ಆ್ಯಪ್ನಗರ

ಆನಂದ್‌ಸಿಂಗ್‌ಗೆ ಕೊಪ್ಪಳ ಉಸ್ತುವಾರಿ ಹೊಣೆ; ಒಂದೇ ವರ್ಷದಲ್ಲಿ ಹಾಲಪ್ಪ ಆಚಾರ್‌ ಚೇಂಜ್‌

ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಷ್ಟರಲ್ಲಿಯೇ ಉಸ್ತುವಾರಿ ಕಸಿದು ಬೇರೆ ಜಿಲ್ಲೆಗೆ ಕೊಟ್ಟಿರುವುದು ಜಿಲ್ಲೆಯ ಪಾಲಿಗೆ ಅಭಿವೃದ್ಧಿಯಲ್ಲಿ ಹಿನ್ನಡೆಯಾಗುವಂತೆ ಮಾಡಿದೆ.

Vijaya Karnataka 24 Jan 2022, 7:59 pm
ಕೊಪ್ಪಳ: ಜಿಲ್ಲೆಯ ಸಮಸ್ಯೆಗೆ ಸ್ಪಂದಿಸುವ ಮುನ್ನವೇ ಜಿಲ್ಲೆಯವರಾದ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ ಅವರನ್ನು ಬೀಳ್ಕೊಟ್ಟ ಬಿಜೆಪಿ ಸರಕಾರ, ನೆರೆಯ ಜಿಲ್ಲೆಯ ಸಚಿವ ಆನಂದ್‌ಸಿಂಗ್‌ ಅವರಿಗೆ ಮಣೆ ಹಾಕಿದೆ.
Vijaya Karnataka Web ಆನಂದ್‌ ಸಿಂಗ್‌
ಆನಂದ್‌ ಸಿಂಗ್‌


ಬಿಜೆಪಿ ಸರಕಾರದ ಅವಧಿಯಲ್ಲಿ ಮೊದಲ ಬಾರಿಗೆ ಕೊಪ್ಪಳ ಜಿಲ್ಲಾಉಸ್ತುವಾರಿ ಸಚಿವ ಸ್ಥಳೀಯರಿಗೆ ನೀಡಿದೆ ಎನ್ನುವ ಸಂತಸ ವರ್ಷ ತುಂಬುವುದರಲ್ಲಿಯೇ ನಿರಾಸೆ ಮೂಡಿಸಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಜಿಲ್ಲೆಯಿಂದ ಆಯ್ಕೆಯಾದ ಶಾಸಕರಿಗೆ ಸಚಿವ ಸ್ಥಾನ ಒದಗಿ ಬಂದಿರಲಿಲ್ಲ. ಅದರಲ್ಲೂ ಜಿಲ್ಲಾ ಉಸ್ತುವಾರಿ ಹೊಣೆಯಂತೂ ಮಾರುದ್ದ ಊರ ಎನ್ನುವಂತಾಗಿತ್ತು.

ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ, ಬೊಮ್ಮಾಯಿ ಕೈಯಲ್ಲೇ ಬೆಂಗಳೂರು! ಯಾರಿಗೆ ಯಾವ ಜಿಲ್ಲೆ?

ಬಿಜೆಪಿ ಸರಕಾರದ ಅವಧಿಯಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಶಿವರಾಜ್‌ ತಂಗಡಗಿ ಅವರಿಗೆ ಸಚಿವ ಸ್ಥಾನ ಸಿಕ್ಕಿದ್ದರೂ ಅವರು ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದರು. ಉಳಿದವರಿಗೆ ಈವರೆಗೆ ಸಚಿವ ಭಾಗ್ಯ ಒದಗಿರಲಿಲ್ಲ. ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಪ್ಪ ಆಚಾರ್‌ ಅವರಿಗೆ ಮೊದಲ ಬಾರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಒಟ್ಟೊಟ್ಟಿಗೆ ಬಂದ ಹಿನ್ನೆಲೆಯಲ್ಲಿ ಅಭಿವೃದ್ಧಿಯ ಕನಸು ಬೆಟ್ಟದಷ್ಟು ಏರಿಕೆಯಾಗಿತ್ತು. ಜಿಲ್ಲೆಯವರೇ ಆಗಿರುವ ಹಿನ್ನೆಲೆಯಲ್ಲಿ ಹಳೆಯ ಯೋಜನೆಗಳಿಗೆ ಮರು ಜೀವ, ಹೊಸ ಯೋಜನೆಗಳಿಗೆ ರೂಪ ಸಿಗುವುದೆಂಬ ಭರವಸೆ ಜನರಲ್ಲಿ ಮನೆ ಮಾಡಿತ್ತು. ಇತ್ತೀಚೆಗಷ್ಟೇ ಶಾಶ್ವತ ವಿಮಾನ ನಿಲ್ದಾಣ ಹಾಗೂ ಸಿಂಗಟಾಲೂರು ಏತ ನೀರಾವರಿ ಯೋಜನೆ ಅನುಷ್ಠಾನ ಕುರಿತು ಸಿಎಂ ಬಸವರಾಜ ಬೊಮ್ಮಾಯಿ, ಮೂಲ ಸೌಕರ್ಯಗಳ ಅಭಿವೃದ್ಧಿ ಸಚಿವ ವಿ ಸೋಮಣ್ಣ ಅವರೊಂದಿಗೆ ಸಭೆ ನಡೆಸಿದ್ದರು. ಕೃಷ್ಣಾ ಬಿ ಸ್ಕೀಂ ಯೋಜನೆಯಡಿ ಕುಷ್ಟಗಿ, ಯಲಬುರ್ಗಾ, ಕನಕಗಿರಿ, ಕೊಪ್ಪಳ ತಾಲೂಕಿಗೆ ನೀರೊದಿಗಿಸುವ ಕುರಿತು ನಿಗಮದ ಅಧಿಕಾರಿಗಳ ಜತೆಗೆ ಸಭೆ ನಡೆಸಿದ್ದರು.

ಹಿನ್ನಡೆ

ಆದರೆ ಜಿಲ್ಲಾಉಸ್ತುವಾರಿ ಸಚಿವರಾಗಿ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಷ್ಟರಲ್ಲಿಯೇ ಉಸ್ತುವಾರಿ ಕಸಿದು ಬೇರೆ ಜಿಲ್ಲೆಗೆ ಕೊಟ್ಟಿರುವುದು ಜಿಲ್ಲೆಯ ಪಾಲಿಗೆ ಅಭಿವೃದ್ಧಿಯಲ್ಲಿ ಹಿನ್ನಡೆಯಾಗುವಂತೆ ಮಾಡಿದೆ. ಜಿಲ್ಲೆಯ ಪ್ರತಿಯೊಬ್ಬ ಶಾಸಕರು ಹಾಗೂ ಸಂಸದರು ನಮ್ಮ ಜಿಲ್ಲೆಯವರೇ ಉಸ್ತುವಾರಿ ಸಚಿವರಿದ್ದಾರೆ ಎನ್ನುವ ಅಭಿಮಾನದಿಂದಲೇ ಪ್ರಸ್ತಾವನೆಗಳನ್ನು ಸಚಿವರ ಮುಂದಿಡುತ್ತಿದ್ದರು. ಬೇರೆ ಜಿಲ್ಲೆಯವರು ಆದರೆ ಕೊಪ್ಪಳಕ್ಕೆ ಬಂದ ವೇಳೆ ಇಲ್ಲವೆ ಬೆಂಗಳೂರಿನಲ್ಲಿ ಭೇಟಿಯಾಗಿ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕಿತ್ತು. ಜಿಲ್ಲೆಯ ಜನಪ್ರತಿನಿಧಿಗಳಲ್ಲೂ ಆಶಾಭಾವನೆ ಮೂಡಿತ್ತು. ಆದರೆ ಹಾಲಪ್ಪ ಆಚಾರ್‌ ಅವರು ಜಿಲ್ಲಾಉಸ್ತುವಾರಿ ಸಚಿವರಾಗಿ ವರ್ಷ ಆಗುವುದರೊಳಗೆ ಬೇರೆ ಜಿಲ್ಲೆಗೆ ಬದಲಾವಣೆಯಾಗಿದ್ದಾರೆ.

ತನ್ನೂರಿನ ಶಾಲೆಗಾಗಿ ಜೀವನಕ್ಕಾಗಿ ಇದ್ದ 2 ಎಕರೆ ಭೂಮಿಯನ್ನೇ ದಾನ ಮಾಡಿದ ಕೊಪ್ಪಳದ ಅಜ್ಜಿ!

ವಿಶ್ವಾಸ

ಹೊಸದಾಗಿ ಜಿಲ್ಲಾಉಸ್ತುವಾರಿ ಸಚಿವರಾಗಿ ನೇಮಕವಾಗಿರುವ ಸಚಿವ ಆನಂದ್‌ಸಿಂಗ್‌ ಅವರು ಪಕ್ಕದ ವಿಜಯನಗರ ಜಿಲ್ಲೆಯವರು ಎನ್ನುವುದು ನೆಮ್ಮದಿ. ಆದರೆ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸುವರೇ ಎನ್ನುವುದು ಮುಂದಿರುವ ಪ್ರಶ್ನೆ. ಪ್ರವಾಸೋದ್ಯಮ ಸಚಿವರಾಗಿ ಆನೆಗೊಂದಿ ಭಾಗದ ಅಂಜನಾದ್ರಿ ಸೇರಿ ಇತರೆ ಐತಿಹಾಸಿಕ ಸ್ಥಳಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆ. ಈ ಭಾಗ ಅಭಿವೃದ್ಧಿಯಾದರೆ ವಿಜಯನಗರದ ವ್ಯಾಪಾರ, ವಹಿವಾಟಿನ ಮೇಲೆ ಹೊಡೆತ ಬೀಳುವ ಸಾಧ್ಯತೆಗಳನ್ನು ಅಲ್ಲ ಗಳೆಯುವಂತಿಲ್ಲ. ಆದ್ದರಿಂದ ಈ ಕಡೆ ಗಮನಹರಿಸುತ್ತಾರೆಯೇ? ಎನ್ನುವ ಪ್ರಶ್ನೆ ಜಿಲ್ಲೆಯ ಜನರನ್ನು ಕಾಡುತ್ತಿದೆ. ಸಿಂಗಟಾಲೂರು ಏತ ನೀರಾವರಿ ಯೋಜನೆ, ಕೃಷ್ಣಾ ಬಿ ಸ್ಕೀಂ, ಶಾಶ್ವತ ವಿಮಾನ ನಿಲ್ದಾಣ ಸೇರಿ ಹಲವಾರು ಯೋಜನೆಗಳಿಗೆ ಸೀಮಿತ ಅವಧಿಯಲ್ಲಿ ಹೊಸ ಸಚಿವರು ಪ್ರಯತ್ನಿಸಬೇಕಾಗಿದೆ. ಪಕ್ಕದ ಜಿಲ್ಲೆಯವರು ಆಗಿರುವುದರಿಂದ ಆಗಾಗ್ಗೆ ಆಗಮಿಸಿ ಅಭಿವೃದ್ಧಿ ಕಡೆಗೆ ಗಮನ ಹರಿಸುತ್ತಾರೆ ಎನ್ನುವ ವಿಶ್ವಾಸ ಜಿಲ್ಲೆಯ ಜನರಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ