ಆ್ಯಪ್ನಗರ

ಕೆಸಿ ವ್ಯಾಲಿಗೆ ತಡೆ: ಪ್ರತಿಭಟನೆ

ಕಳೆದ 13 ವರ್ಷಗಳಿಂದ ಕೋಲಾರ ಜಿಲ್ಲೆ ಸತತ ಬರಗಾಲ ಕಂಡಿದ್ದು ಇದನ್ನು ಹೋಗಲಾಡಿಸಲು ಹಿಂದಿನ ಕಾಂಗ್ರೆಸ್‌ ಸರಕಾರ ಕೆ.ಸಿ. ವ್ಯಾಲಿ ಯೋಜನೆ ಜಾರಿಗೆ ತಂದು ಅನುಷ್ಠಾನಗೊಳಿಸಿತ್ತು. ಆದರೆ ಕೆಲವು ಕಿಡಿಗೇಡಿಗಳು ಅದನ್ನು ತಪ್ಪಿಸಲು ನ್ಯಾಯಾಲಯದ ಮೊರೆ ಹೋಗಿದ್ದಾರೆಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ತಾಲೂಕು ಕಚೇರಿ ಮುಂಭಾಗ ಪ್ರತಿಭಟಿಸಿದರು.

Vijaya Karnataka 17 Jan 2019, 5:00 am
ಬಂಗಾರಪೇಟೆ: ಕಳೆದ 13 ವರ್ಷಗಳಿಂದ ಕೋಲಾರ ಜಿಲ್ಲೆ ಸತತ ಬರಗಾಲ ಕಂಡಿದ್ದು ಇದನ್ನು ಹೋಗಲಾಡಿಸಲು ಹಿಂದಿನ ಕಾಂಗ್ರೆಸ್‌ ಸರಕಾರ ಕೆ.ಸಿ. ವ್ಯಾಲಿ ಯೋಜನೆ ಜಾರಿಗೆ ತಂದು ಅನುಷ್ಠಾನಗೊಳಿಸಿತ್ತು. ಆದರೆ ಕೆಲವು ಕಿಡಿಗೇಡಿಗಳು ಅದನ್ನು ತಪ್ಪಿಸಲು ನ್ಯಾಯಾಲಯದ ಮೊರೆ ಹೋಗಿದ್ದಾರೆಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ತಾಲೂಕು ಕಚೇರಿ ಮುಂಭಾಗ ಪ್ರತಿಭಟಿಸಿದರು.
Vijaya Karnataka Web stay to kc valley protest
ಕೆಸಿ ವ್ಯಾಲಿಗೆ ತಡೆ: ಪ್ರತಿಭಟನೆ


ಕೆ.ಸಿ.ವ್ಯಾಲಿ ಯೋಜನೆಯಿಂದ ಕೊಳಚೆ ನೀರನ್ನು ಸಂಸ್ಕರಿಸಿ ಜಿಲ್ಲೆಯ ಕೆರೆಗಳಿಗೆ ಹರಿಸುವ ಯೋಜನೆಯನ್ನು ಅನುಷ್ಠಾನಗೊಳಿಸಿದ್ದರಿಂದಾಗಿ ಈಗಾಗಲೇ ಕೆಲವು ಕೆರೆಗಳಲ್ಲಿ ನೀರು ತುಂಬಿ ಅಂತರ್ಜಲವೂ ಅಭಿವೃದ್ಧಿಯಾಗಿದೆ. ಸತತ ಬರಗಾಲದಿಂದ 1500 ಅಡಿ ಆಳಕ್ಕೆ ಕುಸಿದಿದ್ದ ಅಂತರ್ಜಲ ಈಗ 600 ಅಡಿಗೆ ಸಿಗುತ್ತಿದೆ. ಇದರಿಂದ ರೈತರಿಗೂ ಅನುಕೂಲವಾಗಿದೆ. ಆದರೆ ಕೆಲವು ಪಟ್ಟಭದ್ರಹಿತಾಸಕ್ತಿಗಳು ಯೋಜನೆಯನ್ನು ವಿರೋಧಿಸಿ ನ್ಯಾಯಾಲಯದ ಮೊರೆ ಹೋಗುತ್ತಿರುವುದು ಖಂಡನೀಯ. ಸರಕಾರ ಕೂಡಲೇ ನುರಿತ ವಕೀಲರನ್ನು ನೇಮಿಸಿ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಕಲ್ಪಿಸುವ ಉದ್ದೇಶದಿಂದ ಸರಕಾರ ರೈತರ ವ್ಯವಸಾಯಕ್ಕೆ ಕೆ.ಸಿ.ವ್ಯಾಲಿ ನೀರು ಹಾಗೂ ಕುಡಿಯಲು ಎತ್ತಿನಹೊಳೆ ಯೋಜನೆ ತರಲು ಸರಕಾರ ಕೈಗೊಂಡಿದ್ದರೂ ಅದನ್ನು ತಡೆಯುವ ಪ್ರಯತ್ನಗಳು ನಡೆಯುತ್ತಿರುವುದು ಸರಿಯಲ್ಲ. ಕೆ.ಸಿ.ವ್ಯಾಲಿ ಯೋಜನೆ ಬಗ್ಗೆ ರಾಜ್ಯ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯಿಂದ ಒಂದಷ್ಟು ತಡವಾಯಿತು, ನಂತರ ಸರಕಾರ ಸೂಕ್ತ ದಾಖಲೆಗಳು ಜತೆಗೆ ನೀರಿನ ಸಂಸ್ಕರಣೆ ಬಗೆಗಿನ ಊಹಾಪೋಹಗಳನ್ನು ಪ್ರಯೋಗಾಲಯದ ವರದಿ ಸಮೇತ ನ್ಯಾಯಾಲಯಕ್ಕೆ ಸಲ್ಲಿಸಿದ್ದರಿಂದ ನ್ಯಾಯಾಲಯ ಗ್ರೀನ್‌ ಸಿಗ್ನಲ್‌ ನೀಡಿತ್ತು. ಈಗ ಸುಪ್ರೀಂ ಕೋರ್ಟ್‌ ಮೊರೆ ಹೋಗಿ ತಡೆಯಾಜ್ಞೆ ತರುವ ಮೂಲಕ ಯೋಜನೆಗೆ ಅಡ್ಡಗಾಲು ಹಾಕಿದ್ದಾರೆ. ಇವರು ನಿಜವಾದ ನೀರಾವರಿ ಹೋರಾಟಗಾರರಲ್ಲ, ನಕಲಿ ನೀರಾವರಿ ಹೋರಾಟಗಾರರು. ಇವರಿಂದ ಜಿಲ್ಲೆಗೆ ಅನ್ಯಾಯವಾಗುತ್ತಿದೆ. ಇಂತಹ ಹೋರಾಟಗಾರರ ವಿರುದ್ಧ ಕಾನೂನು ರೀತಿಯಲ್ಲಿ ಪಾಠ ಕಲಿಸಲು ಸರಕಾರ ಸಕಲ ಪ್ರಯತ್ನ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕೂಡಲೇ ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ನುರಿತ ವಕೀಲರನ್ನು ನೇಮಕ ಮಾಡಿ ಕೆ.ಸಿ.ವ್ಯಾಲಿ ಯೋಜನೆ ಬಗ್ಗೆ ಇರುವ ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್‌ ಮೂಲಕ ರಾಜ್ಯ ಸರಕಾರಕ್ಕೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಬ್ಬಣಿಶಿವಪ್ಪ, ಜಿಲ್ಲಾಧ್ಯಕ್ಷ ರಾಮೇಗೌಡ, ರವಿಚಂದ್ರ, ವೆಂಕಟೇಶಪ್ಪ, ದೇವರಾಜು, ಶ್ರೀನಿವಾಸ್‌, ತಿಮ್ಮಾರೆಡ್ಡಿ ಸೇರಿದಂತೆ ಹಲವರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ