Please enable javascript.ಕೈಗಾರಿಕೆಗೆ ಜಮೀನು: ಕೃಷಿಗೆ ಧಕ್ಕೆ! - ಕೈಗಾರಿಕೆಗೆ ಜಮೀನು: ಕೃಷಿಗೆ ಧಕ್ಕೆ! - Vijay Karnataka

ಕೈಗಾರಿಕೆಗೆ ಜಮೀನು: ಕೃಷಿಗೆ ಧಕ್ಕೆ!

ವಿಕ ಸುದ್ದಿಲೋಕ 18 Apr 2017, 9:00 am
Subscribe

ಕೃಷಿ ಜಮೀನು ಹಾಗೂ ಜನವಸತಿ ಬಳಿಯೇ ಕೈಗಾರಿಕೆ ಉದ್ದೇಶಕ್ಕೆ ಭೂಮಿ ಪರಿವರ್ತನೆ ಮಾಡುತ್ತಿರುವ ಪ್ರಕರಣ ಜಿಲ್ಲಾ ಕೇಂದ್ರದ ಕೂಗಳತೆ ದೂರದಲ್ಲಿ ಹೆಚ್ಚಾಗುತ್ತಿದ್ದು, ಇಂತಹ ಕಾನೂನು ಬಾಹಿರ ನೀತಿಗೆ ಜಿಲ್ಲಾಡಳಿತವೇ ಸಮ್ಮತಿಸಿರುವುದು ಅಚ್ಚರಿ ಮೂಡಿಸಿದೆ.

ಕೈಗಾರಿಕೆಗೆ ಜಮೀನು: ಕೃಷಿಗೆ ಧಕ್ಕೆ!

ಗಂಗಾಧರ ಬಂಡಿಹಾಳ, ಕೊಪ್ಪಳ

ಕೃಷಿ ಜಮೀನು ಹಾಗೂ ಜನವಸತಿ ಬಳಿಯೇ ಕೈಗಾರಿಕೆ ಉದ್ದೇಶಕ್ಕೆ ಭೂಮಿ ಪರಿವರ್ತನೆ ಮಾಡುತ್ತಿರುವ ಪ್ರಕರಣ ಜಿಲ್ಲಾ ಕೇಂದ್ರದ ಕೂಗಳತೆ ದೂರದಲ್ಲಿ ಹೆಚ್ಚಾಗುತ್ತಿದ್ದು, ಇಂತಹ ಕಾನೂನು ಬಾಹಿರ ನೀತಿಗೆ ಜಿಲ್ಲಾಡಳಿತವೇ ಸಮ್ಮತಿಸಿರುವುದು ಅಚ್ಚರಿ ಮೂಡಿಸಿದೆ.

ತಾಲೂಕಿನ ಟಣಕನಕಲ್‌ ಗ್ರಾಮದ ಬಳಿ ಸರ್ವೆ ನಂ. 109/2 ರಲ್ಲಿ 2 ಎಕರೆ ಜಮೀನು ವ್ಯವಸಾಯೇತರ ಕೈಗಾರಿಕಾ (ಜಲ್ಲಿಕಲ್ಲು ಪುಡಿ ಮಾಡುವ ಘಟಕ) ಉದ್ದೇಶಕ್ಕಾಗಿ ಭೂಪರಿವರ್ತನೆ ಮಾಡಿರುವುದು ಇದಕ್ಕೆ ಸ್ಯಾಂಪಲ್‌ ಎನಿಸಿದ್ದು, ಇಂತಹ ಹಲವು ಪ್ರಕರಣ ಸದ್ದಿಲ್ಲದೇ ಸಾಗಿವೆ. ಇದರಿಂದ ಕೃಷಿ ಚಟುವಟಿಕೆಗೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದಲ್ಲದೇ ಜನರ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ.

ಅವೈಜ್ಞಾನಿಕ: 26.6.2014 ರಂದು ಕೃಷಿ, ಜನವಸತಿ ಪ್ರದೇಶ ಪಕ್ಕದಲ್ಲಿಯೇ ಕೈಗಾರಿಕೆ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಲಾಗಿದೆ. ಆಗಿನ ಜಿಲ್ಲಾಧಿಕಾರಿ ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ಇದರಿಂದಾಗಿ ಜಲ್ಲಿಕಲ್ಲು ಪುಡಿ ಮಾಡುವ ಯಂತ್ರ ಆರಂಭವಾಗಿರುವುದರಿಂದ ಸುತ್ತಲಿನ ಜಮೀನುಗಳಲ್ಲಿ ತೋಟಗಾರಿಕೆ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಜನವಸತಿ ಪ್ರದೇಶ ಹಾಗೂ ಕೃಷಿ ಭೂಮಿ ಇರುವಲ್ಲಿ ಕೈಗಾರಿಕೆ ಉದ್ದೇಶಕ್ಕಾಗಿ ಜಮೀನು ಭೂ ಪರಿವರ್ತನೆ ಮಾಡಬಾರದು ಎನ್ನುವ ಸ್ಪಷ್ಟ ನಿಯಮವಿದ್ದರೂ ಅಧಿಕಾರಿಗಳು ಇದನ್ನು ಉಲ್ಲಂಘಿಸಿದ್ದಾರೆ. ಸ್ಥಳ ಪರಿಶೀಲನೆ ವರದಿ ಸಲ್ಲಿಸುವ ವೇಳೆಯಲ್ಲಿ ತಪ್ಪು ಮಾಹಿತಿ ನೀಡಲಾಗಿದೆ. ಜತೆಗೆ ಮತ್ತೊಂದು ಅಚ್ಚರಿ ಅಂಶವೆಂದರೆ ಜಲ್ಲಿಕಲ್ಲು ಆರಂಭವಾದ ಜಮೀನು ಸರಕಾರಿ ಜಾಗದಲ್ಲಿ ಎನ್ನುವ ಆರೋಪ ರೈತರಿಂದ ಕೇಳಿ ಬರುತ್ತಿದೆ.

ಪರಿಶೀಲನೆಯಲ್ಲಿ ಎಡವಟ್ಟು: ವೆಂಕಟೇಶ ಹಾಲವರ್ತಿ ಎನ್ನುವವರಿಂದ ಡಿ.ಮಲ್ಲಪ್ಪ ಅವರ 2 ಎಕರೆ ಜಮೀನು ಖರೀದಿಸಿದ್ದಾರೆ. ಆದರೆ ಖರೀದಿ ಪತ್ರದಲ್ಲಿ ಚೆಕ್‌ಬಂದಿ ಪ್ರಕಾರ ಪೂರ್ವಕ್ಕೆ ಹನುಮಪ್ಪ ಬಾಳಪ್ಪ ಹಾಗೂ ಹನುಮಪ್ಪ ಪಂಪಣ್ಣ ಬಿಸರಳ್ಳಿ ಜಮೀನು, ಪಶ್ಚಿಮಕ್ಕೆ ಶಿವಪ್ಪ ಹನುಮಪ್ಪ, ಉತ್ತರಕ್ಕೆ ನನ್ನದೇ ಬೇರೆ ಜಮೀನು, ದಕ್ಷಿಣಕ್ಕೆ ಬಸವರಾಜ ತಿಪ್ಪಣ್ಣ ಅವರ ಜಮೀನು ಇದೆ ಎಂದು ಖರೀದಿ ಪತ್ರದಲ್ಲಿ ನಮೂದಾಗಿದೆ. ಜಿಲ್ಲಾಧಿಕಾರಿಯಿಂದ ಭೂ ಪರಿವರ್ತನೆಯ ಆದೇಶದಲ್ಲಿ ಪೂರ್ವಕ್ಕೆ ಸ.ನಂ. 79 ರ ಜಮೀನು, ಪಶ್ಚಿಮಕ್ಕೆ ಸ.ನಂ. 109/1 ರ ಜಮೀನು, ಉತ್ತರಕ್ಕೆ ವಹಿವಾಟಿನ ರಸ್ತೆ, ದಕ್ಷಿಣಕ್ಕೆ ಸ.ನಂ. 80 ರ ಜಮೀನು ಇದೆ ಎಂದು ನಮೂದು ಮಾಡಲಾಗಿದೆ. ಆದರೆ ಉತ್ತರಕ್ಕೆ ವಹಿವಾಟಿನ ರಸ್ತೆ ಎಂದಿದ್ದು, ಗ್ರಾಮ ನಕಾಶೆಯಲ್ಲಿ ರಸ್ತೆ ಇಲ್ಲ. ನಮೂದಿಸಿರುವ ಸರ್ವೆ ಸಂಖ್ಯೆ ಟಣಕನಕಲ್‌ ಗ್ರಾಮದ ಸರಕಾರಿ ಜಮೀನಿಗೆ ಒಳಪಡುತ್ತವೆ. ಅಂದಿನ ತಹಸೀಲ್ದಾರ್‌ 24.5.2014 ರಂದು ಸ್ಥಳ ಪರಿಶೀಲಿಸಿ ಜಮೀನಿಗೆ ರಸ್ತೆ ಇದೆ. ಸುತ್ತಲೂ ಯಾವುದೇ ಗಿಡಮರಗಳು ಇರುವುದಿಲ್ಲ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ವಾಸ್ತವವಾಗಿ 500 ಮೀಟರ್‌ ಒಳಗಡೆ ನಾಲ್ಕು ತೋಟಗಾರಿಕೆ ಬೆಳೆಗಳ ಮಾವು, ದಾಳಿಂಬೆಯ ತೋಪುಗಳಿವೆ ಎನ್ನುವುದನ್ನು ವರದಿಯಲ್ಲಿ ಪ್ರಸ್ತಾಪಿಸಿಲ್ಲ. ವರದಿ ನೀಡುವಾಗಲೇ ಎಡವಟ್ಟು ಮಾಡಿರುವುದರಿಂದ ಅವೈಜ್ಞಾನಿಕವಾಗಿ ಜಲ್ಲಿಕಲ್ಲು ಕ್ರಷರ್‌ ಆರಂಭವಾಗಿದೆ.

ಕಟ್ಟಡಕ್ಕೆ ಮಂಜೂರು: ಕೈಗಾರಿಕೆ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡುವುದಕ್ಕೆ ಮೊದಲೇ ಜಿಲ್ಲಾಡಳಿತ ಕಟ್ಟಡಗಳಿಗೆ ಜಮೀನು ನೀಡಿದೆ. ಸರ್ವೆ ನಂ.84 ರಲ್ಲಿ 19.32 ಎಕರೆ ಜಮೀನನ್ನು ಪೊಲೀಸ್‌ ಸಿಬ್ಬಂದಿ ವಸತಿ ಗೃಹ ನಿರ್ಮಾಣಕ್ಕಾಗಿ 30.6.2014 ರಂದು ನೀಡಿದ್ದಾರೆ. ಇದೇ ಸರ್ವೆ ನಂಬರ್‌ನಲ್ಲಿ ಜಿಲ್ಲಾ ತರಬೇತಿ ಸಂಸ್ಥೆಗೆ 5ಎಕರೆ ಜಮೀನು 30.7.2012 ರಂದು ಮಂಜೂರುಗೊಳಿಸಿದೆ. ಆದರೆ ಈಗ ಇದೇ ಜಾಗದಲ್ಲಿ ಖಾಸಗಿ ಮಾಲೀಕರ ಜಲ್ಲಿ ಕ್ರಷರ್‌ ನಡೆದಿದ್ದು, ಅಧಿಕಾರಿಗಳು ಮಾಡಿದ ತಪ್ಪಿನಿಂದ ನೂರಾರು ಸಂಕಷ್ಟ ಎದುರಾಗಿವೆ.
------

ಜಲ್ಲಿ ಕಲ್ಲು ಪುಡಿ ಮಾಡುವ ಯಂತ್ರದಿಂದ ಪಕ್ಕದ ತೋಟಗಾರಿಕೆ ಬೆಳೆಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕಲ್ಲು ಪುಡಿ ಮಾಡುವ ವೇಳೆ ಹೊರಹೊಮ್ಮುವ ಧೂಳಿನಿಂದ ಇಳುವರಿ ಕುಂಠಿತವಾಗುತ್ತಿದ್ದು, ಬೆಳೆಗಳೆಲ್ಲ ಒಣಗುತ್ತಿವೆ. ಅಕ್ರಮವಾಗಿ ಆರಂಭವಾಗಿರುವ ಜಲ್ಲಿಕಲ್ಲು ಕ್ರಷರ್‌ ಬಂದ್‌ ಮಾಡಬೇಕು.

- ಬಸವರಾಜ್‌ ಗುಡ್ಲಾನೂರು ಹಾಗೂ ಇತರೆ ರೈತರು

..

ಅತ್ಯಾಧುನಿಕ ಯಂತ್ರ ಬಳಸಲಾಗುತ್ತಿದೆ. ಇದರಿಂದ ರೈತರಿಗೆ ಯಾವುದೇ ತೊಂದರೆ ಆಗುತ್ತಿಲ್ಲ. ಜಿಲ್ಲಾಡಳಿತ ಹಾಗೂ ಪರಿಸರ ಇಲಾಖೆಯಿಂದ ಅನುಮತಿ ಪಡೆದ ಮೇಲೆ ಜಲ್ಲಿ ಕ್ರಷರ್‌ ಯಂತ್ರ ಆರಂಭಿಸಲಾಗಿದೆ. ಕೆಲವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಬೇಕಾಗಿರುವ ದಾಖಲೆಗಳೆಲ್ಲ ನಮ್ಮ ಬಳಿ ಇವೆ. ಬ್ಯಾಂಕ್‌ ನಿಂದ ಸಾಲ ಪಡೆದಿದ್ದು, ಅಧಿಕಾರಿಗಳು ದಾಖಲೆ ನೋಡಿಯೇ ಸಾಲ ನೀಡಿದ್ದಾರೆ.

- ಡಿ.ಮಲ್ಲಪ್ಪ, ಮಾಲೀಕ, ಕ್ರಷರ್‌

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ