ಆ್ಯಪ್ನಗರ

ಸೋಮರಾಸಹನಹಳ್ಳಿ ಗ್ರಾಮಸ್ಥರಿಗೆ ಮೂಲಸೌಲಭ್ಯದ್ದೇ ಚಿಂತೆ

ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ಸೋಮರಾಸನಹಳ್ಳಿ ಗ್ರಾಮ ಮೂಲಸೌಲಭ್ಯದಿಂದ ವಂಚಿತವಾಗಿರುವುದು ಒಂದೆಡೆಯಾದರೆ, ಶೌಚಾಲಯದಲ್ಲಿ ವಾಸಿಸುತ್ತಿರುವ ದರ್ಶನವೂ ಇಲ್ಲಾಗಲಿದೆ.

Vijaya Karnataka 19 Jun 2019, 5:00 am
ಜಿ.ಕೆ.ಮಂಜುನಾಥ್‌/ವಿ.ಸುಕುಮಾರ್‌ ಕೋಲಾರ/ತಾಯಲೂರು : ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ಸೋಮರಾಸನಹಳ್ಳಿ ಗ್ರಾಮ ಮೂಲಸೌಲಭ್ಯದಿಂದ ವಂಚಿತವಾಗಿರುವುದು ಒಂದೆಡೆಯಾದರೆ, ಶೌಚಾಲಯದಲ್ಲಿ ವಾಸಿಸುತ್ತಿರುವ ದರ್ಶನವೂ ಇಲ್ಲಾಗಲಿದೆ.
Vijaya Karnataka Web the worsening roadside routine the toilet darshan
ಸೋಮರಾಸಹನಹಳ್ಳಿ ಗ್ರಾಮಸ್ಥರಿಗೆ ಮೂಲಸೌಲಭ್ಯದ್ದೇ ಚಿಂತೆ


ಮೋತಕಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮರಾಸನಹಳ್ಳಿ ಗ್ರಾಮದಲ್ಲಿ 100ಕ್ಕೂ ಹೆಚ್ಚು ಮನೆಗಳಿವೆ. 450ರಿಂದ 500 ಜನಸಂಖ್ಯೆ ಒಳಗೊಂಡಿದೆ. ಪಂಚಾಯಿತಿಗೆ ಮಾತ್ರವಲ್ಲ, ಮುಳಬಾಗಲು ತಾಲೂಕಿಗೆ ಕಟ್ಟ ಕಡೆಯ ಗಡಿ ಗ್ರಾಮ ಇದಾಗಿದ್ದು, ಮೂಲಸೌಲಭ್ಯ ವಂಚಿತವಾಗಿರುವ ಇಲ್ಲಿನ ನಿವಾಸಿಗಳು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ಪರಿಶಿಷ್ಟ ಜಾತಿ ಕಾಲೊನಿಯಲ್ಲಿ ಬಹುತೇಕರು ಹೆಂಚಿನ ಮನೆಗಳಲ್ಲಿ ವಾಸವಾಗಿದ್ದಾರೆ. ಸೂಕ್ತ ಚರಂಡಿ ವ್ಯವಸ್ಥೆಯೂ ಹಲವೆಡೆ ಇಲ್ಲ. ಇರುವ ಚರಂಡಿಗಳನ್ನು ಸ್ವಚ್ಛಗೊಳಿಸುವ ಗೋಜಿಗೂ ಹೋಗಿಲ್ಲ. ಕೊಳಚೆ ನೀರು ಮತ್ತು ಇತ್ತೀಚೆಗೆ ಸುರಿದ ಮಳೆ ನೀರು ಚರಂಡಿಯಲ್ಲಿ ತುಂಬಿಕೊಂಡು ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಸ್ಥಳೀಯರಲ್ಲಿ ಆವರಿಸಿದೆ.

ಶೌಚಾಲಯದಲ್ಲಿ ವಾಸ: ಶೌಚಾಲಯದಲ್ಲಿ ವಾಸವಿರುವ ದರ್ಶನವೂ ಈ ಗ್ರಾಮದಲ್ಲಾಗಲಿದೆ.

ಗ್ರಾಮದ ಮಂಜುಳ ಎಂಬುವರು ವಾಸವಿದ್ದ ಮನೆಯನ್ನು ಕೆಡವಿ ಹಾಕಲಾಗಿತ್ತು. ಸರಕಾರದ ವತಿಯಿಂದ ಮನೆ ನಿರ್ಮಾಣಕ್ಕೂ ಹಣ ಮಂಜೂರಾಗಿತ್ತು. ಸಾಲಸೋಲ ಮಾಡಿ ಮನೆ ಪಾಯ ಹಂತದವರೆಗೆ ನಿರ್ಮಾಣ ಮಾಡಿದ್ದರು. ಎರಡು ವರ್ಷದಿಂದ ಮನೆ ನಿರ್ಮಾಣಕ್ಕೆ ಮಂಜೂರಾಗಿದ್ದ ಹಣದ ಧಕ್ಕದೆ, ಸ್ವಂತ ಸೂರಿನ ಕನಸು ನನಸಾಗಿಲ್ಲ. ಬೇರಡೆಯೂ ಮನೆ ಇಲ್ಲದ ಕಾರಣದಿಂದ ಅಂದಿನಿಂದ ಶೌಚಾಲಯವನ್ನೇ ಮನೆಯನ್ನಾಗಿಸಿಕೊಂಡು ಜೀವನ ಸಾಗಿಸುವಂತಾಗಿದೆ.

ಗ್ರಾಮದ ಪ್ರತಿ ಕುಟುಂಬ 2ರಿಂದ 3ರಂತೆ ಸುಮಾರು 80 ಸೀಮೆ ಹಸುಗಳನ್ನು ಸಾಕಣೆ ಮಾಡಲಾಗುತ್ತಿದೆ. ಆದರೆ, ಇಲ್ಲಿ ಹಾಲಿನ ಡೇರಿ ಇಲ್ಲದ ಕಾರಣ 3ಕಿ.ಮೀ. ದೂರದ ಮೋತಕಪಲ್ಲಿ ಮತ್ತು ಬಂಗಾರಪೇಟೆ ತಾಲೂಕಿನ ಸುಂದರಪಾಳ್ಯದಲ್ಲಿನ ಖಾಸಗಿ ಡೇರಿಗಳಿಗೆ ಹಾಲನ್ನು ನೀಡಬೇಕಾದ ದುಸ್ಥಿತಿ ಎದುರಾಗಿದೆ.

ಸೋಮರಾಸನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಡಾಂಬರೀಕರಣ ಭಾಗ್ಯವೂ ಇಲ್ಲ. ಇದುವರೆಗೂ ಈ ಗ್ರಾಮಕ್ಕೆ ಬಸ್‌ ಸೌಲಭ್ಯ ಇಲ್ಲ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ದ್ವಿಚಕ್ರ ವಾಹನ ಮತ್ತು ಆಟೋಗಳನ್ನು ಅವಲಂಬಿಸಿದ್ದಾರೆ. ಕೆಲ ಸಮಯದಲ್ಲಿ ಕಾಲ್ನಡಿಗೆಯಲ್ಲಿ ತೆರಳಬೇಕಿದೆ.

ಸರಕಾರಿ ಕಿರಿಯ ಕನ್ನಡ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರದ ಕಟ್ಟಡಗಳು ಶಿಥಿಲಾವ್ಯಸವ್ಥೆ ತಲುಪಿವೆ. ಗೋಡೆಗಳು ಬಿರುಕು ಬಿಟ್ಟಿದ್ದು, ಮಳೆ ಸುರಿದ ಸಮಯದಲ್ಲಿ ನೀರು ಸೋರುತ್ತಿದೆ. ಇದರಿಂದ ಮಕ್ಕಳಿಗೆ ಪಾಠ ಪ್ರವಚನಕ್ಕೂ ತೊಂದರೆಯಾಗುತ್ತಿದೆ.

ಸೋಮರಾಸನಹಳ್ಳಿ ಗ್ರಾಮಕ್ಕೆ ಮೂಲಸೌಲಭ್ಯ ಒದಗಿಸುವ ಮೂಲಕ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಕಾರ್ಯೋನ್ಮುಖವಾಗಬೇಕೆಂಬ ಒತ್ತಾಯ ವ್ಯಕ್ತವಾಗಿದೆ.


ಸ್ವಚ್ಛತೆ ಕಾಪಾಡುವ ಕುರಿತು ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸಾಕಷ್ಟು ಭಾರಿ ನನ್ನ ಹಣದಿಂದ ಚರಂಡಿಗಳಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗಿದೆ. ಸ್ವಚ್ಛತೆ, ಮೂಲಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಗಮನಹರಿಸಬೇಕು.

-ರವಿ, ಸೋಮರಾಸನಹಳ್ಳಿ ಗ್ರಾ.ಪಂ ಸದಸ್ಯ.

ಸೋಮರಾಸನಹಳ್ಳಿ ಗ್ರಾಮದಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನೇದಿನೆ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ. 2006-07ರಲ್ಲಿ 40ವಿದ್ಯಾರ್ಥಿಗಳ ಜನಸಂಖ್ಯೆ ಇತ್ತು. ಈಗ 8 ವಿದ್ಯಾರ್ಥಿಗಳಿದ್ದಾರೆ.ಗ್ರಾಮಕ್ಕೆ ಮೂಲಸೌಲಭ್ಯವನ್ನು ಒದಗಿಸಬೇಕು.

- ಅಮರಾರೆಡ್ಡಿ, ಸೋಮರಾಸನಹಳ್ಳಿ ಗ್ರಾಮಸ್ಥ.




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ