ಆ್ಯಪ್ನಗರ

ಕಾಡಾನೆ ದಾಳಿ: ಲಕ್ಷಾಂತರ ರೂ. ಮೌಲ್ಯದ ಅಪಾರ ಬೆಳೆ ನಷ್ಟ

ಬೂದಿಕೋಟೆ ಹೋಬಳಿ ಮತ್ತೆ ಕಾಡಾನೆಗಳ ಹಾವಳಿಗೆ ತುತ್ತಾಗಿದೆ. ಇಲ್ಲಿಗೆ ಸಮೀಪದ ಮಾರಂಡಹಳ್ಳಿ ಗ್ರಾಮಕ್ಕೆ ಸೋಮವಾರ ರಾತ್ರಿ ಲಗ್ಗೆ ಇಟ್ಟಿರುವ 20 ಕಾಡಾನೆಗಳ ಹಿಂಡು, ಟೊಮೆಟೊ, ರಾಗಿ, ಜೋಳ, ಬಾಳೆ ಮತ್ತು ಪಪ್ಪಾಯಿ ತೋಟವನ್ನು ನಾಶಪಡಿಸಿವೆ.

Vijaya Karnataka 26 Dec 2018, 5:00 am
ಬೂದಿಕೋಟೆ : ಬೂದಿಕೋಟೆ ಹೋಬಳಿ ಮತ್ತೆ ಕಾಡಾನೆಗಳ ಹಾವಳಿಗೆ ತುತ್ತಾಗಿದೆ. ಇಲ್ಲಿಗೆ ಸಮೀಪದ ಮಾರಂಡಹಳ್ಳಿ ಗ್ರಾಮಕ್ಕೆ ಸೋಮವಾರ ರಾತ್ರಿ ಲಗ್ಗೆ ಇಟ್ಟಿರುವ 20 ಕಾಡಾನೆಗಳ ಹಿಂಡು, ಟೊಮೆಟೊ, ರಾಗಿ, ಜೋಳ, ಬಾಳೆ ಮತ್ತು ಪಪ್ಪಾಯಿ ತೋಟವನ್ನು ನಾಶಪಡಿಸಿವೆ.
Vijaya Karnataka Web wildlife attack rs massive loss of value
ಕಾಡಾನೆ ದಾಳಿ: ಲಕ್ಷಾಂತರ ರೂ. ಮೌಲ್ಯದ ಅಪಾರ ಬೆಳೆ ನಷ್ಟ


ಗ್ರಾಮದ ನಾರಾಯಣ ಸ್ವಾಮಿ ಎಂಬ ರೈತರ ತೋಟ ಆನೆಗಳ ಹಾವಳಿಯಲ್ಲಿ ಬಹುತೇಕ ನಾಶವಾಗಿದೆ. ಎರಡು ಎಕರೆಯಲ್ಲಿ ಬೆಳೆದಿದ್ದ ಟೊಮೆಟೊ, ಒಂದು ಎಕರೆ ರಾಗಿ, ಬಾಳೆ, ನುಗ್ಗೆ ಮತ್ತು ಪಪ್ಪಾಯಿ ಗಿಡಗಳನ್ನು ಆನೆಗಳು ನಾಶಪಡಿಸಿವೆ. ಬೊಮ್ಮಗಾನಹಳ್ಳಿ ಗ್ರಾಮ ವೆಂಕಟೇಶಪ್ಪ ಅವರ ಕಣಕ್ಕೆ ನುಗ್ಗಿದ ಆನೆಗಳ ಹಿಂಡು ರಾಗಿ ಮೆದೆಯನ್ನು ತಿಂದು ಹಾಳು ಮಾಡಿದೆ. ಗುಲ್ಲಹಳ್ಳಿ ದಿನ್ನೂರು, ಮೂತನೂರು, ಮಾರಂಡಹಳ್ಳಿ, ಬೊಮ್ಮಗಾನಹಳ್ಳಿ ರೈತರು ಪ್ರತಿ ವರ್ಷ ಕಾಡಾನೆಗಳ ದಾಳಿಯಿಂದ ನಷ್ಟಕ್ಕೆ ಒಳಗಾಗುವುದು ಸಾಮಾನ್ಯವಾಗಿದೆ.

ಹೆಚ್ಚಾದ ಆನೆಗಳ ಸಂಖ್ಯೆ:


ಬೂದಿಕೋಟೆ ಗ್ರಾಮ ತಮಿಳುನಾಡು ಅರಣ್ಯದೊಂದಿಗೆ ಗಡಿ ಹಂಚಿಕೊಂಡಿವೆ. ಆದ್ದರಿಂದ ಈ ಗ್ರಾಮಗಳು ಪ್ರತಿ ವರ್ಷ ಆನೆಗಳ ದಾಳಿಗೆ ತುತ್ತಾಗುವುದು ಸಾಮಾನ್ಯವಾಗಿದೆ. ಇದುವರೆಗೂ ಎರಡು ಅಥವಾ ಮೂರರ ಗುಂಪುಗಳಲ್ಲಿ ಬರುತ್ತಿದ್ದ ಕಾಡಾನೆಗಳ ಸಂಖ್ಯೆ ಈ ವರ್ಷ 20ಕ್ಕೆ ಏರಿರುವುದು ರೈತರನ್ನು ಕಂಗಾಲಾಗಿಸಿದೆ.

ಪ್ರಾಣಭೀತಿಯಲ್ಲಿ ರೈತರು:

ಹೊಲಗಳಿಗೆ ದಾಳಿ ಇಡುತ್ತಿರುವ ಆನೆಗಳ ಗುಂಪಿನಲ್ಲಿ ಮರಿಗಳು ಇವೆ. ಮರಿಗಳನ್ನು ಹೊಂದಿರುವ ಆನೆಗಳ ಗುಂಪು ರೈತರ ಪಾಲಿಗೆ ಹೆಚ್ಚು ಅಪಾಯಕಾರಿ. ಹೊಲಗಳಲ್ಲಿ ಮೇಯುತ್ತಿರುವ ಆನೆಗಳನ್ನು ಓಡಿಸಲು ಹೋದರೆ, ಮರಿಗಳನ್ನು ರಕ್ಷಿಸಿಕೊಳ್ಳಲು ಆನೆಗಳು ತಿರುಗಿಬೀಳುವುದೇ ಜಾಸ್ತಿ. ಹೊಲಗಳಿಂದ ಕಾಡಿಗೆ ಓಡಿ ಹೋಗುವ ಬದಲಿಗೆ ಓಡಿಸಲು ಹೋದ ಜನರ ಗುಂಪಿನ ಮೇಲೆಯೇ ಆನೆಗಳು ದಾಳಿ ನಡೆಸುತ್ತವೆ. ಆದ್ದರಿಂದ ಅವು ಬೆಳೆ ಹಾಳು ಮಾಡುವುದನ್ನು ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳುವಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಪ್ರಾಣ ಹಾನಿ:

ಈ ಭಾಗದಲ್ಲಿ ಕಾಡಾನೆಗಳ ದಾಳಿಗೆ ಮನುಷ್ಯರ ಪ್ರಾಣ ಹಾನಿ ಸಾಮಾನ್ಯವಾಗಿದೆ. ಈ ಹಿಂದೆ ಆನೆಗಳ ದಾಳಿಗೆ ಈಡಾಗಿ ಮೂರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿ ವರ್ಷ ಡಿಸೆಂಬರ್‌ನಿಂದ ಫೆಬ್ರವರಿ ನಡುವೆ ಆನೆಗಳ ಹಾವಳಿ ಹೆಚ್ಚಿರುತ್ತದೆ.

ಅರಣ್ಯ ಅಧಿಕಾರಿಗಳ ಕಾಲ್ಚೆಂಡಾಟ:

ಕಾಡಾನೆ ಹಾವಳಿ ನಿಯಂತ್ರಣಕ್ಕೆ ಅರಣ್ಯ ಅಧಿಕಾರಿಗಳು ಸರಿಯಾದ ಯೋಜನೆ ರೂಪಿಸದಿರುವುದೇ ನಷ್ಟ ಹೆಚ್ಚಲು ಕಾರಣವಾಗಿದೆ. ರಾಜ್ಯದ ಅರಣ್ಯಾಧಿಕಾರಿಗಳು ಆನೆಗಳನ್ನು ತಮಿಳುನಾಡಿನತ್ತ ಓಡಿಸಿದರೆ, ತಮಿಳುನಾಡಿ ಅರಣ್ಯಾಧಿಕಾರಿಗಳು ರಾಜ್ಯದತ್ತ ಓಡಿಸುತ್ತಾರೆ. ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಓಡಾಡುವ ಆನೆಗಳು ಸಿಟ್ಟು ಹೆಚ್ಚಾಗಿ, ಪೂರ್ತಿ ಹೊಲ ನಾಶ ಮಾಡುತ್ತಿವೆ. ಒಟ್ಟಿನಲ್ಲಿ ಅರಣ್ಯ ಅಧಿಕಾರಿಗಳ ಕಾಲ್ಚೆಂಡಾಟದಲ್ಲಿ ರೈತರು ಹೈರಾಣಾಗಿ ಹೋಗುತ್ತಿದ್ದಾರೆ ಎಂಬುದು ಗ್ರಾಮಸ್ಥರ ದೂರು.

ತಮಿಳುನಾಡಿನ ಅರಣ್ಯ ಸಿಬ್ಬಂದಿ 20 ಕಾಡಾನೆಗಳ ಹಿಂಡನ್ನು ರಾಜ್ಯದತ್ತ ಓಡಿಸಿರುವುದ ಬಗ್ಗೆ ಎರಡು ದಿನಗಳ ಹಿಂದೆ ನಮಗೆ ಮಾಹಿತಿ ಬಂದಿತ್ತು. ಆದರೆ,ನಾವು ನಿರೀಕ್ಷಿಸಿದ್ದಕ್ಕಿಂತಲೂ ಬೇಗನೇ ಆನೆಗಳು ರಾಜ್ಯದ ಗ್ರಾಮಗಳಿಗೆ ದಾಳಿ ನಡೆಸಿವೆ. ಈಗ ಗೊಡಗಹಳ್ಳಿ ಅರಣ್ಯ ಮಧ್ಯಭಾಗದಲ್ಲಿರುವ ಕೆರೆಯ ಪಕ್ಕದಲ್ಲಿ ಅವರು ಬೀಡು ಬಿಟ್ಟಿವೆ. ಅವುಗಳನ್ನು ಕಾಡಿನತ್ತ ಕಳಿಸಲು ಪ್ರಯತ್ನಿಸಲಾಗುತ್ತಿದೆ. ಬೆಳೆ ನಷ್ಟ ಹೊಂದಿದ ರೈತರಿಗೆ ಸಮೀಕ್ಷೆ ನಡೆಸಿ ಪರಿಹಾರ ಕೊಡಿಸಲಾಗುವುದು.

ರಾಜಪ್ಪ ವನಪಾಲಕರು


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ