ಆ್ಯಪ್ನಗರ

ಮಕ್ಕಳ ಹಕ್ಕುಗಳನ್ನು ಎಲ್ಲರೂ ಗೌರವಿಸಿ

ಬಾಲಕಾರ್ಮಿಕ ಪದ್ಧತಿ ಎನ್ನುವ ಸಾಮಾಜಿಕ ಪಿಡುಗನ್ನು ಸಮಾಜದಿಂದ ಸಂಪೂರ್ಣ ನಿರ್ಮೂಲನೆ ಮಾಡಬೇಕಿದ್ದು, ಈ ದಿಸೆಯಲ್ಲಿ ಎಲ್ಲರೂ ಮಕ್ಕಳ ಹಕ್ಕುಗಳಿಗೆ ಗೌರವ ನೀಡುವಂತಾಗಬೇಕು ಎಂದು ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಧೀಶ ಬಿ.ದಶರಥ ಹೇಳಿದರು.

ವಿಕ ಸುದ್ದಿಲೋಕ 22 Feb 2017, 9:00 am

ಕೊಪ್ಪಳ: ಬಾಲಕಾರ್ಮಿಕ ಪದ್ಧತಿ ಎನ್ನುವ ಸಾಮಾಜಿಕ ಪಿಡುಗನ್ನು ಸಮಾಜದಿಂದ ಸಂಪೂರ್ಣ ನಿರ್ಮೂಲನೆ ಮಾಡಬೇಕಿದ್ದು, ಈ ದಿಸೆಯಲ್ಲಿ ಎಲ್ಲರೂ ಮಕ್ಕಳ ಹಕ್ಕುಗಳಿಗೆ ಗೌರವ ನೀಡುವಂತಾಗಬೇಕು ಎಂದು ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಧೀಶ ಬಿ.ದಶರಥ ಹೇಳಿದರು.

ನಗರದ ಕೊಟಗಾರಗೇರಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷ ಣ ಇಲಾಖೆ ಹಾಗೂ ಡಾ.ಬಿ.ಆರ್‌. ಅಂಬೇಡ್ಕರ್‌ ಶಿಕ್ಷ ಣ ಮತ್ತು ಮಾನವ ಅಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಬಾಲ ಕಾರ್ಮಿಕ ಮತ್ತು ಹದಿಹರೆಯದವರ ದುಡಿಮೆ (ನಿಷೇಧ ಮತ್ತು ನಿಯಂತ್ರಣ) ಕಾಯಿದೆ ಕಳೆದ ವರ್ಷ ತಿದ್ದುಪಡಿಯಾಗಿದೆ. ಈ ಮೊದಲು 14 ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ಬಳಸುವಂತಿರಲಿಲ್ಲ. ಕಾಯಿದೆ ತಿದ್ದುಪಡಿಯಿಂದಾಗಿ, ಇದೀಗ 18 ವರ್ಷದೊಳಗಿನ ಯಾವುದೇ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ಅಥವಾ ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿದಲ್ಲಿ 2 ವರ್ಷ ಜೈಲು ಹಾಗೂ 50 ಸಾವಿರ ರೂ. ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಮಕ್ಕಳ ನ್ಯಾಯ (ಪೋಷಣೆ ಮತ್ತು ರಕ್ಷ ಣೆ) ಕಾಯಿದೆಯನ್ವಯ 18 ವರ್ಷದೊಳಗಿನ ಮಕ್ಕಳನ್ನು ದುಡಿಸುವುದು ಶಿಕ್ಷಾರ್ಹ ಅಪರಾಧ. ಕಾಯಿದೆ ಉಲ್ಲಂಘಿಸಿದಲ್ಲಿ 5 ವರ್ಷ ಜೈಲು ಹಾಗೂ 1 ಲಕ್ಷ ರೂ. ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಮಕ್ಕಳನ್ನು ದುಡಿಸಿಕೊಳ್ಳುವುದು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು. ಮಕ್ಕಳ ಹಕ್ಕುಗಳ ಬಗ್ಗೆ ಶಾಲಾ ಹಂತದಲ್ಲಿಯೇ ಶಿಕ್ಷ ಕರು ಅರಿವು ಮೂಡಿಸಬೇಕು. ಕಾನೂನನ್ನು ಗೌರವಿಸುವುದು ಎಲ್ಲರ ಕರ್ತವ್ಯವಾಗಿದ್ದು, ಮಕ್ಕಳು ವಿದ್ಯಾವಂತರಾದರೆ, ಬಲಿಷ್ಠ ರಾಷ್ಟ್ರ ನಿರ್ಮಾಣವಾಗಲು ಸಾಧ್ಯ ಎಂದರು.

ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಲಂಕೇಶ್‌ ಮಾತನಾಡಿ, ಬಾಲಕಾರ್ಮಿಕ ಪದ್ಧತಿ ಎಂಬುದು ನಮ್ಮ ಸಮಾಜಕ್ಕೆ ಅಂಟಿದ ಸಾಮಾಜಿಕ ಪಿಡುಗು. ಹಾಗೂ ಇದೊಂದು ರಾಷ್ಟ್ರೀಯ ಸಮಸ್ಯೆಯಾಗಿದೆ. ಇದರ ನಿರ್ಮೂಲನೆಗೆ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದರೂ, ಕಾಯಿದೆ, ಕಾನೂನುಗಳು ಜಾರಿಯಾಗಿದ್ದರೂ, ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗಿಲ್ಲ.

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬಾಲಕಾರ್ಮಿಕತೆ ಹೆಚ್ಚು ಕಂಡುಬಂದಿದೆ. ಬಾಲ್ಯದಿಂದಲೇ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಡಾ. ಬಿ.ಆರ್‌. ಅಂಬೇಡ್ಕರ್‌ ಶಿಕ್ಷ ಣ ಮತ್ತು ಮಾನವ ಅಭಿವೃದ್ಧಿ ಸಂಸ್ಥೆಯ ಜಿಲ್ಲಾಧ್ಯಕ್ಷ ಜ್ಞಾನಸುಂದರ, ಶಾಲೆಯ ಮುಖ್ಯಗುರು ಕೆ. ಮಹಾಬಳೇಶ್ವರ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್‌ ಬಿ.ವಿ., ಸಮಾಜ ಕಲ್ಯಾಣ ಇಲಾಖೆಯ ಸೋಮಣ್ಣ, ಕಾರ್ಮಿಕ ಇಲಾಖೆಯ ಹೊನ್ನಪ್ಪ ಸೇರಿದಂತೆ ಇತರರು ಇದ್ದರು.

ಕಾರ್ಯಕ್ರಮದ ನಿಮಿತ್ತ ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡರ ಅವರು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ