ಆ್ಯಪ್ನಗರ

** ಕೇಂದ್ರದ ಎನ್‌ಎಲ್‌ಎಂ ತಂಡ ಜಿಲ್ಲೆಗೆ ಭೇಟಿ

ಕೇಂದ್ರ ಸರಕಾರದ ನಾನಾ ಯೋಜನೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಆಗಿರುವ ಪ್ರಗತಿ ಕುರಿತು ಎನ್‌ಎಲ್‌ಎಂ (ನ್ಯಾಷನಲ್‌ ಲೆವೆಲ್‌ ಮಾನಿಟರಿಂಗ್‌) ತಂಡ ಝಬೀರ್‌ ನಾಯಕತ್ವದಲ್ಲಿ ಜಿಲ್ಲೆಗೆ ಮಂಗಳವಾರ ಭೇಟಿ ನೀಡಿ, ನಗರದ ಜಿಪಂ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿತು.

Vijaya Karnataka 24 Oct 2018, 5:00 am
ಕೋಲಾರ: ಕೇಂದ್ರ ಸರಕಾರದ ನಾನಾ ಯೋಜನೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಆಗಿರುವ ಪ್ರಗತಿ ಕುರಿತು ಎನ್‌ಎಲ್‌ಎಂ (ನ್ಯಾಷನಲ್‌ ಲೆವೆಲ್‌ ಮಾನಿಟರಿಂಗ್‌) ತಂಡ ಝಬೀರ್‌ ನಾಯಕತ್ವದಲ್ಲಿ ಜಿಲ್ಲೆಗೆ ಮಂಗಳವಾರ ಭೇಟಿ ನೀಡಿ, ನಗರದ ಜಿಪಂ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿತು.
Vijaya Karnataka Web visit the districts nlm team district
** ಕೇಂದ್ರದ ಎನ್‌ಎಲ್‌ಎಂ ತಂಡ ಜಿಲ್ಲೆಗೆ ಭೇಟಿ


ಈ ವೇಳೆ ಮಾತನಾಡಿದ ಝಬೀರ್‌, ಜಿಲ್ಲೆಯ 5 ಐದು ತಾಲೂಕುಗಳಲ್ಲಿ 10 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡಿದ್ದ ಅ.24 ರಿಂದ ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಭೇಟಿ ನೀಡಿ ನಡೆದಿರುವ ಕಾಮಗಾರಿ ಪರಿಶೀಲಿಸಲಾಗುವುದು. ಕಾಮಗಾರಿ ಗುಣಮಟ್ಟ, ಖರ್ಚಾಗಿರುವ ಹಣ ಎಷ್ಟು ಎಂಬುದರ ಮಾಹಿತಿ ಪಡೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಕೇಂದ್ರ ಸರಕಾರದ ಯೋಜನೆಗಳಾದ ಎನ್‌ಆರ್‌ಇಜಿಎಸ್‌, ಎನ್‌ಆರ್‌ಎಲ್‌ಎಂ, ಪಿಎಂಎವೈ, ಪಿಎಂಜಿಎಸ್‌ವೈ, ಡಿಐಎಲ್‌ಆರ್‌ಎಂಪಿ ಯೋಜನೆಗಳಡಿ ಜಿಲ್ಲೆಯಲ್ಲಿ ಆಗಿರುವ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದಾಗಿ ಹೇಳಿದರು.

ಜಿಲ್ಲೆಯಲ್ಲಿ 7 ದಿವಸ ಇರುತ್ತೇವೆ ತಾಲೂಕಿಗೆ ಎರಡು ಅಥವಾ ಮೂರು ಗ್ರಾ.ಪಂ.ಗಳಲ್ಲಿ ಪ್ರವಾಸ ಕೈಗೊಳ್ಳಲಾಗುವುದು. ಎಂದ ಅವರು ನರೇಗಾ ಸೇರಿದಂತೆ ನಾನಾ ಯೋಜನೆಗಳಲ್ಲಿ ಆಗಿರುವ ಕಾಮಗಾರಿಗಳು ಮತ್ತು ಹಣ ಖರ್ಚಾಗಿರುವ ವಿವರಗಳನ್ನು ತಮಗೆ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿಯೊಂದು ಗ್ರಾ.ಪಂ.ಯಲ್ಲಿ ಐದು ಕಾಮಗಾರಿ ಪರಿಶೀಲಿಸಲಾಗುವುದು. ಜತೆಗೆ ಐದು ಜಾಬ್‌ಕಾರ್ಡ್‌ ಪಡೆದಿರುವವರನ್ನು ಮಾತಾಡಿಸಿ ಅವರಿಂದ ಮಾಹಿತಿ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಇದರ ಜತೆಗೆ ಕೇಂದ್ರ ಸರಕಾರದಿಂದ ನೀಡುತ್ತಿರುವ ವಿಧವಾ ವೇತನ,ವೃದ್ಧಾಪ್ಯ ವೇತನ ಸೇರಿದಂತೆ ನಾನಾ ಯೋಜನೆಗಳ ಪರಿಶೀಲನೆ ನಡೆಸಲಾಗುವುದು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಅ.24 ರಂದು ಮುಳಬಾಗಿಲು ತಾಲೂಕಿನ ಉತ್ತನೂರು, ತಾಯಲೂರು, 25 ರಂದು ಮುಳಬಾಗಿಲು ತಾಲೂಕಿನ ಸೊನ್ನವಾಡಿ ಹಾಗೂ ಅನುಗೊಂಡನಹಳ್ಳಿ, 26 ರಂದು ಕೋಲಾರ ತಾಲೂಕಿನ ಮಣಿಘಟ್ಟ ಹಾಗೂ ಹುತ್ತೂರು, 27 ರಂದು ಇದೇ ತಾಲೂಕಿನ ಬೆಳಮಾರನಹಳ್ಳಿ . 29 ರಂದು ಬಂಗಾರಪೇಟೆ ತಾಲೂಕಿನ ದೋಣಿ ಮಡಗು ಹಾಗೂ ಹುಲೆಬೆಲೆ, 30 ರಂದು ಅದೇ ತಾಲೂಕಿನ ರಾಮಸಾಗರ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಲಾಗುವುದು ಎಂದರು.

ನಾವೇನು ಪೊಲೀಸರಲ್ಲ; ಮಾಹಿತಿ ನೀಡಿ ಸಾಕು: ನಾವು ಪೊಲೀಸರಲ್ಲ, ನಿಮ್ಮನ್ನು ಹೆದರಿಸಿ ಬೆದರಿಸುವ ಅಧಿಕಾರಿಗಳೂ ನಾವಲ್ಲ, ನರೇಗಾ ಸೇರಿದಂತೆ ಕೇಂದ್ರ ಸರಕಾರದ ನಾನಾ ಯೋಜನೆಗಳಲ್ಲಿ ಆಗಿರುವ ಮಾಹಿತಿ ಮತ್ತು ಕಾಮಗಾರಿಗಳನ್ನು ತೋರಿಸಿದರೆ ಸಾಕು ಎಂದು ಎನ್‌ಎಲ್‌ಎಂ ತಂಡದ ನಾಯಕ ಝಬೀರ್‌ ತಿಳಿಸಿದರು.

ಜಿಲ್ಲೆಯ ಮುಳಬಾಗಿಲು ತಾಲೂಕಿನ ತಾಯಲೂರು ಮತ್ತು ಬಂಗಾರಪೇಟೆ ತಾಲೂಕಿನ ರಾಮಸಾಗರ ಗ್ರಾಮಗಳನ್ನು ಸಂಸದರ ಆದರ್ಶ ಗ್ರಾಮ.ಪಂ.ಗಳನ್ನಾಗಿ ತೆಗೆದುಕೊಳ್ಳಲಾಗಿದ್ದು, ಈ ಎರಡೂ ಪಂಚಾಯಿತಿಗಳಲ್ಲಿ ಆಗಿರುವ ಕಾಮಗಾರಿಗಳ ಪರಿಶೀಲನೆ ನಡೆಸಲಾಗುವುದು ಎಂದರು.

ಜಿಪಂ ಸಿಇಒ ಜಿ.ಜಗದೀಶ್‌ ಮಾತನಾಡಿ, ಕೇಂದ್ರದಿಂದ ಬಂದಿರುವ ತಂಡಕ್ಕೆ ನಾನಾ ಯೋಜನೆಗಳಲ್ಲಿ ಆಗಿರುವ ಪ್ರಗತಿ ಬಗ್ಗೆ ಸರಿಯಾದ ಮಾಹಿತಿ ನೀಡಬೇಕಿದ್ದು, ಇದರ ಜವಾಬ್ದಾರಿಯನ್ನು ಆಯಾ ತಾಪಂ ಇಒಗಳೇ ನೀಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಜಿ.ಪಂ.ಉಪಕಾರ್ಯದರ್ಶಿ ಲಕ್ಷ್ಮೀನಾರಾಯಣ, ಯೋಜನಾಧಿಕಾರಿ ರವಿಚಂದ್ರ ಇದ್ದರು.


ಗೈರಾದವರ ವಿರುದ್ಧ ಗರಂ ಆದ ಸಿಇಒ: ಇಬ್ಬರಿಗೆ ನೋಟಿಸ್‌ !

ಸಭೆಗೆ ಗೈರು ಹಾಜರಾಗಿದ್ದ ಅಧಿಕಾರಿಗಳ ವಿರುದ್ಧ ಜಿಪಂ ಜಿ.ಜಗದೀಶ್‌ ಸಿಇಒ ಕೆಂಡಾ ಮಂಡಲರಾಗಿ, ಅಸಮಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳು ಹುಡುಗಾಟ ಆಡುವುದು ಸರಿಯಲ್ಲ. ಕೇಂದ್ರ ಸರಕಾರ ನಾನಾ ಯೋಜನೆಗಳಲ್ಲಿ ಜಿಲ್ಲೆಗೆ ಸಾಕಷ್ಟು ಅನುದಾನ ಒದಗಿಸಿದೆ ಅದಕ್ಕೆ ಸಂಬಂಧಿಸಿದಂತೆ ಕಾಮಗಾರಿಗಳ ಪರಿಶೀಲನೆಗೆ ಎನ್‌ಎಲ್‌ಎಂ ತಂಡ ಬಂದಿದೆ. ಇಂತಹ ಸಂದರ್ಭದಲ್ಲಿಯೂ ಅಧಿಕಾರಿಗಳು ಗೈರು ಹಾಜರಾದರೆ ಹೇಗೆ ಎಂದು ಪ್ರಶ್ನಿಸಿದರು.

ನರೇಗಾ ಯೋಜನೆಯಡಿ ಸರಿಯಾಗಿ ಅನುದಾನ ಬಳಸಿಕೊಳ್ಳದ ಮುಳಬಾಗಿಲು ಇಒ ಸರ್ವೇಶ್‌ ಹಾಗೂ ಶ್ರೀನಿವಾಸಪುರ ಇಒ ನಾರಾಯಣಸ್ವಾಮಿ ಅವರಿಗೆ ಶೋಕಾಸ್‌ ನೋಟಿಸ್‌ ನೀಡುವಂತೆ ಸೂಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ