ಆ್ಯಪ್ನಗರ

ಧಾರ್ಮಿಕ ಕೇಂದ್ರಗಳಲ್ಲಿ ರಾಜಕೀಯ ಸಭೆ ಮಾಡುವಂತಿಲ್ಲ

ಯಾವುದೇ ಧಾರ್ಮಿಕ ಕೇಂದ್ರಗಳು, ದೇವಾಲಯಗಳಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಪ್ರೇರಿತ ಸಭೆ, ಸಮಾರಂಭಗಳನ್ನು ಮಾಡಬಾರದು. ಪೂಜೆ, ಪುನಸ್ಕಾರಕ್ಕಷ್ಟೇ ದೇವರ ಮಂದಿರಗಳ ಉಪಯೋಗವಾಗಬೇಕು ಎಂದು ಕೋಲಾರ ಉಪವಿಭಾಗಧಿಕಾರಿ ಸೋಮಶೇಖರ್‌ ಹೇಳಿದರು.

Vijaya Karnataka 15 Mar 2019, 2:46 pm
ಬಂಗಾರಪೇಟೆ: ಯಾವುದೇ ಧಾರ್ಮಿಕ ಕೇಂದ್ರಗಳು, ದೇವಾಲಯಗಳಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಪ್ರೇರಿತ ಸಭೆ, ಸಮಾರಂಭಗಳನ್ನು ಮಾಡಬಾರದು. ಪೂಜೆ, ಪುನಸ್ಕಾರಕ್ಕಷ್ಟೇ ದೇವರ ಮಂದಿರಗಳ ಉಪಯೋಗವಾಗಬೇಕು ಎಂದು ಕೋಲಾರ ಉಪವಿಭಾಗಧಿಕಾರಿ ಸೋಮಶೇಖರ್‌ ಹೇಳಿದರು.
Vijaya Karnataka Web no political meetings in sacred places
ಧಾರ್ಮಿಕ ಕೇಂದ್ರಗಳಲ್ಲಿ ರಾಜಕೀಯ ಸಭೆ ಮಾಡುವಂತಿಲ್ಲ


ಪಟ್ಟಣದ ತಹಸೀಲ್ದಾರ್‌ ಕಚೇರಿಯಲ್ಲಿ ಕರೆಯಲಾಗಿದ್ದ ರಾಜಕೀಯ ಪಕ್ಷ ಗಳ ಸ್ಥಳೀಯ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿ ದೇವಾಲಯಗಳಲ್ಲಿ ಚುನಾವಣೆಯ ಉದ್ದೇಶದಿಂದ ಯಾವುದೇ ಕಾರ್ಯಕ್ರಮಗಳನ್ನು ಮಾಡಿದರೂ ನೀತಿ ಸಂಹಿತೆ ಉಲ್ಲಂಘನೆಯಾದರೆ ಪ್ರಕರಣ ದಾಖಲಿಸಲಾಗುತ್ತದೆ. ಧಾರ್ಮಿಕ ಕೇಂದ್ರಗಳಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಸಭೆಗಳನ್ನು ಮಾಡಬಾರದು ಎಂದು ತಾಕೀತು ಮಾಡಿದರು.

ಮೈಕ್‌ ಬಳಕೆಗೆ ನಿರ್ಬಂಧ: ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೂ ಯಾವುದೇ ಮೈಕ್‌ಗಳನ್ನು ಉಪಯೋಗಿಸಿ ಸಾರ್ವಜನಿಕವಾಗಿ ತೊಂದರೆ ಮಾಡುವಂತಿಲ್ಲ. ರಾಜಕೀಯ ನಾಯಕರ ಸಭೆ ಸಮಾರಂಭಗಳು, ಸಮಾವೇಶಗಳಿದ್ದರೆ ಮೊದಲೇ ಸಂಬಂಧಪಟ್ಟ ಪೊಲೀಸ್‌ ಇಲಾಖೆ, ಚುನಾವಣಾಧಿಕಾರಿಗಳ ಬಳಿ ಅನುಮತಿ ಕಡ್ಡಾಯ. ಎಷ್ಟು ಮಂದಿ ಸೇರುತ್ತಾರೆ. ಸ್ಥಳ ಯಾವುದು? ಮೆರವಣಿಗೆ, ವಾಹನಗಳ ಬಳಕೆ ಇನ್ನಿತರೆ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಕಾರ್ಯಕರ್ತರ ಸಮಾವೇಶದಲ್ಲಿ ಊಟ ಸೇರಿದಂತೆ ಆಸೆ ಆಮಿಷಗಳನ್ನು ಒಡ್ಡಿ ಜನರನ್ನು ಕರೆತರುವ ಪ್ರಯತ್ನಗಳು ಮಾಡಿದರೆ ಆ ಬಗ್ಗೆ ಫ್ಲೈಯಿಂಗ್‌ ಸ್ಕ್ವಾಡ್‌ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದರು.

ಚುನಾವಣಾ ರಾರ‍ಯಲಿಗಳು ನಡೆಸಲು ಜನನಿಬಿಡ ಸ್ಥಳವನ್ನು ಆಯ್ಕೆ ಮಾಡುವುಂತಿಲ್ಲ, ಸಾರ್ವಜನಿಕ ಓಡಾಟಗಳಿಗೆ ತೊಂದರೆ ಮಾಡುವಂತಿಲ್ಲ. ಸರಕಾರಿ ರಜೆಗಳು ಇಲ್ಲವೇ ಭಾನುವಾರ ರಾರ‍ಯಲಿಗಳಂತಹ ಕಾರ್ಯಕ್ರಮಗಳನ್ನು ನಡೆಸಿದರೆ ಜನರಿಗೆ ತೊಂದರೆಯಾಗುವುದಿಲ್ಲ ಎಂದರು.

50 ಸಾವಿರ ನಿಗದಿ: ಯಾವುದೇ ವ್ಯಕ್ತಿ 50 ಸಾವಿರಕ್ಕಿಂತ ಹೆಚ್ಚು ಹಣವನ್ನು ತೆಗೆದುಕೊಂಡು ಹೋಗಬಾರದು. ಹೆಚ್ಚಾಗಿ ಹಣವಿದ್ದರೆ ಆ ಬಗ್ಗೆ ದಾಖಲೆಗಳನ್ನು ಇಟ್ಟುಕೊಂಡು ಸಮಂಜಸ ಉತ್ತರ ನೀಡಬೇಕು. ನೀಡದಿದ್ದರೆ ಹಣವನ್ನು ವಶಪಡಿಸಿಕೊಳ್ಳುವುದೇ ಅಲ್ಲದೆ ಪ್ರಕರಣ ದಾಖಲಿಸಲಾಗುವುದು.ಮದುವೆ, ಇನ್ನಿತರೆ ಶುಭಕಾರ್ಯಗಳಿಗೆ ಹಣದ ಅವಶ್ಯಕತೆ ಇರುತ್ತದೆ. ಅಂತಹ ವ್ಯಕ್ತಿಗಳು ಆ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಿಷ್ಪಕ್ಷ ಪಾತವಾಗಿ ಚುನಾವಣೆ ನಡೆಸಲು ಎಲ್ಲರೂ ಸಹಕಾರ ನೀಡಬೇಕು, 4 ತಂಡಗಳು ಫ್ಲೈಯಿಂಗ್‌ ಸ್ಕ್ವಾಡ್‌, 23 ಸೆಕ್ಟರ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ರಾಜಕೀಯ ಪಕ್ಷ ಗಳು ಹಾಗೂ ಮುಖಂಡರು ಕಾರ್ಯಕರ್ತರ ಚಲನವಲನಗಳ ಬಗ್ಗೆ ತೀವ್ರ ನಿಗಾ ಇಡಲಿದ್ದು ನೀತಿ ಸಂಹಿತೆ ಉಲ್ಲಂಘನೆಯಾದರೆ ಯಾವುದೇ ಮುಲಾಜಿಲ್ಲದೆ, ಒತ್ತಡಕ್ಕೊಳಗಾಗದೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.

ಉರುಸ್‌ಗಳಲ್ಲಿ ಕವ್ವಾಲಿ ಹಾಗೂ ಜಾತ್ರೆಗಳಲ್ಲಿ ನಾಟಕಗಳ ಪ್ರದರ್ಶನಗಳ ಬಗ್ಗೆ ಮೊದಲೇ ಅನುಮತಿ ಪಡೆಯಿರಿ. ಆ ಸಾಂಸ್ಕೃತಿಕ ಚಟುವಟಿಕೆಗಳು ಯಾವುದೇ ಪಕ್ಷ , ವ್ಯಕ್ತಿ ಪರ ವಿರುದ್ಧವಾಗಿರಬಾರದು. ಆದಷ್ಟು ಒಳಾಂಗಣದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡಲು ಸ್ಥಳೀಯ ಚುನಾವಣಾಧಿಕಾರಿಗಳು ಮಾಡಲಿದ್ದಾರೆ ಎಂದರು.

ಸಭೆಯಲ್ಲಿ ತಹಸೀಲ್ದಾರ್‌ ಚಂದ್ರಮೌಳೇಶ್ವರ, ಬೂದಿಕೋಟೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಾಗರಾಜ್‌, ಬಿಜೆಪಿ ಮುಖಂಡರಾದ ನಾಗಪ್ರಕಾಶ್‌, ಹೊಸರಾಯಪ್ಪ, ಹನುಮಪ್ಪ, ಜೆಡಿಎಸ್‌ ಮರಗಲ್‌ ಮುನಿಯಪ್ಪ ಹಾಜರಿದ್ದರು.

ಫ್ಲೆಕ್ಸ್‌, ಬ್ಯಾನರ್‌ಗಳಿಗೆ ಅನುಮತಿ ಕಡ್ಡಾಯ: ಯಾವುದೇ ರಾಜಕೀಯ ಪಕ್ಷ ಗಳು ಫ್ಲೆಕ್ಸ್‌, ಬ್ಯಾನರ್‌, ಕರಪತ್ರಗಳನ್ನು ಮುದ್ರಿಸುವಂತೆ ಕೋರಿದರೆ ಚುನಾವಣಾಧಿಕಾರಿಗಳ ಅನುಮತಿ ಪತ್ರ ಕಡ್ಡಾಯವಾಗಿ ಪಡೆಯಬೇಕು ಎಂದು ಕೋಲಾರ ವಿಭಾಗಾಧಿಕಾರಿ ಸೋಮಶೇಖರ್‌ ಸೂಚಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಕರೆಯಲಾಗಿದ್ದ ಪಟ್ಟಣದ ಆಫ್‌ಸೆಟ್‌ ಪ್ರಿಂಟರ್ಸ್‌ ಮಾಲೀಕರ ಸಭೆಯಲ್ಲಿ ಮಾತನಾಡಿ, ಪ್ರತಿಯೊಂದು ಮುದ್ರಣಕ್ಕೂ ಅನುಮತಿ ಕಡ್ಡಾಯ. ಯಾವುದೇ ಅನುಮತಿಯಿಲ್ಲದೇ ಬ್ಯಾನರ್‌, ಫ್ಲೆಕ್ಸ್‌, ಕರಪತ್ರಗಳನ್ನು ಮುದ್ರಿಸಿದರೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಈ ಬಗ್ಗೆ ಗಮನಹರಿಸಿ ಕೆಲಸ ನಿರ್ವಹಿಸಿ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ