ಆ್ಯಪ್ನಗರ

ಹೊಂಡಕ್ಕೆ ಜಾರಿ ಬಿದ್ದು ಅಕ್ಕ, ತಮ್ಮ ಸಾವು

ಬಿಸರಳ್ಳಿ ಗ್ರಾಮದಲ್ಲಿ ಶುಕ್ರವಾರ ಬಟ್ಟೆ ತೊಳೆಯಲು ಹೋಗಿದ್ದ ಅಕ್ಕ ಹಾಗೂ ತಮ್ಮ, ಕೃಷಿ ಹೊಂಡದಲ್ಲಿ ಜಾರಿಬಿದ್ದು ಮೃತಪಟ್ಟಿದ್ದಾರೆ.

ವಿಕ ಸುದ್ದಿಲೋಕ 20 May 2017, 9:55 am
ಕೊಪ್ಪಳ: ತಾಲೂಕಿನ ಬಿಸರಳ್ಳಿ ಗ್ರಾಮದಲ್ಲಿ ಶುಕ್ರವಾರ ಬಟ್ಟೆ ತೊಳೆಯಲು ಹೋಗಿದ್ದ ಅಕ್ಕ ಹಾಗೂ ತಮ್ಮ, ಕೃಷಿ ಹೊಂಡದಲ್ಲಿ ಜಾರಿಬಿದ್ದು ಮೃತಪಟ್ಟಿದ್ದಾರೆ.
Vijaya Karnataka Web fall to pond sister and brother death
ಹೊಂಡಕ್ಕೆ ಜಾರಿ ಬಿದ್ದು ಅಕ್ಕ, ತಮ್ಮ ಸಾವು


ಗ್ರಾಮದ ಮಂಜುನಾಥ ಮೋಚಿ ಹಾಗೂ ಲಲಿತಮ್ಮ ಅವರ ಮಕ್ಕಳಾದ ಅಕ್ಕಮ್ಮ (10) ಹಾಗೂ ಭರತ (6) ಮೃತರು. ಶಾಲೆಗೆ ರಜೆ ಹಿನ್ನೆಲೆಯಲ್ಲಿ ಮೂವರು ಮಕ್ಕಳು, ತಾ.ಪಂ.ಸದಸ್ಯ ವಿರೂಪಾಕ್ಷಗೌಡ ಅವರ ಜಮೀನಿನಲ್ಲಿರುವ ಕಷಿ ಹೊಂಡದಲ್ಲಿ ಬಟ್ಟೆ ತೊಳೆಯಲು ಹೋಗಿದ್ದರು. ಈ ವೇಳೆ ಬಾಲಕ ಭರತ ಆಕಸ್ಮಿಕವಾಗಿ ನೀರಿಗೆ ಇಳಿದಿದ್ದಾನೆ. ಸೋದರ ಮುಳುಗುವುದನ್ನು ಕಂಡ ಅಕ್ಕಮ್ಮ, ಆತನ ರಕ್ಷಣೆಗೆ ತಾನೂ ಕೃಷಿಹೊಂಡಕ್ಕೆ ಇಳಿದಿದ್ದಾಳೆ. ಮತ್ತೊಬ್ಬ ಸೋದರಿ ನೇತ್ರಾ ಕೃಷಿ ಹೊಂಡದ ದಂಡೆ ಮೇಲೆ ನಿಂತಿದ್ದಳು. ಅಕ್ಕ ಹಾಗೂ ತಮ್ಮ ನೀರಿನಲ್ಲಿ ಮುಳುಗಿದ್ದನ್ನು ಕಂಡು ಗಾಬರಿಯಿಂದ ರಕ್ಷಣೆಗೆ ಸುತ್ತಲಿನವರನ್ನು ಕರೆದಿದ್ದಾಳೆ. ಊರಿಗೆ ಓಡಿಹೋಗಿ ವಿಷಯ ತಿಳಿಸಿದ್ದಾಳೆ. ಆದರೆ, ಪಾಲಕರು ಹಾಗೂ ಗ್ರಾಮಸ್ಥರು ಕೃಷಿ ಹೊಂಡ ತಲುಪುವುದಕ್ಕೆ ಮೊದಲೇ ಮಕ್ಕಳಿಬ್ಬರು ಅಸುನೀಗಿದ್ದರು.

ಪಾಲಕರ ಆಕ್ರಂದನ:ಮಕ್ಕಳಿಬ್ಬರನ್ನು ಕಳೆದುಕೊಂಡ ದಂಪತಿ ಮಂಜುನಾಥ ಮೋಚಿ ಹಾಗೂ ಲಲಿತಮ್ಮ ಸೇರಿ ಅವರ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು. ‘ಅಕ್ಕಮ್ಮ, ಭರತ ನನ್ನನ್ನೂ ಕರಕೊಳ್ರೋ. ನಾನೂ ನಿಮ್ಜೊತೆ ಬರ‌್ತೀನಿ. ನಿಮ್ ಮಾಮ ಕೇಳಿದ್ರ, ಎಲ್ಲಿ ಹೋಗ್ಯಾರಂತ ಹೇಳ್ಲಿ? ನಾ ಮನ್ಯಾಗ ಕೌದಿ ಹೊಲಿಯಾಕ ಹತ್ತಿದ್ಯ. ಹೋಗಬ್ಯಾಡ ಅಂದ್ರೂ ನನ್ ಕಣ್ತಪ್ಪಿಸಿ ಹೋದ ಮಕ್ಕಳು, ಮನಿಗೆ ಬರಲಿಲ್ಲ. ಸಾಲಿ ಸೂಟಿ ಐತಿ ಬಟ್ಟಿ ತೊಳ್ಕಂಡು ಬರ‌್ತೀನಿ ಅಂತ ಕೇಳ್ತಿದ್ದಿ, ಎಷ್ಟು ಬಡಕಂಡ್ರೂ ಹೋಗಿಬುಟ್ಟೆಲ್ಲೋ ಯವ್ವಾ,’ ಎಂದು ಲಲಿತಮ್ಮ, ಹಿರೇಸಿಂಧೋಗಿ ಗಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರಿಸಿದ್ದ ಮಕ್ಕಳ ಶವದ ಮುಂದೆ ರೋದಿಸಿದರು. ಅಳವಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೃಷಿ ಇಲಾಖೆ ಅಧಿಕಾರಿ ತುಕಾರಾಂ ಅವರು ಸ್ಥಳ ಪರಿಶೀಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ