ಆ್ಯಪ್ನಗರ

ಮದ್ಯದ ಕಿಕ್‌ ಇಳಿಸಿದ ಅಬಕಾರಿ

2018ರ ವಿಧಾನಸಭೆ ಚುನಾವಣೆ ನಿಮಿತ್ತ ರಾಜ್ಯ ಚುನಾವಣೆ ಆಯೋಗದ ನಿರ್ದೇಶನದಂತೆ ಅಬಕಾರಿ ಇಲಾಖೆ ಜಾರಿಗೊಳಿಸಿರುವ ನಿಯಮಗಳು ಮದ್ಯದಂಗಡಿ ಮಾಲೀಕರ 'ಕಿಕ್‌' ಇಳಿಸಿವೆ.

Vijaya Karnataka 27 Apr 2018, 5:00 am
ಕುಷ್ಟಗಿ ; 2018ರ ವಿಧಾನಸಭೆ ಚುನಾವಣೆ ನಿಮಿತ್ತ ರಾಜ್ಯ ಚುನಾವಣೆ ಆಯೋಗದ ನಿರ್ದೇಶನದಂತೆ ಅಬಕಾರಿ ಇಲಾಖೆ ಜಾರಿಗೊಳಿಸಿರುವ ನಿಯಮಗಳು ಮದ್ಯದಂಗಡಿ ಮಾಲೀಕರ 'ಕಿಕ್‌' ಇಳಿಸಿವೆ.
Vijaya Karnataka Web KPL-KPL26KST01


ಚುನಾವಣೆ ವೇಳೆ ಮದ್ಯದ ಹೊಳೆಯನ್ನೇ ಹರಿಸುವ ಪರಿಪಾಠವನ್ನು ನಾನಾ ರಾಜಕೀಯ ಪಕ್ಷ ಗಳು ಮತ್ತು ಅಭ್ಯರ್ಥಿಗಳು ಹೊಂದಿದ್ದರು. ಈ ಸಲದ ಚುನಾವಣೆಯಲ್ಲಿ ಮದ್ಯದ ಹೊಳೆ ಹರಿಸಲು ರಾಜಕೀಯ ಪಕ್ಷ ದವರಿಗಿಂತ ಪರವಾನಗಿ ಹೊಂದಿರುವ ಮದ್ಯ ಮಾರಾಟಗಾರರ ಮೇಲೇ ನಿರ್ಬಂಧ ಹೇರಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಜಾರಿಯಾಗಿರುವ ಆದೇಶದಲ್ಲಿ 'ಮದ್ಯದಂಗಡಿಯವರು ಕಳೆದ ವರ್ಷ ಈ ತಿಂಗಳಲ್ಲಿ ಮಾರಾಟ ಮಾಡಿದ್ದ ಹಾಗೂ ಖರೀದಿ ಮಾಡಿದ್ದ ಮಿತಿಗಿಂತ ಈ ವರ್ಷ ಹೆಚ್ಚಳವಾಗಬಾರದು.ಕಳೆದ ವರ್ಷ ಉದಾಹರಣೆಗೆ ಏಪ್ರಿಲ್‌ ಮತ್ತು ಮೇ ನಲ್ಲಿ ಸರಬರಾಜಾಗಿದ್ದ ಮದ್ಯಕ್ಕಿಂತ ಹೆಚ್ಚಿಗೇ ಈ ವರ್ಷ ಈ ತಿಂಗಳಲ್ಲಿ ಅಂಗಡಿಯವರು ಖರೀದಿ ಮಾಡಲು ಇಚ್ಛಿಸಿದರೂ ಸ್ಟಾಕಿಸ್ಟ್‌ಗಳು ಸರಬರಾಜು ಮಾಡುವುದಿಲ್ಲ. ಒಂದು ವೇಳೆ ಹೆಚ್ಚಿಗೆ ಖರೀದಿಯಾಗಿರುವುದು ಕಂಡುಬಂದರೆ ಅಂಗಡಿಯ ಪರವಾನಗಿ ರದ್ದುಪಡಿಸುವ ಅಧಿಕಾರವನ್ನು ಅಬಕಾರಿ ಅಧಿಕಾರಿಗಳಿಗೆ ನೀಡಲಾಗಿದೆ'. ಮದ್ಯದಂಗಡಿಯವರು ತಾವು ಗ್ರಾಹಕರಿಗೆ ಮಾರಾಟ ಮಾಡಿರುವ ಮದ್ಯಕ್ಕೆ ಸಂಬಂಧಿಸಿದ ಬಿಲ್‌ಗಳನ್ನು ಕಡ್ಡಾಯವಾಗಿ ಇಡಲೇಬೇಕಿದೆ. ಪ್ರತಿ ಗ್ರಾಹಕ ಸರಿಯಾದ ಕಾರಣ ತಿಳಿಸಿ ಬಿಲ್‌ ಪಡೆದು 2.3ಲೀಟರ್‌ವರೆಗೆ ಮದ್ಯ ಖರೀದಿಸಿ ಮನೆಯಲ್ಲಿ ಸ್ವಂತಕ್ಕೆ ಇಟ್ಟುಕೊಳ್ಳಬಹುದಾಗಿದೆ. ಬಿಲ್‌ ಪಡೆಯುವುದು ಮುಖ್ಯವಾಗಿರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಮದ್ಯ ಅಕ್ರಮವಾಗಿ ಮಾರಾಟ ಮಾಡುವಂತಿಲ್ಲ. ಮದ್ಯ ಅಕ್ರಮ ಮಾರಾಟ ಕಂಡು ಬಂದರೆ ತಕ್ಷ ಣ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಇಲಾಖೆ ಚುನಾವಣೆ ಹಿನ್ನೆಲೆಯಲ್ಲಿ ಜಾರಿಗೊಳಿಸಿರುವ ನಿಯಮ ಮದ್ಯದಂಗಡಿಯವರಲ್ಲಿ ಆತಂಕ ಹೆಚ್ಚಿಸಿದೆ. ಹೆಚ್ಚಿಗೇ ವಹಿವಾಟು ನಡೆಸಿ ಲಾಭ ಮಾಡಿಕೊಳ್ಳಬೇಕೆನ್ನುವ ಅಂಗಡಿಯವರ ಕನಸಿಗೆ ಇಲಾಖೆ ತಣ್ಣೀರು ಸುರಿದಿದೆ.

------

ಪ್ರಕರಣ: ಕುಷ್ಟಗಿ: ಖರೀದಿ ಬಿಲ್‌ ಹೊಂದದೇ ಮದ್ಯ ಅಕ್ರಮವಾಗಿ ಕೊಂಡೊಯ್ಯುತ್ತಿದ್ದ ಇಬ್ಬರ ವಿರುದ್ಧ ಇಲ್ಲಿನ ಅಬಕಾರಿ ಅಧಿಕಾರಿಗಳು ಗುರುವಾರ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ತಾಲೂಕಿನ ಕಲಾಲಬಂಡಿ ಗ್ರಾಮದ ಉಮೇಶ್‌ ರಾಮಪ್ಪ ಕವಡ್ಕಿ, ಗ್ಯಾನಪ್ಪ ಯಲ್ಲಪ್ಪ ಕವಡ್ಕಿ ಆರೋಪಿತರು. ಅಬಕಾರಿ ಅಧಿಕಾರಿ ಗಸ್ತಿನಲ್ಲಿದ್ದಾಗ ಇಲ್ಲಿನ ಜೆಸ್ಕಾಂ ಕಚೇರಿ ಬಳಿ ನಿಂತಿದ್ದ ಬೈಕ್‌ನ್ನು ಪರಿಶೀಲಿಸಿದಾಗ 4.6ಲೀಟರ್‌ ನಾನಾ ಬ್ರ್ಯಾಂಡ್‌ ಮದ್ಯ ಪತ್ತೆಯಾಯಿತು. ಬೈಕ್‌ನಲ್ಲಿದ್ದ ಇಬ್ಬರನ್ನೂ ವಿಚಾರಿಸಿದಾಗ ಅವರ ಬಳಿ ಮದ್ಯ ಖರೀದಿಸಿದ್ದಕ್ಕೆ ಬಿಲ್‌ ಇರಲಿಲ್ಲ. ಕೂಡಲೇ ಬೈಕ್‌ ಮತ್ತು ಇಬ್ಬರನ್ನೂ ವಶಕ್ಕೆ ಪಡೆದ ಅಬಕಾರಿ ಸಿಬ್ಬಂದಿ ಕಚೇರಿಗೆ ಕರೆತಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನೇತೃತ್ವವನ್ನು ಅಬಕಾರಿ ನಿರೀಕ್ಷ ಕಿ ಕೆ.ಸುಷ್ಮಾ ವಹಿಸಿದ್ದರು. ಈ ಸಂದರ್ಭದಲ್ಲಿ ಅಬಕಾರಿ ಸಿಬ್ಬಂದಿ ಶಿವಪ್ಪ, ಅಪ್ಪಣ್ಣ, ಚಾಲಕ ರುದ್ರಯ್ಯಸ್ವಾಮಿ, ಗೃಹರಕ್ಷ ಕ ಸಿಬ್ಬಂದಿ ಶಿವಕುಮಾರ ಗೋನಾಳ, ಮಲ್ಲಪ್ಪ ಕಂಚಿ, ಯಮನೂರಪ್ಪ ಹಾಜರಿದ್ದರು.

===

ಸದ್ಯ ಚುನಾವಣೆ ಹಿನ್ನೆಲೆಯಲ್ಲಿ ಈ ನಿಯಮ ಜಾರಿಯಲ್ಲಿದೆ. ಚುನಾವಣೆ ನಂತರ ಇಲಾಖೆಯ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಕುಷ್ಟಗಿ ಸೇರಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಮದ್ಯ ಮಾರಾಟ ಕಡಿಮೆಯೇ ಇದೆ. ಚುನಾವಣೆ ಸಂದರ್ಭದಲ್ಲಿ ಜಾರಿಗೊಳಿಸಿರುವ ನಿಯಮವನ್ನು ಇಲ್ಲಿನ ಅಂಗಡಿಯವರು ಉಲ್ಲಂಘಿಸಿಲ್ಲ .

- ಕೆ.ಸುಷ್ಮಾ, ತಾಲೂಕು ಅಬಕಾರಿ ನಿರೀಕ್ಷಕಿ



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ