಭೆ ಕ್ಷೇತ್ರದ ಶಾಸಕ ಸೀಮಾಂಧ್ರ ಪ್ರದೇಶದ ಮುಖ್ಯಮಂತ್ರಿ ಕೆ.ಚಂದ್ರಬಾಬು ನಾಯ್ಡು ಹೆಚ್ಚಿನ ಆದ್ಯತೆ ನೀಡಿದ್ದಾರೆ ಎನ್ನುವುದಕ್ಕೆ ಅಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳೇ ಸಾಕ್ಷಿ. ಇಲ್ಲಿ ಪ್ರವಾಸೋದ್ಯಮ ಇಲಾಖೆ ನೇತೃತ್ವದಲ್ಲಿ ಹೆಚ್ಚು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇದು ಅಲ್ಲಿನ ಆಡಳಿತಕ್ಕೆ ಬೆಟ್ಟ ಪ್ರದೇಶದ ಮೇಲೆ ಹಿಡಿತ ಸಾಧಿಸಲು ಪ್ರಮುಖ ಕಾರಣ ಎನ್ನುವುದು ರಾಜ್ಯದ ಭಕ್ತರ ಆರೋಪವಾಗಿದೆ.

ತಾಲೂಕಿನ ಗಡಿಭಾಗದ ಮಲ್ಲಪ್ಪನಬೆಟ್ಟ ಪ್ರದೇಶದಲ್ಲಿ ಉದ್ಭವಿಸಿರುವ ಭೂವಿವಾದಕ್ಕೆ ತೆರೆ ಎಳೆಯಲು ಮಾ.16ರಂದು ಸರ್ವೆ ನಡೆಸಲಾಗುವುದು. ಈ ಬಗ್ಗೆ ಸೀಮಾಂಧ್ರ ಪ್ರದೇಶದ ಸಂಬಂಧಪಟ್ಟ ಕಂದಾಯ ಇಲಾಖೆಗೂ ಮಾಹಿತಿ ರವಾನಿಸಿ ಅವರ ಸಮ್ಮುಖದಲ್ಲಿ ಸರ್ವೆ ನಡೆಸಿ ಗಡಿಯನ್ನು ನಿಗದಿಪಡಿಸಲಾಗುವುದು.

- ಸತ್ಯಪ್ರಕಾಶ್‌, ತಹಸೀಲ್ದಾರ್‌, ಬಂಗಾರಪೇಟೆ

ಮಲ್ಲಪ್ಪನ ಬೆಟ್ಟ ಪ್ರದೇಶದಲ್ಲಿರುವ ಮಲ್ಲೇಶ್ವರ ದೇವಾಲಯ ಮೂರು ರಾಜ್ಯಗಳ ಗಡಿಭಾಗಗಳ ಲಕ್ಷಾಂತರ ಭಕ್ತರ ಆರಾರ‍ಯಥ್ಯ ಸ್ಥಾನ,ಅಲ್ಲಿ ನೆಲಸಿರುವ ಮಲ್ಲೇಶ್ವರ ಎಲ್ಲರಿಗೂ ಸೇರಿರುವುದರಿಂದ ಜತೆಗೆ ಪುರಾತನವಾಗಿರುವುದರಿಂದ ಪುರಾತತ್ತ್ವ ಇಲಾಖೆ ವಶಕ್ಕೆ ಪಡೆದು ಅಭಿವೃದ್ಧಿ ಪಡಿಸಲಿ, ಭೂ ವಿವಾದ ಭಕ್ತರ ನಡುವೆ ಯಾವುದೇ ಸಾಮರಸ್ಯಕ್ಕೆ ಧಕ್ಕೆ ತರುವಂತಹ ಸನ್ನಿವೇಶ ಸೃಷ್ಟಿಯಾಗಬಾರದು.

- ಟಿ.ಮುನಿರಾಜು ಜಿಪಂ ಮಾಜಿ ಸದಸ್ಯ, ಪೋಲೇನಹಳ್ಳಿ ಗ್ರಾಮ

ಹುಂಡಿ ವಿಚಾರ ಕಿತ್ತಾಟ?: ಮಹಾಶಿವರಾತ್ರಿ ದಿನ ಎಂದಿನಂತೆ ಸಾವಿರಾರು ಭಕ್ತರು ದೇವರ ದರ್ಶನಕ್ಕೆ ಬಂದಿದ್ದರು. ಎಂದಿನಂತೆ ಕರ್ನಾಟಕದ ಭಕ್ತರ ಪರವಾಗಿ ಹುಂಡಿ ಇಡಲು ಮುಂದಾದಾಗ ಅಲ್ಲಿನ ಪೊಲೀಸರು ನೀವು ಹುಂಡಿ ಇಡುವಂತಿಲ್ಲ ಎಂದು ತಗಾದೆ ತೆಗೆದಿದ್ದರು. ಈ ಸಂದರ್ಭದಲ್ಲಿ ತಾಲೂಕಿನ ಕಾಮಸಮುದ್ರ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ವಸಂತಕುಮಾರ್‌ ನೇತೃತ್ವದ ಪೊಲೀಸರ ತಂಡ ಹುಂಡಿ ಇಡಲು ಮುಂದಾದಾಗ ಕೆರಳಿದ ಸೀಮಾಂಧ್ರ ಪೊಲೀಸರು ರಾಜ್ಯದ ಪೊಲೀಸರೊಂದಿಗೆ ಜಗಳಕ್ಕಿಳಿದು ಮಾತಿನ ಚಕಮಕಿ ನಡೆಸಿದ್ದರು.

ನಂತರ ದೇವಾಲಯ ನಮಗೆ ಸೇರಿದ್ದು ಎನ್ನುವ ಬಗ್ಗೆ ಕಂದಾಯ ಇಲಾಖೆಯಲ್ಲಿ ದಾಖಲೆಗಳು ಇವೆ. ಆ ಬಗ್ಗೆ ತೋರಿಸುತ್ತೇವೆಂದು ರಂಪಾಟ ಮಾಡಿದ್ದರು. ನಂತರ ದೇವಾಲಯ ಅರ್ಚಕರಿಗೆ ಕರ್ನಾಟಕ ಮುಜರಾಯಿ ಇಲಾಖೆಯಿಂದ ಸಂಬಳವೂ ಬರುತ್ತದೆ. ಆ ಬಗ್ಗೆ ದಾಖಲೆಗಳನ್ನು ತೋರಿಸುತ್ತೇವೆಂದು ರಾಜ್ಯದ ಭಕ್ತರು ಧ್ವನಿಗೂಡಿಸಿದ ನಂತರ ಆ ಬಗ್ಗೆ ಎರಡು ರಾಜ್ಯಗಳ ಕಂದಾಯ ಅಧಿಕಾರಿಗಳ ಮೂಲಕ ಸರ್ವೆ ನಡೆಸಿ ತೀರ್ಮಾನಿಸೋಣ. ಈಗ ವಿಚಾರಕ್ಕೆ ತೆರೆ ಎಳೆಯೋಣವೆಂದು ಎರಡು ರಾಜ್ಯಗಳ ಪೊಲೀಸ್‌ ಅಧಿಕಾರಿಗಳು ತೀರ್ಮಾನಿಸಿ ಅಂದು ವಿವಾದಕ್ಕೆ ತೆರೆ ಎಳೆದಿದ್ದರು.

ಈಗ ತಾಲೂಕು ಆಡಳಿತ ಮಲ್ಲಪ್ಪನಬೆಟ್ಟ ಪ್ರದೇಶವನ್ನು ಸಂಪೂರ್ಣ ಸರ್ವೆ ನಡೆಸಿ ಕರ್ನಾಟಕ ರಾಜ್ಯದ ಗಡಿಯನ್ನು ಗುರುತಿಸಿ ಶಾಶ್ವತವಾಗಿ ನಕ್ಷೆ ತಯಾರಿಸಲು ಮುಂದಾಗಿದೆ. ಈ ಬಗ್ಗೆ ಕಂದಾಯ ಅಧಿಕಾರಿಗಳು ದೇವಾಲಯಕ್ಕೆ ಸಂಬಂಧಪಟ್ಟ ದಾಖಲೆಗಳು ಹಾಗೂ ಸರ್ವೆ ನಕ್ಷೆ, ಟಿಪ್ಪಣಿ ಕಾಪಿ, ಆಕಾರ ಬಂದು ದಾಖಲೆಗಳನ್ನು ಕಲೆ ಹಾಕಿದ್ದು ಮಾ.16ರಂದು ಸರ್ವೆ ನಡೆಸಲು ಮುಂದಾಗಿರುವುದು ಈ ಭಾಗದ ಭಕ್ತರಿಗೆ ತೀವ್ರ ಕುತೂಹಲ ಕೆರಳಿಸಿದೆ.

ಮುಖ್ಯಾಂಶಗಳು

* ದೇವಾಲಯ ಕರ್ನಾಟಕದ ಗಡಿ ಜಮೀನಿನಲ್ಲಿದೆ ಎನ್ನುವುದು ನಮ್ಮ ರಾಜ್ಯದ ಭಕ್ತರ ಕೂಗು

* ಬೆಟ್ಟ ಪ್ರದೇಶದ ವ್ಯಾಪ್ತಿ 1.5 ಚದರ ಕಿ.ಮೀ ಇದೆ ಎಂದು ಕಂದಾಯ ದಾಖಲೆಗಳು ಹೇಳುತ್ತದೆ. ದೇವಾಲಯಕ್ಕೆ ಸುಮಾರು 200 ವರ್ಷಗಳ ಇತಿಹಾಸ ಇದೆ ಎನ್ನುವ ಕಾರಣಕ್ಕೆ ಕರ್ನಾಟಕ ಸರಕಾರ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿಸಿದೆ.

* ರಾಜ್ಯ ಸರಕಾರದ ಮುಜರಾಯಿ ಇಲಾಖೆಯಿಂದ ಇಲ್ಲಿನ ಅರ್ಚಕರಿಗೆ ಸಂಬಳವೂ ಸಂದಾಯವಾಗುತ್ತದೆ.

* ಆದರೆ ಬೆಟ್ಟಕ್ಕೆ ತೆರಳುವುದಕ್ಕಾಗಲಿ ಅಥವಾ ದೇವಾಲಯಕ್ಕೆ ತೆರಳುವುದಕ್ಕಾಗಲಿ, ರಾಜ್ಯ ಸರಕಾರವಾಗಲಿ, ತಾಲೂಕು ಆಡಳಿತ, ಜಿಲ್ಲಾಡಳಿತ ಯಾವುದೇ ಅನುಕೂಲ ಮಾಡಿದ ನಿದರ್ಶನ ಇಲ್ಲಿಲ್ಲ

* ದೇವಾಲಯ ಅಭಿವೃದ್ಧಿಗೆ ಹಾಗೂ ರಸ್ತೆ ಅಭಿವೃದ್ಧಿಗೆ ಸೀಮಾಂಧ್ರ ಪ್ರದೇಶ ಇದುವರೆಗೂ 10 ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡಿದೆ. ಬೆಟ್ಟಕ್ಕೆ ರಸ್ತೆ ಸೇರಿದಂತೆ ಸಾರಿಗೆ ಸಂಸ್ಥೆ ಬಸ್‌ ಅಲ್ಲಿನ ಸರಕಾರ ಕಲ್ಪಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ