ಆ್ಯಪ್ನಗರ

ಕೆಸಿವ್ಯಾಲಿಯಲ್ಲಿ ಕೊಳಚೆ ನೀರು ವದಂತಿ: ಸ್ಥಳಕ್ಕೆ ಡಿಸಿ ಭೇಟಿ

ತಾಲೂಕಿನ ನರಸಾಪುರ ಕೆರೆಯಿಂದ ದೊಡ್ಡವಲ್ಲಬಿ ಕೆರೆಗೆ ಹರಿಯುವ ನೀರು ಪಾಚಿಕಟ್ಟಿದ್ದು, ಕೊಳಚೆ ನೀರು ಹರಿಯುತ್ತಿದೆ ಎಂಬ ವದಂತಿಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಡಿಸಿ ಜೆ.ಮಂಜುನಾಥ್‌ ಗುರುವಾರ ನರಸಾಪುರಕ್ಕೆ ಭೇಟಿ ನೀಡಿ ವಾಸ್ತವಾಂಶದ ಮಾಹಿತಿ ಪಡೆದುಕೊಂಡರು.

Vijaya Karnataka 14 Dec 2018, 5:00 am
ವದಂತಿಯು ಶುದ್ಧ ಅಪಪ್ರಚಾರ: ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಸ್ಪಷ್ಟನೆ
Vijaya Karnataka Web sewage water rush in kesivali visit dc to the place
ಕೆಸಿವ್ಯಾಲಿಯಲ್ಲಿ ಕೊಳಚೆ ನೀರು ವದಂತಿ: ಸ್ಥಳಕ್ಕೆ ಡಿಸಿ ಭೇಟಿ


ಕೋಲಾರ: ತಾಲೂಕಿನ ನರಸಾಪುರ ಕೆರೆಯಿಂದ ದೊಡ್ಡವಲ್ಲಬಿ ಕೆರೆಗೆ ಹರಿಯುವ ನೀರು ಪಾಚಿಕಟ್ಟಿದ್ದು, ಕೊಳಚೆ ನೀರು ಹರಿಯುತ್ತಿದೆ ಎಂಬ ವದಂತಿಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಡಿಸಿ ಜೆ.ಮಂಜುನಾಥ್‌ ಗುರುವಾರ ನರಸಾಪುರಕ್ಕೆ ಭೇಟಿ ನೀಡಿ ವಾಸ್ತವಾಂಶದ ಮಾಹಿತಿ ಪಡೆದುಕೊಂಡರು.

ನರಸಾಪುರಕ್ಕೆ ಭೇಟಿ ನೀಡಿದ ಡಿಸಿ ಮಂಜುನಾಥ್‌, ತ್ಯಾಜ್ಯ ನೀರು ಕಾಲುವೆ ಮತ್ತು ಕೆರೆಗೆ ಹರಿಸಲಾಗುತ್ತಿದ್ದ ಎ,ಬಿ ಬ್ಲಾಕ್‌ನತ್ತ ತೆರಳಿ, ವಾಸ್ತವಾಂಶ ಅರಿತರು. ಬಳಿಕ ಅಲ್ಲಿನ ಸ್ಥಳೀಯರನ್ನು ಕರೆಯಿಸಿ ಮಲದಗುಂಡಿಗಳನ್ನು ನಿರ್ಮಿಸಿಕೊಳ್ಳದೆ ನೇರವಾಗಿ ನೀವು ಕಾಲುವೆಯಲ್ಲಿ ಹರಿಸುತ್ತಿರುವುದರಿಂದ ತೊಂದರೆಯಾಗುತ್ತಿದೆ. ಆದಷ್ಟು ಬೇಗನೆ ನಿರ್ಮಿಸಿಕೊಳ್ಳುವಂತೆ ಸೂಚಿಸಿದರು.

ಯುಜಿಡಿ ನಿರ್ಮಿಸಿಕೊಡಲು ಮನವಿ: ಈ ವೇಳೆ ಸ್ಥಳೀಯರು, ಈ ಭಾಗ ಬೆಟ್ಟದ ತಪ್ಪಲಿನಲ್ಲಿರುವುದರಿಂದ ಭೂಮಿ ಅಗೆದರೆ ನೀರು ಜಿನುಗುತ್ತದೆ. ಕಾರಣ ನಾವು ವಿಧಿ ಇಲ್ಲದೆ, ಕಾಲುವೆಗೆ ಹರಿಸಬೇಕಾಗಿದೆ ಎಂದು ತಿಳಿಸಿ, ಯುಜಿಡಿಯನ್ನು ನಿರ್ಮಿಸಿಕೊಟ್ಟರೆ ನಮಗೆ ಅನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಈ ವೇಳೆ ಗ್ರಾಪಂನವರು, 2017ರಲ್ಲಿಯೇ ಗ್ರಾಪಂನಲ್ಲಿ ಅನುಮೋದನೆ ನೀಡಿ ಕೈಗಾರಿಕಾ ಅಭಿವೃದ್ಧಿ ಅನುದಾನದಡಿ ಯುಜಿಡಿ ನಿರ್ಮಿಸಿಕೊಡಬೇಕು ಎಂದು ತಾಪಂ ಇಒ ಮೂಲಕ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಮಾಹಿತಿ ಒದಗಿಸಿದರು.

ಇದಕ್ಕೆ ಡಿಸಿ ಪ್ರತಿಕ್ರಿಯಿಸಿ, ನರಸಾಪುರದಲ್ಲಿ ಯುಜಿಡಿ ಕಾಮಗಾರಿ ಕೈಗೊಳ್ಳುವ ಕಡತಕ್ಕೆ ಕೂಡಲೇ ಅನುಮೋದನೆ ನೀಡಲಾಗುವುದು ಎಂದು ತಿಳಿಸಿ, ಈ ಕೂಡಲೇ ನೀಲನಕ್ಷೆ ತಯಾರಿಸಿ ಕಾಮಗಾರಿ ಕೈಗೊಳ್ಳುವಂತೆ ಎಂಜಿನಿಯರ್‌ಗೆ ಸೂಚಿಸುವುದಾಗಿ ಭರವಸೆ ನೀಡಿದರು.

ಸಂಸ್ಕರಣಾ ಘಟಕಕ್ಕೆ ಚಿಂತನೆ: ನರಸಾಪುರದ ಬಂಜರಗುಂಟೆ ಸ್ಥಳದಲ್ಲಿ 2.7 ಎಕರೆ ಜಾಗ ಲಭ್ಯವಿದ್ದು, ತ್ಯಾಜ್ಯ ನೀರು ಸಂಸ್ಕರಣ ಘಟಕ ಆರಂಭಿಸಲು ಜಿಲ್ಲಾಡಳಿತ ಗ್ರಾಪಂನೊಂದಿಗೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳುವ ಬಗ್ಗೆಯೂ ಡಿಸಿ ತಿಳಿಸಿದರು.

ಅಲ್ಲದೆ ನರಸಾಪುರವು ಹೋಬಳಿ ಕೇಂದ್ರವಾಗಿರುವುದರಿಂದ ಸ್ವಚ್ಛ ಭಾರತ್‌ ಮಿಷನ್‌ ಅಡಿಯಲ್ಲಿ ಘನ, ಧ್ರವ ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಾಪಿಸಲು 1 ಎಕರೆ ಜಾಗ ಲಭ್ಯವಿದ್ದು, ಪ್ರಸ್ತಾವನೆ ಸಲ್ಲಿಸಲಾಗುವುದು. ಮನೆ ಮನೆಯಿಂದ ಕಸವನ್ನು ವಿಂಗಡಿಸಿ ಹಾಕಬೇಕು ಹೊರತು ರಾಜಕಾಲುವೆಗೆ ಹಾಕದಂತೆ ಸೂಚಿಸಿದರು.

ವಿಡಿಯೋ ಮಾಡಿದ್ದ ಸ್ಥಳಕ್ಕೂ ಭೇಟಿ: ಕೆಸಿವ್ಯಾಲಿ ನೀರಿನಲ್ಲಿ ತ್ಯಾಜ್ಯ ನೀರು ಬರುತ್ತಿದೆ ಎಂದು ವ್ಯಕ್ತಿಯೊಬ್ಬ ವಿಡಿಯೋ ಮಾಡಿ ವದಂತಿ ಹಬ್ಬಿಸಿದ್ದ ಹಿನ್ನೆಲೆಯಲ್ಲಿ, ಅಲ್ಲಿಗೆ ತೆರಳಿದ ಜಿಲ್ಲಾಧಿಕಾರಿ ಸುಮಾರು ಅರ್ಧಗಂಟೆಗೂ ಹೆಚ್ಚುಕಾಲ ಪರಿಶೀಲಿಸಿದರು.

ಈ ವೇಳೆ ಪಕ್ಕದಲ್ಲೇ ಬೆಸ್ಕಾಂನವರು ಕಾಮಗಾರಿ ಮಾಡುತ್ತಿದ್ದು, ಈ ವೇಳೆ ಕಲ್ಲುಗಳನ್ನು ಕಾಲುವೆಗೆ ಹಾಕಿದ್ದರು. ಇದರಿಂದಾಗಿ ನೀರು ನಿಂತು ಪಾಚಿ ಕಟ್ಟಿತ್ತು.

ಅಲ್ಲದೆ, ಪಕ್ಕದ ತೋಟಗಳ ರೈತರು ಟೊಮೇಟೊ ಸೇರಿದಂತೆ ಇತರೆ ತ್ಯಾಜ್ಯಗಳನ್ನು ಸುರಿದಿದ್ದರಿಂದಾಗಿ ನೀರು ತ್ಯಾಜ್ಯವಾಗಿರುವುದು ಕಂಡುಬಂದಿತು. ಕೂಡಲೇ ಅವೆಲ್ಲವನ್ನೂ ತೆರವುಗೊಳಿಸಿದ ಬಳಿಕ ನೀರು ಸರಾಗವಾಗಿ ಹರಿಯಿತು.

ತಾಪಂ ಇಒ ನಾರಾಯಣಸ್ವಾಮಿ, ನರಸಾಪುರ ಗ್ರಾಪಂ ಸದಸ್ಯರಾದ ಮಂಜುನಾಥ್‌, ಶಬೀನಾ, ಭಾಗ್ಯಲಕ್ಷ್ಮಿ, ಲೀಲಾವತಿ, ಮಂಜುಳ, ನಾಗಪ್ಪ ಉಪಸ್ಥಿತರಿದ್ದರು.

--

ವದಂತಿ ಶುದ್ಧ ಅಪಪ್ರಚಾರ; ಡಿಸಿ ಜೆ.ಮಂಜುನಾಥ್‌

ಕೆಸಿವ್ಯಾಲಿ ನೀರು ಮಾನದಂಡಗಳ ಪ್ರಕಾರವೇ ಹರಿಯುತ್ತಿದ್ದು, ವದಂತಿಯೆಬ್ಬಿಸಿ ಶುದ್ಧ ಅಪ್ರಚಾರ ಮಾಡಲಾಗಿದೆ ಎಂದು ಡಿಸಿ ಜೆ.ಮಂಜುನಾಥ್‌ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಸಿವ್ಯಾಲಿ ಯೋಜನೆಯಿಂದ ನೀರಿನಲ್ಲಿ ತ್ಯಾಜ್ಯ ಬಂದಿಲ್ಲ. ನರಸಾಪುರ ಗ್ರಾಪಂ ವ್ಯಾಪ್ತಿಯಿಂದ ತ್ಯಾಜ್ಯ ನೀರು ಕಾಲುವೆ ಮೂಲಕ ಕೆರೆಗೆ ಹರಿಸಲಾಗಿರುವುದು ವದಂತಿಗೆ ಕಾರಣವಾಗಿದೆ.

ಈಗಾಗಲೇ ಕೆರೆ ಪಕ್ಕದಲ್ಲಿರುವ ಮನೆಗಳು ಮಲದಗುಂಡಿಗಳನ್ನು ಮಾಡದೆ ನೇರವಾಗಿ ತ್ಯಾಜ್ಯವನ್ನು ಕೆರೆಗೆ ಹರಿಸಲಾಗುತ್ತಿದ್ದು, ನೋಟೀಸ್‌ ನೀಡಿ ನಿಲ್ಲಿಸುವಂತೆ ಗ್ರಾಪಂಗೆ ಸೂಚಿಸಲಾಗಿರುವುದಾಗಿ ಹೇಳಿದರು.


ಜಿಪಂ ಸಿಇಒ ಜಿ.ಜಗದೀಶ್‌ ಭೇಟಿ ಪರಿಶೀಲನೆ:

ಜಿಲ್ಲಾ ಪಂಚಾಯಿತಿ ಸಿಇಒ ಜಿ.ಜಗದೀಶ್‌ ಅವರು ಸಹ ಮಧ್ಯಾಹ್ನದ ವೇಳೆಗೆ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಕೂಡಲೇ ಮಲದಗುಂಡಿಗಳನ್ನು ನಿರ್ಮಿಸಿಕೊಳ್ಳಲು ಗ್ರಾಪಂ ವತಿಯಿಂದ ಸಂಬಂಧಪಟ್ಟ ಎ ಮತ್ತು ಬಿ ಬ್ಲಾಕ್‌ನ ಮನೆಗಳವರಿಗೆ ನೋಟೀಸ್‌ಗಳನ್ನು ನೀಡುವಂತೆ ಪಿಡಿಒಗೆ ಸೂಚಿಸಿದರು.

---

ಮಲದ ಗುಂಡಿಗಳ ನಿರ್ಮಾಣಕ್ಕೆ ನೋಟಿಸ್‌ ನೀಡುತ್ತೇವೆ

ರಾಜಕಾಲುವೆಗೆ ನೇರವಾಗಿ ತ್ಯಾಜ್ಯ ನೀರು ಹರಿಸುತ್ತಿರುವ ನರಸಾಪುರದ ಎ ಬ್ಲಾಕ್‌ನ ಸುಮಾರು 150ಕ್ಕೂ ಹೆಚ್ಚು ಮನೆಗಳಿಗೆ ಜಿಲ್ಲಾಧಿಕಾರಿ ಸೂಚನೆಯಂತೆ ನೋಟಿಸ್‌ಗಳನ್ನು ನೀಡಿ, ಮಲದ ಗುಂಡಿಗಳನ್ನು ನಿರ್ಮಿಸಲು ಸೂಚಿಸಿ ಕ್ರಮಕೈಗೊಳ್ಳಲಾಗುವುದು. ನರಸಾಪುರ ಗ್ರಾಪಂ ವ್ಯಾಪ್ತಿಯಿಂದ ತ್ಯಾಜ್ಯ ನೀರು ಹರಿದು ತೊಂದರೆಯಾಗಿದೆ ಹೊರತು, ಕೆಸಿವ್ಯಾಲಿ ಯೋಜನೆಯ ನೀರಿನಿಂದ ತೊಂದರೆ ಇಲ್ಲ.
ಶೈಲಾರಾಜ್‌, ಅಧ್ಯಕ್ಷೆ, ಮಹೇಶ್‌ಕುಮಾರ್‌, ಪಿಡಿಒ, ನರಸಾಪುರ ಗ್ರಾಪಂ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ