ಆ್ಯಪ್ನಗರ

ಹೆಸರು ಬೆಳೆಗೆ ರೋಗ ಬಾಧೆ: ರೈತ ಕಂಗಾಲು

ಕಳೆದ ಕೆಲ ದಿನಗಳಿಂದ ತಾಲೂಕಾದ್ಯಂತ ಮೋಡಕವಿದ ವಾತಾವರಣ, ತುಂತುರು ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹೆಸರು ಬೆಳೆಗೆ ಹಳದಿ ಎಲೆ ರೋಗ, ಕರಿಶೀರು ಕಾಣಿಸಿಕೊಂಡಿದೆ.

Vijaya Karnataka 14 Jul 2018, 5:00 am
ಕುಷ್ಟಗಿ : ಕಳೆದ ಕೆಲ ದಿನಗಳಿಂದ ತಾಲೂಕಾದ್ಯಂತ ಮೋಡಕವಿದ ವಾತಾವರಣ, ತುಂತುರು ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹೆಸರು ಬೆಳೆಗೆ ಹಳದಿ ಎಲೆ ರೋಗ, ಕರಿಶೀರು ಕಾಣಿಸಿಕೊಂಡಿದೆ.
Vijaya Karnataka Web KPL-KPL13KST01


ಮುಂಗಾರು ಹಂಗಾಮಿಗೆ ತಾಲೂಕಿನ ನಾನಾ ಪ್ರದೇಶಗಳಲ್ಲಿ ಹೆಸರು ಬಿತ್ತನೆಯಾಗಿದೆ. ಹೆಸರು ಬೆಳೆ ಕಟಾವು ನಂತರ ಹಿಂಗಾರು ಹಂಗಾಮಿನಲ್ಲಿ ಇನ್ನೊಂದು ಬೆಳೆ ಬೆಳೆಯುವ ಉದ್ದೇಶದಿಂದ ರೈತರು ಹೆಸರು ಬಿತ್ತನೆ ಮಾಡುತ್ತಾರೆ. ಬಿತ್ತನೆಯಾದ 80 ದಿನಗಳಲ್ಲಿ ಕಟಾವಿಗೆ ಬರುವ ಹೆಸರು ಬೆಳೆ ವಾತಾವರಣದಲ್ಲಿನ ವೈಪರೀತ್ಯಗಳನ್ನು ತಡೆದುಕೊಳ್ಳುವ ಸಾಮರ್ಥ್ಯ‌ ಕಡಿಮೆ. ಸತತ ಮೋಡಕವಿದ ವಾತಾವರಣ ಇದ್ದರೆ ರೋಗ ಬಾಧೆ ಹೆಚ್ಚು.

ತಾಲೂಕಿನ ನಾನಾ ಕಡೆ ಹೆಸರು ಬೆಳೆಗೆ ಹಳದಿ ಎಲೆ(ಬಾಣಂತಿ) ರೋಗ ಕಾಣಿಸಿಕೊಂಡಿದೆ. ಹೆಸರು ಬಳ್ಳಿಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಕಾಯಿಕಟ್ಟುವಿಕೆ ಸ್ಥಗಿತವಾಗುತ್ತಿದೆ. ಆರಂಭದಲ್ಲಿ ಹೊಲದ ಕೆಲ ಭಾಗದಲ್ಲಷ್ಟೇ ಕಾಣಿಸಿಕೊಳ್ಳುವ ಈ ರೋಗ ನಂತರ ಇಡೀ ಹೊಲಕ್ಕೆ ವ್ಯಾಪಿಸುತ್ತಿದೆ. ವೈರಸ್‌ ಮೂಲದ ರೋಗ ಇದಾಗಿದ್ದು, ವೈರಸ್‌ಗಳು ಗಾಳಿಯಲ್ಲಿ ಹಾರುವುದರಿಂದ ಪಕ್ಕದ ಹೊಲಗಳಿಗೂ ಈ ರೋಗ ವ್ಯಾಪಿಸುತ್ತದೆ. ಕೆಲ ಹೊಲಗಳಲ್ಲಿ ಮೊಗ್ಗು ಮತ್ತು ಕುಡಿಗೆ ಕರಿಶೀರುಗಳು ಮೆತ್ತಿರುವುದು ಕಂಡುಬಂದಿದೆ. ಕರಿಶೀರುಗಳು ರಸ ಹೀರುವುದರಿಂದ ಬಳ್ಳಿಯ ಬೆಳವಣಿಗೆ ಕುಂಟಿತವಾಗಿ ಇಳುವರಿ ಕಡಿಮೆಯಾಗುತ್ತಿದೆ. ಕಳೆದ ಒಂದು ವಾರದಲ್ಲಿ ಇಂತಹ ರೋಗಗಳು ಕಾಣಿಸಿಕೊಂಡಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ಮುನ್ನೆಚ್ಚರಿಕೆ ವಹಿಸಲು ಸಲಹೆ: ಈ ಬಗ್ಗೆ ಪ್ರತಿಕ್ರಿಯಿಸಿದ ಇಲ್ಲಿನ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬಾಲಪ್ಪ ಜಲಗೇರಿ, ಹಳದಿ ಎಲೆ ರೋಗ ವೈರಸ್‌ ಮೂಲದಿಂದ ಬರುತ್ತದೆ. ಆರಂಭದಲ್ಲಿ ಹೊಲದಲ್ಲಿನ 1-2 ಗಿಡಗಳಲ್ಲಿ ಇದು ಕಾಣಿಸಿಕೊಂಡಾಗ ಕೂಡಲೇ ರೋಗಪೀಡಿತ ಗಿಡಗಳನ್ನು ಕಿತ್ತು ಸುಡಬೇಕು. ನಂತರ ಬೆಳೆಗೆ ಪ್ರತಿ ಲೀಟರ್‌ ನೀರಿಗೆ 0.5ಎಂ.ಎಲ್‌. 'ಇಮುಡಾಕ್ಲೊಪಿಡ್‌' ಔಷದ ಬೆರೆಸಿ ಸಿಂಪರಣೆ ಮಾಡಬೇಕು. ಔಷಧ ಸಿಂಪರಣೆ ಆ ಪ್ರದೇಶದ ಎಲ್ಲ ಹೊಲಗಳಲ್ಲೂ ನಡೆಯಬೇಕು. ಏಕೆಂದರೆ ಇದು ವೈರಸ್‌ ಮೂಲದ ರೋಗವಾಗಿರುವುದರಿಂದ ಒಂದು ಹೊಲದಲ್ಲಿ ಔಷಧ ಸಿಂಪರಣೆ ಮಾಡಿ ಇನ್ನೊಂದು ಹೊಲದಲ್ಲಿ ಬಿಟ್ಟರೆ, ಆ ಹೊಲದಿಂದ ವೈರಸ್‌ಗಳು ಪುನಃ ಆಕ್ರಮಣ ಮಾಡುವ ಸಾಧ್ಯತೆಗಳಿರುತ್ತವೆ. ಗಾಳಿ ಬೀಸುವ ವಿರುದ್ಧ ದಿಕ್ಕಿಗೆ ಹಳದಿ ಕಾರ್ಡ್‌ ಇಲ್ಲವೇ ಜಿಂಕ್‌ಶೀಟ್‌ಗೆ ಹಳದಿ ಬಣ್ಣ ಬಳಿದು ಹೊಲದಲ್ಲಿ ಇಡಬೇಕು. ಹಳದಿ ಬಣ್ಣಕ್ಕೆ ವೈರಸ್‌ಗಳು ಆಕರ್ಷಿತವಾಗಿ ಮುಂದೆ ಚಲಿಸದೇ ಸಾಯಲಿವೆ.

ಬೀಜೋಪಚಾರ: ಮೋಡಕವಿದ ವಾತಾವರಣದಲ್ಲಿ ಹೆಸರು ಬೆಳೆಗೆ ಕರಿಶೀರು ರೋಗ ಬರುವುದು ಸಹಜ. ಗಿಡಗಳಲ್ಲಿ ಶೀರು ಕಾಣಿಸಿಕೊಂಡಾಗ 0.5ಎಂ.ಎಲ್‌. ಇಮುಡಾಕ್ಲೊಪಿಡ್‌ ಇಲ್ಲವೇ 2ಎಂಎಲ್‌ ಕ್ಲೋರೋಫೆರಿಪಾಸ್‌ನ್ನು ಪ್ರತಿ ಲೀಟರ್‌ ನೀರಿಗೆ ಬೆರೆಸಿ ಬೆಳೆಗೆ ಸಿಂಪರಣೆ ಮಾಡಬೇಕು. ಹೆಸರು ಬಿತ್ತನೆ ಮಾಡುವಾಗ ಬೀಜೋಪಚಾರ ನಡೆಸಿದರೆ ಹಳದಿ ರೋಗ ಬರುವ ಸಾಧ್ಯತೆಗಳು ಬಹಳ ಕಡಿಮೆ ಇರುತ್ತವೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ