ಆ್ಯಪ್ನಗರ

ಹೆಚ್ಚು ಕಾಸು ಕೊಟ್ಟರಷ್ಟೇ ಭತ್ತ ಕಟಾವು; ಯಂತ್ರಗಳ ಬಾಡಿಗೆ ದುಬಾರಿ, ಕೊಪ್ಪಳದ ಅನ್ನದಾತರು ಕಂಗಾಲು!

ಮಳೆ ಬಿಡುವು ನೀಡಿದ ಹಿನ್ನೆಲೆಯಲ್ಲಿ ಎಲ್ಲ ರೈತರು ಒಂದೇ ಸಮಯಕ್ಕೆ ಕಟಾವಿಗೆ ಮುಂದಾಗಿರುವುದೇ ಹಾರ್ವೆಸ್ಟರ್‌ ಕೊರತೆ ಎದುರಾಗಲು ಕಾರಣವಾಗಿದೆ. ಆದರೆ ಮತ್ತೊಂದೆಡೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಮಧ್ಯವರ್ತಿಗಳು ಯಂತ್ರಗಳ ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ.

Vijaya Karnataka 6 Dec 2021, 11:23 am
ಸಿದ್ದನಗೌಡ ಹೊಸಮನಿ ಕಾರಟಗಿ
Vijaya Karnataka Web ಭತ್ತ ಕಟಾವು
ಸಾಂದರ್ಭಿಕ ಚಿತ್ರ

ಕೊಪ್ಪಳ: ಮಳೆಯಿಂದ ನೆಲಕ್ಕೆ ಬಾಗಿದ ಭತ್ತ ಕಟಾವು ಮಾಡಲು ಅವಶ್ಯಕತೆ ಇರುವ ಯಂತ್ರಗಳ ಬಾಡಿಗೆಯನ್ನು ಮಧ್ಯವರ್ತಿಗಳು ಗಗನಕ್ಕೇರಿಸಿದ್ದು, ರೈತರು ಕಂಗಾಲಾಗಿದ್ದಾರೆ. ಹೆಚ್ಚು ಕಾಸು ಕೊಡುವವರ ಜಮೀನಿಗೆ ಯಂತ್ರ ರವಾನಿಸಲಾಗುತ್ತಿದ್ದು ರೈತರನ್ನು ಕಣ್ಣೀರು ಹಾಕುವಂತೆ ಮಾಡಿದೆ.

ಇತ್ತೀಚೆಗೆ ಸುರಿದ ಮಳೆಯಿಂದ ಭತ್ತದ ಬೆಳೆಗಳೆಲ್ಲ ನೆಲಕ್ಕೊರಗಿವೆ. ಅಳಿದುಳಿದ ಭತ್ತ ಕಟಾವು ಮಾಡಲು ರೈತರು ಮುಂದಾಗಿದ್ದು, ಹಾರ್ವೆಸ್ಟರ್‌ ಅಭಾವದಿಂದಾಗಿ ಮತ್ತಷ್ಟು ಸಂಕಷ್ಟ ಅನುಭವಿಸುವಂತಾಗಿದೆ. ತಾಲೂಕಿನಾದ್ಯಂತ ಮುಂಗಾರು ಹಂಗಾಮಿನ ಭತ್ತದ ಬೆಳೆ ಇನ್ನೇನು ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಭತ್ತದ ಬೆಳೆ ನೆಲಕ್ಕುರುಳಿ ಮೊಳಕೆ ಒಡೆದಿದೆ. ಮಳೆ ಮಾಯವಾದ ಹಿನ್ನೆಲೆಯಲ್ಲಿ ಕಟಾವು ಮಾಡಲು ಹಾರ್ವೆಸ್ಟರ್‌ ಕೊರತೆ ಕಾಡುತ್ತಿದೆ.

ಮಳೆ ಬಿಡುವು ನೀಡಿದ ಹಿನ್ನೆಲೆಯಲ್ಲಿ ಎಲ್ಲ ರೈತರು ಒಂದೇ ಸಮಯಕ್ಕೆ ಕಟಾವಿಗೆ ಮುಂದಾಗಿರುವುದೇ ಹಾರ್ವೆಸ್ಟರ್‌ ಕೊರತೆ ಎದುರಾಗಲು ಕಾರಣವಾಗಿದೆ. ಆದರೆ ಮತ್ತೊಂದೆಡೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಮಧ್ಯವರ್ತಿಗಳು ಯಂತ್ರಗಳ ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ.

ಬೆಲೆ ಹೆಚ್ಚಿಗೆ ಹೇಳಿ ಯಂತ್ರಗಳನ್ನು ಸರಬರಾಜುಗೊಳಿಸುತ್ತಿದ್ದಾರೆ. ಹಾರ್ವೆಸ್ಟರ್‌ ಮಾಲೀಕರು ಹಾಗೂ ಮಧ್ಯವರ್ತಿಗಳು ಒಂದು ತಾಸಿಗೆ 600 ರೂ.ದಿಂದ 800 ರೂ. ವರೆಗೆ ಹೆಚ್ಚಿಸಿದ್ದಾರೆ ಎನ್ನುತ್ತಾರೆ ರೈತರು. ಇದಕ್ಕೂ ಮೊದಲು ಒಂದು ತಾಸಿಗೆ 2,600 ರೂ. ಇದ್ದ ಹಾರ್ವೆಸ್ಟರ್‌ ಕಟಾವು ದರ, ಪ್ರಸ್ತುತ 3 ಸಾವಿರದಿಂದ 3,200 ರೂ.ವರೆಗೆ ಆಗಿದೆ. ದರ ಏರಿಕೆ ರೈತ ಸಮುದಾಯವನ್ನು ಇನ್ನಷ್ಟು ಕಣ್ಣೀರು ಹಾಕುವಂತೆ ಮಾಡಿದೆ.
ನಿಲ್ಲದ ಮಳೆ, ನಲುಗಿದ ಉತ್ತರ ಕನ್ನಡ ಜಿಲ್ಲೆ; 845 ಕೋಟಿ ರೂ.ಹಾನಿ; ಸರಕಾರಕ್ಕೆ ವರದಿ ಸಲ್ಲಿಕೆ!
ಅಂಗಲಾಚುವ ಸ್ಥಿತಿ
ಭತ್ತದ ಹಾರ್ವೆಸ್ಟರ್‌ಗಳನ್ನು ಕಮಿಷನ್‌ ಆಧಾರದ ಮೇಲೆ ಒಬ್ಬರು 8ರಿಂದ 10 ಮಷಿನ್‌ಗಳನ್ನು ಬೇರೆಡೆಯಿಂದ ತರಿಸಿಕೊಂಡಿದ್ದಾರೆ. ಈ ಮಧ್ಯವರ್ತಿಗಳ ಅಂಗಡಿ ಮುಂಗಟ್ಟುಗಳ ಮುಂದೆ ರೈತರು ವಾರಗಟ್ಟಲೇ ಕೈಕಟ್ಟಿ ನಿಲ್ಲುವ ಸ್ಥಿತಿ ಎದುರಾಗಿದೆ. ಯಾರು ಗಂಟೆಗೆ ಇನ್ನೂರು, ಮುನ್ನೂರು ಹೆಚ್ಚು ಕೊಡುತ್ತಾರೊ ಅಂಥವರ ಜಮೀನುಗಳಿಗೆ ಭತ್ತದ ಕಟಾವು ಮಷಿನ್‌ಗಳನ್ನು ಕಳುಹಿಸಲಾಗುತ್ತಿದೆ. ಇದರಿಂದಾಗಿ ಸಣ್ಣ, ಅತಿ ಸಣ್ಣ ಮಧ್ಯಮ ವರ್ಗದ ರೈತರು ಮಧ್ಯವರ್ತಿಗಳಿಗೆ ಅಂಗಲಾಚುವ ಸ್ಥಿತಿ ನಿರ್ಮಾಣವಾಗಿದೆ.
ತೊಗರಿ ಕಟಾವಿಗೆ ಪಂಜಾಬ್‌ ಯಂತ್ರೋಪಕರಣ: ಕಾರ್ಮಿಕರ ಕೊರತೆಗೆ ಪರಿಹಾರ!
ಒತ್ತಾಯ

ಮಳೆಯಿಂದಾಗಿ ಭತ್ತ ನೆಲಕ್ಕೆ ಬಿದ್ದ ಹಿನ್ನೆಲೆಯಲ್ಲಿ ಎಕರೆಗೆ 1 ಗಂಟೆ ಕಟಾವು ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಮಳೆಯಿಂದಾಗಿ ಭತ್ತ ನೆಲಕ್ಕೆ ಬಿದ್ದಿರುವುದರಿಂದ ಒಂದು ಎಕರೆಗೆ 2ರಿಂದ 3ಗಂಟೆ ಸಮಯ ತೆಗೆದುಕೊಳ್ಳುತ್ತಿದೆ. ರೈತರಿಗೆ ಇನ್ನಷ್ಟು ಆರ್ಥಿಕ ಹೊರೆಯಾಗುತ್ತಿದೆ. ಜಿಲ್ಲಾಡಳಿತ ಯಂತ್ರಗಳಿಗೆ ಬೆಲೆ ನಿಗದಿಗೊಳಿಸಬೇಕು ಎಂದು ರೈತ ಸಮುದಾಯದ ಒತ್ತಾಯವಾಗಿದೆ.

9 ಎಕರೆ ಭತ್ತದ ಗದ್ದೆ ಮಳೆಯಿಂದ ನೆಲಕ್ಕೆ ಬಿದ್ದಿತ್ತು. ಭತ್ತದ ಗದ್ದೆ ಕಟಾವು ಮಾಡಲು 31 ಗಂಟೆ ಸಮಯ ತೆಗೆದುಕೊಂಡಿದ್ದು, ತಾಸಿಗೆ ಮೂರು ಸಾವಿರ ರೂ.ದಂತೆ ಯಂತ್ರದ ಮಾಲೀಕರಿಗೆ ನೀಡಲಾಗಿದೆ. ಯಾರು ಹೆಚ್ಚಿಗೆ ದುಡ್ಡು ಕೊಡುತ್ತಾರೋ ಅಂಥವರ ಜಮೀನುಗಳಿಗೆ ಯಂತ್ರ ಕಳುಸುತ್ತಿದ್ದಾರೆ. ಸಣ್ಣ ರೈತರು ಭತ್ತ ಕಟಾವು ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ.
ರೈತ ಬುಡ್ಡನಗೌಡ, ಸಿದ್ದಾಪುರ ಗ್ರಾಮದ ರೈತ
ಮುಂದುವರಿದ ಅಕಾಲಿಕ ಮಳೆ: ಪರಿಹಾರ ನೀಡಬೇಕಿದ್ದ ಬೆಳೆ ವಿಮೆ ಕಂಪನಿಗಳು ನಾಪತ್ತೆ!
ಬೆಲೆ ನಿಗದಿಗೆ ಡಿಸಿ ಆದೇಶ

ಭತ್ತ ಕಟಾವು ಯಂತ್ರಗಳ ಬಾಡಿಗೆ ಏರಿಕೆಯಾಗಿರುವುದು ಗಮನಕ್ಕೆ ಸೂಕ್ತ ಬೆಲೆ ನಿರ್ಧರಿಸಿ ಆದೇಶ ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಸುರಳ್ಕರ್‌ ವಿಕಾಸ್‌ ಕಿಶೋರ್‌ ತಿಳಿಸಿದ್ದಾರೆ.

ಈ ಕುರಿತು ವಿಜಯ ಕರ್ನಾಟಕದೊಂದಿಗೆ ಮಾತನಾಡಿ, ಯಂತ್ರಗಳ ಬಾಡಿಕೆ ಏರಿಕೆ ಗಮನಕ್ಕೆ ಬಂದಿದೆ. ಡೀಸೆಲ್‌ ಬೆಲೆ ಏರಿಕೆ ಆಗಿದ್ದು, ಅದನ್ನು ಗಮನದಲ್ಲಿಟ್ಟುಕೊಂಡು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಬೆಲೆ ನಿರ್ಧರಿಸಿ ಆದೇಶಿಸಲಾಗುವುದು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ