ಆ್ಯಪ್ನಗರ

ಖಾತರಿ ಕೆಲಸ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡುವಂತೆ ಒತ್ತಾಯಿಸಿ ತಾಲೂಕಿನ ನಾನಾ ಗ್ರಾಮಗಳ ಕೂಲಿಕಾರರು ಇಲ್ಲಿನ ತಾ.ಪಂ.ಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟಿಸಿದರು.

Vijaya Karnataka 25 Sep 2018, 5:00 am
ಕುಷ್ಟಗಿ ; ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡುವಂತೆ ಒತ್ತಾಯಿಸಿ ತಾಲೂಕಿನ ನಾನಾ ಗ್ರಾಮಗಳ ಕೂಲಿಕಾರರು ಇಲ್ಲಿನ ತಾ.ಪಂ.ಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟಿಸಿದರು.
Vijaya Karnataka Web KPL-KPL24KST03


20ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಲ್ಲಿ ಬಂದ ಕೂಲಿಕಾರರು ತಾ.ಪಂ.ಎದುರು ಸಮಾವೇಶಗೊಂಡು ಪ್ರತಿಭಟನೆ ಆರಂಭಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತಸಂಘದ ಮುಖಂಡ ಆರ್‌.ಕೆ.ದೇಸಾಯಿ, ಬರ ಆವರಿಸಿದ್ದು ಗ್ರಾ.ಪಂ.ಗಳ ಮೂಲಕ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡಲು ತಾ.ಪಂ.ಹಿಂದೇಟು ಹಾಕುತ್ತಿದೆ. ನರೇಗಾಕ್ಕೆ ಸಂಬಂಧಿಸಿದ ಅನುದಾನವನ್ನು ಲೈನ್‌ ಡಿಪಾರ್ಟ್‌ಮೆಂಟ್‌ ಕೆಲಸಗಳಿಗೇ ಹೆಚ್ಚಿಗೆ ಬಳಸಲಾಗುತ್ತಿದೆ. ಉದ್ಯೋಗ ಸೃಷ್ಠಿಸುವ ಹಿನ್ನೆಲೆಯಲ್ಲಿ ಕೂಲಿಕಾರರಿಗೆ ಗುಂಪು ಕೆಲಸಗಳನ್ನು ನೀಡುತ್ತಿಲ್ಲ. ತಾಲೂಕಿನ ವಣಗೇರಾ ಗ್ರಾಮದ ಕೂಲಿಕಾರರು ಕೆಲಸ ಬೇಡಿಕೆ ಅರ್ಜಿ ಸಲ್ಲಿಸಿ ತಿಂಗಳಾದರೂ ತಳವಗೇರಾ ಗ್ರಾ.ಪಂ.ಪಿಡಿಒ ಎನ್‌ಎಂಆರ್‌ ನೀಡಿಲ್ಲ.

ಕಂದಕೂರು, ಬಳೂಟಗಿ, ಹಿರೇನಂದಿಹಾಳ, ಸಂಗನಾಳ ಗ್ರಾಮಸ್ಥರಿಗೂ ಕೆಲಸ ನೀಡಿಲ್ಲ. ಬರ ಪರಿಹಾರ ಕಾಮಗಾರಿಗಳನ್ನು ಸರಕಾರ ಪ್ರತ್ಯೇಕ ಕೈಗೊಳ್ಳದೇ ಉದ್ಯೋಗ ಖಾತರಿ ಯೋಜನೆ ಮೂಲಕವೇ ಜನರಿಗೆ ಉದ್ಯೋಗ ನೀಡುವುದಾಗಿ ಹೇಳುತ್ತಿದೆ. ತಾಲೂಕಿನ ಕೆಲವೇ ಗ್ರಾ.ಪಂ.ಗಳ ಮೂಲಕ ಕೂಲಿಕಾರರಿಗೆ ಕೆಲಸ ನೀಡಲಾಗಿದೆ. ತಾ.ಪಂ. ಹಾಗೂ ತಾಲೂಕು ಆಡಳಿತ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು. ಈ ಹಿಂದೆ ನರೇಗಾ ಅಡಿ ಕೆಲಸ ನಿರ್ವಹಿಸಿದ ಕಾಯಕಬಂಧುಗಳಿಗೆ, ನೀರಾಳುಗಳಿಗೆ ಕೂಲಿ ಪಾವತಿಸಿಲ್ಲ. ಟ್ರ್ಯಾಕ್ಟರ್‌ ಬಾಡಿಗೆ ನೀಡಲು ಮೀನಮೇಷ ಎಣಿಸಲಾಗುತ್ತಿದೆ ಎಂದರು.

ವಣಗೇರಾ ಗ್ರಾಮದ ಕೂಲಿಕಾರರಿಗೆ 6 ಎನ್‌ಎಂಆರ್‌ಗಳನ್ನು ಈ ಸಂದರ್ಭದಲ್ಲಿ ನೀಡಲಾಯಿತು. ನಿಡಶೇಸಿ ಕೆರೆಯಲ್ಲಿ ಹೂಳೆತ್ತುವ ಕೆಲಸ ನಿರ್ವಹಿಸುವಂತೆ ಸೂಚಿಸಲಾಯಿತು. ತಾ.ಪಂ.ಸಹಾಯಕ ನಿರ್ದೇಶಕ ಅರುಣಕುಮಾರ ಅವರು ಕೂಲಿಕಾರರು ಹಾಗೂ ಕೂಲಿಕಾರರ ಮುಖಂಡರೊಂದಿಗೆ ಮಾತುಕತೆ ನಡೆಸಿ ನರೇಗಾ ಯೋಜನೆಯಡಿ ಕೆಲಸ ಬೇಡಿಕೆ ಸಲ್ಲಿಸುವವರಿಗೆ ಕೆಲಸ ನೀಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕೂಲಿಕಾರರ ಮುಖಂಡರಾದ ಸಂಗಪ್ಪ ಕಮತರ, ದೊಡ್ಡನಗೌಡ ಬಿಜಕಲ್‌, ಸಂಗನಗೌಡ ತಳವಗೇರಾ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ