ಆ್ಯಪ್ನಗರ

ಪುಣ್ಯಾರಾಧನೆ: ಮಠದಲ್ಲಿ ಧರ್ಮ ಸಭೆ

ಇಲ್ಲಿನ ಶ್ರೀವರದ ಉಮಾಚಂದ್ರಮೌಳೇಶ್ವರ ಮಠದ ಎರಡನೇ ಪೀಠಾಧಿಪತಿ ಲಿಂ.ಶ್ರೀ ಶಶಿಧರ ಮಸ್ವಾಮೀಜಿಯವರ ಪುಣ್ಯಾರಾಧನೆ ನಿಮಿತ್ತ ಮಠದ ಮುಂಭಾಗ ಗುರುವಾರ ಧರ್ಮ ಸಭೆ ನಡೆಯಿತು.

Vijaya Karnataka 13 Jul 2018, 5:00 am
ಮುದೇನೂರು : ಇಲ್ಲಿನ ಶ್ರೀವರದ ಉಮಾಚಂದ್ರಮೌಳೇಶ್ವರ ಮಠದ ಎರಡನೇ ಪೀಠಾಧಿಪತಿ ಲಿಂ.ಶ್ರೀ ಶಶಿಧರ ಮಸ್ವಾಮೀಜಿಯವರ ಪುಣ್ಯಾರಾಧನೆ ನಿಮಿತ್ತ ಮಠದ ಮುಂಭಾಗ ಗುರುವಾರ ಧರ್ಮ ಸಭೆ ನಡೆಯಿತು.
Vijaya Karnataka Web KPL-KPL12MDR3


ಸಭೆಯಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ದಾಳಿಂಬೆ ಬೆಳೆಗಾರರ ಸಂಘದ ರಾಷ್ಟ್ರೀಯ ಅಧ್ಯಕ್ಷ ದೇವೀಂದ್ರಪ್ಪ ಬಳೂಟಗಿ, ಶಶಿಧರ ಸ್ವಾಮೀಜಿಗಳು ಮೂಲತಃ ಪ್ರೊಫೆಸರ್‌ ಆಗಿದ್ದರು. ಅವರು ಸಮಾಜದ ಅಂಕುಡೊಂಕು ತಿದ್ದುವ ಯೋಚನೆಯಿಂದ ಸನ್ಯಾಸತ್ವ ಸ್ವೀಕರಿಸಿ, ಸಮಾಜದ ಏಳ್ಗೆಗಾಗಿ ತಮ್ಮ ಜೀವನ ಮುಡುಪಾಗಿಟ್ಟರು ಎಂದರು.

ಕುಷ್ಟಗಿ ಮದ್ದಾನಿ ಮಠದ ಕರಿಬಸವ ಶಿವಾಚಾರ್ಯರು ಮಾತನಾಡಿ, ಹಣ,ಬಂಗಲೆ,ಬಂಗಾರದ ಒಡವೆಗಳನ್ನು ಮಾಡಿದವರು ಸತ್ತ ಮೇಲೆ ಮೂರು ದಿನದ ನಂತರ ಅವರನ್ನು ಮರೆಯುತ್ತೇವೆ. ಆದರೆ ಮಹಾತ್ಮರನ್ನು ಮರೆಯೋಕೆ ಎಂದಿಗೂ ಸಾಧ್ಯವಿಲ್ಲ ಎಂದರು.

ಮಠದ ನಿಯೋಜಿತ ಪೀಠಾಧಿಕಾರಿ ಶ್ರೀಸಿದ್ಧಲಿಂಗ ದೇವರು ಮಾತನಾಡಿ, ಮಠದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರ ಸಹಕಾರ ದೊರೆಯದಿದ್ದರೆ ಮುಂದುವರಿಯಲು ಇಷ್ಟ ಪಡುವುದಿಲ್ಲ ಎಂದು ಹೇಳಿದರು.

ಬೆದವಟ್ಟಿಯ ಶ್ರೀಸಂಗಮೇಶ್ವರ ಶಿವಾಚಾರ್ಯರು ಮತ್ತು ಹೆಬ್ಬಾಳದ ಶ್ರೀನಾಗಭೂಷಣ ಶಿವಾಚಾರ್ಯರು, ಬಿಜಕಲ್‌ನ ಶ್ರೀಶಿವಲಿಂಗ ಸ್ವಾಮೀಜಿಗಳು ಮಾತನಾಡಿದರು. ಮಂಗಳೂರಿನ ಶ್ರೀಸಿದ್ಧಲಿಂಗ ಸ್ವಾಮೀಜಿ, ಗುಡದೂರಿನ ಶ್ರೀನೀಲಕಂಠ ತಾತನವರು, ಸಜ್ಜಲಗುಡ್ಡದ ಶ್ರೀದೊಡ್ಡಬಸವಾರ್ಯ ತಾತನವರು, ಮಾಜಿ ಶಾಸಕ ಕೆ.ಶರಣಪ್ಪ, ಶೇಖರಗೌಡ ಗುಮಗೇರಿ, ಬಿ.ಎಂ.ಗೌಡ್ರ, ದೊಡ್ಡಬಸವ ಬಯ್ಯಾಪುರ ಸೇರಿ ಇತರರು ಇದ್ದರು.

ಪುಣ್ಯಾರಾಧನೆ ನಿಮಿತ್ತ ಲಿಂ.ಶ್ರೀಶಶಿಧರ ಸ್ವಾಮೀಜಿಯವರ ಕರ್ತೃ ಗದ್ದುಗೆಯಲ್ಲಿ ಹೋಮ, ಹವನ ಸೇರಿ ನಾನಾ ಧಾರ್ಮಿಕ ಕಾರ್ಯಗಳು ನಡೆದವು. ಮಠದಿಂದ ಪಾದಗಟ್ಟೆಯವರೆಗೂ ಪಲ್ಲಕ್ಕಿ ಉತ್ಸವ ಜರುಗಿತು. ಮುದ್ದಲಗುಂದಿ, ಗುಮಗೇರಾ, ಬ್ಯಾಲಿಹಾಳ, ಬಳೂಟಗಿ, ಬನ್ನಟ್ಟಿ, ರಾಮತ್ನಾಳ, ಹಾಗಲದಾಳ, ಸಾಸ್ವಿಹಾಳ ಸೇರಿ ನಾನಾ ಗ್ರಾಮಗಳ ಸಾವಿರಾರು ಜನ ಭಕ್ತರು ಆಗಮಿಸಿ ಭಕ್ತಿ ಸಮರ್ಪಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ