ಆ್ಯಪ್ನಗರ

‘ಸಂತ ಪರಂಪರೆ ದೇಶದ ಭವ್ಯತೆ’

ಸಂತ ಪರಂಪರೆ ದೇಶದ ಭವ್ಯತೆಯಾಗಿದೆ ಎಂದು ರಾಯಬಾಗ ತಾಲೂಕು ಪರಮಾನಂದವಾಡಿಯ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ ಹೇಳಿದರು.

Vijaya Karnataka Web 18 Apr 2018, 5:00 am
ಕುಷ್ಟಗಿ : ಸಂತ ಪರಂಪರೆ ದೇಶದ ಭವ್ಯತೆಯಾಗಿದೆ ಎಂದು ರಾಯಬಾಗ ತಾಲೂಕು ಪರಮಾನಂದವಾಡಿಯ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ ಹೇಳಿದರು.
Vijaya Karnataka Web KPL-KPL17KST02


ಇಲ್ಲಿನ ]ವಿಜಯವಿಠ್ಠಲ ಮಂದಿರದ 7ನೇ ವರ್ಷದ ಜಾತ್ರೆ ನಿಮಿತ್ತ ಏರ್ಪಡಿಸಿದ್ದ ಸಂತರ ಸಮ್ಮೇಳನದಲ್ಲಿ ಭಾಗವಹಿಸಿ ಸೋಮವಾರ ಸಂಜೆ ಮಾತನಾಡಿದರು. ದೇಶ ಪ್ರಾಚೀನ ಕಾಲದಿಂದಲೂ ಅನೇಕ ಸಂತ, ಮುನಿಗಳನ್ನು ಕಂಡಿದೆ. ಆಯಾ ಕಾಲಘಟ್ಟದಲ್ಲಿ ಜನರಿಗೆ ಬೋದನೆ ಮಾಡಿ ಸಮಾಜವನ್ನು ಸುಸ್ಥಿತಿಯಲ್ಲಿಡಲು, ಜನರ ಬದುಕು ಶಾಂತಿ ಹಾಗೂ ನೆಮ್ಮದಿಯಿಂದ ಇರುವಂತೆ ಸಂತರು ಮಾಡಿದ್ದಾರೆ. ಸಂತರ ಸಂಘದಲ್ಲಿ ದೊಡ್ಡ ಶಕ್ತಿ ಅಡಗಿದೆ. ಉಪದೇಶ ಮಾಡುವವರಿಗೆ ಕೊರತೆ ಇಲ್ಲ. ನುಡಿದಂತೆ ನಡೆಯುವವರು ವಿರಳ. ಸಂತ ಪದವಿ ದೊರೆಯಬೇಕಾದರೆ ಕಠಿಣ ಸಾಧನೆಯ ಅಗತ್ಯವಿದೆ. ಸಮಾಜ, ತಮ್ಮ ಅನುಯಾಯಿಗಳ ಉದ್ಧಾರಕ್ಕಾಗಿ ತಮ್ಮ ಜ್ಞಾನವನ್ನು ಸಂತರು ಧಾರೆ ಎರೆಯುತ್ತಾರೆ. ಇತ್ತೀಚೆಗೆ ಮನುಷ್ಯ ಆಸೆಯ ಬೆನ್ನತ್ತಿದ್ದಾನೆ. ಆತನ ಸಂಪತ್ತಿನ ದಾಹ ತಣಿಯುತ್ತಿಲ್ಲ. ಹಣ ಗಳಿಸಲು ಏನೆಲ್ಲ ಮಾಡುತ್ತಾನೆ. ಜೀವನದಲ್ಲಿ ಎಷ್ಟೇ ಗಳಿಸಲಿ, ಪಡೆದುಕೊಳ್ಳಲಿ ಆತ ಸುಖಿಯಾಗಲಾರ. ಆತ ಗಳಿಸುವುದು ಭೌತಿಕ ಸಂಪತ್ತು. ಮನಸ್ಸಿಗೆ ಆನಂದ ನೆಮ್ಮದಿಯನ್ನು ತಂದುಕೊಡುವುದು ಆಧ್ಯಾತ್ಮ ಸಂಪತ್ತಾಗಿದೆ. ಜಗತ್ತು ಭೌತಿಕ ಸಂಪತ್ತಿನತ್ತ ಮುಖ ಮಾಡಿದೆ, ಆಧ್ಯಾತ್ಮ ಸಂಪತ್ತು ಗಳಿಸುವ ಕಡೆ ಚಿಂತನೆ ನಡೆಸಿಲ್ಲ. ಭೌತಿಕ ಸಂಪತ್ತಿಗೆ ಹತ್ತಿರವಾದಷ್ಟೂ ಮನುಷ್ಯ ಒತ್ತಡದಲ್ಲಿ ಸಿಲುಕುತ್ತಾನೆ. ಬುದ್ಧಿ, ಕ್ರಿಯಾಶೀಲತೆ ಕ್ಷೀಣವಾಗುತ್ತದೆ. ಶರೀರಕ್ಕೆ ವಯಸ್ಸಾದರೆ ಸಾಲದು, ಅದರೊಂದಿಗೆ ಬುದ್ಧಿಯೂ ಮಾಗಬೇಕು. ಮನೆ ಕಟ್ಟುವುದೊಂದೇ ದೊಡ್ಡ ಸಾಧನೆ ಎಂದು ಅನೇಕರು ಭಾವಿಸಿದ್ದಾರೆ. ಮನೆಯಲ್ಲಿ ಹೇಗೆ ನೆಮ್ಮದಿಯ ಜೀವನ ಕಳೆಯಬೇಕು ಎಂಬುದನ್ನು ತಿಳಿದಿರುವುದಿಲ್ಲ. ವಾಸ್ತು ಬದಲಾಯಿಸಿದರೆ ನೆಮ್ಮದಿ ಸಿಗುವುದಿಲ್ಲ. ಬದುಕಿನ ಆಲೋಚನೆಗಳು ಬದಲಾಗಬೇಕು ಎಂದರು.

ಸಿಂದಗಿಯ ಗುರುಮಠದ ಶಾಂತಗಂಗಾಧರ ಸ್ವಾಮೀಜಿ ಮಾತನಾಡಿ, ಮನುಷ್ಯರಾಗಿ ಹುಟ್ಟಿರುವುದೇ ದೊಡ್ಡ ಭಾಗ್ಯವಾಗಿದ್ದು. ಜೀವನವನ್ನು ಸಾರ್ಥಕಪಡಿಸಿಕೊಳ್ಳಲು ಸಾಧು ಸಂತರ ಸಂಘ ಮಾಡಬೇಕು ಎಂದರು. ಹುಬ್ಬಳ್ಳಿಯ ಆರೂಢಾಶ್ರಮದ ಸರ್ವಮಂಗಳದೇವಿ ಮಾತನಾಡಿದರು.

ಸಂತ ಹನುಮಂತಪ್ಪ ಯಾಳವಾರ ಅಧ್ಯಕ್ಷ ತೆವಹಿಸಿದ್ದರು. ಬೆಳಗಾವಿಯ ಸರಸ್ವತಿದೇವಿ, ಬೆಳಗಾವಿಯ ಲಕ್ಷ್ಮಿತಾಯಿ, ಲಕ್ಕುಂಡಿಯ ಮಹಾಂತೇಶ್ವರ ಸ್ವಾಮೀಜಿ, ದಿಂಡಿ ಮುಖ್ಯಸ್ಥ ನಾಗಪ್ಪ ರಂಜಣಗಿ, ಹೊಸಪೇಟೆಯ ಪಿ.ಕೆ.ನಾಯಕ್‌, ಡಿ.ಸಿ.ಯಾಳವಾರ್‌, ಸಿಂಧುರತ್ನ, ಶಿವಪ್ಪ, ಅಮೋಘಸಿದ್ಧೇಶ್ವರ, ಹನುಮಂತಪ್ಪ ಚಿಮ್ಮಲಗಿ, ಗೋವಿಂದಪ್ಪ ರೊಳ್ಳಿ, ಶಾಮಣ್ಣ ಪತ್ತಾರ, ಎನ್‌.ವಿ.ಕಳಗಿ, ಧರ್ಮಣ್ಣ ಇತರರಿದ್ದರು. ದಿಂಡಿ ಯಾತ್ರಾರ್ಥಿಗಳು ಜ್ಞಾನೇಶ್ವರಿ ಗ್ರಂಥ ಪಾರಾಯಣ ಮಾಡಿದರು. ಕುಮಾರಸ್ವಾಮಿ ಹಿರೇಮಠ ನಿರ್ವಹಿಸಿದರು. ಏ.17ರಂದು ಸಂತ ಹನುಮಂತಪ್ಪ ಯಾಳವಾರ ಅವರ ತುಲಾಭಾರ ನಡೆಯಿತು. ಕಾಕಡದಾರತಿ, ಪ್ರವಚನ, ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ ನಡೆಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ