ಆ್ಯಪ್ನಗರ

ಆಭರಣದಾಸೆಗೆ ಬಾಲಕಿಯ ಕೊಲೆ: ಇಬ್ಬರ ಬಂಧನ

ಮೈಮೇಲಿದ್ದ ಮೂರು ಸಾವಿರ ರೂ. ಮೊತ್ತದ ಆಭರಣ ಕದಿಯುವ ಆಸೆಗೆ ನೆರೆಮನೆಯ ಒಂದೂವರೆ ವರ್ಷದ ಹೆಣ್ಣು ಮಗುವನ್ನೇ ಕೊಲೆ ಮಾಡಿದ ಮಹಿಳೆಯರಿಬ್ಬರನ್ನು ಕುಕನೂರು ಠಾಣೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

Vijaya Karnataka 24 Mar 2018, 8:31 am
ಕೊಪ್ಪಳ: ಮೈಮೇಲಿದ್ದ ಮೂರು ಸಾವಿರ ರೂ. ಮೊತ್ತದ ಆಭರಣ ಕದಿಯುವ ಆಸೆಗೆ ನೆರೆಮನೆಯ ಒಂದೂವರೆ ವರ್ಷದ ಹೆಣ್ಣು ಮಗುವನ್ನೇ ಕೊಲೆ ಮಾಡಿದ ಮಹಿಳೆಯರಿಬ್ಬರನ್ನು ಕುಕನೂರು ಠಾಣೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
Vijaya Karnataka Web girl murder two arrested
ಆಭರಣದಾಸೆಗೆ ಬಾಲಕಿಯ ಕೊಲೆ: ಇಬ್ಬರ ಬಂಧನ


ಯಲಬುರ್ಗಾ ತಾಲೂಕಿನ ಯಡಿಯಾಪುರ ಗ್ರಾಮದ ಶಿವಲಿಂಗಪ್ಪ ಮಾಲಿ ಪಾಟೀಲ್ ಹಾಗೂ ಮಲ್ಲಮ್ಮ ಅವರ ಏಕೈಕ ಪುತ್ರಿ ಪ್ರತಿಭಾ ಮೃತ ಬಾಲಕಿ. ಮದುವೆಯಾದ ಆರು ವರ್ಷಗಳ ಬಳಿಕ ಈ ಬಾಲಕಿ ಜನಿಸಿದ್ದಳು ಎನ್ನಲಾಗಿದೆ. ಅದೇ ಗ್ರಾಮದ ಅಂಬವ್ವ ಶರಣಪ್ಪ ಹಿರೇಗೌಡರ್ ಹಾಗೂ ವರದಾ ಹಿರೇಗೌಡರ್ ಬಂಧಿತರು. ಇವರಿಬ್ಬರು ತಾಯಿ, ಮಗಳಾಗಿದ್ದಾರೆ.

ಬಾಲಕಿ ಪ್ರತಿಭಾ, ಮಾ.21ರಂದು ಸಂಜೆ 5ರ ಸುಮಾರಿಗೆ ತಮ್ಮ ಮನೆಯ ಹೊರಗೆ ಎಂದಿನಂತೆ ಆಟವಾಡುತ್ತಿದ್ದಳು. ಬಾಲಕಿ ಈ ವೇಳೆ ಬೆಳ್ಳಿ ಹಾಗೂ ಬಂಗಾರದ ಸಣ್ಣಪುಟ್ಟ ಆಭರಣ ಧರಿಸಿದ್ದಳು. ಬಾಲಕಿಯನ್ನು ಪುಸಲಾಯಿಸಿದ ಆರೋಪಿತ ಅಂಬವ್ವ ಹಾಗೂ ವರದಾ, ತಮ್ಮ ಮನೆಗೆ ಕರೆದುಕೊಂಡು ಹೋಗಿ ಆಭರಣಗಳನ್ನು ಕದಿಯಲು ಯೋಜಿಸಿದ್ದಾರೆ. ಆಭರಣಗಳನ್ನು ಕದ್ದ ನಂತರ ತಮ್ಮ ಕೃತ್ಯ ಇತರರಿಗೆ ಗೊತ್ತಾಗಲಿದೆ ಎಂಬ ಆತಂಕದಲ್ಲಿ ಬಾಲಕಿಯ ಕುತ್ತಿಗೆಗೆ ಬಟ್ಟೆ ತುಂಡಿನಿಂದ ಬಿಗಿದು ಉಸಿರುಗಟ್ಟಿಸಿದ್ದಾರೆ. ಪ್ರಾಣ ಬಿಟ್ಟ ಮಗುವನ್ನು ಬಿಳಿ ಗೊಬ್ಬರದ ಚೀಲದಲ್ಲಿ ಮುಚ್ಚಿಟ್ಟಿದ್ದರು.

ಬಾಲಕಿಯ ತಂದೆ ಶಿವಲಿಂಗಪ್ಪ ಮಾಲಿ ಪಾಟೀಲ್ ಅವರು ನೀಡಿದ ದೂರು ಆಧರಿಸಿ, ಕುಕನೂರು ಠಾಣೆಯಲ್ಲಿ ಮಾ.22ರಂದು ಪ್ರಕರಣ ದಾಖಲಾಗಿದೆ. ತನಿಖೆ ಕೈಗೊಂಡ ಪೊಲೀಸರು, ಶಂಕೆ ಆಧರಿಸಿ ನೆರೆಮನೆಯ ಅಂಬವ್ವ ಹಾಗೂ ವರದಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆರೋಪಿತರು ಈ ವೇಳೆ, ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ಬಂಧಿತರಿಂದ ಬೆಳ್ಳಿ ಲಿಂಗದಕಾಯಿ, ಒಂದು ಜತೆ ಬೆಳ್ಳಿ ಕಾಲುಚೈನು, ಒಂದು ಜತೆ ಬೆಳ್ಳಿ ಹಾಲ್ಗಡಗ ಮತ್ತು ಒಂದು ಜತೆ ಬಂಗಾರದ ಕಿವಿ ಮುರುವು ಸೇರಿ ಒಟ್ಟು 3 ಸಾವಿರ ರೂ. ಮೊತ್ತದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಡಾ.ಅನೂಪ್ ಶೆಟ್ಟಿ ಅವರು, ಮಾ.23ರಂದು ನೀಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ